ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ನೆಮ್ಮದಿ ಇದ್ದವನೇ ಸರ್ವಜ್ಞ

Last Updated 30 ಜೂನ್ 2020, 3:48 IST
ಅಕ್ಷರ ಗಾತ್ರ

ಶಮಾರ್ಥಂ ಸರ್ವಶಾಸ್ತ್ರಾಣಿ ವಿಹಿತಾನಿ ಮನೀಷಿಭಿಃ ।

ಸ ಏವ ಸರ್ವಶಾಸ್ತ್ರಜ್ಞಃ ಯಸ್ಯ ಶಾಂತಂ ಮನಃ ಸದಾ ।।

ಇದರ ತಾತ್ಪರ್ಯ ಹೀಗೆ:

‘ಜ್ಞಾನಿಗಳು ಸಕಲ ಶಾಸ್ತ್ರಗಳನ್ನು ರಚಿಸಿರುವುದು ಮನಃಶಾಂತಿ ಲಭಿಸಲೆಂದು. ಯಾರ ಮನಸ್ಸು ಶಾಂತವಾಗಿದೆಯೋ ಅವನೇ ಸರ್ವಶಾಸ್ತ್ರಜ್ಞ.‘

ನಾವು ಯಾವುದಾದರೂ ಕೆಲಸವನ್ನು ಏಕಾದರೂ ಮಾಡುತ್ತೇವೆ? ಈ ಪ್ರಶ್ನೆಗೆ ಉತ್ತರ ಕಂಡುಕೊಂಡವನು ತಾನು ಮಾಡುವ ಕೆಲಸದಲ್ಲಿ ಸಾರ್ಥಕತೆಯನ್ನೂ ಅನುಭವಿಸುತ್ತಾನೆ. ಆದರೆ ನಾವು ಯಾರೂ ಈ ಪ್ರಶ್ನೆಯನ್ನು ಎದುರಿಸುವುದೇ ಇಲ್ಲ; ಎದುರಿಸಲು ಹೆದರಿಕೆಯೂ ಇದೆಯೆನ್ನಿ!

ನಮ್ಮ ಓದು, ಸಂಪಾದನೆ; ನಾವು ಬಯಸುವ ಪದವಿ–ಅಧಿಕಾರ; ಕೊನೆಗೆ ನಮ್ಮ ರಾಗ–ದ್ವೇಷ – ಇವೆಲ್ಲದರ ಮೂಲ ’ನಾವೇ‘ ಆಗಿರುತ್ತೇವೆ. ನಮ್ಮ ಸಂತೋಷಕ್ಕಾಗಿಯೇ ಇವೆಲ್ಲವನ್ನೂ ಮಾಡುತ್ತಿರುತ್ತೇವೆ. ಆದರೆ ನಮಗೆ ಇದರ ಅರಿವು ಇರುವುದಿಲ್ಲವಷ್ಟೆ! ಏಕೆಂದರೆ ನಾವು ನಮ್ಮ ಯಾವುದೇ ಕೆಲಸವನ್ನು ನಾವಾಗಿಯೇ ಪ್ರಶ್ನಿಸಿಕೊಳ್ಳುವುದಿಲ್ಲ.

ಸುಭಾಷಿತ ಹೇಳುತ್ತಿರುವುದು ನಮ್ಮ ಸಂತೋಷವನ್ನು ಕುರಿತೇ ಹೌದು. ಅದು ಸಂತೋಷದ ಉನ್ನತ ಸ್ಥಿತಿಯನ್ನು ಹೇಳುತ್ತಿದೆ; ಅದೇ ನೆಮ್ಮದಿ, ಪ್ರಶಾಂತತೆ; ಮನಸ್ಸಿನ ಶಾಂತಸ್ಥಿತಿ.

ನಮಗೆ ನೆಮ್ಮದಿ ಬೇಕು; ಆದರೆ ಅದು ಎಲ್ಲಿ ಸಿಗುತ್ತದೆ ಎನ್ನುವುದು ಗೊತ್ತಾಗದು. ಅದಕ್ಕಾಗಿಯೇ ಅದನ್ನು ಎಲ್ಲೆಲ್ಲೋ ಹುಡುಕುತ್ತಿರುತ್ತೇವೆ – ಹಣದಲ್ಲಿ, ಅಧಿಕಾರದಲ್ಲಿ, ಮನೆಯಲ್ಲಿ, ಕಾರಿನಲ್ಲಿ, ಕಾಡಿನಲ್ಲಿ, ಹಿಮಾಲಯದಲ್ಲಿ... ಹೀಗೆ ಎಲ್ಲೋಲ್ಲೋ! ನಮಗೆ ಗೊತ್ತಿದ್ದೂ ಗೊತ್ತಿಲ್ಲದಿದ್ದರೂ, ನಾವೆಲ್ಲರೂ ಹುಡುಕುತ್ತಿರುವುದು ನೆಮ್ಮದಿಯನ್ನೇ.

ಜ್ಞಾನಿಗಳು ಮಹಾಕೃತಿಗಳನ್ನು ರಚಿಸುತ್ತಾರೆ; ಸಿದ್ಧಾಂತಗಳನ್ನು ಮಂಡಿಸುತ್ತಾರೆ; ತಪಸ್ಸನ್ನು ಮಾಡುತ್ತಾರೆ. ಇವೆಲ್ಲವನ್ನು ಮಾಡುವುದು ಮನಸ್ಸಿಗೆ ಶಾಂತಿ ಲಭಿಸಲಿ ಎನ್ನುವ ಉದ್ದೇಶದಿಂದಲೇ. ಜೀವನಕ್ಕೆ ಏನು ಅರ್ಥ – ಎನ್ನುವ ಪ್ರಶ್ನೆ ಅವರ ಈ ಎಲ್ಲ ಉದ್ಯಮಗಳ ಹಿಂದೆ ಕ್ರಿಯಾಶೀಲವಾಗಿರುತ್ತದೆ. ನಮ್ಮಂಥ ಸಾಮಾನ್ಯರಿಗೆ ಈ ಪ್ರಶ್ನೆ ಇಲ್ಲದಿರಬಹುದು; ಮಹಾತ್ಮರಿಗೆ ಆ ಪ್ರಶ್ನೆ ಅವರ ಜೀವನದ ಪ್ರತಿ ಕ್ಷಣವೂ ಎದುರಾಗುತ್ತಿದ್ದಿರಬಹುದು. ಆದರೆ ಸಾಮಾನ್ಯರೂ ಅಸಾಮಾನ್ಯರೂ ಏನೆಲ್ಲ ಮಾಡುತ್ತಾರೋ ಅವೆಲ್ಲವೂ ನೆಮ್ಮದಿಯ ಹುಡುಕಾಟವೇ ಆಗಿರುತ್ತದೆ; ಒಬ್ಬರಿಗೆ ಅವರು ನಡೆಯುತ್ತಿರುವ ದಾರಿಯ ಬಗ್ಗೆ ಗೊತ್ತಿರುವುದಿಲ್ಲ, ಇನ್ನೊಬ್ಬರಿಗೆ ಗೊತ್ತಿರುತ್ತದೆ; ವ್ಯತ್ಯಾಸ ಅಷ್ಟೆ!

ನಾವು ಏನನ್ನು ಹುಡುಕುತ್ತಿದ್ದೇವೆ? ಅದು ಎಲ್ಲಿ ಸಿಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ದೊರೆತರೆ ಆಗ ನಮ್ಮ ಜೀವನವು ಸಾರ್ಥಕತೆಯ ದಡವನ್ನು ಮುಟ್ಟಿದಂತೆಯೇ ಹೌದು. ಇದನ್ನೇ ಸುಭಾಷಿತ ಹೇಳುತ್ತಿರುವುದು. ನಾವು ಎಲ್ಲೆಲ್ಲೂ ಹುಡುಕುತ್ತಿರುವ ನೆಮ್ಮದಿಯು ನಮ್ಮಲ್ಲಿಯೇ ಇದೆ ಎನ್ನುವುದನ್ನು ಕಂಡುಕೊಂಡವನೇ ಸರ್ವಶಾಸ್ತ್ರಜ್ಞ. ಏಕೆಂದರೆ ನಾವು ಕೂಗಿ ಸಾರುವ ಸಿದ್ಧಾಂತಗಳು, ಹೂಡುವ ತರ್ಕದ ಬಾಣಗಳು, ಕಲಿಯುವ ನೂರೆಂಟು ವಿದ್ಯೆಗಳು – ಎಲ್ಲವೂ ನಮ್ಮ ಸುಖದ ಹುಡುಕಾಟ, ನಮ್ಮ ನೆಮ್ಮದಿಯ ಹುಡುಕಾಟದ ದಾರಿಬುತ್ತಿಗಳೇ ಹೌದಲ್ಲವೆ? ಹೀಗಾಗಿ ಈಗಾಗಲೇ ಸಹಜವಾಗಿಯೇ ನೆಮ್ಮದಿಯನ್ನು ದಕ್ಕಿಸಿಕೊಂಡವನು ಏಕಾದರೂ ಈ ಪ್ರಯತ್ನಗಳನ್ನು ಮಾಡಬೇಕು, ಹೇಳಿ? ಈಗಾಗಲೇ ಶಾಂತಿಯನ್ನು ತನ್ನದನ್ನಾಗಿಸಿಕೊಂಡಿರುವುದರಿಂದ ಅವನು ದಿಟವಾದ ಸರ್ವಶಾಸ್ತ್ರಜ್ಞನೇ ಹೌದು. ‘ಕಗ್ಗ‘ದ ಪದ್ಯವೊಂದು ಇಲ್ಲಿ ಸ್ಮರಣಾರ್ಹ:

ಪರಿಪೂರ್ಣ ಸುಖವನೆಳಸುವನು ತನ್ನೊಳಗಡೆಗೆ |

ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||

ನಿರತಿಶಯಸುಖವಲ್ಲಿ; ವಿಶ್ವಾತ್ಮವೀಕ್ಷೆಯಲಿ |

ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT