ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಬಂಧನ–ಮೋಕ್ಷ

Last Updated 6 ಅಕ್ಟೋಬರ್ 2020, 17:01 IST
ಅಕ್ಷರ ಗಾತ್ರ

ಮಮೇತಿ ಬಧ್ಯತೇ ಜಂತುರ್ನ ಮಮೇತಿ ಚ ಮುಚ್ಯತೇ ।

ಬಂಧಾಯ ವಿಷಯಾಸಕ್ತಂ ಮುಕ್ತೌ ನಿರ್ವಿಷಯಂ ಮನಃ ।।

ಇದರ ತಾತ್ಪರ್ಯ ಹೀಗೆ:

‘ನನ್ನದು ಎಂಬುದರಿಂದ ಮನುಷ್ಯನು ಬಂಧನಕ್ಕೊಳಗಾಗುತ್ತಾನೆ. ’ನನ್ನದಲ್ಲ’ ಎಂದು ತಿಳಿದುಕೊಳ್ಳವವನು ಮುಕ್ತನಾಗುತ್ತಾನೆ. ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವುದರಿಂದ ಬಂಧನ ಒದಗುತ್ತದೆ; ಆಸಕ್ತಿಯನ್ನು ಬಿಟ್ಟರೆ ಮೋಕ್ಷ ಲಭಿಸುತ್ತದೆ.’

ದಿನದ ಸೂಕ್ತಿ ಕೇಳಿ: ಬಂಧನ–ಮೋಕ್ಷ

ಮನುಷ್ಯನಿಗಿರುವ ದೊಡ್ಡ ಶಕ್ತಿ ಮತ್ತು ಮಿತಿ ಎಂದರೆ ರಾಗ; ಇದನ್ನೇ ಪ್ರೀತಿ ಎಂದೂ ಕರೆಯಬಹುದು. ಇದರಿಂದಲೇ ನಾನು, ನನ್ನದು ಎಂಬ ಭಾವ ಅವನಲ್ಲಿ ಹುಟ್ಟುವುದು. ಈ ಭಾವವೇ ಅವನಲ್ಲಿ ಹುಟ್ಟದಿದ್ದರೆ ಅವನ ಜೀವನಕ್ಕೆ ಸ್ವಾರಸ್ಯವೇ ಇರದು; ಮಾತ್ರವಲ್ಲ, ಅವನ ಜೀವನಯಾನವೇ ನಡೆಯದು. ಏಕೆಂದರೆ ಅವನ ಜೀವನವನ್ನು ಮುಂದಕ್ಕೆ ಎಳೆಯಬಲ್ಲ ಸೆಳೆತವೇ ಇರುವುದಿಲ್ಲ.

ಆದರೆ ಇಲ್ಲೊಂದು ಸಮಸ್ಯೆಯೂ ಇದೇ. ನಮ್ಮಲ್ಲಿ ರಾಗ ಹೆಚ್ಚಾದರೆ ಆಗ ಅದೇ ಬಂಧನವೂ ಆಗುತ್ತದೆ. ನನ್ನದು, ನಾನು ಪ್ರೀತಿಸುವಂಥದ್ದು ಎಂಬುದು ಯಾವಾಗಲೂ ನನ್ನಲ್ಲೇ ಇರಲಿ – ಎಂಬ ಸೆಳೆತವೂ ತೀವ್ರವಾಗಿರುತ್ತದೆ. ಈ ಸೆಳೆತವನ್ನು ಮೀರುವುದು ಸುಲಭವಲ್ಲ. ನನ್ನದು, ನನಗೆ ಬೇಕಾದ್ದು – ಎಂದು ಆರಿಸಿಕೊಂಡಿರುವುದೆಲ್ಲವೂ ನಮ್ಮಲ್ಲಿಯೇ ಉಳಿದರೆ ಆಗ ಸಂತೋಷವಾಗುತ್ತದೆ; ಒಂದು ವೇಳೆ ಅದು ನಮ್ಮಿಂದ ದೂರವಾದರೆ ಆಗ ದುಃಖವೂ ಸಹಜವಾಗಿರುತ್ತದೆ.

ನಾನು, ನನ್ನದು – ಎಂಬ ಮನಸ್ಸು ಮತ್ತು ಬುದ್ಧಿಗಳು ಇನ್ನೂ ಹಲವು ಅಪಾಯಗಳನ್ನು ತಂದೊಡ್ಡಬಹುದು. ಇದೇ ನಮ್ಮಲ್ಲಿಯ ಸ್ವಾರ್ಥಕ್ಕೂ ಮೂಲಕಾರಣವಾಗುತ್ತದೆ. ಈ ರಾಗಬುದ್ಧಿ ಕ್ರಮೇಣ ಮೋಹಕ್ಕೂ ಅನಂತರ ದ್ವೇಷಕ್ಕೂ ಆ ಬಳಿಕ ಕ್ರೋಧಕ್ಕೂ ಹೇತುವಾಗುತ್ತದೆ. ಇದೇ ಬಂಧನ; ಎಂದರೆ ನಾನು, ನನ್ನದು – ಎಂಬ ಚಕ್ರದಲ್ಲಿಯೇ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು, ’ನನ್ನದು‘ ಎಂಬುದರಿಂದ ಬಿಡಿಸಿಕೊಂಡರೆ ಆಗ ನಮಗೆ ಮುಕ್ತಸ್ಥಿತಿ ಒದಗುತ್ತದೆ – ಎಂದು.

ನಮ್ಮ ನಿಜವಾದ ಸ್ವರೂಪವನ್ನು ಅರಿತುಕೊಳ್ಳದಿರುವುದಕ್ಕೂ ಈ ರಾಗ–ದ್ವೇಷ–ಮೋಹಗಳೇ ಕಾರಣ ಎಂದು ನಮ್ಮ ಶಾಸ್ತ್ರಗಳು ಕೂಡ ಹೇಳುತ್ತವೆ. ಈ ಅಜ್ಞಾನದ ವರ್ತುಲದಿಂದ ಬಿಡಿಸಿಕೊಳ್ಳವುದನ್ನೇ ಅವು ಮೋಕ್ಷ ಎಂದು ಕರೆದಿರುವುದು.

ಆದರೆ ಈ ಬಂಧನದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ; ನಿರಂತರ ಸಾಧನೆಯಿಂದಷ್ಟೆ ಇದು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT