ಗುರುವಾರ , ಆಗಸ್ಟ್ 13, 2020
28 °C
ವೇದವ್ಯಾಸ ಪೂಜೆಯೊಂದಿಗೆ ಸ್ವರ್ಣವಲ್ಲಿ ಮಠದಲ್ಲಿ ಆರಂಭ ನಾಳೆಯಿಂದ ಆರಂಭ

ಚಾತುರ್ಮಾಸ್ಯ | ‘ಹಸಿರು ಮಂತ್ರಾಕ್ಷತೆ‘ಯ ವ್ರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ 30ನೇ ಚಾತುರ್ಮಾಸ್ಯ ವ್ರತಸಂಕಲ್ಪವು ಜುಲೈ 5ರಂದು ವೇದವ್ಯಾಸಪೂಜೆಯೊಂದಿಗೆ ಸ್ವರ್ಣವಲ್ಲಿ ಮಠದಲ್ಲಿ ಆರಂಭಗೊಳ್ಳಲಿದೆ. ಸ್ವರ್ಣವಲ್ಲಿ ಶ್ರೀಗಳು ಈವರೆಗಿನ ಎಲ್ಲ ಚಾತುರ್ಮಾಸ್ಯವ್ರತಗಳನ್ನು ಮಠದಲ್ಲೇ ಆಚರಿಸಿರುವುದು ವಿಶೇಷ.

‘ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿವರ್ಷ ಬೇರೆ ಬೇರೆ ಸೀಮೆಯ ಶಿಷ್ಯರಿಂದ ಪ್ರತಿದಿನ ಶ್ರೀಗಳ ಪಾದಪೂಜೆ, ಪುರುಷರು ರುದ್ರಾನುಷ್ಠಾನ, ಗಾಯತ್ರಿ ಅನುಷ್ಠಾನ, ಮಾತೆಯರು ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮಾಡುತ್ತಿದ್ದರು. ಮಧ್ಯಾಹ್ನದ ಅವಧಿಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಶಿಷ್ಯರಿಗೆ ಹಸಿರು ಮಂತ್ರಾಕ್ಷತೆ (ಪ್ರತಿಯೊಬ್ಬರಿಗೂ ಒಂದು ಸಸಿ) ನೀಡುತ್ತಿದ್ದರು. ಈ ಬಾರಿ ‌ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವ ಕಾರಣಕ್ಕೆ, ಸಂಕ್ಷಿಪ್ತವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಪರಂಪರೆಗೆ ಚ್ಯುತಿ ಬಾರದಂತೆ, ಒಂದು ಸೀಮೆಯಿಂದ 8–10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ, ಮಠದ ಆಡಳಿತ ಮಂಡಳಿ ಪ್ರಮುಖ ಆರ್.ಎಸ್. ಹೆಗಡೆ ಭೈರುಂಬೆ.

‘ಚಾತುರ್ಮಾಸ್ಯದ ಮೂಲ ತತ್ವ ಅಹಿಂಸೆ ಮತ್ತು ತಪಸ್ಸು. ಯತಿಗಳಿಗೆ ಚಾತುರ್ಮಾಸ್ಯದ ದಿನಗಳೆಂದರೆ ವಿಶೇಷ ತಪೋನಿಷ್ಠಾನದ ದಿನಗಳು. ಇತ್ತೀಚಿನ ದಶಕಗಳಲ್ಲಿ ಇದರ ಜೊತೆ ಸಾಮಾಜಿಕ ಕಾರ್ಯಕ್ರಮಗಳೂ ಸೇರಿಕೊಂಡಿವೆ. ನಾಲ್ಕು ಪಕ್ಷಗಳು, ಅಂದರೆ ಸುಮಾರು 60 ದಿನಗಳ ಕಾಲ ಉತ್ಸವದ ವಾತಾವರಣ. ಈ ಬಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಕಡಿತಗೊಳಿಸಿ, ಜನಸಂದಣಿಯಿಲ್ಲದೇ ಆಚರಿಸಲಾಗುತ್ತದೆ. ಈ ವೈರಸ್ ದುಷ್ಪರಿಣಾಮ ತಡೆಗಟ್ಟಲು ಎಲ್ಲರೂ ಪೂಜೆ-ಪ್ರಾರ್ಥನೆ ಮಾಡಬೇಕು. ಆ ಅರ್ಥದಲ್ಲಿ ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಚಾತುರ್ಮಾಸ್ಯ ಮಾಡಬೇಕು’ ಎಂದು ಸ್ವರ್ಣವಲ್ಲಿ ಶ್ರೀಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಶ್ರೀಗಳ ಚಾತುರ್ಮಾಸ್ಯವ್ರತವು ಸೆಪ್ಟೆಂಬರ್ 2ರಂದು ಮುಕ್ತಾಯಗೊಳ್ಳುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.