ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಜೀವನದ ಗಣಿತ

Last Updated 23 ನವೆಂಬರ್ 2020, 1:14 IST
ಅಕ್ಷರ ಗಾತ್ರ

ಆಯುರ್ವರ್ಷಶತಂ ನೃಣಾಂ ಪರಿಮಿತಂ ರಾತ್ರೌ ತದರ್ಧಂ ಗತಂ

ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವವೃದ್ಧತ್ವಯೋಃ ।

ಶೇಷಂ ವ್ಯಾಧಿವಿಯೋಗದುಃಖಭರಿತಂ ಸೇವಾದಿಭಿರ್ನೀಯತೇ

ಜೀವೇ ವಾರಿತರಂಗಚಂಚಲತರೇ ಸೌಖ್ಯಂ ಕುತಃ ಪ್ರಾಣಿನಾಮ್ ।।

ಇದರ ತಾತ್ಪರ್ಯ ಹೀಗೆ:

‘ಮನುಷ್ಯರ ಆಯುಸ್ಸಿನ ಪರಿಮಿತಿ ಒಂದು ನೂರು ವರ್ಷಗಳು. ಅದರಲ್ಲಿ ಅರ್ಧಭಾಗವು ರಾತ್ರಿಯಲ್ಲಿ ಕಳೆದುಹೋಗುತ್ತದೆ. ಉಳಿದ ಅರ್ಧದಲ್ಲಿ ಅರ್ಧ ಬಾಲ್ಯದಲ್ಲಿಯೂ ಮುಪ್ಪಿನಲ್ಲಿಯೂ ಕಳೆದುಹೋಗುತ್ತದೆ. ಇನ್ನುಳಿದುದು ರೋಗ, ವಿರಹ, ದುಃಖ, ಸೇವೆ ಮೊದಲಾದವುಗಳಿಂದ ಹೋಗುತ್ತದೆ. ನೀರಿನ ಅಲೆಗಳಿಗಿಂತಲೂ ಹೆಚ್ಚು ಚಂಚಲವಾದ ಈ ಬಾಳಿನಲ್ಲಿ ಪ್ರಾಣಿಗಳಿಗೆ ಸುಖವೆಲ್ಲಿಯದು?’

ಪ್ರತಿ ತಿಂಗಳು ನಮಗೆ ಸಂಬಳ ಬರುತ್ತದೆಯಷ್ಟೆ. ಅದನ್ನು ಹೇಗೆಲ್ಲ ಜೋಪಾನವಾಗಿ ಖರ್ಚು ಮಾಡಬೇಕು ಎಂದು ಯೋಚಿಸುತ್ತೇವೆ. ಮನೆಯ ಬಾಡಿಗೆಗೆ ಎಷ್ಟು, ದಿನಸಿಗಳಿಗೆ ಎಷ್ಟು, ತರಕಾರಿ–ಹಾಲು–ಪೇಪರ್‌ಗಳಿಗೆ ಎಷ್ಟು, ಬ್ಯಾಂಕ್‌ ಸಾಲ ಕಟ್ಟಲು ಎಷ್ಟು, ಮಕ್ಕಳ ಸ್ಕೂಲಿಗೆ ಎಷ್ಟು, ಆಸ್ಪತ್ರೆ ಖರ್ಚಿಗೆ ಎಷ್ಟು, ಈ ವರ್ಷ ಹೊಸ ಖರ್ಚುಗಳು – ಮಾಸ್ಕ್‌ಗಳಿಗೂ ಸ್ಯಾನಿಟೈಸರ್‌ಗಳಿಗೂ ಎಷ್ಟು – ಹೀಗೆಲ್ಲ ಲೆಕ್ಕ ಹಾಕುತ್ತೇವೆ. ಕೊನೆಗೆ ಸಂಬಳದಲ್ಲಿ ಏನೂ ಉಳಿಯುತ್ತಿಲ್ಲ ಎಂದು ಲೆಕ್ಕ ತೋರಿಸುತ್ತದೆ. ಆಗ ಮತ್ತೆ ಲೆಕ್ಕಾಚಾರಕ್ಕೆ ತೊಡಗುತ್ತೇವೆ. ಅದರ ಖರ್ಚನ್ನು ಸ್ವಲ್ಪ ಕಡಿಮೆ ಮಾಡೋಣ, ಇದರ ಖರ್ಚನ್ನು ಸ್ವಲ್ಪ ಕಡಿಮೆ ಮಾಡೋಣ – ಹೀಗೆಲ್ಲ ತಲೆಕೆಡಿಸಿಕೊಂಡು ಸ್ವಲ್ಪವಾದರೂ ಹಣವನ್ನು ಉಳಿಸಿಕೊಳ್ಳೋಣ ಎಂದು ಹಂಬಲಿಸುತ್ತೇವೆ, ಅಲ್ಲವೆ?

ತಿಂಗಳು ಪೂರ ಕಷ್ಟಪಟ್ಟು ದುಡಿದದ್ದರ ಫಲ ಆ ತಿಂಗಳ ಸಂಬಳ. ಹೀಗೆ ನಮ್ಮ ಕಷ್ಟಾರ್ಜಿತವಾದುದರಿಂದ ಅದರ ಬಗ್ಗೆ ನಮಗೆ ತುಂಬ ಮರ್ಯಾದೆ; ಜಾಣ್ಮೆಯಿಂದ ಅದನ್ನು ಉಪಯೋಗಿಸಿಕೊಳ್ಳುವ ತವಕ. ಎಲ್ಲವನ್ನೂ ಖರ್ಚು ಮಾಡದೆ, ನಾಳೆಗಾಗಿ ಸ್ವಲ್ಪವಾದರೂ ಉಳಿಸಿಕೊಳ್ಳುವ ಬಯಕೆ. ಇದು ಸರಿಯೇ. ಆದರೆ ನಾವು ಎಲ್ಲ ಸಂಗತಿಗಳ ಬಗ್ಗೆಯೂ ಇಂಥದೇ ಎಚ್ಚರಿಕೆಯನ್ನು ತೆಗೆದುಕೊಳ್ಳುತ್ತಿದ್ದೇವೆಯೆ? ಇದು ಸುಭಾಷಿತದ ಪ್ರಶ್ನೆ. ಅದರಲ್ಲೂ ನಮ್ಮ ಆಯುಸ್ಸಿನ ಬಗ್ಗೆ ಎಂದಾದರೂ ಹೀಗೆ ಪ್ರಶ್ನಿಸಿಕೊಂಡಿದ್ದೇವೆಯೆ? ಎಲ್ಲೆಲ್ಲಿ ನಮ್ಮ ಆಯುಸ್ಸು ಖರ್ಚಾಗುತ್ತಿದೆ ಎಂದು ಲೆಕ್ಕ ಹಾಕಿದ್ದೇವೆಯೆ? ಸುಭಾಷಿತವೇ ಲೆಕ್ಕ ಹಾಕಿ ಹೇಳಿದೆ:

‘ಮನುಷ್ಯರ ಆಯುಸ್ಸಿನ ಪರಿಮಿತಿ ಒಂದು ನೂರು ವರ್ಷಗಳು. ಅದರಲ್ಲಿ ಅರ್ಧಭಾಗವು ರಾತ್ರಿಯಲ್ಲಿ ಕಳೆದುಹೋಗುತ್ತದೆ. ಉಳಿದ ಅರ್ಧದಲ್ಲಿ ಅರ್ಧ ಬಾಲ್ಯದಲ್ಲಿಯೂ ಮುಪ್ಪಿನಲ್ಲಿಯೂ ಕಳೆದುಹೋಗುತ್ತದೆ. ಇನ್ನುಳಿದುದು ರೋಗ, ವಿರಹ, ದುಃಖ, ಸೇವೆ ಮೊದಲಾದವುಗಳಿಂದ ಹೋಗುತ್ತದೆ. ನೀರಿನ ಅಲೆಗಳಿಗಿಂತಲೂ ಹೆಚ್ಚು ಚಂಚಲವಾದ ಈ ಬಾಳಿನಲ್ಲಿ ಪ್ರಾಣಿಗಳಿಗೆ ಸುಖವೆಲ್ಲಿಯದು?’

ಇದು ನಮ್ಮ ಮನಸ್ಸಿಗೆ ಎಂದದಾರೂ ಬಂದಿದೆಯೆ? ಜೀವನದ ನಿಜವಾದ ಅರ್ಥವನ್ನು ಕಂಡುಕೊಂಡು, ಸಂತೋಷವಾಗಿರಬೇಕು ಎಂದು ನಮಗೆ ಎಂದಾದರೂ ಅನಿಸಿದೆಯೆ?

ವ್ಯರ್ಥವಾಗಿ ನಮ್ಮ ಆಯುಸ್ಸನ್ನು ನಾವು ಖರ್ಚು ಮಾಡುತ್ತಿದ್ದೇವೆ. ಅದನ್ನು ಸಾರ್ಥಕವಾಗಿ ಬಳಸಿಕೊಳ್ಳಿರೋ, ಹುಚ್ಚಪ್ಪಗಳಿರಾ – ಎಂದು ಸುಭಾಷಿತ ಎಚ್ಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT