ಬುಧವಾರ, ಮಾರ್ಚ್ 29, 2023
32 °C

ದಿನದ ಸೂಕ್ತಿ: ರಾಜನ ಕಣ್ಣು ಯಾವುದರ ಮೇಲೆ?

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕವಿನಾಂ ಪ್ರತಿಭಾ ಚಕ್ಷುಃ ಶಾಸ್ತ್ರಂ ಚಕ್ಷುರ್ವಿಪಶ್ಚಿತಾಮ್‌ ।

ಜ್ಞಾನಂ ಚಕ್ಷುರ್ಮಹರ್ಷೀಣಾಂ ಚರಾಶ್ಚಕ್ಷುರ್ಮಹೀಕ್ಷಿತಾಮ್‌ ।।

ಇದರ ತಾತ್ಪರ್ಯ ಹೀಗೆ

‘ಕವಿಗಳಿಗೆ ಪ್ರತಿಭೆ ಕಣ್ಣು; ವಿದ್ವಾಂಸರಿಗೆ ಶಾಸ್ತ್ರವು ಕಣ್ಣು; ಮಹರ್ಷಿಗಳಿಗೆ ಜ್ಞಾನವೇ ಕಣ್ಣು. ಹೀಗೆಯೇ ರಾಜರ ಕಣ್ಣು ಯಾವುದೆಂದರೆ ಅದು ಗೂಢಚಾರರೇ ಹೌದು.’

ನಾವು ಜಗತ್ತನ್ನು ನೋಡುವುದೇ ಕಣ್ಣುಗಳಿಂದ. ನಮ್ಮ ದೇಹದ ಭಾಗವಾಗಿರುವ ಪ್ರತ್ಯಕ್ಷ ಕಣ್ಣುಗಳಿಂದ ನಾವು ಜಗತ್ತನ್ನು ನೋಡುತ್ತಿರುತ್ತೇವೆ. ಇದರ ಜೊತೆಗೆ ನಮ್ಮ ವ್ಯಕ್ತಿತ್ವದ ಜಗತ್ತು, ನಮ್ಮ ಸಾಧನೆಯ ಜಗತ್ತು, ನಮ್ಮ ಭಾವನೆಗಳ ಜಗತ್ತು, ನಮ್ಮ ಕರ್ತವ್ಯದ ಜಗತ್ತು – ಹೀಗೆ ಹಲವು ಜಗತ್ತುಗಳು ಕೂಡ ಸೃಷ್ಟಿಯಾಗುತ್ತಿರುತ್ತವೆ. ಈ ಜಗತ್ತಿನಲ್ಲಿ ನಮ್ಮನ್ನು ನಡೆಸಬಲ್ಲದ್ದು, ಕಾಪಾಡಬಲ್ಲದ್ದು ಯಾವ ಕಣ್ಣುಗಳು ಎಂಬುದನ್ನು ಈ ಶ್ಲೋಕ ಹೇಳುತ್ತಿದೆ.

ಕವಿಗಳಿಗೆ ಪ್ರತಿಭೆಯೇ ಕಣ್ಣು. ಅವನು ತನ್ನ ಪ್ರತಿಭೆಯಿಂದಲೇ ಸಾಹಿತ್ಯಜಗತ್ತನ್ನು ಸೃಷ್ಟಿಸಬೇಕು, ಅದರ ಮೂಲಕವೇ ಅವನು ತನ್ನ ಜಗತ್ತನ್ನು ಕಾಣಿಸಬೇಕು. ಹೀಗಾಗಿ ಅದೇ ಅವನ ಕಣ್ಣು, ಬೆಳಕು.

ವಿದ್ವಾಂಸನು ತನ್ನ ವಿದ್ವತ್ತೆಯ ಜಗತ್ತನ್ನು ಕಟ್ಟಿಕೊಳ್ಳುವುದೇ ಶಾಸ್ತ್ರದ ಮೂಲಕ. ಹೀಗಾಗಿ ಶಾಸ್ತ್ರವೇ ಅವನ ಕಣ್ಣು.

ಮಹರ್ಷಿಗಳು, ಯೋಗಿಗಳು, ಜ್ಞಾನಿಗಳ ವ್ಯವಹಾರವೆಲ್ಲವೂ ಜ್ಞಾನಮಯ; ಜ್ಞಾನವೇ ಅವರ ಜೀವನವನ್ನು ಮುನ್ನಡೆಸುತ್ತಿರುತ್ತದೆ. ಹೀಗಾಗಿ ಜ್ಞಾನವೇ ಅವರ ಕಣ್ಣು.

ಸುಭಾಷಿತ ಹೇಳುತ್ತಿದೆ, ರಾಜರಿಗೆ ಕಣ್ಣು ಎಂದರೆ ಅದು ಗೂಢಚಾರರೇ ಹೌದು ಎಂದು. ಗೂಢಚಾರರು ಎಂದರೆ ಗುಟ್ಟಾಗಿ ಎಲ್ಲಡೆ ಸಂಚರಿಸುತ್ತ, ಸೂಕ್ಷ್ಮವಾದ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ರಾಜನಿಗೆ ಮುಟ್ಟಿಸುವವರು. ರಾಜ್ಯಕ್ಕೆ ಒದಗುವ ಅಪಾಯ, ರಾಜನ ಬಗ್ಗೆ ಜನರಿಗೆ ಇರುವ ಅಭಿಪ್ರಾಯ, ಜನರ ಕುಂದುಕೊರತೆಗಳು, ರಾಜ್ಯದ ಶತ್ರುಗಳು ಮಿತ್ರರು ಯಾರು – ಹೀಗೆ ಹಲವು ಸಂಗತಿಗಳನ್ನು ತಿಳಿದುಕೊಳ್ಳಲು ಈ ಮಾಹಿತಿ ನೆರವಿಗೆ ಬರುತ್ತದೆ. ಹೀಗಾಗಿ ಇಡಿಯ ರಾಜ್ಯವ್ಯವಸ್ಥೆಯೇ ಗೂಢಚಾರವ್ಯವಸ್ಥೆಯ ಮೇಲೆ ನಿಂತಿದೆ ಎಂದು ಸುಭಾಷಿತ ಹೇಳುತ್ತಿದೆ. ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ಗೂಢಚಾರರು ಎಂದರೆ ಹೊರಗಿನ ವ್ಯಕ್ತಿಗಳೇ ಆಗಬೇಕಿಲ್ಲ; ರಾಜನ ಅಂತರಂಗವೂ ಗೂಢಚಾರನ ಕೆಲಸವನ್ನು ಮಾಡಬಹುದು, ಮಾಡಬೇಕು ಕೂಡ. ರಾಜ ನಿರಂತರವಾಗಿ ಆತ್ಮಾವಲೋಕ ಮಾಡಿಕೊಳ್ಳುತ್ತಿರಬೇಕು. ತನ್ನಿಂದ ರಾಜ್ಯಕ್ಕೆ, ಜನರಿಗೆ ಎಷ್ಟು ಪ್ರಯೋಜನ ಆಗುತ್ತಿದೆ, ಎಷ್ಟು ತೊಂದರೆ ಆಗುತ್ತಿದೆ ಎಂಬುದನ್ನು ಅವನು ಸತತವಾಗಿ ಮನನ ಮಾಡುತ್ತಲೇ ಇರಬೇಕು. ಆಗ ಅವನ ಅಧಿಕಾರಕ್ಕೆ ಸರಿಯಾದ ಬೆಳಕು ದಕ್ಕುತ್ತದೆ, ಅವನ ಕರ್ತವ್ಯದ ದಾರಿ ಸ್ಪಷ್ಟವಾಗಿ ಕಾಣಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು