ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೋತ್ಸವದಲ್ಲಿ ಅರಳಿದ ಕವಿಪರಂಪರೆ

Last Updated 30 ಜೂನ್ 2018, 1:15 IST
ಅಕ್ಷರ ಗಾತ್ರ

ರಾಮ ಲಕ್ಷ್ಮಣ ಭರತ ಶತ್ರುಘ್ನರು ಜನಿಸಿದಾಗ ದಶರಥ ಮತ್ತು ಕೌಸಲ್ಯೆ ಕೈಕೇಯಿ ಸುಮಿತ್ರೆಯರಿಗಷ್ಟೆ ಸಂತೋಷವಾದದ್ದಲ್ಲ; ಇಡಿಯ ಕೋಸಲೆಯ ಜನರೇ ಸಂತೋಷಪಟ್ಟರು. ಈ ಪ್ರಸಂಗವನ್ನು ವಾಲ್ಮೀಕಿ ಚಿತ್ರಿಸಿರುವುದು ಹೀಗೆ:

‘ಗಂಧರ್ವರು ಇಂಪಾಗಿ ಹಾಡಿದರು. ಅಪ್ಸರೆಯರು ಕುಣಿದರು. ದೇವದುಂದುಭಿಗಳು ಮೊಳಗಿದವು. ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಅಯೋಧ್ಯೆಯಲ್ಲಿ ದೊಡ್ಡ ಉತ್ಸವವೇ ನಡೆಯಿತು. ನರ್ತಕರು ರಸ್ತೆಗಳಲ್ಲಿ ಕುಣಿದಾಡಿದರು. ಸಂಗೀತಗಾರರು ಹಾಡಿದರು. ವಾದ್ಯಗಾರರು ವಾದ್ಯಗಳನ್ನು ನುಡಿಸಿದರು. ದಶರಥನು ವಂದಿಮಾಗಧರಿಗೂ ಪೌರಾಣಿಕರಿಗೂ ಪಾರಿತೋಷಕಗಳನ್ನು ಕೊಟ್ಟ; ಬ್ರಾಹ್ಮಣರಿಗೆ ಧನವನ್ನೂ ಗೋವುಗಳನ್ನೂ ದಾನಮಾಡಿದ’.

ಮಹಾಪುರುಷನ ಜನನವಾದಾಗ ಅಲೌಕಿಕ ಘಟನೆಗಳು ನಡೆದಂತೆಯೂ, ಲೋಕಕಂಟಕನಾದವನು ಜನಿಸಿದಾಗ ಅಪಶಕುನಗಳು ತೋರಿಕೊಳ್ಳುವಂತೆಯೂ ಪ್ರಾಚೀನ ಕಾವ್ಯಪರಂಪರೆ ಚಿತ್ರಿಸುವುದು ಅದರ ಸಹಜಾಭಿವ್ಯಕ್ತಿಯೇ ಹೌದು. ರಾಮಾಯಣದಲ್ಲಿ ಮೊದಲಿಗೆ ಕಂಡುಬಂದಿರುವ ಈ ಲಕ್ಷಣವನ್ನು ಅನಂತರದ ಮಹಾಕಾವ್ಯಪರಂಪರೆ ಸ್ವೀಕರಿಸಿದೆ. ರಾಮಾಯಣದಲ್ಲಿ ಸೂಚ್ಯವಾಗಿ ಬಂದಿರುವ ಎಷ್ಟೋ ವರ್ಣನೆಗಳನ್ನು ಮತ್ತಷ್ಟು ವಿಸ್ತರಿಸಿಯೋ ಅಥವಾ ಉನ್ನತೀಕರಿಸಿಯೋ ಈ ಕಾವ್ಯಗಳು ಬಳಸಿಕೊಂಡಿರುವುದೂ ಉಂಟು. ರಾಮಾಯಣದಲ್ಲಿ ಬಂದಿರದ ಹಲವು ಸಂಗತಿಗಳನ್ನೂ ಮುಂದಿನ ಕವಿಗಳು ವಾಲ್ಮೀಕಿಪ್ರತಿಭೆಯ ದರ್ಶನದಲ್ಲಿ ಮಿಂದು, ವಿಹರಿಸಿ ಅವನ್ನು ಸೊಗಸಾಗಿ ವರ್ಣಿಸಿರುವುದನ್ನೂ ಕಾಣುತ್ತೇವೆ. ಉದಾಹರಣೆಗೆ ರಾಮಜನನದ ಪ್ರಸಂಗವನ್ನೇ ನೋಡಬಹುದು.

ಕಾಳಿದಾಸನು ಈ ಪ್ರಸಂಗವನ್ನು ತುಂಬ ಕಾವ್ಯಾತ್ಮಕವಾಗಿ ಕಂಡರಿಸಿದ್ದಾನೆ. ದಶರಥನ ಮಗನಾಗಿ ಹುಟ್ಟುವ ಸಂಕಲ್ಪವನ್ನು ವಿಷ್ಣು ಮಾಡಿದನಷ್ಟೆ; ದಶರಥ ಎಂಥ ಸುಗುಣವಂತ ಎನ್ನುವುದಕ್ಕೆ ಇದಕ್ಕಿಂತಲೂ ಒಳ್ಳೆಯ ಮತ್ತೊಂದು ಗುರುತು ಬೇಕೆ –ಎಂದಿದ್ದಾನೆ ಅವನು. ದಿವ್ಯಪಾಯಸವನ್ನು ದಶರಥನು ಹಂಚಿದ ಬಗೆಯನ್ನು ಅವನು ವರ್ಣಿಸಿರುವುದೂ ಚೆನ್ನಾಗಿದೆ: ಸೂರ್ಯನು ತನ್ನ ಬೆಳಕನ್ನು ಹೇಗೆ ಭೂಮಿಗೂ ಆಕಾಶಕ್ಕೂ ಸಮಾನವಾಗಿಯೇ ಹಂಚುತ್ತಾನೆಯೋ ಹಾಗೆಯೇ ದಶರಥನು ಆ ಪಾಯಸವನ್ನು ತನ್ನ ಇಬ್ಬರು ಪತ್ನಿಯರಿಗೂ, ಎಂದರೆ ಕೌಸಲ್ಯೆ ಮತ್ತು ಕೈಕೇಯಿಗೆ, ಹಂಚಿದ’. ದಶರಥ ಹೀಗೆ ಹಂಚಲು ಕಾರಣವನ್ನೂ ಕಾಳಿದಾಸ ಊಹಿಸಿದ್ದಾನೆ; ಚೆನ್ನಾಗಿಯೇ ಊಹಿಸಿದ್ದಾನೆಯೆನ್ನಿ! ‘ಕೌಸಲ್ಯೆ ಹಿರಿಯ ಹೆಂಡತಿಯಾದ್ದರಿಂದ ದಶರಥನಿಗೆ ಅವಳಲ್ಲಿ ಗೌರವ; ಕೈಕೇಯಿ ಕಿರಿಯ ಹೆಂಡತಿಯಾದ್ದರಿಂದ ಅವಳಲ್ಲಿ ಅವನಿಗೆ ಪ್ರೀತಿ ಹೆಚ್ಚು’. ಕಾಳಿದಾಸ ಇಷ್ಟನ್ನೇ ಹೇಳುವುದಿಲ್ಲ; ದಶರಥನಲ್ಲಿದ್ದ ಕುಟುಂಬಸಾಮರಸ್ಯದ ಬಗ್ಗೆ ಕಾಳಜಿಯನ್ನೂ ಸೂಚಿಸಿದ್ದಾನೆ; ‘ಕೌಸಲ್ಯೆ– ಕೈಕೇಯಿ ಇಬ್ಬರೂ ಒಂದಾಗಿ, ಸುಮಿತ್ರೆಗೆ ಪಾಯಸದಲ್ಲಿ ಸಮಪಾಲನ್ನು ಕೊಡಲಿ ಎಂಬುದು ಅವನ ಇಂಗಿತವಾಗಿತ್ತಂತೆ! ಪತಿಯ ಅಭಿಪ್ರಾಯವನ್ನು ತಿಳಿದುಕೊಂಡ ಆ ಇಬ್ಬರು ಪತ್ನಿಯರು ಹಾಗೆಯೇ ನಡೆದುಕೊಂಡರು’. (ವಾಲ್ಮೀಕಿ ರಾಮಾಯಣಕ್ಕಿಂತಲೂ ಈ ಪ್ರಸಂಗ ಕಾಳಿದಾಸನಲ್ಲಿ ಬೇರೆ ರೀತಿಯಲ್ಲಿದೆ ಎನ್ನುವುದನ್ನು ಈ ಮೊದಲೇ ನೋಡಿದ್ದೇವೆ.) ಸುಮಿತ್ರೆಗೂ ಕೌಸಲ್ಯೆ– ಕೈಕೇಯಿಯರಲ್ಲಿ ಸಮಾನವಾದ ಪ್ರೀತಿ ಇದ್ದಿತು; ಅದು ಹೇಗೆಂದರೆ ಹೆಣ್ಣುದುಂಬಿಯು ಆನೆಯ ಎರಡು ಕಡೆಗಳಲ್ಲಿಯೂ ಸುರಿಯುವ ಮದಧಾರೆಗಳಲ್ಲಿ ಹೇಗೆ ಸಮಾನವಾದ ಪ್ರೀತಿಯನ್ನು ಇಟ್ಟುಕೊಂಡಿರುವುದೋ ಹಾಗೆ’ ಎಂದಿದ್ದಾನೆ, ಕಾಳಿದಾಸ.

ಈಗ ದಶರಥನ ಮೂವರು ಪತ್ನಿಯರೂ ಗರ್ಭವನ್ನು ಧರಿಸಿದ್ದಾರೆ. ಕಾಳಿದಾಸ ವರ್ಣನೆಯ ಸಾರಾಂಶವನ್ನು ನೋಡೋಣ:

‘ಫಲ ಕೊಡಲು ಸಿದ್ಧವಾಗಿರುವ, ಆದರೆ ಅದು ಇನ್ನೂ ಪ್ರಕಟವಾಗದ ಸ್ಥಿತಿಯಲ್ಲಿರುವ ಪೈರಿನಂತೆ ಅವರು ಮೂವರು ಹೊಳೆಯುತ್ತಿದ್ದರು. ಶಂಖಚಕ್ರಗಳನ್ನು ಧರಿಸಿದ ವಾಮನರೂಪಿಗಳು ಅವರನ್ನು ಕಾಯುತ್ತಿರುವಂತೆ ಕನಸಾಗುತ್ತಿದ್ದವು; ವಿಷ್ಣುವಿನ ವಾಹನವಾದ ಗರುಡನು ಗರ್ಭದಲ್ಲಿರುವ ಶಿಶುವಿನ ಸೇವೆಗೆ ನಿಂತಂತೆಯೂ ಕನಸಾಯಿತು. ಲಕ್ಷ್ಮಿಯೂ ಸಪ್ತರ್ಷಿಗಳೂ ಗರ್ಭಸ್ಥಶಿಶುವನ್ನು ಸೇವಿಸುತ್ತಿರುವಂತೆಯೂ ಆ ಕನಸು ಸೂಚಿಸಿತು’. ವಿಷ್ಣುವಿನ ಅಂಶ ಮೂವರು ರಾಣಿಯರಲ್ಲೂ ಶಿಶುರೂಪದಲ್ಲಿ ಬೆಳೆಯುತ್ತಿದ್ದಿತಷ್ಟೆ. ಒಂದೇ ಅಂಶ ಬೇರೆ ಬೇರೆ ಎಡೆಗಳಲ್ಲಿ ಹೇಗೆ ಹಂಚಿಕೆಯಾಗುತ್ತದೆ? ಕಾಳಿದಾಸ ಇದನ್ನು ಹೇಳಲು ಬಳಸಿರುವ ಉಪಮೆ ಅರ್ಥಪೂರ್ಣವಾಗಿದೆ: ‘ಒಬ್ಬನೇ ಚಂದ್ರ ಹೇಗೆ ಶುದ್ಧವಾದ ನಾನಾ ಜಲರೂಪಗಳಲ್ಲಿ ಪ್ರತಿಬಿಂಬಿಸುತ್ತಾನೆಯೋ ಹಾಗೆಯೇ ಒಬ್ಬನೇ ವಿಷ್ಣು ಬೇರೆ ಬೇರೆ ರೂಪದಲ್ಲಿ ಆ ರಾಣಿಯರ ಗರ್ಭದಲ್ಲಿ ವಾಸಮಾಡುತ್ತಿದ್ದ’.

ಈಗ ರಾಮನು ಜಗತ್ತಿನ ಪ್ರಥಮ ಮಂಗಲನಾಗಿ ಅವತರಿಸಿಯಾಗಿದೆ. ಅವನು ರಘುವಂಶಕ್ಕೆ ದೊಡ್ಡ ಬೆಳಕು; ಅವನ ಮಿಗಿಲಿಲ್ಲದ ಕಾಂತಿಯು ಹೆರಿಗೆಮನೆಯಲ್ಲಿದ್ದ ದೀಪಗಳನ್ನೆಲ್ಲ ಮಂಕುಗೊಳಿಸಿದವು– ಎಂದು ಕಾಳಿದಾಸ ಹೇಳುತ್ತ, ರಾಮನ ಜನನದಿಂದಾಗಿ ಹೊರಜಗತ್ತಿನಲ್ಲಿ ಆ ಕ್ಷಣದಲ್ಲಿ ನಡೆದ ವಿದ್ಯಮಾನಗಳೇನು ಎನ್ನುವುದನ್ನೂ ಸೊಗಸಾಗಿ ಚಿತ್ರಿಸಿದ್ದಾನೆ.

ಇದೇ ಸಂದರ್ಭವನ್ನು ಭೋಜರಾಜನು ‘ಚಂಪೂರಾಮಾಯಣ’ದಲ್ಲಿ ವರ್ಣಿಸಿರುವ ರೀತಿಯೂ ಇಲ್ಲಿ ಉಲ್ಲೇಖಾರ್ಹವಾಗಿದೆ. ದಶರಥನು ಪಾಯಸವನ್ನು ತನ್ನ ಪತ್ನಿಯರಿಗೆ ಹಂಚಿಯಾಗಿದೆ. ಗರ್ಭವನ್ನು ಧರಿಸಿದ ಆ ರಾಣಿಯರು ಹೇಗೆ ಕಂಡರು ಎನ್ನುವುದನ್ನು ಅವನು ವರ್ಣಿಸುತ್ತಾನೆ. ರಾಣಿಯರು ಎಂದಮೇಲೆ ಅವರ ದೇಹವನ್ನು ಸದಾ ಆಭರಣಗಳು ಅಲಂಕರಿಸಿರುತ್ತವೆಯಷ್ಟೆ! ಆದರೆ ಈಗ ಅವೆಲ್ಲವೂ ಮರೆಯಾಗುತ್ತ, ಮೆಲ್ಲಮೆಲ್ಲನೆ ಗರ್ಭದ ಚಿಹ್ನೆಗಳು ಪ್ರಕಟವಾಗತೊಡಗಿದವಂತೆ. ಕೌಸಲ್ಯೆಯ ಉದರದ ಮೇಲಿದ್ದ ತ್ರಿವಳಿ ರೇಖೆಗಳು ಕೊಂಚಕೊಂಚವೇ ಮರೆಯಾಗುತ್ತ, ನಾಭಿಯ ಆಳವು ಮೇಲೆದ್ದು ಕಾಣತೊಡಗಿತು. ಈ ಮೊದಲು ಅವಳ ಉದರವು ಆಲದೆಲೆಯಂತೆ ಇದ್ದಿತಂತೆ; ಆದರೆ ಯೌವನದ ಪ್ರಭಾವದಿಂದ ಅದು ಕೃಶವಾಗಿತ್ತಂತೆ. ಈಗ ಮತ್ತೆ ಅದು ಆಲದೆಲೆಯ ಹೋಲಿಕೆಯನ್ನು ಪಡೆಯಿತು. (ಆಲದೆಲೆಗೂ ವಿಷ್ಣುವಿಗೂ ಇರುವ ಸಂಬಂಧವನ್ನು ಸ್ಮರಿಸಿಕೊಳ್ಳಬಹುದು.) ಈ ಮೊದಲು ಅವಳ ನಡು ಎಷ್ಟು ಸಣ್ಣವಾಗಿತ್ತು ಎಂದರೆ ಅದು ಆಕಾಶದಂತೆ ಅಗೋಚರವೇ ಆಗಿದ್ದಿತು (ಆಕಾಶವನ್ನು ನೋಡಲು ಆಗುವುದಿಲ್ಲವಷ್ಟೆ!); ಈಗ ಗರ್ಭದ ಕಾರಣದಿಂದಲೂ ಮಹಾವಿಷ್ಣುವಿನ ಆಶ್ರಯದ ಕಾರಣದಿಂದಲೂ ಅದು ತನ್ನ ಮೊದಲಿನ ಕೃಶತೆಯನ್ನು ತ್ಯಜಿಸಿದರೂ ಈಗ ಮತ್ತೆ ಆಕಾಶವೇ ಆಗಿದೆ (ಇಲ್ಲಿ ‘ಆಕಾಶ’ ಎನ್ನುವುದು ಸರ್ವವ್ಯಾಪಕತೆ, ವಿಸ್ತಾರ – ಎಂದರೆ ಎಲ್ಲೆಲ್ಲೂ ಹರಡಿರುವುದಕ್ಕೆ ಸೂಚಕ. ಕೌಸಲ್ಯೆಯ ಪೂರ್ಣಗರ್ಭಾವಸ್ಥೆಯನ್ನು ಕವಿ ಇಲ್ಲಿ ಸೂಚಿಸಿದ್ದಾನೆ; ಜೊತೆಗೆ ವಿಷ್ಣುವು ಆಕಾಶತತ್ತ್ವಕ್ಕೂ ಸಂಕೇತ; ಅವನು ಎಲ್ಲೆಲ್ಲೂ ಇದ್ದಾನೆ ಎನ್ನುವುದರ ಧ್ವನಿಯನ್ನೂ ‘ಆಕಾಶ’ದಲ್ಲಿ ಕಾಣಬಹುದು). ರಾಮನ ಜನನವನ್ನು ಭೋಜನು ಯಜ್ಞದ ರೂಪಕದಲ್ಲಿ ಕಾಣಿಸಿದ್ದಾನೆ. ‘ರಾಕ್ಷಸರು ಎಂಬ ಮುತ್ತಗದ ಸಮಿಧೆಗಳನ್ನು ಹೋಮಿಸಲು ಯಜ್ಞಭೂಮಿಸಮಾನವಾದ ಪವಿತ್ರ ಅಯೋಧ್ಯೆ ಎಂಬ ಅರಣಿಯಿಂದ ಅಭೂತಪೂರ್ವವಾದ ಜ್ಯೋತಿಯೊಂದು ಮೂಡಿತು’ ಎಂದಿದ್ದಾನೆ. (ಪಲಾಶ – ಎಂದರೆ ರಾಕ್ಷಸರು ಮತ್ತು ಮುತ್ತಗದ ಮರ ಎಂಬ ಅರ್ಥಗಳಿವೆ. ಯಜ್ಞಕ್ಕೆ ಮುತ್ತಗದ ಸಮಿಧೆಗಳು ಬೇಕಷ್ಟೆ. ಅಂತೆಯೇ ಈಗ ವಿಶ್ವಯಜ್ಞಕ್ಕೆ ರಾಕ್ಷಸರೇ ಸಮಿಧೆಗಳು
ಎಂಬುದು ಧ್ವನಿ.)

ಈಗ ‘ಪಂಪಭಾರತ’ವನ್ನು ನೋಡೋಣ.

ಕುಂತಿ ಈಗ ಗರ್ಭವತಿ. ಅವಳ ಗರ್ಭಚಿಹ್ನೆಗಳಿಗೂ ರಾಜ್ಯಚಿಹ್ನೆಗಳಿಗೂ ಹೋಲಿಸಿದ್ದಾನೆ, ಪಂಪ. ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳಗಿರುವ ಬಿಳಿಯ ಕೊಡೆಯನ್ನು (ಶ್ವೇತಚ್ಛತ್ರವನ್ನು) ಸೂಚಿಸುವಂತೆ ಇದ್ದಿತು – ಎಂದೆಲ್ಲ ವರ್ಣಿಸುತ್ತಾನೆ. ಕುಂತಿಯ ಗರ್ಭಭಾಗವೂ ಆಶ್ರಮದ ತಪಸ್ವಿಗಳ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗುತ್ತಿತ್ತು ಎನ್ನುತ್ತಾನೆ. ಯುಧಿಷ್ಠಿರನ ಜನನವನ್ನು ವರ್ಣಿಸುವ ರೀತಿಯೂ ಮನೋಜ್ಞವಾಗಿದೆ. ‘ಸಮುದ್ರದಿಂದ ಚಂದ್ರನೂ ವಿನತಾದೇವಿಯಿಂದ ಗರುಡನೂ ಉದಯಪರ್ವತದಿಂದ ಸೂರ್ಯನೂ ಹುಟ್ಟುವಂತೆ ತೇಜಸ್ವಿಯಾದ ಯಮಪುತ್ರನು ಜನಿಸಿದ’. ಅವನು ಮಾತ್ರವೇ ಹುಟ್ಟಲಿಲ್ಲ; ಅವನೊಡನೆ ಧರ್ಮವೂ ಹುಟ್ಟಿತು ಎನ್ನುತ್ತಾನೆ, ಪಂಪ. ಭೀಮ ಹುಟ್ಟುವ ಸಂದರ್ಭವನ್ನು ವರ್ಣಿಸುತ್ತ ಕುಂತಿಯ ಉದರದ ಮೇಲಿನ ತ್ರಿವಳಿಗಳ ಉಲ್ಲೇಖವನ್ನು ಮಾಡಿದ್ದಾನೆ: ‘ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವು’. ಎಂದರೆ, ಕುಂತಿಯ ಹೊಟ್ಟೆಯ ಮೇಲಿದ್ದ ಮೂರು ಮಡಿಪುಗಳೂ ವೈರಿರಾಜರ ಸಂತೋಷವೂ ಒಟ್ಟಿಗೆ ನಾಶವಾದವು. ಗರ್ಭ, ಅದೂ ಭೀಮನನ್ನು ಹೊತ್ತಿರುವ ಗರ್ಭ, ಬೆಳೆದಂತೆ ಉದರದ ರೇಖೆಗಳು ಮಾಯವಾಗುವುದು ಸಹಜವಷ್ಟೆ. ಇವು ಮಾಯವಾಗುತ್ತಿದ್ದಂತೆ, ಎಂದರೆ ಹೆರಿಗೆಯ ದಿನಗಳ ಹತ್ತಿರವಾದಂತೆಲ್ಲ ಅವಳ ವೈರಿಗಳ ಸಂತೋಷದ ಅವಧಿಯೂ ಕಡಿಮೆಯಾಗುತ್ತಬಂದಿತಂತೆ! ಶತ್ರುಸಂಹಾರಕನು ಹುಟ್ಟುತ್ತಿದ್ದಾನೆ ಎನ್ನುವುದರ ಧ್ವನಿ ಇದು.

ಹೇಗೆ ವಾಲ್ಮೀಕಿ ರಾಮಾಯಣ ಮುಂದಿನ ಕವಿಗಳಿಗೆ ಆಕರವೂ ಸ್ಫೂರ್ತಿಯೂ ಕೈಪಿಡಿಯೂ ಆಯಿತು ಎನ್ನುವುದನ್ನು ಮೇಲಣ ಉದಾಹರಣೆಗಳು ಎತ್ತಿತೋರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT