ಮಂಗಳವಾರ, ಏಪ್ರಿಲ್ 7, 2020
19 °C

ಚಂದಕವಾಡಿ: ವಿಜೃಂಭಣೆಯ ಲಕ್ಷ್ಮೀದೇವಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾಮದ ಲಕ್ಷ್ಮೀದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. 

ಬುಧವಾರ ಕೊಂಡೋತ್ಸವದ ಮೂಲಕ ಜಾತ್ರೆ ಆರಂಭವಾಗಿತ್ತು. ಜಾತ್ರೆಯ ಅಂಗವಾಗಿ ಗುರುವಾರ ಮಡೆ ಉತ್ಸವ ಹಾಗೂ ದನಗಳ ಪರಿಷೆ ನಡೆದಿತ್ತು. ಶುಕ್ರವಾರ ಸಂಜೆ ರಥೋತ್ಸವದ ಮೂಲಕ ಮೂರು ದಿನಗಳ ಜಾತ್ರೆ ಮುಕ್ತಾಯಗೊಂಡಿತು. 

ಕೊನೆಯ ದಿನವಾದ ಶುಕ್ರವಾರ ಮುಂಜಾನೆಯಿಂದಲೇ, ಚಂದಕವಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳಾ ಭಕ್ತರು ದೇವಸ್ಥಾನದ ಆವರಣದಲ್ಲಿ ಬೆಲ್ಲದ ಅನ್ನ ತಯಾರಿಸಿ ದೇವಿಗೆ ಸಮರ್ಪಿಸಿ ಹರಕೆ ತೀರಿಸಿದರು.

ರಥೋತ್ಸವ: ಸಂಜೆ 5.40ರ ಹೊತ್ತಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡ ತೇರಿನೊಳಗೆ ದೇವಿಯ ಮೂರ್ತಿಯನ್ನಿಟ್ಟು, ಭಕ್ತರು ತೇರನ್ನು 100 ಮೀಟರ್‌ ಸುತ್ತಾಡಿಸಿದ ಬಳಿಕ ದೇವಾಲಯ ಆವರಣದ ಸ್ವಸ್ಥಾನಕ್ಕೆ ತಲುಪಿಸಿದರು. ಇದಕ್ಕೂ ಮೊದಲು ಲಕ್ಷ್ಮೀದೇವಿಯ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಛತ್ರಿ, ಚಾಮರಗಳು ರಥೋತ್ಸವಕ್ಕೆ ಮತ್ತಷ್ಟು ಮೆರುಗು ತಂದವು. 

ಹಣ್ಣು–ಧವನ ಎಸೆದ ನವಜೋಡಿಗಳು: ನವ ವಧು ವರರು ರಥಕ್ಕೆ ಹಣ್ಣು– ಧವನ ಎಸೆದು ಸಂತೃಪ್ತರಾದರು. ಹರಕೆ ಹೊತ್ತವರು ನಗ– ನಾಣ್ಯ ಎಸೆದರು. ಕೊಂಡಕ್ಕೆ ಉಪ್ಪು ಚೆಲ್ಲಿ ವಿಭೂತಿ ಹಾಕಿಕೊಂಡು ಹರಕೆ ತೀರಿಸಿದರು.

ಚಿಣ್ಣರ ಸಂಭ್ರಮ: ಗ್ರಾಮ ದೇವತೆಯ ಉತ್ಸವದಲ್ಲಿ ಜಾತ್ರಾ ಮೈದಾನದ ತುಂಬಾ ವ್ಯಾಪಾರ, ವಹಿವಾಟು ಜೋರಾಗಿತ್ತು. ಆಟೋಟಗಳು ಚಿಣ್ಣರನ್ನು ಕೈಬೀಸಿ ಕರೆಯುತ್ತಿತ್ತು. ಗ್ರಾಮದ ಜನರು, ಮಕ್ಕಳು ಜಾತ್ರೆಯ ಸವಿ ಸವಿದು ಸಂಭ್ರಮ ಪಟ್ಟರು.

ಲಕ್ಷ್ಮೀದೇವಿವು ಚಂದಕವಾಡಿ, ಕೋಡಿಮೋಳೆ, ಅಂಚಿತಾಳಪುರ ಈ ಮೂರು ಗ್ರಾಮಗಳ ಜನತೆಗೆ ಆರಾಧ್ಯ ದೇವತೆ. ಅಲ್ಲದೆ ಸುತ್ತಮುತ್ತಲ ಬಸಪ್ಪನಪಾಳ್ಯ, ಹೆಬ್ಬಸೂರು, ನಾಗವಳ್ಳಿ ಸೇರಿದಂತೆ 16ಕ್ಕೂ ಹೆಚ್ಚು ಗ್ರಾಮಗಳು ಒಗ್ಗೂಡುವ ಜಾತ್ರೆ ಇದಾಗಿದೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)