ಬುಧವಾರ, ಆಗಸ್ಟ್ 4, 2021
20 °C

ದಿನದ ಸೂಕ್ತಿ | ಜಿಪುಣ ಮತ್ತು ಉದಾರಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಉಭಯೋರ್ನಾಸ್ತಿ ಭೋಗೇಚ್ಛಾ ಪರಾರ್ಥಂ ಧನಸಂಚಯಃ ।

ಕೃಪಣೋದಾರಯೋಃ ಪಶ್ಯ ತಥಾಪಿ ಮಹದಂತರಮ್‌ ।।

ಇದರ ತಾತ್ಪರ್ಯ ಹೀಗೆ:

’ಜಿಪುಣ ಮತ್ತು ಉದಾರಿ – ಇವರಿಬ್ಬರಿಗೂ ನಾವು ಅನುಭವಿಸಬೇಕೆಂಬ ಇಚ್ಛೆ ಇಲ್ಲ; ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣವನ್ನು ಕೂಡಿಡುವುದು. ಆದರೂ ಇಬ್ಬರಲ್ಲಿ ಇರುವ ಅಪಾರವಾದ ವ್ಯತ್ಯಾಸವನ್ನು ನೋಡು.‘

ಈ ಸುಭಾಷಿತವನ್ನು ಕೇಳಿದ ತತ್‌ಕ್ಷಣ ಹೊಳೆದ ಹೋಲಿಕೆ. ಭಯೋತ್ಪಾದಕ ಮತ್ತು ಸೈನಿಕರ ಉದಾಹರಣೆ; ಇವರಿಬ್ಬರೂ ಬಂದೂಕನ್ನು ಹಿಡಿದವರೇ. ಆದರೆ ಇಬ್ಬರು ಅದನ್ನು ಬಳಸುವ ಉದ್ದೇಶದಲ್ಲಿ ಎಷ್ಟು ವ್ಯತ್ಯಾಸ ಇದೆಯಲ್ಲವೆ?

ಇರಲಿ, ಸುಭಾಷಿತದ ವಿವರಣೆಯನ್ನು ನೋಡೋಣ. 

ಜಿಪುಣ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಜಿಪುಣ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸಲಾರ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ? 

ಉದಾರಿ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಉದಾರಿ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸುವುದಿಲ್ಲ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ?

ಅಂದರೆ, ಜಿಪುಣ ಮತ್ತು ಉದಾರಿ – ಇವರಿಬ್ಬರ ನಡುವೆ ವ್ಯತ್ಯಾಸವೇ ಇಲ್ಲವೆ? ಈ ಇಬ್ಬರೂ ತಮಗಾಗಿ ತಮ್ಮ ಸಂಪತ್ತನ್ನು ಬಳಸಿಕೊಳ್ಳುವುದಿಲ್ಲ. ಹಾಗಾದರೆ ಹೀಗೆ ಸಂಗ್ರಹಿಸುವುದಾದರೂ ಏಕೆ? ಇಬ್ಬರೂ ಪರರಿಗಾಗಿಯೇ, ಮತ್ತೊಬ್ಬರಿಗಾಗಿಯೇ ಸಂಗ್ರಹಿಸುವುದು. ಇಲ್ಲೂ ಇಬ್ಬರ ನಡುವೆ ವ್ಯತ್ಯಾಸವಿಲ್ಲವಲ್ಲ! ಹೌದು, ಇಲ್ಲಿ ತನಕ ವ್ಯತ್ಯಾಸ ಇಲ್ಲ. ಆದರೆ ಈ ‘ಪರರು‘ ಯಾರು ಎಂದು ನೋಡುವಾಗ ಜಿಪುಣನಿಗೂ ಉದಾರಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ.

ಜಿಪುಣನ ದೃಷ್ಟಿಯಲ್ಲಿ ’ಪರರು‘ ಎಂದರೆ ಅವನ ಹೆಂಡತಿ, ತಂದೆ, ತಾಯಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಅವರ ಮೊಮ್ಮಕ್ಕಳು ... ಹೀಗೆ ಅವನ ಕುಟುಂಬದವರೆಲ್ಲರೂ ಸೇರುತ್ತಾರೆ.

ಉದಾರಿಯ ದೃಷ್ಟಿಯಲ್ಲಿ ’ಪರರು‘ ಎಂದರೆ ಸಮಾಜ, ಸಮಾಜ, ಸಮಾಜ... ಇಡಿಯ ಸಮಾಜವೇ ನನ್ನ ಕುಟುಂಬ ಎಂಬಂಥ ನಿಲುವು. ಈ ಶ್ಲೋಕವನ್ನು ನೋಡಿ, ಈ ಭಾವವನ್ನು ಎಷ್ಟು ಚೆನ್ನಾಗಿ ಹೇಳಿದೆ:

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್‌ ।

ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ।।

’ಇವನು ನನ್ನವನು, ಇವನು ಬೇರೆಯವನು – ಎಂಬ ಎಣಿಕೆ ಹುಲುಮನಸ್ಸಿನವರದ್ದು; ಉದಾರಿಗೆ ಈ ಭೂಮಂಡಲವೇ ತನ್ನ ಕುಟುಂಬವಾಗಿರುತ್ತದೆ‘ – ಎಂಬುದು ಈ ಶ್ಲೋಕದ ತಾತ್ಪರ್ಯ.

ಹೌದು, ಜಿಪುಣನಿಗೂ ಉದಾರಿಗೂ ಹೆಚ್ಚು ವ್ಯತ್ಯಾಸವಿಲ್ಲ; ಇರುವುದೆಲ್ಲವೂ ಒಂದೇ ವ್ಯತ್ಯಾಸ: ಉದಾರಿಗೆ ವಿಶ್ವವೇ ತನ್ನ ಕುಟುಂಬವಾದರೆ, ಜಿಪುಣನಿಗೆ ಅವನ ಕುಟುಂಬವೇ ಅವನ ವಿಶ್ವ ಆಗಿರುತ್ತದೆಯಷ್ಟೆ!

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು