ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಲಿಪಾಡ್ಯಮಿ | ಬಲೀಂದ್ರನ ಸ್ವಾಗತಿಸುವ ಹಬ್ಬ

Last Updated 25 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಭಾರತದ ಉದ್ದಗಲದಲ್ಲೂ ಆಚರಿಸಲಾಗುವ ದೀಪಾವಳಿ ಹಬ್ಬವು ನಮ್ಮ ದೇಶದ ಪ್ರಮುಖವಾದ ಹಬ್ಬಗಳಲ್ಲೊಂದು. ನವರಾತ್ರಪರ್ವವನ್ನು ಬಿಟ್ಟರೆ ನಾಲ್ಕೈದು ದಿನಗಳ ಆಚರಣೆಯಿರುವ ದೀರ್ಘವಾದ ಹಬ್ಬವೆಂದರೆ ದೀಪಾವಳಿಯೇ.

ದೀಪಾವಳಿಯನ್ನು ಕುರಿತಂತೆ
ಭವಿಷ್ಯೋತ್ತರಪುರಾಣದಲ್ಲಿ-
ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಮ್‌ |
ರಾಮಾಯಣಮಿವ ಸುಭಗಂ ದೀಪದಿನಂ ಹರತು ವೋ ದುರಿತಮ್‌ ||

ಎಂಬ ಪ್ರಶಸ್ತಿ ಶ್ಲೋಕವಿದೆ. ಇದರಲ್ಲಿ ದೀಪಾವಳಿಯನ್ನು ರಾಮಾಯಣಕ್ಕೆ ಹೋಲಿಸಿದೆ. ಮಳೆಯಿಲ್ಲದ ಕಾಲದಲ್ಲಿ ಆಚರಿಸುವ ದೀಪಾವಳಿಯು ದುಷ್ಟಸಂಹಾರವನ್ನು ಮಾಡಿ, ಎಲ್ಲರನ್ನೂ ಮುದಗೊಳಿಸಿದ ರಾಮಾಯಣದಂತೆ ಪಾಪಹರವೂ, ರಮಣೀಯವೂ ಆಗಿದೆ ಎಂದಿದೆ.

ಆಶ್ವಯುಜ ಬಹುಳ ತ್ರಯೋದಶಿಯ ನೀರುತುಂಬುವ ಹಬ್ಬದಿಂದ ಆರಂಭಿಸಿ ಕಾರ್ತಿಕ ಶುದ್ಧ ದ್ವಿತೀಯಾ ತಿಥಿಯ ಸೋದರಬಿದಿಗೆಯವರೆಗಿನ ಐದೂ ದಿನಗಳೂ ದೀಪಾವಳಿಯ ಹಬ್ಬದ ಅಂಗಭೂತವಾದ ಆಚರಣೆಗಳೇ ಆಗಿವೆ. ಇವುಗಳಲ್ಲಿ ನರಕಚತುರ್ದಶಿ ಮತ್ತು ಬಲಿಪಾಡ್ಯಮಿಗಳನ್ನು ಹೆಚ್ಚಾಗಿ ಆಚರಿಸುವ ಪದ್ಧತಿ ಕರ್ನಾಟಕದಲ್ಲಿದೆ.

ಈ ಹಬ್ಬದ ಐದೂ ದಿನಗಳ ಆಚರಣೆಗಳಿಗೆ ಅವುಗಳದೇ ಆದ ವೈಶಿಷ್ಟ್ಯಗಳು, ಪೌರಾಣಿಕ ಹಿನ್ನೆಲೆಗಳು ಸೇರಿಕೊಂಡಿವೆ. ಜೊತೆಗೆ ಹಬ್ಬದ ಆಚರಣೆಯ ಹಿಂದಿರುವ ತಾತ್ತ್ವಿಕ ಮೌಲ್ಯಗಳನ್ನು ಬಿಂಬಿಸುವ ದಿವ್ಯರೂಪಕಗಳೂ ಸೇರಿಕೊಂಡಿವೆ. ಈ ಹಬ್ಬದ ಆಚರಣೆಯ ವಿವರಗಳನ್ನು ಭವಿಷ್ಯೋತ್ತರ, ಪದ್ಮ, ಸ್ಕಾಂದವೇ ಮೊದಲಾದ ಪುರಾಣಗಳಲ್ಲಿಯೂ, ಪೂಜಾಕಲ್ಪಗಳಲ್ಲಿಯೂ ಕಾಣಬಹುದಾಗಿದೆ.

ಕಾರ್ತಿಕಶುದ್ಧ ಪ್ರಥಮಾ ತಿಥಿಯಂದು ಬಲಿಪಾಡ್ಯಮಿಯ ಆಚರಣೆ. ‘ಉಂಡದ್ದೇ ಉ(ಯು)ಗಾದಿ, ಮಿಂದದ್ದೇ ದೀವಳಿಗೆ’ ಎನ್ನುವಂತೆ ಇದರ ಆಚರಣೆಯೂ ಅಭ್ಯಂಗಸ್ನಾನದಿಂದಲೇ ಆರಂಭವಾಗುತ್ತದೆ. ‘ತೈಲೇ ಲಕ್ಷ್ಮೀ ಜಲೇ ಗಂಗಾ‘ ಎಂದು ಹೇಳಿ ಪದ್ಮಪುರಾಣವು ಅಭ್ಯಂಗಸ್ನಾನಕ್ಕೆ ಒತ್ತುಕೊಟ್ಟಿದೆ. ಸಾಯಂಕಾಲದಲ್ಲಿ ನಡೆಸುವ ಬಲೀಂದ್ರನ ಪೂಜೆ ಈ ದಿನದ ಮುಖ್ಯ ಕಲಾಪ.

ಎರಡು ಕೈಗಳಿಂದ ಶೋಭಿಸುವ ಬಲೀಂದ್ರನ ಚಿತ್ರವನ್ನು ಐದು ಬಣ್ಣದ ರಂಗೋಲಿಪುಡಿಗಳಿಂದ ಬರೆದು ಪೂಜಿಸುವ ಪದ್ಧತಿ ಕೆಲವೆಡೆ ಕಂಡುಬಂದರೆ, ಕೆಲವೆಡೆ ಕಿರೀಟ-ಕುಂಡಲಗಳಿಂದ ಅಲಂಕರಿಸಿದ ಬಲೀಂದ್ರನ ವಿಗ್ರಹವನ್ನು ಇಟ್ಟು, ಬಾಣ, ಮುರ ಮೊದಲಾದ ಅಸುರರನ್ನು ಜೊತೆಯಲ್ಲಿಟ್ಟು ಪೂಜಿಸುತ್ತಾರೆ.ಮೈಸೂರುಸೀಮೆಯ ಸುತ್ತಮುತ್ತ ಕಳಶದಲ್ಲಿ ಬಲೀಂದ್ರನನ್ನು ಸ್ಥಾಪಿಸಿ, ದಾಳಿಂಬೆಯ ಹೂವು, ಮೊಗ್ಗು, ಹೀಚು ಮತ್ತು ಹಣ್ಣುಗಳಿರುವ ರೆಂಬೆಯೊಂದನ್ನು ಜೊತೆಯಲ್ಲಿಟ್ಟು ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುವ ಪದ್ಧತಿಯಿದೆ. ಸುವರ್ಣಪುಷ್ಪಗಳಿಂದ ಪೂಜಿಸುವುದಕ್ಕೆ ಪರ್ಯಾಯವಾಗಿ ಹೊನ್ನಾವರಿಕೆಯ ಹೂವುಗಳನ್ನು ‘ಹೊನ್ನು ಹೊನ್ನು’ ಎಂದು ಹೇಳುತ್ತಾ ಅಂಗಳದ ತುಂಬೆಲ್ಲಾ ಎರಚಿ ಬಲೀಂದ್ರನನ್ನು ಸ್ವಾಗತಿಸುತ್ತಾರೆ.

ಬಲಿಪಾಡ್ಯಮಿಯ ಬೆಳಿಗ್ಗೆ ಆಗಷ್ಟೇ ಹಾಕಿದ ಹಸುವಿನ ಸಗಣಿಯಿಂದ ಬಲೀಂದ್ರನ ಕೋಟೆ ನಿರ್ಮಿಸಿ, ಅದರ ಮಧ್ಯದದಲ್ಲಿ ಸಗಣಿಯ ಗೋಪುರಾಕಾರದ ಬಲೀಂದ್ರನನ್ನು ಸ್ಥಾಪಿಸಿ ಪೂಜಿಸುವುದೂ ಕಂಡುಬರುತ್ತದೆ.

ಬಲೀಂದ್ರನಿಗೆ ಅರ್ಘ್ಯ ಕೊಡುವಾಗ –
ಬಲಿರಾಜ ನಮಸ್ತುಭ್ಯಂ ವಿರೋಚನ ಸುತ
ಪ್ರಭೋ |
ಭವಿಷ್ಯೇಂದ್ರ ಸುರಾರಾತೇ ವಿಷ್ಣು ಸಾನ್ನಿಧ್ಯೋ ಭವ ||

ಎಂದು ಹೇಳಿ, ಅಸುರನಾದರೂ, ವಿಷ್ಣುವಿಗೆ ಪ್ರಿಯನಾಗಿ ಭಾಗವತರ ಸಾಲಿಗೆ ಸೇರಿದ ಬಲಿಯನ್ನು ನೆನಪಿಸಿಕೊಳ್ಳಲಾಗುತ್ತದೆ.

ಭವಿಷ್ಯೋತ್ತರ ಪುರಾಣವು ಬಲಿಪಾಡ್ಯಮಿಯಂದು ರಾತ್ರಿಯೆಲ್ಲಾ ಎಚ್ಚರವಿದ್ದು ವೀರಕ್ಷತ್ರಿಯರ ಕಥೆಗಳಿಂದ ಕೂಡಿದ ನಾಟಕಗಳನ್ನು ಆಡಬೇಕು ಎಂದಿದೆ. ಹಾಗಾಗಿಯೇ ಬಲಿಪಾಡ್ಯಮಿಯನ್ನು ‘ವೀರಪ್ರತಿಪದಾ’ ಎಂದೂ ಕರೆಯುತ್ತಾರೆ.

ಮಲೆನಾಡಿನ ಊರುಗಳಲ್ಲಿ ರಾಸುಗಳಿಗೆ ಅಲಂಕಾರಮಾಡಿ ಪೂಜಿಸುವ ಪದ್ಧತಿ ಇದೆ. ‘ಅನ್ನಕೂಟ’ವೆಂದು ಕರೆಯಲಾಗುವ ಗೋವರ್ಧನಪೂಜೆಯೂ ಬಲಿಪಾಡ್ಯಮಿಯಂದು ಹಲವೆಡೆ ನಡೆಯುತ್ತದೆ. ನಮ್ಮ ಹಬ್ಬಗಳು ಕೃಷಿ-ಪಶುಪಾಲನೆಯ ಜೊತೆ ಬೆಸೆದುಕೊಂಡಿರುವುದಕ್ಕೆ ಇದು ಒಂದು ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT