ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸ್ನೇಹಶಕ್ತಿ

Last Updated 16 ಸೆಪ್ಟೆಂಬರ್ 2020, 0:56 IST
ಅಕ್ಷರ ಗಾತ್ರ

ಉಪಕಾರಾಚ್ಚ ಲೋಕಾನಾಂ ನಿಮಿತ್ತಾನ್ಮೃಗಪಕ್ಷಿಣಾಮ್‌ ।

ಭಯಾಲ್ಲೋಭಾಚ್ಚ ಮೂರ್ಖಾಣಾಂ ಮೈತ್ರೀ ಸ್ಯಾದ್ದರ್ಶನಾತ್‌ ಸತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಉಪಕಾರ ಮಾಡುವುದರಿಂದ ಸಾಮಾನ್ಯಜನರ ಸ್ನೇಹವಾಗುತ್ತದೆ; ಮೃಗಪಕ್ಷಿಗಳ ಸ್ನೇಹ ಬೇರೊಂದು ಕಾರಣದಿಂದ ಸಂಭವಿಸುತ್ತದೆ; ಇನ್ನು ಮೂರ್ಖರ ಸ್ನೇಹಕ್ಕೆ ಭಯಲೋಭಗಳು ಕಾರಣ. ಸಜ್ಜನರ ಸ್ನೇಹ ದರ್ಶನಮಾತ್ರದಿಂದಲೇ ಆಗುವುದು.’

ನಮ್ಮ ಎಲ್ಲ ಬಾಂಧವ್ಯಗಳೂ ಒಂದಾನೊಂದು ಕಾರಣದಿಂದಲೇ ಆಗುವಂಥದ್ದು. ಸ್ನೇಹವೂ ಕೂಡ ಹೀಗೆ ಯಾವುದೋ ಕಾರಣದಿಂದ ಏರ್ಪಡುತ್ತದೆ. ಇದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ಸಾಮಾನ್ಯಜನರ ಸ್ನೇಹ ಉಂಟಾಗುವುದು ಉಪಕಾರದಿಂದ. ಸಾಮಾನ್ಯರು ಕಷ್ಟದಲ್ಲಿದ್ದಾಗ ಯಾರು ಅವರ ಸಹಾಯ ಮಾಡುತ್ತಾರೋ ಅಂಥವರ ಸ್ನೇಹವನ್ನೂ ಅವರು ಉಳಿಸಿಕೊಳ್ಳಲು ತವಕಿಸುತ್ತಾರೆ. ಇದು ಅವರ ಕೃತಜ್ಞತೆಯ ಸ್ವಭಾವಕ್ಕೆ ನಿದರ್ಶನ.

ಪ್ರಾಣಿ–ಪಕ್ಷಿಗಳೊಂದಿಗೂ ನಮಗೆ ಸ್ನೇಹ ಉಂಟಾಗುತ್ತದೆ. ಇದನ್ನು ನಾವು ಸಾಕುಪ್ರಾಣಿಗಳಲ್ಲಿ ಸ್ಪಷ್ಟವಾಗಿ ನೋಡಬಹುದು. ನಾವು ಆ ಪ್ರಾಣಿ–ಪಕ್ಷಿಗಳಿಗೆ ತೋರಿಸುವ ಪ್ರೀತಿಯ ಕಾರಣದಿಂದ ಅವು ನಮ್ಮೊಂದಿಗೆ ಸ್ನೇಹಭಾವದಿಂದ ನಡೆದುಕೊಳ್ಳುತ್ತವೆ. ಇದೂ ಪ್ರಾಣಿಗಳಲ್ಲಿರುವ ಕೃತಜ್ಞತೆಯನ್ನೂ ಸೂಚಿಸುತ್ತದೆ. ಕೆಲವೊಂದು ಪ್ರಾಣಿಗಳಂತೂ ಸ್ನೇಹದ ಪರಾಕಾಷ್ಠೆಯನ್ನೇ ತೋರಿಸಿರುವ ಸುದ್ದಿಗಳು ವಿಶ್ವದ ಎಲ್ಲ ಭಾಗಗಳಿಂದಲೂ ಆಗಾಗ ವರದಿಯಾಗುತ್ತಲೇ ಇರುತ್ತವೆ.

ಮೂರ್ಖರೊಂದಿಗೂ ನಮಗೆ ಸ್ನೇಹ ಉಂಟಾಗುತ್ತಿರುತ್ತದೆ. ಆದರೆ ಇದಕ್ಕೆ ಕಾರಣ ಭಯಲೋಭಗಳು ಕಾರಣ ಎನ್ನುತ್ತಿದೆ ಸುಭಾಷಿತ. ಯಾವುದೋ ಸ್ವಾರ್ಥದ ಉದ್ದೇಶದಿಂದ ಸ್ನೇಹಕ್ಕೆ ಹಂಬಲಿಸುವವರನ್ನು ಮೂರ್ಖರು ಎನ್ನುವುದು ಸರಿಯೋ ಅಥವಾ ಧೂರ್ತರು ಎನ್ನುವುದು ಸರಿಯೋ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ. ಲೋಭದ ಜೊತೆಗೆ ಭಯವನ್ನೂ ಸೇರಿಸಿದೆ ಸುಭಾಷಿತ. ನಾವು ಅಂಥವರಿಗೆ ಭಯದಿಂದಲೇ ಸ್ನೇಹದ ಹಸ್ತವನ್ನು ನೀಡುವುದು ಅಲ್ಲವೆ?

ಮೇಲೆ ಉಲ್ಲೇಖಿಸಿದ ಎಲ್ಲ ಸ್ನೇಹಗಳ ಹಿಂದೆಯೂ ಹಲವು ಕಾರಣಗಳಿವೆ. ಹಾಗಾದರೆ ಯಾವುದೇ ಸ್ವಾರ್ಥದ ಲೇಪವಿಲ್ಲದೆ ಸ್ನೇಹ ಉಂಟಾಗುವುದೇ ಇಲ್ಲವೆ – ಎಂಬ ಪ್ರಶ್ನೆ ಏಳದಿರದು. ಇಂಥ ಸ್ನೇಹ ಸಾಧ್ಯವಿದೆ ಎಂದುಸುಭಾಷಿತ ಘೋಷಿಸಿದೆ. ಸಜ್ಜನರ ದರ್ಶನವೇ ನಮ್ಮನ್ನು ಅವರೊಂದಿಗೆ ಸ್ನೇಹಕ್ಕೆ ತೊಡಗಿಸುತ್ತದೆಯಂತೆ. ಇದರ ತಾತ್ಪರ್ಯ: ಸಜ್ಜನರ ನೋಟವೇ ನಮಗೊಂದು ನೆಮ್ಮದಿಯನ್ನೂ ಧೈರ್ಯವನ್ನೂ ಸಂತೋಷವನ್ನೂ ನೀಡುತ್ತದೆ ಎಂದು. ಅವರು ನಮ್ಮಿಂದ ಏನನ್ನೂ ಬಯಸುವುದಿಲ್ಲ. ಸಜ್ಜನರು ನಮ್ಮ ಸ್ನೇಹವಲಯದಲ್ಲಿದ್ದರೆ ನಮಗೆ ತೊಂದರೆಗಳೇ ಎದುರಾಗುವುದಿಲ್ಲ; ಅಕಸ್ಮಾತ್‌ ಎದುರಾದರೂ ಅವರು ಅದನ್ನು ಪರಿಹರಿಸಬಲ್ಲವರಾಗಿರುತ್ತಾರೆ; ನಮಗೆ ಧೈರ್ಯವನ್ನೂ ನೀಡುತ್ತಾರೆ; ಸಮಸ್ಯೆಗೆ ಪರಿಹಾರವನ್ನೂ ಒದಗಿಸುತ್ತಾರೆ. ಹೀಗೆ ಅವರ ನೋಟವೇ ನಮಗೆ ಶ್ರೀರಕ್ಷೆಯಾಗಬಲ್ಲದು.

ಸ್ನೇಹ ಎನ್ನುವುದು ಒಂದು ಅದ್ಭುತ ಸಂಪತ್ತು. ಅದನ್ನು ಎಚ್ಚರದಿಂದಲೂ ಸಂಪಾದಿಸಬೇಕು. ಸಂಪಾದಿಸಿದ ಬಳಿಕ ಎಚ್ಚರದಿಂದ ಉಳಿಸಿಕೊಳ್ಳಲೂ ಬೇಕು. ಎಲ್ಲಕ್ಕಿಂತಲೂ ಮೊದಲು ಸ್ನೇಹ ಪ್ರಾಮಾಣಿಕವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT