ಗುರುವಾರ , ಅಕ್ಟೋಬರ್ 22, 2020
24 °C

ದಿನದ ಸೂಕ್ತಿ: ನಿನ್ನ ಉದ್ಧಾರ ಆಗಲಿ ಮೊದಲು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಪಶ್ಯಸ್ಯದ್ರೌ ಜ್ವಲದಗ್ನಿಂ ನ ಪುನಃ ಪಾದಯೋರಧಃ ।

ಯತ್ಪರಂ ಶಿಕ್ಷಯಸ್ಯೇವಂ ನ ಸ್ವಂ ಶಿಕ್ಷಯಸಿ ಸ್ವಯಮ್‌ ।।

ಇದರ ತಾತ್ಪರ್ಯ ಹೀಗೆ:

ಬೆಟ್ಟದಲ್ಲಿ ಉರಿಯುತ್ತಿರುವ ಅಗ್ನಿಯನ್ನು ಕಾಣುತ್ತೀಯೆ; ಆದರೆ ಕಾಲಿನ ಕೆಳಗೆ ಇರುವ ಬೆಂಕಿಯು ಗೊತ್ತಿಲ್ಲ. ಬೇರೆಯವರಿಗೆ ನೀತಿಯನ್ನು ಹೇಳುತ್ತೀಯೆ: ಆದರೆ ನೀನು ನೀತಿಯನ್ನು ಪಾಲಿಸುತ್ತಿಲ್ಲ.‘

ಉಪಚುನಾವಣೆಯ ಕಾವು ಏರುತ್ತಿದೆ. ಈ ಸಂದರ್ಭದಲ್ಲಿ ಈ ಸುಭಾಷಿತ ಆಶಯ ಮನಸ್ಸಿಗೆ ಚೆನ್ನಾಗಿ ನಾಟಬಲ್ಲದು.

ಇಂದಿನ ಚುನಾವಣೆಯ ಪ್ರಚಾರದ ವೈಖರಿ ಹೇಗಿರುತ್ತದೆ? ‘ಅವನು ಸರಿ ಇಲ್ಲ; ಹೀಗಾಗಿ ನನಗೇ ಮತ ಕೊಡಿ’, ’ಆ ಪಾರ್ಟಿ ಸರಿ ಇಲ್ಲ, ಹೀಗಾಗಿ ನಮ್ಮ ಪಕ್ಷಕ್ಕೇ ಮತ ಕೊಡಿ‘ – ಹೀಗಿರುತ್ತದೆಯಲ್ಲವೆ ನಮ್ಮ ಅಭ್ಯರ್ಥಿಗಳ ವರಸೆಗಳು?

ಸರಿ, ಅವನು ಸರಿ ಇಲ್ಲ – ಎನ್ನುವುದನ್ನು ಒಪ್ಪೋಣ. ಇವನು ಸರಿ ಇದ್ದಾನೋ? ಆ ಪಕ್ಷ ಸರಿ ಇಲ್ಲ, ಹೌದು. ಹೋಗಲಿ, ಈ ಪಕ್ಷ ಸರಿ ಇದೆಯೋ?

ನಾನು ಬೇರೆಯವರನ್ನು ಟೀಕಿಸುವ ಮೊದಲು ನಾನು ಎಷ್ಟು ಸರಿ ಇದ್ದೇನೆಯೇ – ಎಂಬ ಆತ್ಮಾವಲೋಕನವನ್ನು ಎಷ್ಟು ಜನರು ಮಾಡಿಕೊಳ್ಳಬಲ್ಲರು?

ನಮ್ಮಲ್ಲಿ ಗುಲಗಂಜಿಯ ಬಗ್ಗೆ ಒಂದು ಮಾತನ್ನು ಹೇಳುವುದುಂಟು: ಗುಲಗಂಜಿಗೆ ತನ್ನಲ್ಲಿರುವ ಕಪ್ಪು ತಿಳಿಯದು. 

ಗುಲಗಂಜಿಯ ಬಣ್ಣ ಕೆಂಪು, ಗಾಢವಾದ ಕೆಂಪು; ಮಿಂಚುತ್ತಿರುತ್ತದೆ. ಹೀಗಾಗಿಯೇ ಅದು ಎಲ್ಲವನ್ನೂ ಕಪ್ಪು ಎಂದು ಜರಿಯುತ್ತಿರುತ್ತದೆಯಂತೆ. ಆದರೆ ಇಲ್ಲೊಂದು ಸಮಸ್ಯೆ ಉಂಟು; ಗುಲಗಂಜಿ ಏನೋ ಕೆಂಪಾಗಿಯೇ ಇರುತ್ತದೆ; ಆದರಲ್ಲಿ ಒಂದು ಕಪ್ಪುಚುಕ್ಕೆ ಇರುತ್ತದೆ. ಹೀಗೆ ಅದು ತನ್ನಲ್ಲಿಯೇ ಕಪ್ಪನ್ನು ಇಟ್ಟುಕೊಂಡು ಉಳಿದವರ ಕಪ್ಪಿನ ಬಗ್ಗೆ ಮಾತನಾಡುತ್ತಿರುತ್ತದೆ.

ಸುಭಾಷಿತ ಇಂಥ ಮಾನಸಿಕತೆಯ ಬಗ್ಗೆಯೇ ಹೇಳುತ್ತಿರುವುದು.

ಎಲ್ಲೋ ದೂರದಲ್ಲಿ ಬೆಟ್ಟದ ಬುಡಕ್ಕೆ ಬಿದ್ದಿರುವ ಹೊಗೆಯನ್ನು ಗುರುತಿಸುತ್ತೇವೆ; ಆದರೆ ನಮ್ಮ ಕಾಲಬುಡದಲ್ಲಿ ಬೆಂಕಿಯೇ ಧಗಧಗ ಉರಿಯುತ್ತಿರುತ್ತದೆ. ಅದನ್ನು ಮಾತ್ರ ನಾವು ಗಮನಿಸುವುದೇ ಇಲ್ಲ.

ಬೇರೆಯವರಲ್ಲಿರುವ ನಾಲ್ಕಾರು ದೋಷಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತೇವೆ. ನಮ್ಮಲ್ಲಿಯೇ ಬೀಡುಬಿಟ್ಟಿರುವ ನೂರಾರು ದೋಷಗಳ ಬಗ್ಗೆ ಗಮನವನ್ನೇ ಕೊಡುವುದಿಲ್ಲ.

ಹೀಗೆಯೇ ಲೋಕಕ್ಕೆಲ್ಲ ನೀತಿಯನ್ನು ಟನ್‌ಗಟ್ಟಲೇ ಉಪದೇಶಿಸುತ್ತಿರುತ್ತೇವೆ; ಆದರೆ ನಮ್ಮಲ್ಲಿ ಮಾತ್ರ ಅದು ಗ್ರಾಂಗಳಲ್ಲಿ ಕೂಡ ಇರುವುದಿಲ್ಲ! 

ರಾಮಕೃಷ್ಣ ಪರಮಹಂಸರು ಯಾರಿಗಾದರೂ ಉಪದೇಶ ಕೊಡುವ ಮೊದಲು ಅದು ಅವರಲ್ಲಿ ಎಷ್ಟು ಗಟ್ಟಿಯಾಗಿದೆ ನೆಲೆಯೂರಿದೆ ಎಂದು ಪರೀಕ್ಷಿಸಿಕೊಳ್ಳುತ್ತಿದ್ದರಂತೆ.

ಬೇರೆಯವರಿಗೆ ಉಪದೇಶ ಕೊಡುವುದು ಸುಲಭ; ಆದರೆ ಅದನ್ನು ನಾವೇ ನಮ್ಮ ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ. ಪರೋಪದೇಶಪಾಂಡಿತ್ಯದಿಂದ ಪ್ರಯೋಜನವಿಲ್ಲ. ಪ್ರಾಮಾಣಿಕತೆ ಎಂಬುದು ನಮ್ಮ ವ್ಯಕ್ತಿತ್ವದ ಪ್ರಾಮಾಣಿಕ ಅಂಗವಾಗಬೇಕು. ನಮ್ಮ ನಡೆ–ನುಡಿಗಳಲ್ಲಿ ಪ್ರಾಮಾಣಿಕತೆ ಇರಬೇಕು. ಸ್ವಾತ್ಮಶಿಕ್ಷಣವೇ ದಿಟವಾದ ಶಿಕ್ಷಣ – ಎಂದು ಹೇಳುತ್ತಿದೆ ಸುಭಾಷಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.