ಭಾನುವಾರ, ಜುಲೈ 25, 2021
21 °C

ದಿನದ ಸೂಕ್ತಿ | ಸತ್ಯವೇ ದಿಟವಾದ ಧರ್ಮ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನಾಸ್ತಿ ಸತ್ಯಾತ್‌ ಪರೋ ಧರ್ಮಃ ಸಂತುಷ್ಟಿರ್ನಾತ್ಮಜಾತ್‌ ಪರಾ ।

ನಾನ್ನದಾನಾತ್‌ ಪರಂ ದಾನಂ ವಂದನಾನ್ನೋಪಚಾರಕಮ್‌ ।।

ಇದರ ತಾತ್ಪರ್ಯ ಹೀಗೆ:

'ಸತ್ಯಕ್ಕಿಂತ ಹೆಚ್ಚಿನ ಧರ್ಮವಿಲ್ಲ; ಪುತ್ರಜನ್ಮಕ್ಕಿಂತ ಹೆಚ್ಚಿನ ಸಂತೋಷವಿಲ್ಲ; ಅನ್ನದಾನಕ್ಕಿಂತಲೂ ಉತ್ತಮವಾದ ದಾನವಿಲ್ಲ; ನಮಸ್ಕಾರಕ್ಕಿಂತ ಉತ್ತಮವಾದ ಉಪಚಾರವಿಲ್ಲ'.

ಧರ್ಮ, ಸಂತೋಷ, ದಾನ, ಉಪಚಾರ – ಇವು ಯಾವುದೋ ಒಂದು ವಿವರ ಅಥವಾ ಆಚರಣೆಗೆ ಮಾತ್ರವೇ ಸೀಮಿತವಾಗಿರುವ ವಿಷಯಗಳಲ್ಲ.

ಧರ್ಮದ ವ್ಯಾಪ್ತಿ ವಿಸ್ತಾರವಾದುದು; ಅದರ ಅರ್ಥವನ್ನು ಮಿತಗೊಳಿಸುವುದು ಹೇಗೆ ಕಷ್ಟವೋ ಹಾಗೆಯೇ ಅದರ ಪ್ರಕಟೀಕರಣವನ್ನು ಮಿತಗೊಳಿಸುವುದು ಕೂಡ ಕಷ್ಟವೇ. ರಾಷ್ಟ್ರಧರ್ಮ, ಸಮಾಜಧರ್ಮ, ಕುಟುಂಬಧರ್ಮ, ರಾಜಧರ್ಮ, ಪಿತೃಧರ್ಮ, ಪುತ್ರಧರ್ಮ – ಈ ಬಗೆಯ ಧರ್ಮಗಳು ನೂರಾರು; ಒಂದೊಂದರ ಭಾವ–ಭಂಗಿಗಳೂ ಹತ್ತಾರು. ಇವುಗಳ ಅನುಷ್ಠಾನವೂ ಸುಲಭವಲ್ಲ. ಆದರೆ ಸುಭಾಷಿತ ಹೇಳುತ್ತಿದೆ: ‘ನೀನು ಆ ಧರ್ಮ, ಈ ಧರ್ಮ – ಎಂದು ತಲೆಯನ್ನು ಕೆಡಿಸಿಕೊಳ್ಳಬೇಡ. ಎಲ್ಲ ಧರ್ಮಗಳಿಗೂ ಮೂಲ 'ಸತ್ಯ'ದಲ್ಲಿಯೇ ಇದೆ. ಎಲ್ಲ ಧರ್ಮಗಳ ಸಾರವೇ ಸತ್ಯ'. ಇದು ಸುಭಾಷಿತದ ನಿಲವು.

ಆದರೆ ಸತ್ಯದ ನಿಷ್ಕರ್ಷೆ ಕೂಡ ಸುಲಭವಾದುದಲ್ಲ. ನಮ್ಮ ಶಾಸ್ತ್ರಗಳಲ್ಲಿ ಸತ್ಯದ ಸ್ವರೂಪದ ಬಗ್ಗೆ ಗಹನವಾದ ಚರ್ಚೆಗಳು ನಡೆದಿವೆ. ನಮ್ಮ ನಿತ್ಯದ ವ್ಯವಹಾರದಲ್ಲಿಯೂ 'ಸತ್ಯ ಎಂದರೇನು' – ಎಂಬ ಪ್ರಶ್ನೆಯನ್ನು ಎದುರಿಸುತ್ತಲೇ ಇರುತ್ತೇವೆಯೆನ್ನಿ! ಸತ್ಯಕ್ಕೆ ಒಂದೇ ಆಯಾಮವೂ ಇರದು. ಇಲ್ಲಿ ರಶೋಮೊನ್‌ ಚಲನಚಿತ್ರ ನೆನಪಿಗೆ ಬರುತ್ತದೆ. ಗಾಂಧಿಯವರು ಅವರ ಜೀವನ ವೃತ್ತಾಂತವನ್ನು 'ಮೈ ಎಕ್ಸ್‌ಪೆರಿಮೆಂಟ್ಸ್‌ ವಿತ್ ಟ್ರೂತ್'‘ ಎಂದು ಕರೆದಿರುವುದು ಕೂಡ ಗಮನಾರ್ಹ. 

ಸಂತೋಷದ ಮೂಲ ಯಾವುದು? ಹೇಳುವುದು ಕಷ್ಟ. ಸಂಪತ್ತಿನ ಗಳಿಕೆ, ಅಧಿಕಾರ, ವಿದ್ಯೆ – ಹೀಗೆ ಎಲ್ಲೆಲ್ಲೂ ಸಂತೋಷವನ್ನು ಹುಡುಕುತ್ತಲೇ ಇರುತ್ತೇವೆ. ಆದರೆ ದಿಟವಾದ ಸಂತೋಷ ದೊರೆಯುವುದು ನಮ್ಮ ಪುತ್ರೋತ್ಸವದಲ್ಲಿ ಎನ್ನುತ್ತಿದೆ ಸುಭಾಷಿತ.

ಮನುಷ್ಯನಿಗೆ ತನ್ನ ಅಸ್ತಿತ್ವದ ಬಗ್ಗೆ, ತನ್ನ ಬಗ್ಗೆ ತುಂಬ ವ್ಯಾಮೋಹವಿರುವುದು ಸ್ಪಷ್ಟ. ತಾನು ಯಾವಾಗಲೂ ಇರಬೇಕು, ಚಿರಂಜೀವಿಯಾಗಿರಬೇಕು ಎಂಬುದು ಅವನ ಅದಮ್ಯ ಬಯಕೆಯಾಗಿದೆ. ಆದರೆ ಅವನ ಈ ಆಸೆ ಸುಲಭವಾಗಿ ನೆರವೇರುವಂಥದ್ದಲ್ಲ; ನೆರವೇರಲು ಸಾಧ್ಯವೂ ಇಲ್ಲವೆನ್ನಿ! ಆದರೆ ಅವನ ಅಸ್ತಿತ್ವದ ಸಾತತ್ಯವನ್ನು ಅವನು ತನ್ನ ಮಕ್ಕಳಲ್ಲಿ – ಸಂತಾನದಲ್ಲಿ – ಕಾಣುತ್ತಾನೆ; ಹೀಗಾಗಿಯೇ ಅವನು ತಂದೆಯಾದಾಗ ಸಿಗುವ ಸಂತೋಷ ಎಲ್ಲ ಸಂತೋಷಗಳಿಗಿಂತಲೂ ಮಿಗಿಲಾದುದು ಎನ್ನುತ್ತಿದೆ ಸುಭಾಷಿತ. ಇಲ್ಲಿ 'ಮಗ' ಎಂದಿದ್ದರೂ ಅದೀಗ ಮಗಳಿಗೂ ಸಲ್ಲುವ ಮಾತೇ ಹೌದೆನ್ನಿ!

ಇನ್ನು ದಾನಗಳ ಬಗ್ಗೆ. ದಾನಗಳಲ್ಲೂ ಹಲವು ಬಗೆ; ಹಲವು ವಿಧಿ–ವಿಧಾನಗಳೂ ಉಂಟು. (ನಮ್ಮ ಆಧುನಿಕ ’ಜೌತಿಷಿ‘ಗಳು ಉಲ್ಲೇಖಿಸುವ ಹೊಸ ಹೊಸ ದಾನಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ!) ದಾನವನ್ನು ಕೊಡುವುದು ತೃಪ್ತಿ ಪಡಿಸಲು. ಯಾರು ನಮ್ಮಿಂದ ದಾನವನ್ನು ಸ್ವೀಕರಿಸುತ್ತಾರೆಯೋ ಅವರು ನಾವು ಕೊಡುವ ದಾನದಿಂದ ತೃಪ್ತರಾಗಬೇಕು. ಇದು ದಾನದ ಪ್ರಧಾನ ಉದ್ದೇಶ. ಸುವರ್ಣದಾನ, ದ್ರವ್ಯದಾನ, ಭೂದಾನ, ಗೋದಾನ – ಹೀಗೆ ಹಲವು ದಾನಗಳ ಕ್ರಮಗಳಿವೆ. ಇವುಗಳ ಜೊತೆಗೆ ಅಕ್ಷರದಾನ, ಅಂಗದಾನ – ಮುಂತಾದ ದಾನಗಳ ಕಲ್ಪನೆಗಳೂ ಉಂಟು. ಸುಭಾಷಿತ ಹೇಳುತ್ತಿದೆ: ಈ ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಉತ್ತಮ. ಏಕೆ ಇದು? ನಾವು ಕೊಡುವ ಯಾವ ದಾನವೂ 'ಇನ್ನು ಸಾಕು, ತೃಪ್ತಿಯಾಯಿತು' ಎಂದು ಹೇಳಿಸುವುದಿಲ್ಲ, ಅನ್ನವನ್ನು ಹೊರತಾಗಿ. ಹೀಗಾಗಿ ಅನ್ನದಾನ ಎಲ್ಲ ದಾನಗಳಿಗಿಂತಲೂ ಶ್ರೇಷ್ಠ.

ಕೊರೊನಾ ಸಮಸ್ಯೆಯ ಈ ಕಾಲದಲ್ಲಿ 'ಉಪಚಾರ' ಎಂದರೇನು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ವಿಶ್ಲೇಷಿಸಬೇಕಾಗುತ್ತದೆ. ಈ ಸಂದರ್ಭಕ್ಕೂ ಸಲ್ಲುವಂಥ ಉಪಚಾರವನ್ನೇ ಸುಭಾಷಿತ ಹೇಳುತ್ತಿದೆಯೆನ್ನಿ!

ನಮ್ಮಲ್ಲಿ ದೇವರಿಗೆ ಸಲ್ಲಿಸುವ ಉಪಚಾರಗಳಿಂದ ಮೊದಲುಗೊಂಡು ಪ್ರಾಣಿ–ಪಕ್ಷಿ–ಮನುಷ್ಯರ ವರೆಗೂ ಸಲ್ಲಿಸಬೇಕಾದ ಹತ್ತುಹಲವು ಉಪಚಾರಗಳಿವೆ. ಉಪಚಾರ ಎಂದರೆ ನಮ್ಮಲ್ಲಿಗೆ ಬಂದವರನ್ನು ಆದರಿಸುವುದು; ಅವರ ಆ ಕ್ಷಣದ ಆವಶ್ಯಕತೆಗಳನ್ನು ಪೂರೈಸುವುದು. ಮನೆಗೆ ಬಂದ ಕೂಡಲೇ ಕುಡಿಯಲು ನೀರು ಕೋಡುವುದು, ಕುಳಿತುಕೊಳ್ಳಲು ಆಸನವನ್ನು ಒದಗಿಸುವುದು – ಹೀಗೆ. ಸುಭಾಷಿತ ಹೇಳುತ್ತಿದೆ, ಎಲ್ಲ ಉಪಚಾರಗಳಿಗಿಂತಲೂ ನಮಸ್ಕಾರ ಮಾಡುವುದೇ ದಿಟವಾದ ಉಪಚಾರ. ಇದು ಏಕೆ? ಉಳಿದ ಎಲ್ಲ ಉಪಚಾರಗಳೂ ಹೊರಗಿನ ವಸ್ತುಗಳನ್ನು ಅವಲಂಬಿಸಿರುತ್ತವೆ; ಆದರೆ ನೈಜ ನಮಸ್ಕಾರದ ಹಿಂದೆ ದಿಟವಾಗಿಯೂ ಕೆಲಸ ಮಾಡುವುದು ನಮ್ಮ ಮನಸ್ಸು. ಮನಸ್ಸಿಗೆ ಇರುವ ಶಕ್ತಿ ಅಗಾಧ; ಮಾತ್ರವಲ್ಲ, ಅದೇ ನಮ್ಮ ಎಲ್ಲ ಆಗುಹೋಗುಗಳಿಗೂ ಕಾರಣವಾಗಿರುವುದರಿಂದ ನಾವು ಮನಸ್ಸನ್ನು ಕೊಟ್ಟರೆ ಉಳಿದ ಎಲ್ಲವನ್ನೂ ಕೊಟ್ಟಂತೆಯೇ ಆಗುತ್ತದೆಯಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.