ಬುಧವಾರ, ಆಗಸ್ಟ್ 4, 2021
26 °C

ಮಂತ್ರಾಲಯದಲ್ಲಿ ಚಾತುರ್ಮಾಸ್ಯ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾತುರ್ಮಾಸ್ಯ ಎನ್ನುವುದು ನಾಲ್ಕು ತಿಂಗಳ ಅವಧಿ. ಆಷಾಢ ಶುಕ್ಲಪಕ್ಷ ಏಕಾದಶಿಯಿಂದ ಹಿಡಿದು ಕಾರ್ತಿಕ ಶುಕ್ಲಪಕ್ಷ ದ್ವಾದಶಿವರೆಗೂ ಇರುವಂಥದ್ದು. ಈ ನಾಲ್ಕು ತಿಂಗಳ ಅವಧಿಯಲ್ಲಿ ಚಾತುರ್ಮಾಸ್ಯವ್ರತ ಆಚರಣೆ ಮಾಡುವುದು ರೂಢಿಯಲ್ಲಿದೆ.

ಆಷಾಢ ಶುದ್ಧ ಏಕಾದಶಿ ದಿನದಂದು ದೇವರು ಯೋಗನಿದ್ರೆಗೆ ಹೋಗುತ್ತಾನೆ ಎನ್ನುವ ಪ್ರತೀತಿ ಇದೆ. ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ಆದರೂ ಕೆಲವು ಅಪವಾದ ಎನ್ನುವಂತೆ ಶ್ರಾವಣದಲ್ಲಿ ಕಾರ್ಯಕ್ರಮ ಮಾಡುವ ಕ್ರಮ ಇದೆ.

ಮೊದಲಿನ ಕಾಲದಲ್ಲಿ ಸನ್ಯಾಸಿಗಳು ಲೋಕಸಂಚಾರಕ್ಕಾಗಿ ನಡೆದು ಹೋಗುವುದು, ಪಲ್ಲಕ್ಕಿಯಲ್ಲಿ ಹೋಗುವ ಪದ್ಧತಿ ಇತ್ತು. ಚಾತುರ್ಮಾಸ್ಯದಲ್ಲಿ ಸನ್ಯಾಸಿಗಳು ಎಲ್ಲಿಯೂ ಸಂಚರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಕಾರಣ, ಚಾತುರ್ಮಾಸ್ಯ ಮಳೆಗಾಲ ಆಗಿರುವುದರಿಂದ ಹುಳಹುಪ್ಪಡಿ ದಾರಿಯಲ್ಲಿ ಓಡಾಡಿಕೊಂಡಿರುತ್ತವೆ. ಜೀವಿಗೆಳಿಗೆ ಹಾನಿ ಆಗಬಾರದು ಎನ್ನುವ ನಂಬಿಕೆ ಇದೆ.

ಕಾಲಾಂತರದಲ್ಲಿ ಶಾಸ್ತ್ರದಲ್ಲಿ ‘ಪಕ್ಷೋ ವೈ ಮಾಸಃ’ ಅಂದರೆ, ಪಕ್ಷವನ್ನು ಮಾಸ ಎಂದು ಪರಿಗಣಿಸಲಾಗಿದೆ. ಹಾಗಾಗಿ ನಾಲ್ಕು ತಿಂಗಳುಗಳನ್ನು ನಾಲ್ಕು ಪಕ್ಷ ಎಂದು ತೆಗೆದುಕೊಂಡರೆ, ಅದು ಎರಡು ತಿಂಗಳುಗಳಾಗುತ್ತದೆ. ಆಷಾಢ ಬಹುಳ ತ್ರಯೋದಶಿ (ಜುಲೈ 18)ಯಿಂದ ಬಾದ್ರಪದ ಹುಣ್ಣಿಮೆವರೆಗೂ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಮಠಾಧೀಶರು ಒಂದೆ ಕಡೆಯಲ್ಲಿ 50 ದಿನಗಳ ಕಾಲ ಇರುತ್ತಾರೆ.

ಗುರುಪರಂಪರೆಯಲ್ಲಿ ಮಠದ ಎಲ್ಲ ಆಚಾರ್ಯರು ಇದೇ ರೀತಿ ಚಾತುರ್ಮಾಸ್ಯ ವ್ರತಾಚರಣೆ ಮಾಡುತ್ತಾ ಬಂದಿದ್ದಾರೆ. ಒಂದೇ ಕಡೆಯಲ್ಲಿದ್ದು ಪಾಠ, ಪ್ರವಚನ ಮಾಡುವ ಕ್ರಮಗಳು ಬೆಳೆದು ಬಂದಿವೆ. ಆದರೆ, ಬೇರೆ ಬೇರೆ ಮಠಗಳಲ್ಲಿ ನಿರ್ದಿಷ್ಟವಾದ ಪದ್ಧತಿಗಳಿಲ್ಲ. ಆದರೆ, ಮಂತ್ರಾಲಯಮಠದಲ್ಲಿ ಮಾತ್ರ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನ ಇರುವುದರಿಂದ ಇಲ್ಲಿಯೇ ಚಾತುರ್ಮಾಸ ಕುಳಿತುಕೊಳ್ಳುವ ಪರಂಪರೆ ಮುಂದುವರಿದಿದೆ.

ಕೋವಿಡ್‌ನಿಂದಾಗಿ ಬದಲಾವಣೆ

’ಈ ವರ್ಷ ಕೊರೊನಾ ಮಹಾಮಾರಿ ಇರುವುದರಿಂದ ಮಠದಲ್ಲಿ ಇನ್ನೂ ಸಾರ್ವಜನಿಕರಿಗೆ ದರ್ಶನಾವಕಾಶ ಮಾಡಿಲ್ಲ. ವೈದ್ಯರ ಸಲಹೆಯಂತೆ ಸದ್ಯಕ್ಕೆ ದರ್ಶನ ಸ್ಥಗಿತವಿದೆ. ಒಂದು ವೇಳೆ, ಚಾತುರ್ಮಾಸ್ಯದ ಅವಧಿಯಲ್ಲಿ ಅವಕಾಶ ನೀಡಿದರೂ, ಮಠದ ಶಿಷ್ಯರು ಮೊದಲೇ ಫೋನ್‌ ಮಾಡಿಕೊಂಡು, ದಿನ ನಿಗದಿಪಡಿಸಿಕೊಂಡು ಬರಬೇಕು. 65 ವರ್ಷ ಮೇಲ್ಪಟ್ಟವರು 10 ವರ್ಷ ಕೆಳಗಿನವರು, ಗರ್ಭಿಣಿಯರು, ಬಾಣಂತಿಯರು, ರೆಡ್‌ಜೋನ್‌ ವ್ಯಕ್ತಿಗಳು ಮಠಕ್ಕೆ ಬರುವಂತಿಲ್ಲ. ಮಠಕ್ಕೆ ಬರುವವರೆಲ್ಲರೂ ಮಾಸ್ಕ್‌ ಧರಿಸಲೇ ಬೇಕು. ಈ ಬಗ್ಗೆ ನಿಯಮಗಳನ್ನು ಮಾಡಿದ್ದು, ಅವೆಲ್ಲವನ್ನು ಅನುಸರಿಸಲೇಬೇಕಾಗುತ್ತದೆ.‘

– ವಾದಿರಾಜಾಚಾರ್‌, ಮಂತ್ರಾಲಯ ಸಂಸ್ಕೃತಿ ವಿದ್ಯಾಪೀಠದ ಆಚಾರ್ಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು