ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಹಬ್ಬದ ಕತೆಗಳು

Last Updated 15 ನವೆಂಬರ್ 2020, 21:03 IST
ಅಕ್ಷರ ಗಾತ್ರ

ಕೆಲವು ಹಬ್ಬಗಳು ದೇಶದಾದ್ಯಂತ ಸರಿಸುಮಾರು ಏಕಕಾಲದಲ್ಲಿ ಆಚರಣೆಯಾಗುತ್ತವೆ. ಆದರೆ ಆಚರಣೆಯ ವಿಧಾನ, ಅವುಗಳ ಹಿಂದಿನ ಉದ್ದೇಶ, ಪೌರಾಣಿಕ ಹಿನ್ನೆಲೆಗಳು ವಿಭಿನ್ನವಾಗಿರುತ್ತವೆ. ದೀಪಾವಳಿಯೂ ಅಂಥ ಹಬ್ಬಗಳಲ್ಲಿ ಒಂದು.

ಕತ್ತಲೆಯ ವಿರುದ್ಧ ಬೆಳಕಿನ ವಿಜಯ, ಅಸತ್ಯದ ವಿರುದ್ಧ ಸತ್ಯದ ಗೆಲುವು, ಕೇಡಿನ ವಿರುದ್ಧ ಒಳಿತಿನ ಪಾರಮ್ಯ... ಎಂದೆಲ್ಲ ಹಲವು ರೀತಿ ಈ ಹಬ್ಬದ ಔಚಿತ್ಯವನ್ನು ವಿಶ್ಲೇಷಿಸಬಹುದು. ಆದರೆ, ದೀಪಾವಳಿ ಆಚರಣೆ ಕುರಿತ ಕತೆಗಳೆಲ್ಲವೂ ಒಂದಲ್ಲ ಒಂದು ಪೌರಾಣಿಕ ಕತೆಯೊಂದಿಗೆ ತಳುಕು ಹಾಕಿಕೊಂಡಿವೆ ಎಂಬುದು ಸತ್ಯ.

ರಾಮ ಮರಳಿ ಬಂದ ದಿನ: ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷಗಳ ವನವಾಸಕ್ಕೆ ಹೋಗಿದ್ದ ಶ್ರೀರಾಮನು, ಪತ್ನಿ ಸೀತೆಯನ್ನು ಅಪಹರಿಸಿದ್ದ ರಾವಣನನ್ನು ವಧಿಸಿ, ಸೀತೆ ಹಾಗೂ ಲಕ್ಷ್ಮಣರೊಂದಿಗೆ ಮರಳಿ ಅಯೋಧ್ಯೆಯನ್ನು ಪ್ರವೇಶಿಸಿದ ದಿನವನ್ನು ದೀಪಾವಳಿಯ ರೂಪದಲ್ಲಿ ಆಚರಿಸಲಾಗುತ್ತದೆ ಎಂಬುದು ಒಂದು ಕತೆ.

ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ರಾಮ ಮರಳಿ ಬಂದ ದಿನ ಎಂದೇ ದೀಪಾವಳಿಯನ್ನು ಆಚರಿಸಲಾಗುತ್ತದೆ. ಅಯೋಧ್ಯೆಯ ಜನರು ರಾಮ, ಸೀತೆ, ಲಕ್ಷ್ಮಣರನ್ನುನಗರದ ತುಂಬ ದೀಪಗಳನ್ನು ಹಚ್ಚಿಟ್ಟು ಬರಮಾಡಿಕೊಂಡರು ಎಂಬ ಕಾರಣಕ್ಕೆ ದೀಪಾವಳಿಯಂದು ಸಾಲುಸಾಲು ದೀಪಗಳನ್ನು ಹಚ್ಚಲಾಗುತ್ತದೆ. ಹತ್ತು ತಲೆಯ ರಾವಣನ ಬೃಹತ್‌ ಮೂರ್ತಿಯನ್ನು ಸುಡುವ ಮೂಲಕ ಮೂರು ದಿನಗಳ ದೀಪಾವಳಿ ಹಬ್ಬ ಕೊನೆಗೊಳ್ಳುತ್ತದೆ.

ನರಕಾಸುರ ವಧೆ: ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ದೀಪಾವಳಿಯು ಕೃಷ್ಣನ ಕತೆಯೊಂದಿಗೆ ಬೆಸೆದುಕೊಂಡಿದೆ. ಕೃಷ್ಣನು ನರಕಾಸುರನನ್ನು ವಧಿಸಿ, 16 ಸಾವಿರ ಸ್ತ್ರೀಯರನ್ನು ಬಂಧಮುಕ್ತಗೊಳಿಸಿದ ದಿನವನ್ನು ಇಲ್ಲಿ ದೀಪಾವಳಿಯ ರೂಪದಲ್ಲಿ ಆಚರಿಸಲಾಗುತ್ತದೆ.

ಅಶ್ವಯುಜ ಮಾಸ, ಕೃಷ್ಣಪಕ್ಷದ 14ನೇ ದಿನ, ಕೃಷ್ಣನು ನರಕಾಸುರನನ್ನು ಕೊಂದನು ಎಂಬುದು ಪೌರಾಣಿಕ ಕತೆ. ಅದಕ್ಕಾಗಿ ಆ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.

ಇದರ ಜತೆಯಲ್ಲೇ ಬಲಿ– ವಾಮನರ ಕತೆಯೂ ಉಲ್ಲೇಖವಾಗುತ್ತದೆ. ವಾಮನರೂಪಿಯಾಗಿ ಬಂದ ನಾರಾಯಣನು, ತನ್ನ ಕಾಲಿನಿಂದ ತುಳಿದು ಅಸುರ ಚಕ್ರವರ್ತಿ ಬಲಿಯನ್ನು ನರಕಕ್ಕೆ ಕಳುಹಿಸಿದ್ದ. ಅಸುರನಾಗಿದ್ದರೂ ಬಲಿ ಚಕ್ರವರ್ತಿಯು ಧೈರ್ಯಶಾಲಿ ಹಾಗೂ ದಾನಶೂರನಾಗಿದ್ದ. ಚತುರ್ದಶಿಯ ದಿನ ಬಲಿ ಪುನಃ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ, ಪ್ರಜೆಗಳು ದೀಪಹಚ್ಚಿ ಆತನನ್ನು ಬರಮಾಡಿಕೊಳ್ಳುತ್ತಾರೆ ಎಂಬುದು ಒಂದು ಕತೆ. ಬಲಿಪಾಡ್ಯವನ್ನು ಈಗಲೂ ಭಕ್ತಿಯಿಂದ ಆಚರಿಸಲಾಗುತ್ತದೆ. ಕೆಲವು ಭಾಗಗಳಲ್ಲಿ ‘ಬಲಿಯೇಂದ್ರ’ ಸ್ಥಾಪಿಸಿ ಪೂಜಿಸುವ ಸಂಪ್ರದಾಯವೂ ಇದೆ.

ಸಿಖ್ಖರಲ್ಲೂ ದೀಪಾವಳಿ: ಭಾರತದಲ್ಲಿ ಸಿಖ್ಖರು ಮತ್ತು ಜೈನರು ಸಹ ದೀಪಾವಳಿ ಆಚರಿಸುತ್ತಾರೆ. ಚಕ್ರವರ್ತಿ ಜಹಾಂಗೀರನು 1620ರಲ್ಲಿ ಸಿಖ್ಖರ ಆರನೇ ಗುರು ಹರಗೋವಿಂದ್‌ ಸಿಂಗ್‌ ಹಾಗೂ 52 ಮಂದಿ ರಾಜರುಗಳನ್ನು ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿಸಿಟ್ಟಿದ್ದ. ಹರಗೋವಿಂದ ಸಿಂಗ್‌ ಅವರು ಎಲ್ಲರನ್ನೂ ಬಿಡಿಸಿ ತಂದಿದ್ದರು. ಆ ದಿನವನ್ನು ಸಿಖ್ಖರು ‘ಬಂದಿ ಛೋರ್‌ ದಿವಸ್‌’ (ಬಂಧಮುಕ್ತಿ ದಿನ) ರೂಪದಲ್ಲಿ ಆಚರಿಸುತ್ತಾರೆ.

ಜ್ಞಾನೋದಯದ ದಿನ: ಕ್ರಿ.ಪೂ. 527ರಲ್ಲಿ, ಜೈನರ 24ನೇ ತೀರ್ಥಂಕರ ಮಹಾವೀರ ಅವರಿಗೆ ಮೋಕ್ಷ ಪ್ರಾಪ್ತವಾದ ದಿನವನ್ನು ಜೈನರು ದೀಪಾವಳಿಯ ರೀತಿಯಲ್ಲಿ ಆಚರಿಸುತ್ತಾರೆ. ಇದು ‘ಬೆಳಕು ದೇಹವನ್ನು ಬಿಟ್ಟು ಹೋದ ದಿನ’. ಮಹಾವೀರರ ಜ್ಞಾನೋದಯದ ಸಂದರ್ಭವನ್ನು ಗುರುತಿಸಲು ಸ್ವರ್ಗ ಮತ್ತು ಭೂಮಿಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು ಎಂಬುದು ನಂಬಿಕೆ.

ಸಂಪ್ರದಾಯ, ಪುರಾಣ, ಆಚರಣೆಗಳೇನೇ ಇದ್ದರೂ, ಕೆಡುಕಿನ ಮೆಲೆ ಒಳಿತು ಜಯ ಸಾಧಿಸಿರುವುದನ್ನು ಸಂಕೇತಿಸುವ ರೂಪದಲ್ಲಿ ಎಲ್ಲಾ ಕಡೆ ದೀಪಾವಳಿಯನ್ನು ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT