ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದೈವವೂ ಬೇಕು ಪ್ರಯತ್ನವೂ ಇರಬೇಕು

Last Updated 27 ಆಗಸ್ಟ್ 2020, 0:38 IST
ಅಕ್ಷರ ಗಾತ್ರ

ನಾಲಂಬತೇ ದೈಷ್ಟಿಕತಾಂ ನ ನಿಷೀದತಿ ಪೌರುಷೇ ।

ಶಬ್ದಾರ್ಥೌ ಸತ್ಕವಿರಿವ ದ್ವಯಂ ವಿದ್ವಾನಪೇಕ್ಷತೇ ।।

ಇದರ ತಾತ್ಪರ್ಯ ಹೀಗೆ:

‘ವಿದ್ವಾಂಸನಾದವನು ದೈವವೊಂದನ್ನೇ ಆಶ್ರಯಿಸುವುದಿಲ್ಲ. ಪುರುಷಪ್ರಯತ್ನವೊಂದನ್ನೇ ನಂಬುವುದೂ ಇಲ್ಲ. ಉತ್ತಮ ಕವಿಯು ಕಾವ್ಯರಚನೆಗೆ ಶಬ್ದ–ಅರ್ಥಗಳು ಎರಡನ್ನೂ ಅಪೇಕ್ಷಿಸುತ್ತಾನಲ್ಲವೆ? ಹೀಗೆಯೇ ವಿದ್ವಾಂಸನು ದೈವ–ಪೌರುಷಗಳೆರಡನ್ನೂ ನಂಬುತ್ತಾನೆ.‘

ಮನುಷ್ಯನಿಗೆ ಎದುರಾಗುವ ಕಷ್ಟಗಳು ಒಂದಲ್ಲ, ಎರಡಲ್ಲ, ಹತ್ತಲ್ಲ – ಸಾವಿರ ಸಾವಿರ. ಇವನ್ನು ಎದುರಿಸಿ ಹೋರಾಡಿದರೆ ಮಾತ್ರವೇ ಅವನು ಜೀವನದಲ್ಲಿ ಮುಂದೆ ಸಾಗಲು ಸಾಧ್ಯ. ಆದರೆ ಇವನ್ನು ಎದುರಿಸುವ ಪರಿ ಎಂಥದ್ದು? ಇದು ಅಷ್ಟು ಸುಲಭದ ಪ್ರಶ್ನೆ ಅಲ್ಲ. ಸಮಸ್ಯೆಯನ್ನು ಎದುರಿಸುತ್ತಿರುವವನ ಪರಿಸರ–ವ್ಯಕ್ತಿತ್ವ–ಸಿದ್ಧತೆ – ಹೀಗೆ ಹತ್ತುಹಲವು ವಿವರಗಳನ್ನು ಆಧರಿಸಿ ಇದಕ್ಕೆ ಉತ್ತರ ಹೊರಡುತ್ತದೆ. ಈ ವಿವರಗಳು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ. ಹೀಗಾಗಿ ಎಲ್ಲರ ಉತ್ತರಗಳೂ ಒಂದೇ ರೀತಿಯಲ್ಲಿರುತ್ತವೆ ಎಂದೂ ಹೇಳಲು ಆಗದು.

ಪ್ರಧಾನವಾಗಿ ನಾವು ಎರಡು ರೀತಿಯ ಸ್ವಭಾವಗಳನ್ನು ಜನರಲ್ಲಿ ನೋಡಬಹುದು. ಒಂದು ಗುಂಪು ದೈವ, ಎಂದರೆ ಅದೃಷ್ಟದಲ್ಲಿ ನಂಬಿಕೆ ಇಟ್ಟವರು; ಇನ್ನೊಂದು ಗುಂಪು ಪುರುಷಪ್ರಯತ್ನ, ಎಂದರೆ ‘ಎಲ್ಲವೂ ನಮ್ಮ ಪ್ರಯತ್ನದಲ್ಲೇ ಇದೆ‘ ಎನ್ನುವವರದ್ದು. ಸುಭಾಷಿತ ಈ ಎರಡು ಗುಂಪುಗಳನ್ನೂ ಅತಿರೇಕದ ಗುಂಪುಗಳು ಎಂದು ಹೇಳುತ್ತಿದೆ. ದಿಟವಾದ ತಿಳಿವಳಿಕೆ ಇರುವವರು ಕೇವಲ ದೈವವನ್ನಷ್ಟೇ ನಂಬುವುದಿಲ್ಲ, ಅಥವಾ ಪುರುಷಪ್ರಯತ್ನವನ್ನಷ್ಟೇ ನಂಬುವುದಿಲ್ಲ; ಎರಡರ ಸಮನ್ವಯದಿಂದ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎನ್ನುವುದನ್ನು ಅದು ಪ್ರತಿಪಾದಿಸುತ್ತಿದೆ. ಇದಕ್ಕಾಗಿ ಅದು ನೀಡಿರುವ ಉದಾಹರಣೆ ಕೂಢ ಚೆನ್ನಾಗಿದೆ.

ಕಾವ್ಯ ಎಂದರೆ ಏನು? ಇದರ ಬಗ್ಗೆ ಸಾವಿರಾರು ವರ್ಷಗಳಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆಯೆನ್ನಿ! ಕಾವ್ಯ ಎನ್ನುವುದು ಭಾಷೆಯ ಒಂದಾನೊಂದು ವಿನ್ಯಾಸ; ಸೊಗಸಾದ ವಿನ್ಯಾಸ. ಹಾಗಾದರೆ ಕಾವ್ಯ ಎಂದರೆ ಬರಿಯ ಶಬ್ದಗಳೇ? ಶಬ್ದಗಳಿಗೆ ಅರ್ಥವೂ ಇರುತ್ತದೆಯಲ್ಲವೆ? ಹಾಗಾದರೆ ಶಬ್ದಗಳಿಗಿರುವ ಅರ್ಥವೆ ಕಾವ್ಯವೇ? ಉತ್ತಮ ದರ್ಜೆಯ ಕವಿಯಾದವನು ಕಾವ್ಯವನ್ನು ನೋಡುವ ವಿಧಾನ ಬೇರೆಯಾಗಿರುತ್ತದೆ. ಅವನಿಗೆ ಶಬ್ದ ಮತ್ತು ಅರ್ಥ – ಎರಡೂ ಸೇರಿಯೆ ಕಾವ್ಯ ಎನ್ನುವ ನಿಲವು ಅವನದ್ದಾಗಿರುತ್ತದೆ. ಹೀಗಾಗಿ ಅವನು ಶಬ್ದವೇ ಮುಖ್ಯ ಎಂದೋ, ಅರ್ಥವೇ ಮುಖ್ಯ ಎಂದೋ ಹಟಮಾಡುತ್ತ ಕೂರುವುದಿಲ್ಲ; ಎರಡರ ಸಮಗ್ರತೆಯಲ್ಲಿಯೇ ಕಾವ್ಯ ಇರುವುದರಿಂದ ಎರಡನ್ನೂ ಸ್ವೀಕರಿಸುತ್ತಾನೆ; ಅವುಗಳ ನಡುವೆ ಇರುವ ತಾದಾತ್ಮ್ಯವನ್ನು ಗುರುತಿಸುತ್ತಾನೆ.

ಹೀಗೆಯೇ ತಿಳಿವಳಿಕೆಯುಳ್ಳ ವ್ಯಕ್ತಿಯೂ ಕೂಡ ದೈವ ಮತ್ತು ಪುರುಷಪ್ರಯತ್ನಗಳ ಸಮನ್ವಯದಲ್ಲಿಯೇ ಜೀವನವನ್ನು ಕಂಡುಕೊಳ್ಳುತ್ತಿರುತ್ತಾನೆ. ಮೂರ್ಖ ಮಾತ್ರ ಹಟಕ್ಕೆ ಬಿದ್ದು ಯಾವುದೋ ಒಂದನ್ನು ಆಶ್ರಯಿಸಿರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT