ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗದ ಸಂಕೇತ ‘ಬಕ್ರೀದ್’

Last Updated 31 ಜುಲೈ 2020, 21:10 IST
ಅಕ್ಷರ ಗಾತ್ರ

ಇಸ್ಲಾಮಿನ ಇತಿಹಾಸದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದರ ಜತೆ ಬೆಸೆದುಕೊಂಡಿರುವ ‘ಈದ್‌ ಉಲ್‌ ಅದ್‌ಹಾ’ ಹಬ್ಬ ಮತ್ತೆ ಬಂದಿದೆ. ತ್ಯಾಗ-ಬಲಿದಾನದ ಈ ಹಬ್ಬ ಭಾರತದಲ್ಲಿ ‘ಬಕ್ರೀದ್‌’ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ.

ಮುಸ್ಲಿಮರು ‘ರಂಜಾನ್’ ತಿಂಗಳ ಉಪವಾಸದ ಬಳಿಕ ‘ಈದ್‌ ಉಲ್‌ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಆಚರಿಸಲಾಗುತ್ತದೆ. ವಿಶ್ವದಾದ್ಯಂತವಿರುವ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಂಭ್ರಮದಿಂದ ಹಬ್ಬ ಆಚರಿಸುವರು.

ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ.

ಹಬ್ಬದ ಆಚರಣೆ: ‘ಬಕ್ರೀದ್‌’ ದಿನ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಜ್‌ ಹಾಗೂ ಖುತ್ಬಾ (ಪ್ರವಚನ) ಇರುತ್ತದೆ. ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಭಾಗವಹಿಸುವರು.

ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು, ನೆಂಟರಿಷ್ಟರ ಮನೆಗಳಿಗೆ ಭೇಟಿ ನೀಡಿ ಸೌಹಾರ್ದತೆ ಸಂದೇಶ ಸಾರಲಿದ್ದಾರೆ. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಗೆಳೆಯರು, ಬಂಧುಗಳನ್ನು ಊಟಕ್ಕೆ ಆಹ್ವಾನಿಸಿ ಜೊತೆಯಾಗಿ ಊಟ ಮಾಡುವ ಮೂಲಕ ಹಬ್ಬದ ಸಂಭ್ರಮ ಹಂಚಿಕೊಳ್ಳುವರು.

ಜಾನುವಾರು ಬಲಿ: ಹಬ್ಬದ ದಿನದಂದು ಜಾನುವಾರುಗಳನ್ನು ಬಲಿ ನೀಡಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಬಲಿದಾನ ಮಾಡಲಾಗುತ್ತದೆ. ಅಲ್ಲಾಹನ ಆದೇಶದಂತೆ ಇಬ್ರಾಹಿಂ ಅವರು ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುತ್ತಾರೆ. ತಮ್ಮ ಮಗನನ್ನೇ ದೇವರ ಇಚ್ಛೆಯಂತೆ ಬಲಿದಾನ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ ಎಂದು ಮುಸ್ಲಿಮರ ಧರ್ಮಗ್ರಂಥದಲ್ಲಿ ತಿಳಿಸಲಾಗಿದೆ.

ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಿ ಇಂದಿಗೂ ಹಬ್ಬದ ದಿನ ಅಥವಾ ನಂತರದ ಮೂರು ದಿನಗಳಲ್ಲಿ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿ ನೀಡಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಅಂಶವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

ಹಜ್‌ ಯಾತ್ರೆ: ವಿಶ್ವದಾದ್ಯಂತ ಮುಸ್ಲಿಮರು ಈ ಹಬ್ಬ ಆಚರಿಸುವ ಸಂದರ್ಭದಲ್ಲಿ ಮಕ್ಕಾದಲ್ಲಿ ಹಜ್‌ ಯಾತ್ರಿಕರು ಹಜ್‌ನ ವಿವಿಧ ಕರ್ಮಗಳನ್ನು ಆಚರಿಸುತ್ತಾರೆ. ಹಜ್‌ ಯಾತ್ರೆಯ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಪ್ರತಿವರ್ಷವೂ ಹಜ್‌ನಲ್ಲಿ ವಿಶ್ವದ ವಿವಿಧ ದೇಶಗಳ 20 ಲಕ್ಷಕ್ಕೂ ಅಧಿಕ ಯಾತ್ರಿಕರು ಪಾಲ್ಗೊಳ್ಳುವರು. ಆದರೆ ಈ ಬಾರಿ ಕೋವಿಡ್‌ ಕಾರಣ ಸೌದಿ ಅರೇಬಿಯಾ ಸರ್ಕಾರ ವಿದೇಶಿಯರಿಗೆ ಹಜ್‌ಗೆ ಅವಕಾಶ ನೀಡಿಲ್ಲ. ಸ್ಥಳೀಯವಾಗಿ ಗರಿಷ್ಠ 10 ಸಾವಿರ ಮಂದಿಗೆ ಮಾತ್ರ ಹಜ್‌ಗೆ ಅವಕಾಶ ಕಲ್ಪಿಸಿದೆ.

ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ

ಕೇರಳ ರಾಜ್ಯ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 31 ರಂದು ಬಕ್ರೀದ್‌ ಹಬ್ಬದ ಆಚರಣೆ ನಡೆದಿದ್ದರೆ, ರಾಜ್ಯದ ಇತರ ಜಿಲ್ಲೆಗಳು ಮತ್ತು ದೇಶದಾದ್ಯಂತ ಆಗಸ್ಟ್‌ 1 ರಂದು ಹಬ್ಬ ಆಚರಿಸಲಾಗುತ್ತದೆ.

ಕೋವಿಡ್‌ ಕಾರಣ ಹಬ್ಬ ಸರಳವಾಗಿ ನಡೆಯಲಿದೆ. ಈದ್ಗಾ ಮೈದಾನಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು. ಹೆಚ್ಚು ಜನರು ಮಸೀದಿಗೆ ಬಂದರೆ, ಎರಡು ಅಥವಾ ಮೂರು ತಂಡಗಳಾಗಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT