ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಕೋಪವೆಂಬ ಬೆಂಕಿಯಲ್ಲಿ ಬೀಳದಿರಿ

Last Updated 20 ಮೇ 2020, 19:45 IST
ಅಕ್ಷರ ಗಾತ್ರ

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೆಯೇನು?
ತನುವಿನ ಕೋಪ ತನ್ನ ಹಿರಿತನದ ಕೇಡು!
ಮನದ ಕೋಪ ತನ್ನ ಅಱಿವಿನ ಕೇಡು!
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ,
ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ !

ವಚನ ಅಂದರೆ ಮಾತು. ತನ್ನಿಷ್ಟದ ದೈವವನ್ನು ಸಾಕ್ಷಿಯಾಗಿ ನಿಲ್ಲಿಸಿಕೊಂಡು ಭಾಷೆ ಕೊಡುವುದು. ಕೊಟ್ಟ ಹಾಗೆ ನಡೆದು ತೋರಿಸಿರುವುದು ವಚನಗಳು. ಏಕಕಾಲದಲ್ಲಿ ತನ್ನ ಮತ್ತು ಸಮಾಜದ ನಡೆಯು ಹೇಗಿರಬೇಕೆಂಬ ಬಗೆಯಲ್ಲಿ ನಡೆಸುವ ಬಹು ಸಶಕ್ತ ಚಿಂತನೆಗಳು ಕಾರ್ಯರೂಪಕ್ಕೆ ಬಂದುದಕ್ಕೆ ಸಾಕ್ಷಿ ಎಂದರೆ ವಚನಚಳವಳಿ. ಈ ಚಳವಳಿ ಸಾಮಾಜಿಕವಾಗಿ ವಿಫಲವೆನಿಸಿದರೂ ವ್ಯಕ್ತಿಪ್ರತಿಭೆಯಿಂದ ವಚನಕಾರರೆಲ್ಲರೂ ಗೆದ್ದವರೇ. ಈ ಗೆಲವಿಗೆ ಬಹುಮುಖ್ಯ ಕಾರಣ ಬೆಂಕಿಯ ಹಾಗಿರುವ ಕೋಪವನ್ನು ತಮ್ಮ ಒಳಗೆ ಮತ್ತು ತನ್ನಿಂದ ಹೊರಗೆ ಹೊತ್ತಿ ಹಬ್ಬಲು ಬಿಡದಂತೆ ಶುಚಿಯಾಗಿಟ್ಟುಕೊಂಡಿದ್ದುದು. ಅದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ.

ಕೋಪ ಮನುಷ್ಯನ ಸಹಜ ಲಕ್ಷಣ. ಪ್ರಸ್ತುತ ವಚನದಲ್ಲಿ ಕೋಪವು ಉಂಟುಮಾಡುವ ಪರಿಣಾಮವನ್ನು ಬಹಳ ಸಶಕ್ತವಾದ ಒಂದು ಸಾದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ.ಕೋಪದ ಹಂತಗಳನ್ನು ಮಾನಸಿಕ ಮತ್ತು ಶಾರೀರಿಕ ಬದಲಾವಣೆಗಳಲ್ಲಿಯೂ ಗುರುತಿಸಲಾದೀತು. ಒಂದರಿಂದ ಮತ್ತೊಂದು ಊರ್ಧ್ವಮುಖಿಯಾಗಿ ಹಬ್ಬುತ್ತದೆ. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡುವುದೇ? – ಎಂದು ಪ್ರಶ್ನಿಸುವ ಬಸವಣ್ಣನವರು ಕೇಡಿನ ಎರಡು ಮೂಲವನ್ನು ಇಲ್ಲಿ ಹೇಳುತ್ತಿದ್ದಾರೆ.

ಮಾನಸಿಕವಾಗಿ ಪ್ರಾರಂಭವಾಗುವ ಕೇಡಾದ ಕೋಪವು, ಒಳಗೇ ಒರಲೆ ಹೊತ್ತಿ ದೈಹಿಕವಾಗಿ ಹೊರ ಬರುವ ಕ್ರಿಯಾರೂಪಿ ಕೇಡಾಗುತ್ತದೆ. ಅಮೂರ್ತವಾಗಿದ್ದು ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಾ ಮೂರ್ತವಾಗುತ್ತದೆ ಅದು. ವಚನದಲ್ಲಿ ಕೋಪವನ್ನು ಬೆಂಕಿಗೆ ಹೋಲಿಸಿದ್ದಾರೆ. ಮೊದಲು ಮನದಲ್ಲಿ ಹುಟ್ಟಿ ನೆಮ್ಮದಿ, ಸಂತೋಷ, ಸಹಬಾಳ್ವೆಯಂತಹ ಅಂಶಗಳನ್ನು ನಾಶಮಾಡಿ ಅದು ವ್ಯಕ್ತಿನಾಶಕ್ಕೆ ಕಾರಣವಾದರೆ, ನಂತರ ಬುದ್ದಿಯ ಮಟ್ಟಕ್ಕೆ ಬೆಳೆದು ನಮ್ಮ ಅರಿವಿಗೆ ಹಾನಿ ಮಾಡುತ್ತದೆ. ಬೆಳೆದು ದೇಹಕೆ ಹಬ್ಬಿದ ಕೋಪ ಕಾಲದ ಅನುಭವದಿಂದ ಬಂದ ಹಿರಿತನವನ್ನೂ ಕ್ಷಣದಲ್ಲಿ ನಷ್ಟ ಮಾಡುತ್ತದೆ. ಮನೆಯ ಮತ್ತು ಮನದ ಒಳಗಿನ ಕಿಚ್ಚು ಮೊದಲು ಮನೆ-ಮನವನ್ನು ಸುಟ್ಟು ಆ ನಂತರ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹೀಗಾಗಿ‌ ಅಂತಹ ಅಪಾಯಗಳನ್ನು ತಡೆಯಲು ಮೊದಲು ಮನಸ್ಸು ಮತ್ತು ಬುದ್ಧಿಗೆ ಕೋಪ ಹೊಕ್ಕದ ಹಾಗೆ ಸ್ವಾಸ್ಥ್ಯವನ್ನು ನೋಡಿಕೊಳ್ಳುವುದು ಬಹುಮುಖ್ಯ. ಮೊದಲ ಎರಡು ಸಾಲಿನಲ್ಲಿ ಬರುವ ಮೂರು ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವು ತನಗೆ ಮುನಿಯುವವರಿಗೂ ಮುನಿಯಬಾರದು, ಕೋಪ ಮಾಡಿಕೊಳ್ಳುವುದರಿಂದ ಲಾಭ-ನಷ್ಟಗಳು ಯಾರಿಗೂ ಇಲ್ಲ ಎನ್ನುವುದೇ ಆಗಿದೆ. ವಚನದಲ್ಲಿನ ಮನೆಯು ದೇವಾಲಯವೇ ಅದ ದೇಹವೂ ಹೌದು, ನಾವು ವಾಸಿಸುವ ಸ್ಥಳವೂ ಹೌದು. ಇವೆರಡರ ಸ್ವಾಸ್ಥ್ಯಕ್ಕೆ ಕೋಪದಿಂದ ಬಿಡುಗಡೆಯನ್ನು ಸಾಧಿಸಬೇಕಾದ್ದು ಬಹಳ ಮುಖ್ಯ.

ಕೋಪದಿಂದ ಏಕಕಾಲದಲ್ಲಿ ಆಗುವ ವ್ಯಕ್ತಿ ವಿನಾಶ ಮತ್ತು ಸಮಾಜದ ನಾಶವನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಅಸೂಯೆ, ಹಿಂಸೆಗಳಿಂದ ದೂರಾಗುವುದು. ಕೋಪವನ್ನು ಬೆಂಕಿಗೂ, ಮನೆಯನ್ನು ದೇಹಕ್ಕೂ ಹೋಲಿಸಿ ಮಾತನಾಡಿದ್ದಾರೆ. ಮನ-ಮನೆಗಳ ಸುಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳುವುದು ಇಂದಿಗೆ ಬಹುಮುಖ್ಯ ಅಂಶವಾಗಿದೆ. ಹೀಗೆ ನಡೆದುಕೊಳ್ಳುವುದು ಉತ್ತಮ ಸಮಾಜದ ನಿರ್ಮಾಣ ಮತ್ತು ವ್ಯಕ್ತಿಯ ಉನ್ನತಿಗೆ ಸಹಾಯಕ ಎನ್ನುವುದನ್ನು ಕೂಡಲಸಂಗಮನ ಸಾಕ್ಷಿಯಾಗಿ ಬಸವಣ್ಣನವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT