ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ತಪಸ್ಸಿಗೆ ಹೊರಟ ಪಾರ್ವತಿ

Last Updated 13 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ನಾರದನ ಮಾರ್ಗದರ್ಶನದಂತೆ ಪರಮೇಶ್ವರನನ್ನು ತಪಸ್ಸಿನಿಂದಲೇ ಒಲಿಸಿಕೊಳ್ಳಲು ಪಾರ್ವತಿ ಸಂಕಲ್ಪಮಾಡಿದಳು. ಸಖಿಯರಾದ ಜಯೆ-ವಿಜಯೆಯರನ್ನು ತಂದೆಯ ಬಳಿಗೆ ಕರೆದೊಯ್ದು, ಅವರ ಮೂಲಕ ‘ಓ ಪರ್ವತರಾಜನೆ, ಶಂಕರನನ್ನು ತಪಸ್ಸಿನಿಂದಲ್ಲದೆ ಇನ್ನಾವ ವಿಧದಿಂದಲೂ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಗಿರಿಜೆಯು ತಪಸ್ಸನ್ನಾಚರಿಸಲು ನಿರ್ಧರಿಸಿದ್ದಾಳೆ. ಇದಕ್ಕೆ ನೀನು ಅನುಮತಿ ಕೊಡಬೇಕು’ ಎಂದು ಕೋರಿಕೆ ಸಲ್ಲಿಸಿದಳು.

ಆಗ ಹಿಮವಂತ ‘ಎಲೈ ಸಖಿಯರೇ, ಪಾರ್ವತಿಯ ನಿರ್ಧಾರ ನನಗೆ ಇಷ್ಟವಾಗಿದೆ. ಆದರೆ ಅವಳ ತಾಯಿಯಾದ ಮೇನಾದೇವಿ ಅನುಮತಿಯನ್ನು ಕೇಳಿರಿ. ಅವಳ ತಾಯಿ ಒಪ್ಪಿದರೆ, ನನ್ನ ಅಭ್ಯಂತರವೇನೂ ಇಲ್ಲ’ ಎಂದ. ಸಖಿಯರು ಮೇನಾದೇವಿಯ ಬಳಿಗೆ ಹೋಗಿ, ‘ಓ ಮಾತೆ, ನಿನ್ನ ಪುತ್ರಿಯು ಶಿವನನ್ನ ಉದ್ದೇಶಿಸಿ ಮಹಾತಪವನ್ನ ಆಚರಿಸಬೇಕೆಂದಿರುವಳು. ಇದಕ್ಕೆ ತಂದೆ ಅನುಮತಿ ನೀಡಿದ್ದಾರೆ. ಈಗ ನಿನ್ನ ಅನುಮತಿಯನ್ನು ಕೇಳುತ್ತಲಿರುವಳು. ಈಗ ನಿನ್ನ ಅಪ್ಪಣೆ ಲಭಿಸಿದರೆ ಅವಳು ತಪವನ್ನಾಚರಿಸುವಳು’ ಎಂದರು.

ಸಖಿಯರ ಮಾತನ್ನು ಮೇನಾದೇವಿ ಅಂಗೀಕರಿಸಲಿಲ್ಲ. ಆಗ ಪಾರ್ವತಿ ತಾಯಿಗೆ ಕೈ ಮುಗಿದು, ‘ಓ ಮಾತೆ! ಈಶ್ವರನನ್ನು ಪಡೆಯುವುದಕ್ಕಾಗಿ ತಪವನ್ನ ಆಚರಿಸಲು ನಾಳೆ ಬೆಳಗ್ಗೆ ಹೊರಡಬೇಕೆಂದಿರುವೆ. ತಪೋವನಕ್ಕೆ ಹೋಗಲು ನನಗೆ ಅನುಮತಿಯನ್ನು ದಯಪಾಲಿಸು’ ಎಂದು ಪ್ರಾರ್ಥಿಸಿದಳು.

ಪಾರ್ವತಿಯ ಮಾತನ್ನು ಕೇಳಿ ಮೇನಾದೇವಿಯು ತುಂಬಾ ದುಃಖಗೊಂಡಳು. ಅವಳು ‘ಪಾರ್ವತಿ, ನೀನು ತಪಸ್ಸು ಮಾಡಲೇಬೇಕೆಂದಿದ್ದರೆ ಮನೆಯಲ್ಲಿಯೇ ಮಾಡು. ನಮ್ಮ ಮನೆಯಲ್ಲಿಯೇ ಎಲ್ಲಾ ದೇವತೆಗಳೂ ಇರುವರು. ಎಲ್ಲಾ ತೀರ್ಥಗಳು ಮತ್ತು ಕ್ಷೇತ್ರಗಳೂ ಇರುವುವು. ನೀನು ಈ ಹಿಂದೆ ಹೊರಗೆ ಹೋಗಿ ಏನು ಸಾಧಿಸಿದೆ? ನಿನ್ನ ಶರೀರವು ತುಂಬಾ ಕೋಮಲವಾದುದು. ತಪಸ್ಸಾದರೋ ಮಹಾ ಕಠಿಣವಾದುದು. ಅದು ಕಾಡಿನಲ್ಲಿ ಮತ್ತಷ್ಟು ಕಠೋರವಾಗಿರುತ್ತದೆ. ಆದುದರಿಂದ ತಪಸ್ಸಿಗಾಗಿ ಬೇರೆ ಕಡೆಗೆ ನೀನು ಹೋಗಬೇಡ. ಇಷ್ಟಾರ್ಥವನ್ನು ಪಡೆಯಲು ಸ್ತ್ರೀಯರು ತಪೋವನಕ್ಕೆ ಹೋದುದನ್ನು ನಾನು ಎಲ್ಲಿಯೂ ಕೇಳಿಲ್ಲ. ಹೀಗಾಗಿ ನೀನು ತಪಸ್ಸಿಗಾಗಿ ಕಾಡಿಗೆ ತೆರಳಲು ನಾನು ಅನುಮತಿ ನೀಡುವುದಿಲ್ಲ’ ಎಂದು ಮಗಳನ್ನು ತಡೆದಳು.

ಹೀಗೆ ತಪಸ್ಸಿಗಾಗಿ ತಪೋವನಕ್ಕೆ ತೆರಳಲು ಮೇನಾದೇವಿಯು ತಡೆದುದರಿಂದ ಪಾರ್ವತಿಗೆ ಉಮಾ (ಉ= ಪಾರ್ವತಿ, ಮಾ = ತಪವು ಬೇಡ) ಎಂಬ ಹೆಸರು ಬಂತು.

ತಾಯಿಯ ನಿಲುವಿನಿಂದ ಪಾರ್ವತಿಗೆ ದುಃಖವಾಯಿತು. ‘ಶಿವನಿಲ್ಲದೆ ನನಗೆ ಬದುಕಿಲ್ಲ, ಶಿವನನ್ನು ಒಲಿಸಿಕೊಳ್ಳಲು ಹಿಂದೆ ಮಾಡಿದ ಪ್ರಯತ್ನಕ್ಕೆ ನನ್ನ ಸೌಂದರ್ಯದ ಗರ್ವ ಅಡ್ಡಿಯಾಯಿತು. ಈಗ ನಾನು ತನು-ಮನ ದಂಡಿಸಿ ಕಠೋರ ತಪವನ್ನ ಆಚರಿಸಬೇಕೆಂದಿರುವೆ. ಇದಕ್ಕೆ ಮನೆ ಸೂಕ್ತವಾದ ಸ್ಥಳವಲ್ಲ, ತಪೋವನವೇ ಆಗಬೇಕು. ಶಿವನನ್ನ ಸುಲಭವಾಗಿ ಅವನನ್ನು ಪಡೆಯಲು ಸಾಧ್ಯವೇ ಇಲ್ಲ. ಇದಕ್ಕಾಗಿ ಕಾಡಿಗೆ ಹೋಗಿ ತಪವನ್ನಾಚರಿಸಲು ನಿರ್ಧರಿಸಿದ್ದೇನೆ. ದಯವಿಟ್ಟು ನನಗೆ ಹೋಗಲು ಅನುಮತಿ ಕೊಡು’ ಎಂದು ಬೇಡಿಕೊಂಡಳು.

ಪಾರ್ವತಿ ದಯನೀಯವಾಗಿ ಕಣ್ಣೀರು ಸುರಿಸುತ್ತಾ ಬೇಡಿಕೊಂಡಿದ್ದನ್ನು ನೋಡಿದ ತಾಯಿಯ ಮನಸ್ಸು ಕರಗಿ, ಅವಳಿಗೆ ಅನುಮತಿಯನ್ನು ಕೊಟ್ಟಳು. ತಾಯಿಯ ಅನುಮತಿ ಲಭಿಸಿದಾಗ ತುಂಬಾ ಸಂತುಷ್ಟಳಾದ ಪಾರ್ವತಿ ತಂದೆ–ತಾಯಿಯರಿಗೆ ನಮಸ್ಕರಿಸಿ, ಸಂತೋಷದಿಂದ ಸಖಿಯರೊಡನೆ ತಪಸ್ಸಿಗಾಗಿ ಕಾಡಿಗೆ ಹೊರಟಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT