ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಅಭಿಷೇಕದ ಫಲಗಳು

ಭಾಗ 105
ಅಕ್ಷರ ಗಾತ್ರ

ಲಕ್ಷಧಾನ್ಯಪೂಜೆಯ ಕ್ರಮವನ್ನು ಹೇಳಿದ ನಂತರ ಶಿವನ ಲಕ್ಷಪುಷ್ಪ ಪೂಜೆಯ ಕ್ರಮವನ್ನು ಹೇಳುತ್ತಾನೆ ಬ್ರಹ್ಮ. ಅದನ್ನು ಸೂತಮುನಿಯು ಋಷಿಗಳಿಗೆ ಹೇಳುವಾಗ ತನ್ನ ಗುರು ವ್ಯಾಸರು ‘ಒಂದು ಪ್ರಸ್ಥ ಶಂಖಪುಷ್ಪಗಳನ್ನು ಶಿವನಿಗೆ ಅರ್ಪಿಸಿದರೆ ಲಕ್ಷಪೂಜೆಯನ್ನು ಮಾಡಿದಂತಾಗುವುದು’ ಎಂದು ಸೂಕ್ಷ್ಮವಾದ ಅಳತೆಯನ್ನು ಮಾಡಿ ಪ್ರದರ್ಶಿಸಿದ್ದರು ಎನ್ನುತ್ತಾನೆ.

ಹನ್ನೊಂದು ಪ್ರಸ್ಥ ಜಾಜೀಹೂವುಗಳಿಂದ ಅರ್ಚಿದರೆ ಲಕ್ಷಜಾಜೀ ಪೂಜೆ ಆಗುವುದು. ಅದರಂತೆ ಯೂಥಿಕಾಪುಷ್ಪಗಳನ್ನೂ ಹನ್ನೊಂದು ಪ್ರಸ್ಥದಷ್ಟು ಅರ್ಚಿಸಬೇಕು. ಅರ್ಧ ಪ್ರಸ್ಥದಷ್ಟು ರಾಜಿಕಾಪುಷ್ಪಗಳನ್ನ ಅರ್ಚಿಸಬೇಕು. ಮಲ್ಲಿಗೆಹೂವುಗಳನ್ನು ಇಪ್ಪತ್ತು ಪ್ರಸ್ಥಗಳಷ್ಟು ಶಿವನಿಗೆ ಅರ್ಚಿಸಬೇಕು. ಹತ್ತೊಂಬತ್ತು ಪ್ರಸ್ಥಗಳಷ್ಟು ತಿಲಪುಷ್ಪಗಳನ್ನ ಅರ್ಚಿಸಬೇಕು. ಮೂವತ್ತೆಂಟು ಪ್ರಸ್ಥಗಳಷ್ಟು ಕರವೀರಪುಷ್ಪಗಳನ್ನೂ ನಿರ್ಗುಂಡೀಕುಸುಮಗಳನ್ನೂ ಅರ್ಪಿಸಬೇಕು.

ಮೂವತ್ತೆಂಟು ಪ್ರಸ್ಥಗಳಷ್ಟು ಕರ್ಣಿಕಾರಪುಷ್ಪಗಳನ್ನ ಅರ್ಚಿಸಬೇಕು. ಬಾಗೇಹೂವು ಮತ್ತು ದಾಸವಾಳಹೂವುಗಳನ್ನು ಹತ್ತು ಪ್ರಸ್ಥಗಳಷ್ಟು ಅರ್ಪಿಸಬೇಕು. ಹೀಗೆ ಹಿಂದೆ ಹೇಳಿದ ಪರಿಮಾಣದಿಂದ ಶಿವನಿಗೆ ಪುಷ್ಪಗಳನ್ನ ಅರ್ಚಿಸಬೇಕು. ಹಾಗೆ ಮಾಡಿದರೆ ಸಕಲೇಷ್ಟಸಿದ್ಧಿಯು ಆಗುವುದು. ಫಲಲೇಚ್ಛಿಯಿಲ್ಲದೆ ಮಾಡಿದರೆ ಮುಕ್ತಿಯು ಲಭಿಸುವುದು ಎಂದ ಬ್ರಹ್ಮ, ನಂತರ ಧಾರಾ (ಅಭಿಷೇಕ) ಪೂಜೆಯ ಫಲವನ್ನು ಹೇಳುತ್ತಾನೆ.

ಶಿವನಿಗೆ ವಿಧಿವತ್ತಾಗಿ ಪೂಜೆ ಮಾಡಿದ ಬಳಿಕ ಭಕ್ತಿಯಿಂದ ಜಲಾಭಿಷೇಕವನ್ನು ಮಾಡಬೇಕು. ಜ್ವರಬಾಧೆಯು ಹೋಗಲು ಏಕಾದಶವಾರ ರುದ್ರಾಭಿಷೇಕವನ್ನು ಶಿವನಿಗೆ ಮಾಡಿಸಿದರೆ ಜ್ವರಬಾಧೆಯು ನಾಶವಾಗುವುದು. ರುದ್ರಸೂಕ್ತ, ಪುರುಷಸೂಕ್ತ, ಮೃತ್ಯುಂಜಯ ಮಂತ್ರ, ಗಾಯತ್ರೀಮಂತ್ರ, ಆದಿ ಮತ್ತು ಕೊನೆಯಲ್ಲಿ ಓಂಕಾರವಿರುವ ಶಿವನಾಮಗಳು, ಅಥವಾ ಆಗಮದಲ್ಲಿ ಹೇಳಿರುವ ಮಂತ್ರಗಳಿಂದ ಶಿವನಿಗೆ ಜಲಾಭಿಷೇಕವನ್ನು ಮಾಡಿದರೆ ಸುಖವೃದ್ಧಿ, ಪ್ರಜಾವೃದ್ಧಿ ಆಗುವುದು.

ಶಿವಭಕ್ತನು ಭಸ್ಮವನ್ನು ಧರಿಸಿ ಅನೇಕ ಬಗೆಯಾದ ಮಂಗಳ ಮತ್ತು ದಿವ್ಯವಾದ ದ್ರವ್ಯಗಳಿಂದ ಧಾರಾಭಿಷೇಕವನ್ನು ಸಹಸ್ರನಾಮ ಮಂತ್ರಗಳಿಂದ ಮಾಡಿದರೆ ವಂಶವು ಅಭಿವೃದ್ಧಿಯಾಗುವುದು. ಬುದ್ಧಿಯು ಜಡವಾದರೆ ಸಕ್ಕರೆಯನ್ನು ಮಿಶ್ರಮಾಡಿದ ಹಾಲಿನಿಂದ ಅಭಿಷೇಕ ಮಾಡಿದರೆ ಬುದ್ಧಿಯು ಚುರುಕಾಗುವುದು. ಹತ್ತುಸಾವಿರ ಬಾರಿ ರುದ್ರಮಂತ್ರದಿಂದ ಕ್ಷೀರಾಭಿಷೇಕ ಮಾಡಿದರೆ, ಬೃಹಸ್ಪತಿಯಂತೆ ಬುದ್ಧಿಯು ಚುರುಕಾಗುವುದು. ಮಂತ್ರಗಳಿಂದ ಶಿವನನ್ನು ಪೂಜಿಸಿದ ನಂತರ ಒಂಬತ್ತು ಮಂದಿ ನಿರ್ಗತಿಕರಿಗೆ ಮೃಷ್ಟಾನ್ನ ಭೋಜನ ಮಾಡಿಸಬೇಕು.

ಅಕಸ್ಮಾತ್ತಾಗಿ ಕಾರಣವಿಲ್ಲದೆ, ಶರೀರದಲ್ಲಿ ಉಚ್ಚಾಟನೆ, ಚಂಚಲತೆ, ವಾಯುಪ್ರಕೋಪ, ಅಯುಕ್ತಸ್ಥಳದಲ್ಲಿ ಪ್ರೇಮ, ಹೆಚ್ಚಾಗಿ ದುಃಖ, ಮನೆಯಲ್ಲಿ ನಿತ್ಯವೂ ಕಲಹ, ಇತ್ಯಾದಿ ಸಮಸ್ಯೆಗಳು ಆಗುತ್ತಿದ್ದರೆ ದುಗ್ಧಾಭಿಷೇಕವನ್ನು ಮಾಡಿ ಶಿವನನ್ನರ್ಚಿಸಬೇಕು. ಶತ್ರುಗಳಿಗೆ ಕಷ್ಟವುಂಟಾಗುವುದಕ್ಕಾಗಿ ಶಿವನಿಗೆ ತೈಲಾಭಿಷೇಕವನ್ನು ಮಾಡಬೇಕು. ಸುವಾಸನೆಯುಳ್ಳ ತೈಲಾಭಿಷೇಕವನ್ನು ಮಾಡಿಸಿದರೆ ಹೆಚ್ಚಾದ ಸುಖಭೋಗವು ಲಭಿಸುವುದು. ಸಾರ್ಷಪತೈಲ(ಕುಸುಮೆ ಅಥವಾ ಸಾಸಿವೆಎಣ್ಣೆ)ದಿಂದ ಅಭಿಷೇಕ ಮಾಡಿಸಿದರೆ ಶತ್ರುಗಳು ನಾಶವಾಗುವರು. ಜೇನುತುಪ್ಪದಿಂದ ಅಭಿಷೇಕಮಾಡಿಸಿ ಶಿವನನ್ನ ಅರ್ಚಿಸಿದರೆ ಯಕ್ಷರಾಜ(ಕುಬೇರ)ನಾಗಿ ಶಿವನ ಸಾನ್ನಿಧ್ಯವನ್ನು ಪಡೆಯಬಹುದು. ಕಬ್ಬಿನ ಹಾಲಿನಿಂದ ಅಭಿಷೇಕಮಾಡಿಸಿದರೆ ಸಕಲ ಆನಂದವೂ ಲಭಿಸುವುದು. ಗಂಗಾಜಲದಿಂದ ಅಭಿಷೇಕಮಾಡಿಸಿದರೆ, ಭೋಗ-ಮುಕ್ತಿಗಳೆರಡೂ ಲಭಿಸುವುದು. ಈ ಎಲ್ಲಾ ಅಭಿಷೇಕಗಳನ್ನು ಹತ್ತುಸಾವಿರ ಬಾರಿ ಮೃತ್ಯುಂಜಯ ಮಂತ್ರದಿಂದ ಮಾಡಬೇಕು ಎಂದ ಬ್ರಹ್ಮ, ಷಣ್ಮುಖ–ಪಾರ್ವತಿಯೊಡನಿರುವ ಶಿವನನ್ನರ್ಚಿಸಿದರೆ, ಇಹಲೋಕದಲ್ಲಿ ಪುತ್ರ ಮತ್ತು ಪೌತ್ರರೊಡನೆ ಸಕಲ ಸೌಖ್ಯವನ್ನೂ ಪಡೆದು, ಕೊನೆಗೆ ಸಕಲ ಸುಖಗಳಿಗೆ ಆಶ್ರಯವಾದ ಶಿವಲೋಕವನ್ನು ಪಡೆಯುವರು ಎನ್ನುತ್ತಾನೆ.

ಹೀಗೆ ಭಕ್ತಿಯಿಂದ ಶಿವಾರ್ಚನೆಯನ್ನು ಮಾಡಿದ ಜನರು, ಕೋಟಿ ಸೂರ್ಯರಂತೆ ಪ್ರಕಾಶಮಾನವಾದ, ಎಲ್ಲಿಗೆಂದರೆ ಅಲ್ಲಿಗೆ ಹೋಗಲು ಸಾಮರ್ಥ್ಯವುಳ್ಳ, ದಿವ್ಯವಾದ ವಿಮಾನದಲ್ಲಿ ಸುರಸುಂದರಿಯರೊಡನೆ ಕುಳಿತು, ಸೊಗಸಾದ ಗಾನವನ್ನು ಕೇಳುತ್ತಾ ರುದ್ರಲೋಕಕ್ಕೆ ಹೋಗುವರು. ಅಲ್ಲಿ ಒಂದು ಕಲ್ಪಪರ್ಯಂತರದವರೆಗು ಬಗೆಬಗೆಯ ಸುಖಗಳನ್ನು ಅನುಭವಿಸಿ, ಕೊನೆಗೆ ಬ್ರಹ್ಮಜ್ಞಾನವನ್ನು ಪಡೆದು ಮುಕ್ತಿಯನ್ನು ಹೊಂದುವರು – ಎಂದು ಬ್ರಹ್ಮನು ನಾರದನಿಗೆ ಹೇಳುತ್ತಾನೆ. ಇದನ್ನು ಸೂತಮುನಿಯು ಪ್ರಯಾಗದ ಋಷಿಗಳಿಗೆ ಹೇಳುವುದರೊಂದಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯದಾದ ರುದ್ರಸಂಹಿತೆಯಲ್ಲಿ ಮೊದಲನೆಯ ಖಂಡವಾದ ಸೃಷ್ಟಿ ಉಪಾಖ್ಯಾನದಲ್ಲಿ ಶಿವಪೂಜಾವಿಧಾನ ವರ್ಣನ ಎಂಬ ಹದಿನಾಲ್ಕನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT