ಗುರುವಾರ , ಮೇ 26, 2022
22 °C

ವೇದವ್ಯಾಸರ ಶಿವಪುರಾಣ ಸಾರ: ಬ್ರಹ್ಮ ವಿಷ್ಣು ವಾಗ್ಯುದ್ಧ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಬ್ರಹ್ಮ ತನ್ನ ಬಳಿ ಬಂದ ನಾರದನಿಗೆ ಶಿವತತ್ವವನ್ನು ಬೋಧಿಸುತ್ತಾನೆ. ಈ ಸಂದರ್ಭದಲ್ಲಿ ತನ್ನ ತಂದೆ ವಿಷ್ಣು ಎಂಬುದನ್ನು ತಿಳಿಯದೆ, ಆತನೊಂದಿಗೆ ವಾಗ್ಯುದ್ಧ ನಡೆಸಿದ ಘಟನೆಯನ್ನು ತಿಳಿಸುತ್ತಾನೆ.

‘ನಾನು ಆ ಸುಂದರವಾದ ರೂಪವನ್ನು ಕಂಡೊಡನೆ ಬಹಳ ಆಶ್ಚರ್ಯಪಟ್ಟೆ. ನೀಲವಾದ ಕಾಂತಿಯುಳ್ಳ, ಚಿನ್ನದಂತೆ ಹೊಳೆಯುತ್ತಿದ್ದ, ಸರ್ವಾತ್ಮಕನೂ ನಾಲ್ಕು ತೋಳುಗಳುಳ್ಳ ಸತ್ತಾಗಿಯೂ-ಅಸತ್ತಾಗಿಯೂ ರೂಪವುಳ್ಳಂಥ ಮಹಾಬಾಹುವಾದ ಶ್ರೀಮನ್ನಾರಾಯಣನನ್ನು ಕಂಡು ನನಗೆ ಸಂತೋಷವಾಯಿತು. ಲೀಲಾಮಯನೂ ಪ್ರಭುವೂ ಆದ ಆ ಶಿವನ ಮಾಯೆಯಿಂದ ಮೋಹಿತನಾಗಿದ್ದರಿಂದ, ನನ್ನ ತಂದೆ ಯಾರೆಂದು ತಿಳಿಯದೆ ಆ ಪುರಾಣಪುರುಷನಾದ ಶ್ರೀಹರಿಯನ್ನು ‘ನೀನಾರು ಹೇಳು’ ಎಂದು ಕೈಯಿಂದ ತಟ್ಟಿ ಎಬ್ಬಿಸಿದೆ. ನನ್ನ ತಿವಿತದಿಂದ ಎಚ್ಚೆತ್ತ ವಿಷ್ಣು, ಹಾಸಿಗೆಯ ಮೇಲೆದ್ದು ಕ್ಷಣಕಾಲ ಕುಳಿತುಕೊಂಡ. ಸೌಮ್ಯವಾದ ಕಾಂತಿಯಿಂದ ಬೆಳಗುತ್ತಿದ್ದ ಆ ಶ್ರೀಹರಿಯು ಅಲ್ಲಿ ನಿಂತಿದ್ದ ನನ್ನ ಕಂಡು ಒಂದು ಬಾರಿ ನಸುನಕ್ಕ. ’ಓ ವತ್ಸ, ಪಿತಾಮಹ! ನಿನಗೆ ಶುಭಾಗಮನ. ಭಯಪಡಬೇಡ, ನಿನ್ನ ಇಷ್ಟಾರ್ಥಗಳೆಲ್ಲವನ್ನೂ ಕೊಡುವೆ, ಸಂದೇಹಪಡಬೇಡ’ ಎಂದ.

ಅವನ ಆ ಮಾತನ್ನು ಕೇಳಿ ದೇವತೆಗಳಿಗೆಲ್ಲಾ ಶ್ರೇಷ್ಠನಾದ ನಾನು, ರಜೋಗುಣನ ಅಧಿಕ್ಯದಿಂದ ಆತನಲ್ಲಿ ದ್ವೇಷವುಳ್ಳವನಾಗಿದ್ದೆ. ಹೀಗಾಗಿ ನಾನು ಅಹಂಕಾರದಿಂದ ನಗುತ್ತಾ ಆ ಜನಾರ್ದನನಿಗೆ ‘ಇದೇನು? ಎಲ್ಲರನ್ನೂ ಧ್ವಂಸಮಾಡಿಬಿಡುವ ನನ್ನನ್ನು, ಗುರುವು ಶಿಷ್ಯನನ್ನು ಕರೆವಂತೆ, ವತ್ಸ, ವತ್ಸ, ಎಂದು ಕರೆಯುತ್ತೀಯೆ? ನಿನಗೆ ತಿಳಿಯದೇನು? ಈ ಜಗತ್ತುಗಳನ್ನೆಲ್ಲಾ ನಾನೇ ಸೃಷ್ಟಿಸುವೆನು. ಸಾಕ್ಷಾತ್ ಪ್ರಕೃತಿಯನ್ನೂ ಹೀಗೆ ಹೀಗೆ ಮಾಡೆಂದು ನಿಯಮಿಸುವೆನು. ನನ್ನನ್ನು ಪುರಾಣಪುರುಷನೆಂದೂ ಜನ್ಮರಹಿತನೆಂದೂ, ಸರ್ವವ್ಯಾಪಿಯೆಂದೂ ವಿಷ್ಣುಸಂಭವನೆಂತಲೂ ಕರೆಯುತ್ತಾರೆ ನೀನರಿಯೆಯಾ? ಕೇವಲ ಮೋಹಕ್ಕೆ ಸಿಲುಕಿದವನಾಗಿ, ಸರ್ವಪ್ರಪಂಚ ಸ್ವರೂಪನಾಗಿ, ಎಲ್ಲದಕ್ಕೂ ನಿರ್ಮಾತೃವಾಗಿ, ಕಮಲದಂತೆ ಕಣ್ಣುಳ್ಳವನೂ ಆದ ನನ್ನನ್ನು ಏನೆಂದು ಮಾತನಾಡಿಸುವೆ? ವೇದವೂ ನಿಯಮದಿಂದ ನನ್ನನ್ನು ಸ್ವಯಂಭು ಅನ್ನುತ್ತೆ. ಅಂದರೆ, ತಾನಾಗಿಯೇ ಬೇರೊಂದು ಕಾರಣವಿಲ್ಲದೆ ಹುಟ್ಟಿದವನು ಅಂತ ಅರ್ಥ. ಅಜ, ವಿಭು, ಪಿತಾಮಹ, ಸ್ವರಾಟ್, ಪರಮೇಷ್ಠೀ ಎಂಬುದಾಗಿ ಹೊಗಳುತ್ತದೆ’ ಎಂದೆ.

ನನ್ನ ಮಾತನ್ನು ಕೇಳಿ ಶ್ರೀಹರಿಯು ಕುಪಿತನಾದ. ‘ಓ ಚತುರ್ಮುಖಿ ಬ್ರಹ್ಮ, ನೀನು ಈ ಜಗತ್ತನ್ನು ಸೃಷ್ಟಿಸಲೂ ರಕ್ಷಿಸಲೂ ನಾಶರಹಿತವಾದ ನನ್ನ ಅಂಗದಿಂದ ಹುಟ್ಟಿದೆಯಲ್ಲವೆ? ಜಗತ್ತಿಗೆಲ್ಲಾ ಪ್ರಭುವೂ ನಿರಾಯಮನೂ ಆದ ನಾರಾಯಣನಾದ ನನ್ನನ್ನು ಮರೆತೆಯೇನು? ನಾನು ಪುರುಷನೂ ಪರಮಾತ್ಮನೂ ಎಲ್ಲರಿಗಿಂತಲೂ ಮೊದಲು ಆಹ್ವಾನಿಸಲ್ಪಡುವವನೂ ಸ್ತುತಿಗೆ ಅರ್ಹನಲ್ಲವೆ? ವಿಷ್ಣುವೂ ಅಚ್ಯುತನೂ ಈಶಾನನೂ ಈ ಜಗತ್ತು ಹುಟ್ಟಲು ಕಾರಣಭೂತನೂ ಮಹಾಬಾಹುವೂ ಸರ್ವವ್ಯಾಪಿಯೂ ಈಶ್ವರನೂ ನಾರಾಯಣನಾದ ನಾನಲ್ಲದೆ ಮತ್ತಾರು ಇರುವರು? ನೀನು ನನ್ನ ನಾಭಿಯಿಂದ ಹೊರಹೊರಟ ಕಮಲದಿಂದ ಹುಟ್ಟಿದವನು. ಇಲ್ಲಿ ನಿನ್ನ ತಪ್ಪೇನೂ ಇಲ್ಲ, ಇದೆಲ್ಲವೂ ನನ್ನ ಮಾಯೆಯ ಫಲ. ನಾನೇ ಎಲ್ಲ ದೇವತೆಗಳಿಗೂ ಒಡೆಯ. ಕರ್ತೃವೂ ಹರ್ತೃವೂ ಭರ್ತೃವೂ ನಾನೇ. ನನಗೆ ಸರಿಸಮನಾದ ವಿಭುವು ಯಾರೂ ಇಲ್ಲ. ನಾನೇ ಪರಬ್ರಹ್ಮ, ಆ ಪರತತ್ವವೂ ನಾನೇ, ಪರಂಜ್ಯೋತಿಯೂ ಪರಮಾತ್ಮನೂ ನಾನೇ. ಈ ಪ್ರಪಂಚದಲ್ಲಿರುವ ಸ್ಥಾವರ ಮತ್ತು ಜಂಗಮಾತ್ಮಕವಾದ ವಸ್ತುವಾವುದುಂಟೋ ಅದೆಲ್ಲವೂ ನಾನೇ ಎಂಬುದಾಗಿ ತಿಳಿ.

‘ಮೊದಲು ನಾನು ಅವ್ಯಕ್ತವನ್ನೂ, ಇಪ್ಪತ್ತನಾಲ್ಕು ತತ್ವಗಳನ್ನೂ ಸೃಷ್ಟಿಸಿದೆ. ಅವುಗಳಲ್ಲಿ, ಕೋಪ, ಹೆದರಿಕೆ ಮೊದಲಾದವುಗಳಿಗೆ ಕಾರಣಗಳಾದ ಅಣುಗಳು ಯಾವಾಗಲೂ ನೆಲಸಿರುವುವು. ಅವುಗಳ ಪ್ರಭಾವದಿಂದಲೇ ನೀನು ಮತ್ತಿತರ ಅಂಗಗಳೂ ಹುಟ್ಟಿದುವು. ನಾನೇ ಬುದ್ಧಿಯನ್ನೂ, ಮೂರು ವಿಧವಾದ ಅಹಂಕಾರವನ್ನೂ ಸೃಷ್ಟಿಸಿದೆ. ಅಹಂಕಾರದಿಂದ ಐದು ತನ್ಮಾತ್ರಗಳೂ, ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳೂ, ಆಕಾಶಾದಿ ಪಂಚಭೂತಗಳೂ, ಇತರ ಪಾಂಚಭೌತಿಕವಸ್ತುಗಳೂ ಸೃಷ್ಟಿಸಲ್ಪಟ್ಟುವು. ಇಂಥ ನನ್ನನ್ನು ಚೆನ್ನಾಗಿ ತಿಳಿದುಕೊಂಡು, ನನಗೆ ಶರಣಾಗತನಾಗು. ನಿನ್ನನ್ನು ಕಾಪಾಡುತ್ತೇನೆ’ ಎಂದ ವಿಷ್ಣು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು