ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ಎಂಬ ರಾಮನ ನೆರಳು

Last Updated 12 ಏಪ್ರಿಲ್ 2019, 3:49 IST
ಅಕ್ಷರ ಗಾತ್ರ

ಉಸಿರನ್ನು ‘ಪ್ರಾಣ’ ಎಂದೂ ಹೇಳಲಾಗುವುದು. ಪ್ರಾಣಕ್ಕೆ ಎರಡು ಮಾರ್ಗಗಳ ಸಂಚಾರ; ಶರೀರದ ಒಳಗೂ ಅದರ ಸಂಚಾರವಾಗಬೇಕು; ಒಳಗಿನಿಂದ ಅದು ಹೊರಕ್ಕೂ ಬರಬೇಕು. ಇದು ನಿರಂತರವಾಗಿದ್ದಾಗ ಮಾತ್ರವೇ ‘ಜೀವ’ ಇರುವುದು.

ರಾಮನ ಹೊರಗಿನ ಪ್ರಾಣವೇ ಲಕ್ಷ್ಮಣ – ಎನ್ನುವುದು ಕವಿ ವಾಲ್ಮೀಕಿಯ ಮಾತು. ನಮ್ಮಿಂದ ಬೇರೆಯಾಗಿರುವ ಇನ್ನೊಬ್ಬ ವ್ಯಕ್ತಿಯನ್ನು ನಮ್ಮ ಪ್ರಾಣವಾಗಿ ಕಾಣುವ– ಎಂಬ ಭಾವನೆಯೇ ವಿಶೇಷವಾದುದು. ಬಹುಶಃ ಈ ಪ್ರಯೋಗವನ್ನೂ ರಾಮಾಯಣವೇ ಮೊದಲು ಮಾಡಿರುವುದು ಎನಿಸುತ್ತದೆ. ಇದಕ್ಕೂ ಮೊದಲು ಈ ಪ್ರಾಣಸಂಚಾರದ ಕಲ್ಪನೆಯೇ ಇರಲಿಲ್ಲವೆಂದೇನಿಲ್ಲ; ಭಗವಂತನ ಉಸಿರೇ ವೇದ – ಎನ್ನುವ ಹೇಳಿಕೆಯೂ ತುಂಬ ಹಳೆಯದೇ.‘ನೀನೇ ನನ್ನ ಉಸಿರು’ – ಇದು ಇಂದಿನ ಸಿನಿಮಾಗಳಲ್ಲಿ ಕೇಳಿಬರುವ ಅತ್ಯಂತ ಜನಪ್ರಿಯ ಮಾತು. ಗೆಳೆಯನನ್ನೋ ಗೆಳತಿಯನ್ನೋ ‘ನನ್ನ ಪ್ರಾಣ’ ಎಂದು ಹೇಳುವುದಕ್ಕೆ ಮೊದಲು ತಮ್ಮನನ್ನು ಅಣ್ಣನ ಪ್ರಾಣ ಎಂದು ಕಂಡ ಭಾವನೆಯೇ ಆಹ್ಲಾದಕರವಾದುದು. ರಾಮಾಯಣವನ್ನು ‘ಸೀತೆಯ ಚರಿತೆ’ ಎಂದೂ, ‘ರಾಮನ ದಾರಿ’ ಎಂದೂ ಕರೆಯುವುದುಂಟು. ಅದನ್ನು ‘ಅಣ್ಣತಮ್ಮಂದಿರ ಕಥೆ’ ಎಂದು ಕರೆದರೂ ತಪ್ಪಾಗಲಾರದು. ರಾಮ–ಲಕ್ಷ್ಮಣ, ಭರತ–ಶತ್ರುಘ್ನ, ವಾಲಿ–ಸುಗ್ರೀವ, ರಾವಣ–ಕುಂಭಕರ್ಣ–ವಿಭೀಷಣ, ಮಾರೀಚ–ಸುಬಾಹು – ಹೀಗೆ ರಾಮಾಯಣದುದ್ದಕ್ಕೂ ಅಣ್ಣತಮ್ಮಂದಿರ ಕಥೆಗಳೇ ಮೂಲಕಥೆಯನ್ನು ನಡೆಸುವಷ್ಟು ಮುಖ್ಯವಾಗಿವೆ. ಆದುದರಿಂದ ಲಕ್ಷ್ಮಣನನ್ನು ರಾಮನ ಉಸಿರು ಎಂದಿರುವುದು ಮಹತ್ತ್ವದ ಮಾತಾಗುತ್ತದೆ.

ಲಕ್ಷ್ಮಣನನ್ನು ರಾಮನ ಛಾಯಾಪಾತ್ರವಾಗಿ ಕಂಡಿರುವ ಕವಿ ಗ. ಸು. ಭಟ್ಟ ಬೆತ್ತಗೇರಿ ಅವರ ವಿಶ್ಲೇಷಣೆ ಕಾಂತಿಯುತವಾಗಿದೆ; ಉಲ್ಲೇಖಾರ್ಹವಾದಂಥವು ಅವರ ಈ ಮಾತುಗಳು:

‘ರಾಮನ ಸುಪ್ತಚಿತ್ತದ ಪ್ರಾಕೃತಿಕ ಅಭಿವ್ಯಕ್ತಿಯಾದ ಲಕ್ಷ್ಮಣನ ಹೆಸರನ್ನು ಹಾಗೆ ಇಡುವಾಗ ಕೂಡ ಕವಿ ತುಂಬ ಸಾಂಕೇತಿಕ ಎಚ್ಚರ ವಹಿಸಿದ್ದಾನೆ. ಲಕ್ಷ್ಮಣ ಎಂಬ ಪದದ ಮೇಲ್ನೋಟದ ಪದದ ಅರ್ಥ ಶುಭಲಕ್ಷಣಗಳನ್ನು ಹೊಂದಿರುವವನು ಎಂದಾದರೂ ಅದನ್ನು ಕವಿ ಬಳಸಿಕೊಳ್ಳಲು ಕಾರಣ ಬೇರೆಯೇ ಇದೆ. ಈ ಹೆಸರಿನ ಗೂಢಾರ್ಥವು ಬೇರೆಯೇ ಆಗಿದೆ. ಲಕ್ಷ್ಮ ಎಂಬ ಪದದ ಅರ್ಥ ಚಿಹ್ನೆ, ಗುರುತು, ಲಾಂಛನ ಎಂದಾಗಿರುತ್ತದೆ.

ಚಿಹ್ನೆ ಅಥವಾ ಲಾಂಛನ ಎಂದರೆ ಬೇರೆಯವರು ತಮ್ಮ ಅಸ್ತಿತ್ವವನ್ನು ಇನ್ನೊಂದರ ಮೇಲೆ ಸಾರಲು ಮಾಡಿಕೊಂಡ ಗುರುತಾಗಿರುತ್ತದೆ. ಲಕ್ಷ್ಮಣ ಎಂಬ ಪದವು ಗುರುತಿನ ರೂಪದಲ್ಲಿ ಇರತಕ್ಕವನು ಅಥವಾ ಚಿಹ್ನೆಯನ್ನು ಧರಿಸಿದವನು ಎಂಬುದನ್ನು ಸೂಚಿಸುತ್ತದೆ. ವ್ಯುತ್ಪತ್ತಿಯ ದೃಷ್ಟಿಯಿಂದ ಕೂಲಂಕಷವಾಗಿ ನೋಡಿದರೆ ಈ ಅಂಕಿತನಾಮಕ್ಕೆ ಸ್ವಂತ ಅಸ್ತಿತ್ವವಾದರೂ ಎಲ್ಲಿದೆ? ಇದು ಸದಾ ಇನ್ನಾರನ್ನೋ ಸೂಚಿಸುತ್ತಿರುವ ಲಾಂಛನದ ಸ್ವರೂಪವಾಗಿದೆ! ಬೇರೆ ಯಾರನ್ನೂ ಅಲ್ಲ, ಕಾವ್ಯದುದ್ದಕ್ಕೂ ರಾಮನ ಚಿಹ್ನೆಯನ್ನು ಧರಿಸಿದ ಧ್ವಜರೂಪದಲ್ಲಿದ್ದಾನೆ ಲಕ್ಷ್ಮಣ. ಇದು ಕವಿ ಸೂಚ್ಯವಾಗಿಟ್ಟ ಹೆಸರಿನ ವಿವೇಚನೆಯಾಯಿತು. ಲಕ್ಷ್ಮಣನು ರಾಮನ ಒಳಬಗೆಯ ಛಾಯಾಪಾತ್ರವೆಂಬುದಕ್ಕೆ ಇತರ ಮುಖ್ಯ ಕಾರಣಗಳನ್ನು ಪಟ್ಟಿ ಮಾಡಿದರೆ ತಪ್ಪಿಲ್ಲ:

1. ರಾಮನು ವಿಷ್ಣುವಿನ ಅವತಾರವೆಂಬ ನಂಬಿಗೆ. ಲಕ್ಷ್ಮಣನು ಆದಿಶೇಷನ ಅವತಾರವೆಂಬ ನಂಬಿಗೆ ಮೊದಲಿನಿಂದಲೂ ಪ್ರಚಲಿತವಾಗಿದೆ. ಕಾವ್ಯದಲ್ಲೂ ಅದಕ್ಕೆ ಆಧಾರಗಳಿವೆ. ಆದಿಶೇಷನೆಂದರೆ ಸುಪ್ತಮನಸ್ಸೆಂದು ಬೇರೆ ಹೇಳಬೇಕಿಲ್ಲ.

2. ಉದ್ದೇಶಪೂರ್ವಕವಾಗಿಯೇ ಕವಿ ಲಕ್ಷ್ಮಣನ ವೈಯಕ್ತಿಕ ಬದುಕಿನ ವಿವರಣೆಯನ್ನು ಕೈಬಿಟ್ಟಿದ್ದಾನೆ. ಊರ್ಮಿಳೆಯ ಪ್ರಸ್ತಾಪವನ್ನೂ ಕೈಬಿಟ್ಟಿದ್ದಾನೆ. ಇದು ತುಸು ಕಸಿವಿಸಿಗೆ ಕಾರಣವಾಗುತ್ತದೆ, ನಿಜ. ಆದರೆ ಹಾಗೇನಾದರೂ ಲಕ್ಷ್ಮಣನ ವ್ಯಕ್ತಿಗತ ಬದುಕನ್ನು ಹಿಗ್ಗಿಸಿ ಚಿತ್ರಿಸಿದರೆ ಅದು ಸ್ವತಂತ್ರ ವ್ಯಷ್ಟಿಪ್ರಜ್ಞೆ ಹೊಂದಿದ ಪ್ರತ್ಯೇಕ ಪಾತ್ರವಾಗಿಬಿಡುವುದರಿಂದ ರಾಮನ ಅಂತರಂಗದ ಅಭಿವ್ಯಕ್ತಿಗಾಗಿ ತಾನು ನಿರ್ಮಿಸಿಕೊಂಡ ಛಾಯಾಪಾತ್ರತಂತ್ರದ ಮೊನಚು ಕಡಿಮೆಯಾಗಿ ಅದು ವಿಫಲವಾದೀತೆಂಬ ಎಚ್ಚರ ಕವಿಗೆ ಇದ್ದದ್ದೇ ಇದಕ್ಕೆ ಕಾರಣ.

ಎಲ್ಲೆಡೆಗಳಲ್ಲೂ ಲಕ್ಷ್ಮಣನ ಸ್ವಗತಗಳಾಗಲೀ ಸಂವಾದಗಳಾಗಲೀ ರಾಮನಿಗೆ ಸಂಬಂಧಿಸಿ ಇವೆಯೇ ಹೊರತು ರಾಮನಿಂದ ಹೊರತಾದ ಲಕ್ಷ್ಮಣನ ಖಾಸಗಿ ಸಮಸ್ಯೆಗಳಿಗೆ ಸಂಬಂಧಿಸಿರುವುದಿಲ್ಲ. ರಾಮನ ಸುಪ್ತಮನಸ್ಸೆ ಮೂರ್ತರೂಪಗೊಂಡ ಲಕ್ಷ್ಮಣನಾಗಿರುವಾಗ ಸುಪ್ತಮನಸ್ಸಿಗೆ ಪುನಃ ಎಲ್ಲಿಯ ಸುಪ್ತಮನಸ್ಸಿರಲು ಸಾಧ್ಯ. ಹಾಗಾಗಿಯೆ ಕಾವ್ಯದಲ್ಲಿ ಲಕ್ಷ್ಮಣನಿಗೆ ತನ್ನ ಖಾಸಗಿ ಬದುಕಿನ ವಿಸ್ಮೃತಿ ಆದ ಹಾಗೆ, ಅಂದರೆ ಊರ್ಮಿಳೆಯನ್ನು ಆತ ಮರೆತ ಹಾಗೆ ಕವಿ ಚಿತ್ರಿಸಿದ್ದಾನೆ.

3. ರಾಮ–ಲಕ್ಷ್ಮಣರ ಬಾಹ್ಯರೂಪವೂ ಒಂದೇ ರೀತಿ ಇದೆ ಎಂದು ಕವಿ ಆಗಾಗ ಬೇರೆ ಬೇರೆ ಪಾತ್ರಗಳ ಬಾಯಿಯಿಂದ ಹೇಳಿಸುವುದರ ಮೂಲಕ ಇವು ಒಂದೇ ಪಾತ್ರದ ಎರಡು ರೂಪಗಳೆಂದು ಮೇಲ್ನೋಟದಲ್ಲಿ ಕೂಡ ಸಾರುತ್ತಿರುತ್ತಾನೆ.

4. ಸೀತೆಯು ರಾಮನೊಂದಿಗೆ ಲಕ್ಷ್ಮಣನಷ್ಟು ಅಂಟಿಕೊಂಡಿಲ್ಲ. ರಾಮನ ಒಳಬಗೆಯ ದ್ವಂದ್ವವನ್ನು ಕಥೆಯ ಪ್ರಾರಂಭದಿಂದ ಕೊನೆಯವರೆಗೆ ಹೆಜ್ಜೆಹೆಜ್ಜೆಗೆ ನಿರೂಪಿಸುವ ಸಲುವಾಗಿಯೇ ಲಕ್ಷ್ಮಣನ ಪಾತ್ರವನ್ನು ರಾಮನ ಬೆನ್ನಿಗೇ ನಿರಂತರವಾಗಿ ಕೂಡಿಸಿ ಇಟ್ಟಿದ್ದಾನೆ ಕವಿ.

5. ಕಾವ್ಯದಲ್ಲಿ ಲಕ್ಷ್ಮಣನ ವರ್ತನೆಗಳು ಪ್ರಾಕೃತಿಕವಷ್ಟೇ ಅಲ್ಲ, ಸುಪ್ತಚಿತ್ತದ ಸಂಶಯದ ರೂಪದಲ್ಲೇ ಇರುತ್ತವೆ. ರಾಮ–ಲಕ್ಷ್ಮಣರ ಸಂವಾದಗಳು ಕೂಡ ರಾಮನ ಅಂತರಂಗದ ಹೊಯ್ದಾಟಗಳ ಹಾಗೆಯೇ ಇವೆ.

6. ಬಹುಮುಖ್ಯ ಅಂಶವೆಂದರೆ, ವನವಾಸದುದ್ದಕ್ಕೂ ಲಕ್ಷ್ಮಣನು ರಾತ್ರಿ ಸರಿಯಾಗಿ ನಿದ್ರಿಸುವುದಿಲ್ಲ. ಆತ ರಾಮ–ಸೀತೆಯರನ್ನು ಕಾಯುತ್ತ ಎಚ್ಚರವಾಗಿಯೇ ಇರುತ್ತಾನೆ. ಆತನು ಮನುಷ್ಯನೆಂದೇ ಚಿತ್ರಿಸಲ್ಪಟ್ಟಿರುವುದರಿಂದ ಎಲ್ಲೋ ಬೆಳಗಿನ ಜಾವದಲ್ಲಿ ಕ್ಷಣಕಾಲ ನಿದ್ರಿಸಬಹುದೆಂಬ ಪರ್ಯಾಯ ಸೂಚನೆಯಷ್ಟೆ ಕಾವ್ಯದಲ್ಲಿ ಸಿಗುತ್ತದೆ. ಜಾಗ್ರತ ಮನಸ್ಸಿಗೆ ನಿದ್ರೆಯೆಂಬುದಿದೆ; ಸುಪ್ತಮನಸ್ಸಿಗೆ ಪ್ರತ್ಯೇಕ ನಿದ್ರೆಯೆಂಬುದಿಲ್ಲ – ಅದು ಸುಪ್ತವಾಗಿದ್ದಂತೆ ಕಂಡರೂ ಸದಾ ಎಚ್ಚರವಾಗಿಯೇ ಇರುತ್ತದೆ! ಅದಕ್ಕೆ ಹಗಲು–ರಾತ್ರಿಗಳ ಭೇದವಿಲ್ಲ.

ಒಟ್ಟಿನಲ್ಲಿ ಲಕ್ಷ್ಮಣ ಎಂಬ ಹೆಸರಿನಿಂದ ಹಿಡಿದು ವರ್ತನೆಗಳವರೆಗೆ ಈ ಪಾತ್ರವು ತಾನು ರಾಮನ ಅಜಾಗೃತಮನಸ್ಸೆಂದು ಕಾವ್ಯದುದ್ದಕ್ಕೂ ಸಾರಿದೆ.’

ರಾಮಾಯಣದಂಥ ಮಹಾಕಾವ್ಯವನ್ನು ಎಷ್ಟೆಲ್ಲ ಆಯಾಮದಿಂದ ನೋಡಬಹುದು ಎನ್ನುವುದಕ್ಕೆ ಮೇಲಣ ವಾಕ್ಯಗಳು ಅಪೂರ್ವ ಉದಾಹರಣೆಯಾಗಿವೆ.

ಕಾಳಿದಾಸ ಕೂಡ ರಾಮ–ಲಕ್ಷ್ಮಣ ಮತ್ತು ಭರತ–ಶತ್ರುಘ್ನರ ಐಕ್ಯಮತ್ಯವನ್ನು ವರ್ಣಿಸುತ್ತಾನೆ. ಗಾಳಿ–ಬೆಂಕಿ ಮತ್ತು ಚಂದ್ರ–ಸಮುದ್ರಗಳ ಸಂಬಂಧದಂತೆ ಈ ಅಣ್ಣ–ತಮ್ಮಂದಿರ ಭ್ರಾತೃತ್ವ ಇದ್ದಿತು. ಇಲ್ಲೊಂದು ಪ್ರಶ್ನೆ. ಕಾಳಿದಾಸನ ಈ ಗಾಳಿ–ಬೆಂಕಿ, ಚಂದ್ರ–ಸಮುದ್ರ ಈ ಹೋಲಿಕೆಗಳ ಔಚಿತ್ಯವಾದರೂ ಏನು? ಗಾಳಿ ಮತ್ತು ಬೆಂಕಿ ಒಂದಾದರಷ್ಟೆ ‘ಸುಡುವಿಕೆ’ ಎಂಬ ಏಕಕ್ರಿಯೆ ನಡೆಯುತ್ತದೆ. ಹೀಗೆಯೇ ಸಮುದ್ರದಲ್ಲಿ ಏಳುವ ಅಲೆಗಳಿಗೂ ಚಂದ್ರನ ಕ್ಷೀಣ–ವೃದ್ಧಿಗಳಿಗೂ ನೇರ ಸಂಬಂಧವಿದೆ.

ಅಣ್ಣ–ತಮ್ಮಂದಿರು ಹೇಗೆ ಕೆಲಸದಲ್ಲೂ ಭಾವನೆಗಳಲ್ಲೂ ಒಂದಾಗಿದ್ದಾರೆ ಎನ್ನುವುದನ್ನುಈ ಎರಡು ಉಪಮಾನಗಳು ಸಮರ್ಥವಾಗಿ ಹೇಳುತ್ತಿವೆ. ಇನ್ನು, ಆ ನಾಲ್ವರು ಮಕ್ಕಳು ಪ್ರಜೆಗಳ ಪಾಲಿಗೆ ಹೇಗಿದ್ದಾರೆ? ‘ಬೇಸಗೆಯು ಮುಗಿದಮೇಲೆ ಮೋಡದ ದಿನಗಳು ಹೆಚ್ಚು ಉಷ್ಣವಾಗಿಯೂ ಹೆಚ್ಚು ಶೀತವಾಗಿಯೂ ಇಲ್ಲದ್ದರಿಂದ ಜನರಿಗೆ ಹಿತ ಎನಿಸುವಂತೆ. ಆ ಮಕ್ಕಳು ಅವರ ಕಾಂತಿಯಿಂದಲೂ ವಿನಯದಿಂದಲೂ ಎಲ್ಲ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು’ ಎನ್ನುತ್ತಾನೆ, ಕಾಳಿದಾಸ. ಹೊರಗಿನ ಪ್ರಕೃತಿಯೂ ಒಳಗಿನ ಪ್ರಕೃತಿಯೂ ಜನರಿಗೆ ಹಿತವಾಗಬಲ್ಲ ಗುಟ್ಟನ್ನು ಅವನು ಹೇಳುತ್ತಿದ್ದಾನೆ.

ನಾಲ್ಕು ಮಕ್ಕಳು ನಾಲ್ಕು ಪುರುಷಾರ್ಥಗಳಿಗೆ ರೂಪವಾಗಿದ್ದರು ಎಂದು ಹೇಳಿ, ಅವನು ವಾಲ್ಮೀಕಿಯ ಮಾತಿಗೆ ಇನ್ನೊಂದು ಆಯಾಮವನ್ನು ಒದಗಿಸಿದ್ದಾನೆ. (ರಾಮನು ಧರ್ಮದ ವಿಗ್ರಹರೂಪ – ಎನ್ನುವುದು ವಾಲ್ಮೀಕಿಯ ಮಾತು.) ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೇ ಪುರುಷಾರ್ಥಗಳು. ವಾಸ್ತವವಾಗಿ ಇರುವುದು ಒಂದೇ ಪುರುಷಾರ್ಥ. ಆದರೆ ಅದು ನಾಲ್ಕಾಗಿ ಪ್ರಕಟವಾಗಿದೆಯಷ್ಟೆ. ಅಂತೆಯೇ ರಾಮನೇ ದಿಟವಾದ ಅವತಾರ; ಉಳಿದವರು ಅವರ ಅಂಶಗಳು ಮಾತ್ರವೇ. ರಾಮಾದಿಗಳ ಬಗ್ಗೆ ಭೋಜನ ಮಾತು ಕೂಡ ಇಲ್ಲಿ ಉಲ್ಲೇಖಾರ್ಹ. ‘ವಿಶ್ವವನ್ನು ಪ್ರಸನ್ನಗೊಳಿಸುವ ಮುಕುಂದ ನಾಲ್ಕು ಭುಜಗಳೋ ಎಂಬಂತೆ ಬ್ರಹ್ಮದ ರಕ್ಷಣೆಗಾಗಿ ಈ ನಾಲ್ವರು ಬೆಳೆದರು’ ಎನ್ನುವುದು ಚಂಪೂರಾಮಾಯಣದ ಮಾತು.

‘ಮುಕುಂದ’ ಎಂದರೆ ಮೋಕ್ಷವನ್ನು ಕೊಡುವವನು. ‘ಬ್ರಹ್ಮ’ ಎಂದರೆ ಜ್ಞಾನ, ವೇದ, ಪ್ರಜ್ಞಾಶಕ್ತಿ.

ಈಗ ಮದುವೆಗೆ ಸಿದ್ಧರಾಗಿದ್ದರು ನಾಲ್ವರು ಹುಡುಗರು. ಅವರಿಗೆ ಮದುವೆಮಾಡಬೇಕೆಂದು ದಶರಥ ಯೋಚಿಸುತ್ತಿ
ದ್ದಾನೆ. ಹೀಗಿರಲು ಒಂದು ದಿನ ವಿಶ್ವಾಮಿತ್ರ ಮಹರ್ಷಿ ದಶರಥನ ಅರಮನೆಗೆ ಬಂದಿದ್ದಾನೆ.

(ಮುಂದುವರೆಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT