ಶುಕ್ರವಾರ, ಜೂನ್ 18, 2021
23 °C

ಹೊಯ್ಕೊಂಡ ಬಾಯಿಗೆ ಹೋಳಿಗೆಯುಣಿಸುವ ಹೋಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಮ್ಮಾ.., ನಂಗೂ ಈ ಡಡ್ಡಣಕ್ಕ ಣಕ್ಕ ಣಕ್ಕ ಡಡಣಕ್ಕ ಣಕ್ಕಣಕ್ಕ..‘ ಕೊಡಸಮ್ಮ ಅಂತ್ಹೇಳಿದ್ಲು. ರಸ್ತೆಯ ಅಕ್ಕ ಪಕ್ಕ ಮಕ್ಕಳ ಹಿಂಡೊಂದು ಡಬಲಿ ಬಾರಿಸುತ್ತ ‘ಝಣಝಣಕ್ಕ ಝಣಝಣ’ ಹಣ ಸಂಗ್ರಹಿಸೂದ್ರೊಳಗ ಮೈಮರತಿದ್ರು. 

ಆಗಲೇ ಹೊಳದಿದ್ದು.. ಇನ್ನೇನು ಹೋಳಿ ಹತ್ರದ ಅಂತ. 20 ವರ್ಷ ಬೆಂಗಳೂರಾಗ ಇರೂದ್ರೊಳಗ ಈ ‘ಡಡ್ಡಣಕ್ಕ ಣಕ್ಕ ಣಕ್ಕ’ ಶಬ್ದನೇ ಮರತಂಗ ಆಗಿತ್ತು ನೋಡ್ರಿ. ಹೋಳಿ ಹುಣ್ಣಿವಿ ಬಂದ್ರ ಸಾಕು, ಮನಿ ಸುತ್ತಲು ಇದ್ದ ಹಳಿ ಕುರ್ಚಿ, ಮೇಜು, ಮರದ ಬೊಡ್ಡಿ, ದಪ್ಪನ ಕಟ್ಟಿಗಿ ಇವುನ್ನ ಕಾಯ್ಕೊಂಡ ಇರಬೇಕಿತ್ತು. ಇಲ್ಲಾಂದ್ರ ಯಾವುದೋ ಮಾಯೆಯೊಳಗ ಇವು ಮಾಯ ಆಗ್ತಿದ್ವು. ಮತ್ತ ಇವುಗಳ ದರ್ಶನ ಯಾವುದರೆ ಓಣಿಯೊಳಗ ಕಾಮನ ಸುಡುವ ಕಟಗಿ ಗುಂಪಿನಾಗೇ ಕಾಣಬೇಕಾಗ್ತಿತ್ತು.

ಹೆಂಗಿದ್ರೂ ಹೋಳಿ ಹಬ್ಬ. ಕಟಗಿ ಕಳಕೊಂಡೋರು, ಮನಸಿನಾಗೆ ಹೊಯ್ಕೊಂಡ್ರ, ಕದ್ದೊಯ್ದೋರು ತಮ್ಮ ಶೌರ್ಯ, ಪ್ರತಾಪವನ್ನೆಲ್ಲ ಈ ಸದ್ದಿನೊಳಗ ಹುಯಿಲೆಬ್ಬಸ್ತಿದ್ರು. ನಾವು ಸಣ್ಣೋರಿದ್ದಾಗಂತೂ ಕಾಮಣ್ಣಗ ಸುಡೂಮುಂದ ಊರ ಅಗಸ್ರಿಗೆ ಸಂಭ್ರಮನೇ ಸಂಭ್ರಮ. ಅವರ ಕತ್ತಿಗೆ ತಾಸಿಗೈವತ್ತು ರೂಪಾಯಿ ಕೊಟ್ಟು ಕರಕೊಂಡು ಬರೋರು. ಅವೊತ್ತು ಕತ್ತಿ ಸವಾರಿ ಮಾಡಿದ್ರ, ಶ್ರೀಮಂತರಾಗ್ತಾರ, ಶಾಣೆಯಾಗ್ತಾರ ಅಂತ ಒಂದು ನಂಬಿಕಿ ಇತ್ತು. ಸವಾರಿ ಮಾಡಿದೋರು ಆಗ್ತಿದ್ರೋ ಇಲ್ಲೋ ಗೊತ್ತಿಲ್ಲ. ಆದರ ಕತ್ತಿ ಮಾಲೀಕ ಮಾತ್ರ ಅವೊತ್ತು ಒಂದಿನಾರೆ ಯಾಕಾಗಲಿ ಶ್ರೀಮಂತ ಆಗೂದು ಖಾತ್ರಿ ಇತ್ತು. 

ಕತ್ತಿ ಹಂಗ ದುಡಿಯೂದು ಮೈಗೆ ಹತ್ಲಿ ಅಂತ ಹಂಗ ಮಾಡ್ತಿದ್ರೊ, ಕತ್ತಿಹಂಗ ದುಡಿಯೋರನ್ನ ಸವಾರಿ ಮಾಡ್ಲಿ ಅಂತ ಹತ್ತಸ್ತಿದ್ರೋ ಆ ಕಾಮದೇವನೇ ಬಲ್ಲ. ಅಗ್ನಿದೇವತೆಗೆ ಗೊತ್ತು. ಅಂತೂ ಬಿಸಿಬೆಂಕಿಯ ತಾಪದೊಳಗ ಈ ಕತ್ತಿ ಸವಾರಿಯ ಸಾಹಸ ನಡೀತಿತ್ತು.

ಓಣ್ಯಾಗ ಮೇಜು, ಕುರ್ಚಿ, ಮರ ಕಳಕೊಂಡೋರು, ಬಾಯ್ತುಂಬ ಬೈತಿದ್ರು. ಭಾಡ್ಯಾ, ನಮ್ಮನಿ ಕಟಗಿನೆ ಬೇಕಿತ್ತು? ಅಂಗಳದಾಗಿನ ಪಾಯಿಖಾನಿ ಬಾಗಲಾ ಸೈತ ಬಿಟ್ಟಿಲ್ಲ.. ಇವರೇನು ನೋಡ್ತಾರ ನೋಡ್ಲಿ..  ಅಂತ ಸವಾಲು ಹಾಕ್ಕೊಂತ ಕಾಮದಹನ ಸುಡೂದು ನೋಡ್ತಿದ್ರು.ಬೆಂಕಿ ಧಗಧಗಿಸಿದ್ಹಂಗೆಲ್ಲ ಹೊಲಸು ಬೈಗಳ, ಹೊಯ್ಕೊಳ್ಳೂದು ಎಲ್ಲಾ ತಾರಕಕ್ಕ ಏರ್ತಿದ್ವು. ಹುಡುಗುರು ಎತ್ತ ಬಂದತ್ತ, ಮೈಯ್ಯಾಗ ಇರುವಿ ಹೊಕ್ಕಂಗ ಕುಣೀತಿದ್ರು. ಹೆಣ್ಮಕ್ಕಳು ಮುಸಿಮುಸಿ ನಕ್ಕೊಂತ ಇವನ್ನು ಆನಂದಿಸ್ತಿದ್ರು. 

ಆ ರಾತ್ರಿ ಮಾತ್ರ ಆಶ್ಲೀಲ, ಅಸಭ್ಯ, ಅಸಹ್ಯ ಇವೆಲ್ಲ  ಪದಗಳು ಮಾತ್ರ ನೋಡ್ರಿ. ಬಾರಾಖೂನ್‌ ಮಾಫ್‌ ಅನ್ನೂಹಂಗ ಸೊಂಟದ ಕೆಳಗಿನ ಭಾಗ ಎಲ್ಲಾನೂ ಹಾಡಾಗ್ತಾವ. ಬೈಗಳಾಗ್ತಾವ. ಛೇಡಿಸಲು, ನಗಲು ಬಳಕೆ ಆಗ್ತಾವ. ನಮ್ಮೊಳಗಿನ ಕಾಮ, ವಾಂಛೆ ಎಲ್ಲವೂ ಬಾಯ್ಮಾತಿನಲ್ಲಿ ಅಗ್ನಿಗಾಹುತಿ ಮಾಡುತ್ತಲೇ ಅಂತರಂಗ ಸ್ವಚ್ಛ ಮಾಡಿಕೊಳ್ಳುವ ಪ್ರಕ್ರಿಯೆ ಅನ್ನೂಹಂಗ ಇವು ನಡೀತಿರ್ತಾವ.  

ದೊಡ್ಡ ಕಟಗಿ ಧರೆಗುರುಳಿದಾಗ, ಸಣ್ಣಗೆ ಮಳಿ ಬರ್ತಿತ್ತು. ಬೆಂಕಿ ಕೆಂಡ ಆಗೂ ಹೊತ್ತಿನಾಗ ಎಲ್ಲ ಹೆಣ್ಮಕ್ಕಳು ತಮ್ಮ ಮನಿಯಿಂದ ಕಡಲಿ, ಪುಠಾಣಿ, ಹಂಚಿನಾಗ ಹಾಕ್ಕೊಂಡು ಈ ಕೆಂಡದ ಮ್ಯಾಲೆ ಹುರಕೊಂತಿದ್ರು.

ಸಂಧಿಕಾಲದ ವ್ಯಾಧಿ ಕಫ ಕಟ್ಟೂದು ಕಡಿಮಿ ಆಗ್ತದಂತ ಹೇಳಿ ಅವನ್ನು ತಿನ್ನಾಕ ಕೊಡ್ತಿದ್ರು. ಜೊತಿಗೆ ಬಳ್ಳೊಳ್ಳಿನು ಸುಡ್ತಿದ್ರು. ಆಮೇಲೆ ಅದೇ ಹಂಚಿನಾಗ ಒಂದೆರಡು ಕೆಂಡ ಹಾಕ್ಕೊಂಡು, ಅದರ ಮ್ಯಾಲೆ ಲೋಬಾನ್‌ ಹಾಕ್ಕೊಂಡು ಮನಿತುಂಬಾ ಘಂ ಅನ್ನೂ ಹೊಗಿ ಹೊಕ್ಸೋರು. 

 ಇಷ್ಟೆಲ್ಲ ಆಗೂದ್ರೊಳಗ ಮಧ್ಯರಾತ್ರಿ ಕಳದುಹೋಗಿರ್ತದ. ಊರ ಸುದ್ದಿಯೆಲ್ಲ ಮಾತಾಡ್ಕೊಂತ, ಓಣಿಯಂಗಳದಿಂದ ಮನಿಗೆ ಹೋಗಿ ಮಲಗಿದ್ರ, ಮರುದಿನ ಸ್ನಾನಕ್ಕ ಸೂಟಿನೆ. ಬಣ್ಣ ಆಡಬೇಕಲ್ಲ. ಕಲ್ಯಾಣ ಕರ್ನಾಟಕದಾಗ ಹೋಳಿ ಹಬ್ಬದ ಸಂಭ್ರಮನೇ ಸಂಭ್ರಮ. ಅವೊತ್ತು ಮುಸ್ಲಿಂ ಬಾಂಧವರು ಬಿಳಿಬಟ್ಟಿ ಹಾಕ್ಕೊಂಡು ಓಡ್ಯಾಡೋರು. ಅವರಿಗೆ ನೋಡಿದ ಕೂಡಲೇ ಬಣ್ಣ ಆಡುವ ಕೈ ಬೆನ್ನಹಿಂದ ಹೋಗೂವು. ಅವರೇ ನಮಗೊಂದು ನಗಿ ಚೆಲ್ಲಿ, ಹೋಳಿ ಮುಬಾರಕ್‌ ಹೇಳಿ ಹೋಗೋರು. 

ಹುಡುಗ್ರೆಲ್ಲ ಮನೀಮನಿಗೆ ಹೋಗಿ ಹೊಯ್ಕೊಂಡ್ರ ಅವರಿಗೆ ‘ಚಂದಾ’ ಅಂತ್ಹೇಳಿ ಶಕ್ತ್ಯಾನುಸಾರ ರೊಕ್ಕ ಕೊಡೂದು. ಅವರು ಅವನ್ನೆಲ್ಲ ಕೂಡಿಟ್ಟು ಮತ್ತೇನರೆ ‘ಮಜ್ಜಾ’ ಮಾಡೋರು. ದ್ರಾಕ್ಷಿ ತೊಳದಿಡೂದು, ಕರಬೂಜು, ಕಲ್ಲಂಗಡಿ ಕೊಯ್ದಿಡೂದು ಈ ಹಣ್ಣಗುಳ ಸಮಾರಾಧನೆ ಎಲ್ಲ ಕಡೆ ಇದ್ದದ್ದೇ. 

ಹೆಣ್ಮಕ್ಕಳು, ಮುಂಜೇನಿಯಿಂದ ಅಡಗಿ ಮನ್ಯಾಗ ಕೊಸಂಬ್ರಿ, ಉಳರ್ಳಾಗಡ್ಡಿ ಭಜಿ, ಕಟ್ಟಿನ ಸಾರು ಮಾಡಿದ್ರ ಅರ್ಧ ಅಡಗಿ ಮುಗಿದ್ಹಂಗ. ಹೋಳಗಿ ಬರೋರು ಹೋಳಗಿ ಮಾಡ್ತಾರ. ಇಲ್ಲಾಂದ್ರ ಕರಿಗಡಬು ಕರದಿಡ್ತಾರ. ಆಮೇಲೆ ಅವರೂ ಓಣ್ಯಾಗ ಒಂದೀಟು ಬಣ್ಣಾ ಆಡಿ ಹಗುರಾಗ್ತಾರ. 

ಇಲ್ಲಿ ಹುಬ್ಬಳ್ಳಿಯೊಳಗ ಬಣ್ಣದಾಟಕ್ಕ ರಂಗಪಂಚಮಿ ತನ ಕಾಯ್ಬೇಕ್ರಿ. ಏನರೆ ಯಾಕ ಇರಲಿ, ಯಾವತ್ತರೇ ಆಚರಿಸಲಿ.. ಈ ‘ಡಡ್ಡಣಕ್ಕ ಣಕ್ಕ ಣಕ್ಕ’ ಸದ್ದು ಮನಸೊಳಗಿನ ಕಾಮನೆಗಳನ್ನೆಲ್ಲ ಬಡಿದೆಬ್ಬಸ್ತದ. ಕಾಮಣ್ಣಗ ಸುಡೂಮುಂದ
ಎಲ್ಲ ಆಸೆ, ದುರಾಸೆಗಳನ್ನೂ ಸುಡೂಹಂಗ
ಮಾಡ್ತದ. ವಾಂಛೆಯ ಕೆನ್ನಾಲಗೆಯೊಳಗ ಬಯಕೆಗಳನ್ನೆಲ್ಲ ಸುಟ್ಟಾಗ ಅಲ್ಲೊಂದು ಅಗ್ನಿದಿವ್ಯ ಮೂಡ್ತದ. ಜಗತ್ತಿನ ಸರ್ವ ರಂಗುಗಳೂ ಆ
ಬದುಕಿಗಿರಲಿ ಅನ್ನೂಹಂಗ ಹೋಳಿ ಹಬ್ಬ ಮುಗದೇ ಹೋಗ್ತದ.

ಸುರಕ್ಷೆಯ ಹೋಳಿ

l ಇದು ಬಣ್ಣದ ಹಬ್ಬ. ನೀರಿನೋಕುಳಿ ಬಳಸುವಾಗ ಶುದ್ಧನೀರನ್ನೆ ಬಳಸಿ

l ಸಾವಯವ ಬಣ್ಣಗಳನ್ನು ಬಳಸಿ

l ರಾಸಾಯನಿಕ ಬಣ್ಣಗಳ ಬಳಕೆ, ತೈಲವರ್ಣಗಳ ಬಳಕೆ ಬೇಡ

l ಬಣ್ಣ ಹೋಗಿಸಲು ಕೊಬ್ಬರಿ ಎಣ್ಣೆ ಬಳಸಿದರೆ ಸಾಕು

l ಸೀಮೆ ಎಣ್ಣೆ ಬಳಸುವ ಅಗತ್ಯವಿಲ್ಲ

l ಮನೆಯಿಂದಾಚೆ ಬಣ್ಣವಾಡಲು ಹೋಗುವ ಮುನ್ನ ಸನ್‌ಸ್ಕ್ರೀನ್‌ ಲೊಷನ್‌ ಲೇಪಿಸಿಕೊಂಡು ಹೋಗಿರಿ. 

l ಇದರ ಬದಲು ಕೊಬ್ಬರಿ ಎಣ್ಣೆ ಲೇಪಿಸಿಕೊಂಡೂ ಬಣ್ಣವಾಡಬಹುದು

l ಯಾವುದೇ ಕಾರಣಕ್ಕೂ ನೀರುಗುಳ್ಳೆಗಳನ್ನು ಒಡೆಯುವುದು, ಮೊಟ್ಟೆ ಒಡೆಯುವುದು ಮಾಡಬೇಡಿ

l ಯಾರಿಗೂ ಒತ್ತಾಯದಿಂದ ಬಣ್ಣ ಹಚ್ಚಿಲು ಯತ್ನಿಸದಿರಿ; ಪ್ರತಿರೋಧ ಒಡ್ಡಿದಾಗ ಕಣ್ಣಿಗೆ ಬಣ್ಣ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

l ಕಣ್ಣೊಳಗೆ ಬಣ್ಣ ಸೇರಿದರೆ, ಕೂಡಲೇ ತಣ್ಣೀರಿನಿಂದ ಕಣ್ತೊಳೆದುಕೊಳ್ಳಿ. ತುರಿಕೆ, ಉರಿ ಇದ್ದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು