ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಲೋಕವೆಲ್ಲ ಹಳದಿ

Last Updated 17 ಆಗಸ್ಟ್ 2021, 5:12 IST
ಅಕ್ಷರ ಗಾತ್ರ

ನಿಜದೋಷಾವೃತಮನಸಾಮತಿಸುಂದರಮೇವ ಭಾತಿ ವಿಪರೀತಮ್‌ ।

ಪಶ್ಯತಿ ಪಿತ್ತೋಪಹತಃ ಶಶಿಶುಭ್ರಂ ಶಂಖಮಪಿ ಪೀತಮ್‌ ।।

ಇದರ ತಾತ್ಪರ್ಯ ಹೀಗೆ:

‘ದೋಷದಲ್ಲೇ ಮನಸ್ಸನ್ನು ಮುಳುಗಿಸಿರುವವರಿಗೆ ಅತಿಸುಂದರವಾದ ವಸ್ತುವೂ ವಿಕೃತವಾಗಿಯೇ ಕಾಣುತ್ತದೆ. ಇದು ಹೇಗೆಂದರೆ, ಚಂದ್ರನಂತೆಯೇ ಶುಭ್ರವಾಗಿರುವ ಶಂಖವೂ ಹಳದಿಯಾಗಿದೆ ಎಂದು ತಿಳಿಯುತ್ತಾನೆ, ಪಿತ್ತರೋಗಿ.’

ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲ ಹಳದಿ – ಎಂಬ ಮಾತಿದೆಯಷ್ಟೆ. ಅದರದ್ದೇ ಧ್ವನಿಯನ್ನು ಈ ಸುಭಾಷಿತದಲ್ಲೂ ಕಾಣಬಹುದು.

ದಿಟವಾದ ಸೌಂದರ್ಯವಾಗಲೀ ಕುರೂಪವಾಗಲೀ ಇರುವುದು ಎಲ್ಲಿ? ನಮ್ಮ ಮನಸ್ಸಿನಲ್ಲಿಯೇ ಹೌದು. ನಮ್ಮ ಮನಸ್ಸಿನಲ್ಲಿ ಬರಿಯ ಕೊಳೆಯೇ ತುಂಬಿಕೊಂಡಿದ್ದರೆ, ನಮಗೆ ಹೊರಗೆ ಕಾಣುವುದೆಲ್ಲವೂ ಕೊಳೆಯಾಗಿಯೇ ಕಾಣುತ್ತದೆ. ನಮ್ಮ ದೃಷ್ಟಿಯನ್ನು ಅನುಸರಿಸಿ ನಮ್ಮ ಜಗತ್ತು ನಮ್ಮ ಮುಂದೆ ಸೃಷ್ಟಿಯಾಗುತ್ತಿರುತ್ತದೆ.

ಇಂದು ಜಗತ್ತು ಹಲವು ವಿಧದ ಆತಂಕಗಳ ನಡುವೆ ಉಸಿರಾಡುತ್ತಿದೆ. ಮತಾಂಧತೆಯ ಅಟ್ಟಹಾಸ ನಿರಂತರವಾಗಿ ಹೆಚ್ಚಾಗುತ್ತಿದೆ. ನನ್ನ ಮತವೇ ಶ್ರೇಷ್ಠ, ಉಳಿದವರದ್ದು ಕನಿಷ್ಠ – ಎಂಬ ಧೋರಣೆಯೇ ಇದಕ್ಕೆ ಕಾರಣವಾಗಿರುವುದು. ಇಂಥ ಧೋರಣೆಯನ್ನೇ ಮನಸ್ಸಿನಲ್ಲಿರುವ ಕಸ ಎಂದು ಸುಭಾಷಿತ ಕರೆಯುತ್ತಿರುವುದು. ನಮ್ಮ ಮುಂದೆ ಇರುವ ಮನುಷ್ಯರು ಕೂಡ ನಮ್ಮಂತೆಯೇ ಮನುಷ್ಯರು; ಅವರಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ – ಎಂಬ ಭಾವನೆ ಯಾರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿರುತ್ತದೆಯೋ ಅಂಥವರು ಮಾತ್ರ ಜಗತ್ತಿನಲ್ಲಿ ಶಾಂತಿ–ನೆಮ್ಮದಿಗಳನ್ನು ಉಂಟುಮಾಡಬಲ್ಲರು. ಎಲ್ಲರೂ ಶತ್ರುಗಳು ಎಂಬ ಭಾವನೆಯನ್ನೇ ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ಆಗ ಜಗತ್ತು ನಮ್ಮ ಪಾಲಿಗೆ ನರಕವಾಗಿಯೇ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT