ಮಂಗಳವಾರ, ಜನವರಿ 31, 2023
19 °C

ಪ್ರವಾದಿ ಸ್ಮರಣೆಯ ‘ಈದ್ ಮಿಲಾದ್’

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

Prajavani

ಮುಸ್ಲಿಮರ ನಂಬಿಕೆಯ ಪ್ರಕಾರ ಪ್ರವಾದಿ ಮಹಮ್ಮದ್‌, ಇಸ್ಲಾಂನ ಕೊನೆಯ ಪ್ರವಾದಿಯಾಗಿದ್ದಾರೆ. ಅವರಿಗೂ ಮುನ್ನ ಲಕ್ಷಕ್ಕೂ ಅಧಿಕ ಪ್ರವಾದಿಗಳು ವಿವಿಧ ಕಾಲ, ದೇಶಗಳಲ್ಲಿ ಬಂದಿದ್ದಾರೆ. ಅಂತಿಮ ಪ್ರವಾದಿಯು ಸೌದಿ ಅರೇಬಿಯಾದ ಮಕ್ಕಾದಲ್ಲಿ ಕ್ರಿ.ಶ. 571ರಲ್ಲಿ ಜನಿಸಿದರು. ಎಳವೆಯಲ್ಲೇ ಅನಾಥರಾದ ಅವರ ಪೋಷಣೆಯನ್ನು ತಾತ ಅಬ್ದುಲ್‌ ಮುತ್ತಲಿಬ್‌ ವಹಿಸಿಕೊಂಡರು. ಅವರಿಗೆ 8 ವರ್ಷವಾಗಿದ್ದಾಗ ತಾತ ಕೂಡ ನಿಧನರಾದರು. ಆ ಬಳಿಕ ಚಿಕ್ಕಪ್ಪನ ಪೋಷಣೆಯಲ್ಲಿ ಬೆಳೆದರು. ಚಿಕ್ಕಪ್ಪ ಅಬೂತಾಲಿಬ್‌ ಬಡವರಾಗಿದ್ದ ಕಾರಣ ಪ್ರವಾದಿಗೆ ಸಣ್ಣ ವಯಸ್ಸಿನಲ್ಲೇ ಬಡತನದ ಅರಿವು ಉಂಟಾಯಿತು. ಅವರಿಗೆ ಅಕ್ಷರ ಕಲಿಯುವ ಅವಕಾಶ ಲಭಿಸಲಿಲ್ಲ. ಚಿಕ್ಕಪ್ಪನೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ವ್ಯಾಪಾರದಲ್ಲಿ ತೋರುತ್ತಿದ್ದ ಪ್ರಾಮಾಣಿಕತೆಯಿಂದಾಗಿ ಅವರು ಮಕ್ಕಾದಲ್ಲಿದ್ದ ಎಲ್ಲ ವರ್ಗ, ಪಂಗಡಗಳ ಜನರ ಪ್ರೀತಿಗೆ ಪಾತ್ರರಾದರು.

ಅವರಿಗೆ 40ನೇ ವಯಸ್ಸಿನಲ್ಲಿ ಪ್ರವಾದಿತ್ವ ಲಭಿಸುತ್ತದೆ. ಅಲ್ಲಾಹನು ದೇವದೂತ ‘ಜಿಬ್ರೀಲ’ರ ಮೂಲಕ ದೇವನ ಸಂದೇಶ ನೀಡುವನು. ಆ ಬಳಿಕ ನಿರಂತರ 23 ವರ್ಷ ದೇವನ ಸಂದೇಶ ಲಭಿಸುತ್ತಲೇ ಇರುತ್ತದೆ. ಆ ಸಂದೇಶಗಳು ಪವಿತ್ರ ಗ್ರಂಥ ‘ಕುರ್‌ಆನ್‌’ ರೂಪದಲ್ಲಿ ಇಂದು ಜಗತ್ತಿನ ಮುಂದಿದೆ. ಪ್ರವಾದಿತ್ವ ಲಭಿಸಿದ ಬಳಿಕ ಅವರು ಅರೇಬಿಯಾದಲ್ಲಿ ಇಸ್ಲಾಮಿನ ಜೀವನಪದ್ಧತಿಯನ್ನು ಪಸರಿಸಿದರು.

ಇಸ್ಲಾಂ ಬಗ್ಗೆ ತಿಳಿದುಕೊಳ್ಳಲು ‘ಕುರ್‌ಆನ್‌' ಬಳಿಕ ಇರುವ ಅತ್ಯಂತ ಮಹತ್ವದ ಮೂಲ ಎಂದರೆ ಪ್ರವಾದಿಯವರ ಸಂದೇಶ ಮತ್ತು ಜೀವನಚರಿತ್ರೆಯಾಗಿದೆ. ಪ್ರವಾದಿ ಜೀವನದಲ್ಲಿ ನಡೆದಿರುವ ಎಲ್ಲ ಘಟನೆಗಳನ್ನು ಇತಿಹಾಸಕಾರರು ಬರೆದಿಟ್ಟಿದ್ದಾರೆ. ಅವರ ಜೀವನ ತೆರೆದ ಗ್ರಂಥವಾಗಿದೆ. ಅವರ ನಾಯಕತ್ವ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಶಿಕ್ಷಣ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದರು. ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗಿದ್ದ ಅರೇಬಿಯಾದ ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದರಲ್ಲದೆ, ಆ ಕೆಲಸದಲ್ಲಿ ಯಶಸ್ವಿಯೂ ಆಗಿದ್ದರು. ಮದ್ಯಪಾನ, ಜೂಜು, ಬಡ್ಡಿ, ಲಂಚವನ್ನು ನಿಷೇಧಿಸಿದ್ದರು.

ಎಲ್ಲ ಬಗೆಯ ಕೆಡುಕು ಮತ್ತು ಅನಾಚಾರಗಳಿಂದ ಮುಳುಗಿದ್ದ ಸಮಾಜವನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕಟ್ಟಿದ್ದರು. ವ್ಯಾಪಾರ ವಹಿವಾಟಿನಲ್ಲಿ ಪ್ರಾಮಾಣಿಕತೆ ತಂದಿದ್ದರು. ಪರಸ್ಪರ ಕಿತ್ತಾಡುತ್ತಿದ್ದ ವಿವಿಧ ಪಂಗಡಗಳ ನಡುವೆ ಶಾಂತಿ, ಸೌಹಾರ್ದ ಮೂಡಿಸಿದ್ದರು. ಇಡೀ ಅರೇಬಿಯಾದ ಆಡಳಿತ ತಮ್ಮ ಕೈಗೆ ಬಂದರೂ ಜನರ ಮಧ್ಯೆ, ಸಾಮಾನ್ಯನಂತೆ ಬದುಕಿದ್ದರು. ಧರ್ಮ, ಮೈಬಣ್ಣ, ಪ್ರಾದೇಶಿಕತೆಯ ಆಧಾರದಲ್ಲಿ ಮನುಷ್ಯರ ನಡುವೆ ಮೇಲು–ಕೀಳು ಇಲ್ಲ ಎಂಬುದನ್ನು ಸಾರಿದ್ದರು. ‘ಅರಬನಿಗೆ ಅರಬೇತರನಿಗಿಂತ, ಬಿಳಿಯನಿಗೆ ಕಪ್ಪುವರ್ಣದವನಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ. ನಿಮ್ಮಲ್ಲಿ ಒಳಿತಿನಲ್ಲಿ ಮುಂದಿರುವವರೇ ಉತ್ತಮರು’ ಎಂದು ಸಾರಿದ್ದ ಅವರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ.

ಜಗತ್ತಿನಾದ್ಯಂತ ಇರುವ ಮುಸ್ಲಿಮರು ಪ್ರವಾದಿ ಅವರೊಂದಿಗೆ ತುಂಬಾ ವಿಶಿಷ್ಟವಾದ ಸಂಬಂಧ ಹೊಂದಿದ್ದು, ಆ ಮಹಾನ್‌ ವ್ಯಕ್ತಿಯ ಜೀವನವನ್ನು 14 ಶತಮಾನಗಳಿಂದಲೂ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ.

ಜನ್ಮದಿನ ಆಚರಣೆ: ಪ್ರವಾದಿ ಜನ್ಮದಿನವನ್ನು ‘ಈದ್‌ ಮಿಲಾದ್’ ಅಥವಾ ‘ಮಿಲಾದುನ್ನಬಿ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಸ್ಲಾಮಿಕ್‌ ಕ್ಯಾಲೆಂಡರಿನ ಮೂರನೇ ತಿಂಗಳು ‘ರಬೀವುಲ್‌ ಅವ್ವಲ್‌’ 12ರಂದು ಅವರು ಜನಿಸಿದರು.

ಅವರ ಹುಟ್ಟುಹಬ್ಬದ ಆಚರಣೆ ಬಗ್ಗೆ ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ವಿಜೃಂಭಣೆಯಿಂದ
ಆಚರಿಸುವುದಾದರೆ, ಮತ್ತೆ ಕೆಲವರು ಆಚರಣೆ ವಿರೋಧಿಸುವರು. ವಾದ -ವಿವಾದಗಳು ಇದ್ದರೂ ಪ್ರತಿವರ್ಷ (ಈ ಬಾರಿ ಅ.9 ರಂದು) ಜನ್ಮದಿನದಂದು ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವರ ಜೀವನಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು