ಬುಧವಾರ, ಜುಲೈ 6, 2022
22 °C

ಸಚ್ಚಿದಾನಂದ ಸತ್ಯಸಂದೇಶ: ನೆಮ್ಮದಿ ಹಣದಿಂದ ಸಿಗಲ್ಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಹಣ–ಪ್ರಾತಿನಿಧಿಕ ಚಿತ್ರ

ಹಣ ಒಂದಿದ್ದರೆ ಎಲ್ಲವೂ ಸಿಗುತ್ತೆ ಅನ್ನೋ ಭ್ರಮೆಯಲ್ಲಿ ಮನುಷ್ಯ ನಿತ್ಯ ಹಣದ ಬೆಂಬತ್ತುತ್ತಿರುತ್ತಾನೆ. ಹಣಕ್ಕಾಗಿ ಎಂಥ ನೀಚಕೆಲಸ ಮಾಡಲೂ  ಹಿಂಜರಿಯದ ಜನ ಬಹಳಷ್ಟಿದ್ದಾರೆ. ಹಣಕ್ಕಾಗಿ ಮೋಸ-ವಂಚನೆ ಮಾಡುತ್ತಾ ಬದುಕುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಹಣ ಗಳಿಸಿದವರಾರೂ ಸಾಕಿಷ್ಟು ಅಂತ ತೃಪ್ತಿ ಪಟ್ಟಿಲ್ಲ. ಹಣ ಗಳಿಸಲಾಗದವರು ಸಾಕಿನ್ನು ಅಂತ ಪ್ರಯತ್ನ ಬಿಟ್ಟಿಲ್ಲ. ಇಬ್ಬರೂ ಹತಾಶೆಯ ನಿಟ್ಟುಸಿರಲ್ಲೇ ಜೀವ ಬಿಟ್ಟಿದ್ದಾರೆ ಹೊರತು, ನೆಮ್ಮದಿಯಾಗಿ ಜೀವ ಕಳೆದಿಲ್ಲ. ಹಣ ಸಂಪಾದಿಸಿದವನಿಗೆ ಗಳಿಸಿದ್ದು ಸಾಕಾಗಲಿಲ್ಲ ಎಂಬ ಚಿಂತೆ, ಹಣ ಸಂಪಾದಿಸಲಾಗವನಿಗೆ ಜೀವನದಲ್ಲಿ ಸೋತೆನೆಂಬ ಜುಗುಪ್ಸೆ. ಒಟ್ಟಾರೆ ಹಣದ ಮುಂದೆ ಸೋತ ಮತ್ತು ಗೆದ್ದ ಇಬ್ಬರದು ಒಂದೇ ವರಾತ, ಅದು ಅತೃಪ್ತತೆಯ ಚಡಪಡಿಕೆ. ಇವರೆಲ್ಲಾ ಸುಂದರವಾದ ಜೀವನವನ್ನು ನೆಮ್ಮದಿಯಾಗಿ ಸವಿಯದೆ, ಹಣ ಗಳಿಸುವ ಒದ್ದಾಟದಲ್ಲೇ ಜೀವ ಕೊನೆಗೊಳಿಸಿಕೊಳ್ಳುತ್ತಾರೆ.

ಮನುಷ್ಯ ಎಂಥ ಅತೃಪ್ತ ಜೀವಿ ಎಂದರೆ, ಬದುಕಿನಲ್ಲಿ ಬೇಕೆನಿಸಿದ್ದು ಸಿಕ್ಕಾಗಲು ಅದನ್ನು ನೆಮ್ಮದಿಯಾಗಿರುವುದಿಲ್ಲ. ಮತ್ತೇ ಇನ್ನೇನೋ ಬೇಕೆಂದು ಹಪಹಪಿಸುತ್ತಾನೆ. ಮದುವೆಯಾಗುವ ಮುನ್ನ ಕಂಕಣಭಾಗ್ಯ ಶೀಘ್ರ ಸಿಗಲಿ ಅಂತ ಹಂಬಲಿಸಿ, ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತುಕೊಳ್ಳುತ್ತಾರೆ. ಮದುವೆಯಾದ ನಂತರ, ಸಂಸಾರ ಸರಿದೂಗಿಸಲಾಗದೆ ಮದುವೆ ಯಾಕಾದರೂ ಮಾಡಿಕೊಂಡೆನೋ ಅಂತ ಹಲುಬುತ್ತಾರೆ. ಮದುವೆ ಎಂದರೆ ಸುಖವೇ ಇರುತ್ತೆ, ಅಲ್ಲಿ ದುಃಖವೇ ಇರುವುದಿಲ್ಲ ಅಂದು ಕೊಳ್ಳುವ ಭ್ರಮಾಧೀನರಿಗೆ ವಿವಾಹಾನಂತರ ಜುಗುಪ್ಸೆ ಅನುಭವಿಸುತ್ತಾರೆ. ಜೀವನ ಎಂದರೇನೆ ಏರಿಳಿತದ ಯಾನ. ದಾಂಪತ್ಯಜೀವನವೂ ಇದಕ್ಕೆ ಹೊರತಲ್ಲ ಅನ್ನೋ ಸತ್ಯ ತಿಳಿದವರು ಯಶಸ್ವಿ ಸಂಸಾರಿಯಾಗುತ್ತಾರೆ. ‘ನಿನ್ನೆ ಇಂದಿನಂತಿರುವುದಿಲ್ಲ-ನಾಳೆ ಎಂದಿನಂತಿರುವುದಿಲ್ಲ’ ಎಂಬ ಜೀವನದ ಕಠೋರ ಸತ್ಯ ಅರಿತವನು ಬದುಕನ್ನು ತೃಪ್ತಿಯಿಂದ ಕಳೆಯುತ್ತಾನೆ. ಇಂಥ ಬದುಕಿನ ಕಟು ವಾಸ್ತವತೆ ಅರಿಯದವರು ಮನಃಸ್ತಾಪ-ಕಲಹದಲ್ಲೇ ಜೀವನದ ನೆಮ್ಮದಿ ಕಳೆದುಕೊಳ್ಳುತ್ತಾರೆ.

ಭೂಮಿಗೆ ಬಂದ ಪ್ರತಿ ಜೀವವೂ ಜೀವನವನ್ನು ತೃಪ್ತಿಯಾಗಿ ಸವಿದು ನಿರ್ಗಮಿಸಬೇಕು. ಯಾವ ಜೀವ ನೆಮ್ಮದಿ ಇಲ್ಲದೆ ಪ್ರಾಣ ಬಿಡುತ್ತೋ, ಅದು ಮುಕ್ತಿ ಕಾಣದೆ ಇಹದಲ್ಲೇ ಚಡಪಡಿಸುತ್ತದೆ. ಇಂಥ ಆತ್ಮಗಳು ಪಿಶಾಚರೂಪ ತಾಳಬಾರದೆಂದು ಶಾಸ್ತ್ರಬದ್ಧವಾಗಿ ಅಂತ್ಯಸಂಸ್ಕಾರ ಮಾಡುತ್ತೇವೆ. ತೃಪ್ತಿ ಕಾಣದ ಆತ್ಮಗಳು ಪರಮಾತ್ಮನ ಸಾನ್ನಿಧ್ಯ ಹೊಂದುವುದಿಲ್ಲ ಅಂತ ಜೀವನದಲ್ಲಿ ಅವರಿಷ್ಟ ಪಡುತ್ತಿದ್ದವುಗಳನ್ನೆಲ್ಲಾ ಎಡೆ ಇಡುತ್ತೇವೆ. ಇಂಥ ಅಪರಕರ್ಮದಲ್ಲೇ ನಮ್ಮ ಬದುಕಿನ ಸತ್ಯಗಳು ಅನಾವರಣಗೊಳ್ಳುತ್ತೆ. ಆದರೆ ಅದನ್ನು ಅರಿಯುವ ಒಳಗಣ್ಣು ನಮಗಿರಬೇಕಷ್ಟೆ. ಅತಿಥಿಯಾಗೋ,ಅಭ್ಯಾಗತರಾಗೋ ನಾವು ಈ ಭೂಮಿಗೆ ಬಂದಿರುತ್ತೇವೆ. ಇಲ್ಲಿ ಇದ್ದಷ್ಟು ಕಾಲ ಪರರಿಗೆ ತೊಂದರೆಯಾಗದಂತೆ ಬದುಕಿದ್ದು, ಕೊನೆಗೊಮ್ಮೆ ಹೋಗುವ ಕಾಲದಲ್ಲಿ ಮನಸ್ಸಿನಲ್ಲಿ ನೆಮ್ಮದಿ ತುಂಬಿಕೊಂಡು ನಿರ್ಗಮಿಸಬೇಕು.

ಎಲ್ಲರೂ ಮಾಡುವ ತಪ್ಪನ್ನು ನಾವು ಮಾಡುತ್ತೇವೆ. ಆದರೆ ಆದ ತಪ್ಪನ್ನು ಎಷ್ಟು ಬೇಗ ತಿದ್ದಿ ಜೀವನಪಥದಲ್ಲಿ ನಡೆಯುತ್ತೇವೋ, ಅಷ್ಟು ನಮ್ಮ ಜೀವನ ಸಾರ್ಥಕ್ಯ ಪಡೆಯುತ್ತದೆ. ಜೀವನದಲ್ಲಿ ನೆಮ್ಮದಿ ಕಾಣಲು ಋಷಿಗಳಂತೆ ಕಾಡು-ಮೇಡು ಅಲೆಯಬೇಕಿಲ್ಲ. ನಾಡಿನ ಬೀಡಿನಲ್ಲೇ ಮೌಲ್ಯಯುತವಾಗಿ ಬದುಕಿ ನೆಮ್ಮದಿ ಕಾಣಬಹುದು. ನೆಮ್ಮದಿ ಅನ್ನೋದು ಹಣಕ್ಕೆ ಸಿಗುವ ವಸ್ತುವೂ ಅಲ್ಲ, ಯಾರೋ ಕೊಡುವ ದಾನವೂ ಅಲ್ಲ. ಅದು ನಮ್ಮ ಮನದೊಳಗೆ ಆವಿರ್ಭವಿಸಿ ಬರುವ ಪುಣ್ಯತೀರ್ಥ. ಮನಸ್ಸೆಂಬ ಸಾಗರದಲ್ಲಿ ತೃಪ್ತಿಯ ಕಡೆಗೋಲಲ್ಲಿ ಮಂಥಿಸಿ ತೆಗೆದ ಅಮೃತ. ಇದನ್ನು ಸವಿದವರು ‘ಸಚ್ಚಿದಾನಂದ’ದ ನೆಮ್ಮದಿ ಬದುಕು ಕಾಣುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು