ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿನದ ಸೂಕ್ತಿ: ಲೋಕಕಲ್ಯಾಣ

Last Updated 3 ನವೆಂಬರ್ 2021, 7:28 IST
ಅಕ್ಷರ ಗಾತ್ರ

ಕಿಮತ್ರ ಚಿತ್ರಂ ಯತ್ಸಂತಃ ಪರಾನುಗ್ರಹತತ್ಪರಾಃ ।

ನಹಿ ಸ್ವದೇಹಶೈತ್ಯಾಯ ಜಾಯಂತೇ ಚಂದನದ್ರುಮಾಃ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರು ಎಂದಿಗೂ ಬೇರೆಯವರಿಗೆ ಒಳಿತನ್ನು ಮಾಡುವುದರಲ್ಲಿಯೇ ಉತ್ಸುಕರಾಗಿರುತ್ತಾರೆ; ಇದರಲ್ಲಿ ಆಶ್ಚರ್ಯ ಏನಿದೆ? ಗಂಧದ ಮರಗಳು ಬೆಳೆಯುವುದೇ ಬೇರೆಯವರ ತಾಪವನ್ನು ಶಮನಮಾಡುವುದಕ್ಕಾಗಿಯೇ ಹೊರತು ಅವುಗಳ ಮೈಯನ್ನು ತಂಪಾಗಿಸಿಕೊಳ್ಳಲು ಅಲ್ಲವಷ್ಟೆ!’

ಪರೋಪಕಾರದ ಲಕ್ಷಣವನ್ನು ಈ ಸುಭಾಷಿತ ಸೊಗಸಾಗಿ ನಿರೂಪಿಸಿದೆ.

ಉಪಕಾರಬುದ್ಧಿ ಎಂಬುದು ಸಹಜಸ್ವಭಾವ ಎಂಬುದನ್ನು ಗಮನಿಸಬೇಕು. ಉಪಕಾರ ಎಂದರೆ ಇನ್ನೊಬ್ಬರಿಗೆ ಒಳಿತನ್ನು ಮಾಡುವುದು, ಇನ್ನೊಬ್ಬರ ಕಷ್ಟವನ್ನು ದೂರಮಾಡುವುದು, ಇನ್ನೊಬ್ಬರಿಗೆ ತೊಂದರೆಯನ್ನು ಕೊಡದಿರುವುದು. ಇಂಥ ಗುಣಗಳನ್ನು ಪಡೆದವರನ್ನೇ ಸಜ್ಜನರು ಎಂದು ಕರೆಯುವುದು.

ಸಜ್ಜನರು ಹೀಗೆ ಇನ್ನೊಬ್ಬರಿಗೆ ಒಳಿತನ್ನು ಮಾಡುವುದು ಯಾವಾಗ? ಸಜ್ಜನರು ಯಾವಾಗ ಬಿಡುವಾಗಿ ಇರುತ್ತಾರೋ ಅಥವಾ ಅವರ ಮನಸ್ಸು ಸಂತೋಷವಾಗಿ ಇರುತ್ತದೋ ಆಗ ಮಾಡುವುದಿಲ್ಲ; ಅವರು ಬೇರೊಬ್ಬರಿಗೆ ಒಳಿತನ್ನು ಮಾಡಲು ಸದಾ ಸಿದ್ಧರಿರುತ್ತಾರೆ.

ಸುಭಾಷಿತ ಇನ್ನೊಂದು ಸಂಗತಿಯನ್ನೂ ಹೇಳುತ್ತಿದೆ. ಸಜ್ಜನರು ಒಳಿತನ್ನು ಮಾಡುವುದಾದರೂ ಏಕೆ? ‘ಇಂದು ನಾನು ಅವನಿಗೆ ಒಳಿತನ್ನು ಮಾಡಿದರೆ ನಾಳೆ ಅವನು ನನಗೆ ಸಹಾಯ ಮಾಡಬಹುದು’ – ಈ ಲೆಕ್ಕಾಚಾರದಲ್ಲಿ ಅವರು ಉಪಕಾರ ಮಾಡುವುದಿಲ್ಲ; ಉಪಕಾರಬುದ್ಧಿ ಅವರ ವ್ಯಕ್ತಿತ್ವದ ಸಹಜಗುಣವೇ ಆಗಿರುತ್ತದೆ. ಇದನ್ನು ಹೇಳಲು ಅದು ಒಂದು ಸೊಗಸಾದ ಉದಾಹರಣೆಯನ್ನು ಕೊಟ್ಟಿದೆ. ಶ್ರೀಗಂಧದ ಕೊರಡನ್ನು ತೇದು ಅದರ ಲೇಪನವನ್ನು ಹಚ್ಚಿಕೊಳ್ಳುವುದರಿಂದ ನಮ್ಮ ಶರೀರದ ತಾಪವನ್ನು ಪರಿಹರಿಸಿಕೊಳ್ಳಬಹುದು. ಶ್ರೀಗಂಧದ ಪ್ರಯೋಜನವೇ ಇದು. ಇದು ಶ್ರೀಗಂಧದ ಮರಕ್ಕೂ ಗೊತ್ತು – ತನ್ನನ್ನು ತೇಯ್ದು ತನ್ನ ಜೀವರಸವನ್ನು ಮೈಗೆ ಹಚ್ಚಿಕೊಳ್ಳುವವರು ಇತರರು, ಅವರ ದೇಹದ ತಾಪವನ್ನು ಶಮನಮಾಡಿಕೊಳ್ಳಲು ಎಂದು. ಆದರೂ ಶ್ರೀಗಂಧದ ಸಸಿ ಬೆಳೆಯುತ್ತದೆ, ಮರವಾಗುತ್ತದೆ; ಕೊಡಲಿಗೆ ದೇಹವನ್ನು ಒಡ್ಡುತ್ತದೆ; ಮೈಯನ್ನೇ ಕೊಟ್ಟು ಬೇರೊಬ್ಬರ ಸಂಕಟವನ್ನು ದೂರ ಮಾಡುತ್ತದೆ; ಅದೂ ಪರಿಮಳದ ಜೊತೆಗೆ.

ಸಜ್ಜನರೂ ಹೀಗೆಯೇ – ತಮಗಾಗಿರುವ, ಆಗಬಹುದಾದ ಕಷ್ಟಗಳನ್ನು ಲೆಕ್ಕಿಸದೆ ಬೇರೊಬ್ಬರ ಒಳಿತಿಗಾಗಿ, ಸಮಾಜದ ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT