ಭಾನುವಾರ, ಜುಲೈ 3, 2022
27 °C
ಭಾಗ 128

ವೇದವ್ಯಾಸರ ಶಿವಪುರಾಣ ಸಾರ: ರತಿಯನು ಮದುವೆಯಾದ ಮನ್ಮಥ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಬ್ರಹ್ಮ ತನ್ನ ಪುತ್ರಿ ಸಂಧ್ಯಾ ಮೇಲೆಯೇ ಮೋಹ ಬರುವಂತೆ ಮಾಡಿದ ಮನ್ಮಥನಿಗೆ ಶಾಪ ಕೊಟ್ಟ ಕಥೆ ಕೇಳಿದ ನಾರದ ಸಂತೃಪ್ತನಾಗಿ, ‘ಮುಂದೆ ಏನಾಯಿತೆಂಬುದನ್ನು ಹೇಳು, ನಾನು ಶ್ರದ್ಧೆಯಿಂದ ಶಿವಕಥೆಯನ್ನು ಕೇಳಲು ಸಿದ್ಧನಾಗಿರುವೆ’ ಎಂದ. ಬ್ರಹ್ಮ ಮುಂದುವರೆಸಿದ.

ಶಂಕರ ಮತ್ತು ನಾನೂ ಅಂತರ್ಧಾನನಾದ ಮೇಲೆ ದಕ್ಷಬ್ರಹ್ಮನು ಹಿಂದಿನ ನನ್ನ ಮಾತನ್ನು ಸ್ಮರಿಸಿಕೊಂಡು ಮನ್ಮಥನಿಗೆ ಹೇಳಿದ ‘ಎಲೈ ಮನ್ಮಥನೆ! ನನ್ನ ಮುಂದಿರುವ ಸಕಲ ಗುಣಪೂರ್ಣಳಾದ ಈ ಸುಂದರಿ ನನ್ನ ಪುತ್ರಿ. ನಿನಗೆ ಅನುರೂಪಳಾದ ಇವಳನ್ನು ಪತ್ನಿಯಾಗಿ ಸ್ವೀಕರಿಸು. ತುಂಬಾ ಕಾಂತಿಮತಿಯಾದ ಇವಳು ಸದಾ ನಿನ್ನೊಡನೆಯೇ ಇದ್ದು, ನಿನ್ನ ಆಜ್ಞೆಯಂತೆ ನಡೆವಳು’ ಎಂದ.

ನಂತರ ದಕ್ಷ ತನ್ನ ಶರೀರದ ಬೆವರಿನಿಂದ ಜನಿಸಿದ ಆ ಕನೈಗೆ ‘ರತಿ’ ಎಂದು ಹೆಸರನ್ನಿಟ್ಟು, ಮನ್ಮಥನಿಗೆ ಮದುವೆ ಮಾಡಿಕೊಟ್ಟ. ಇದರಿಂದ ಸುಂದರಿಯೂ ಮುನಿಗಳ ಮನಸ್ಸನ್ನೂ ಮೋಹಗೊಳಿಸುವವಳೂ ಆದಂತಹ ದಕ್ಷಪುತ್ರಿ ರತೀದೇವಿಯನ್ನು ಮನ್ಮಥ ಮದುವೆಯಾಗಿ ತುಂಬಾ ಉಲ್ಲಸಿತನಾದ. ಬಳಿಕ ತನ್ನ ಪತ್ನಿಯಾದ ರತಿಯನ್ನು ನೋಡಿ ತನ್ನ ಕಾಮಬಾಣಗಳಿಂದಲೇ ತಾನೇ ಹೊಡೆಯಲ್ಪಟ್ಟವನಾದಂತೆ ರತಿಯಲ್ಲಿ ಹೆಚ್ಚಾದ ಅನುರಾಗದಿಂದ ಮೋಹಗೊಂಡ. ಸುಂದರಿಯಾದ ರತಿ ಸಹ ಜಿಂಕೆಯಂತೆ ಚಂಚಲವಾದ ನೋಟಗಳುಳ್ಳವಳಾಗಿದ್ದಳು. ಮನೋಹರವಾದ ಮೈಮಾಟದಿಂದ ಸುಖವನ್ನುಂಟುಮಾಡುವವಳಾಗಿದ್ದಳು. ಮನ್ಮಥನಿಗೆ ರತಿಕ್ರೀಡೆಯಲ್ಲಿ ಅನುಕೂಲಳಾಗಿದ್ದಳು. ರತಿಯ ಸುಂದರವಾದ ಹುಬ್ಬುಗಳೆರಡನ್ನು ನೋಡಿ ಮನ್ಮಥ ಮತ್ತಷ್ಟು ಮೋಹಮತ್ತನಾದ. ಇದರಿಂದ ಬ್ರಹ್ಮ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಉನ್ಮಾದನವೆಂಬ ಧನುಸ್ಸನ್ನೇನಾದರೂ ಈ ರತಿಯಲ್ಲಿರಿಸಿರುವನೆ – ಎಂಬ ಸಂಶಯಕ್ಕೂ ಒಳಗಾದ.

ರತೀದೇವಿಯ ಕಟಾಕ್ಷಗಳ ವೇಗವನ್ನೂ ಸೌಂದರ್ಯವನ್ನೂ ನೋಡಿದ ಮದನನಿಗೆ ತನ್ನ ಬಾಣಗಳಲ್ಲಿಯೂ ಇಂತಹ ವೇಗ ಮತ್ತು ಆಕರ್ಷಣೆ ಇಲ್ಲವೆಂದು ಭಾವಿಸಿದ. ರತಿಯ ಮಂದವಾದ ಸುವಾಸನೆಯುಳ್ಳ ನಿಶ್ವಾಸವಾಯುವನ್ನು ಆಘ್ರಾಣಿಸಿದ ಮನ್ಮಥನಿಗೆ ಮಲಯಪರ್ವತದ ಗಂಧದ ಗಾಳಿಯು ಇದಕ್ಕೆ ಸರಿಸಾಟಿಯಾಗುವುದಿಲ್ಲ ಅಂದುಕೊಂಡ. ಹುಣ್ಣಿಮೆಯ ಚಂದಿರನಂತೆ ತುಂಬಿರುವ, ಕುಂಕುಮದ ಬೊಟ್ಟಿನಿಂದ ರಾರಾಜಿಸುತ್ತಿರುವ ರತಿಯ ಮುಖವನ್ನು ನೋಡಿ ಕಾಮನು, ಅವಳ ಮುಖಕ್ಕೂ ಚಂದ್ರನಿಗೂ ಭೇದವನ್ನೇ ತಿಳಿಯದವನಾದ. ರತಿಯ ಕಮಲದಂತಿರುವ ಮುಖದಲ್ಲಿರುವ ಕಣ್ಣುಗಳು ರಕ್ತಕಮಲಗಳಂತೆ ಪ್ರಕಾಶಿಸುತ್ತಿದ್ದವು. ಚಿಕ್ಕದಾದ ನಡುವುಳ್ಳ, ಶರಭಮೃಗದಂತೆ ಶರೀರವುಳ್ಳವಳೂ ಆದ ಆ ರತೀದೇವಿಯು ಸುವರ್ಣವೇದಿಕೆಯಂತೆ ಮನ್ಮಥನಿಗೆ ಕಾಣಿಸಿದಳು. ಬಾಳೆ ಗಿಡದಂತೆ ನಯವೂ, ನೀಳವಾದ ತೊಡೆಗಳು, ಕೆಂಪಾದ ಪಾದಗಳು, ಸುರಹೊನ್ನೆಯ ಚಿಗುರಿನಂಥ ಪಾದದ ಬೆರಳುಗಳು, ದುಂಡನೆಯ ಕೈಗಳು, ಇದಕ್ಕೆ ನಸುಗಿನಂಥ ಬೆರಳುಗಳು ರತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ಕಾಳಮೇಘದಂತೆ ಕಪ್ಪಾದ ಮತ್ತು ಸುಂದರವಾದ ಕೇಶಪಾಶವು ಚಮರೀಮೃಗದ ಚೌರಿಗಳಂತೆ ಮನೋಹರವಾಗಿತ್ತು. ಕಾಂತಿಜಲದಲ್ಲಿ ಇವಳ ಕುಡಿನೋಟಗಳೇ ದುಂಬಿಗಳಾಗಿ, ನೇತ್ರಗಳೇ ಕನ್ನೈದಿಲೆಗಳಾಗಿದ್ದವು. ಒಟ್ಟಾರೆ, ರತಿಯು ಸರ್ವಾಂಗ ಲಾವಣ್ಯವುಳ್ಳವಳಾಗಿ ಲಕ್ಷ್ಮಿಯಂತೆ ಶೋಭಿಸುತ್ತಲಿದ್ದಳು.

ಹನ್ನೆರಡು ಅಲಂಕಾರ, ಹದಿನಾರು ಶೃಂಗಾರ ವಸ್ತುಗಳಿಂದ ರತಿ ಶೋಭಿಸುತ್ತಿದ್ದಳು. ನೋಡುಗರನ್ನು ತನ್ನ ಸೌಂದರ್ಯದಿಂದ ಮೋಹಗೊಳಿಸುತ್ತಾ, ತನ್ನ ಶರೀರದ ಕಾಂತಿಯಿಂದ ಹತ್ತು ದಿಕ್ಕುಗಳನ್ನೂ ಬೆಳಗುತ್ತಲಿದ್ದಳು. ರತಿಯ ಅದ್ಭುತವಾದ ಸೌಂದರ್ಯ ನೋಡಿದ ಮನ್ನಥ, ತನಗೆ ಬ್ರಹ್ಮ ಕೊಟ್ಟ ಕ್ರೂರ ಶಾಪವನ್ನು ಮರೆತು ರತಿಯ ಮೋಹಪಾಶದಲ್ಲಿ ಮುಳುಗಿದ. ತನ್ನ ಪುತ್ರಿ ರತಿಯನ್ನು ಮನ್ಮಥನಿಗೆ ಅತ್ಯಂತ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟ ದಕ್ಷ ತುಂಬಾ ಸಮಾಧಾನಚಿತ್ತನಾದ.

ರತೀದೇವಿಯೊಡನೆ ಮದನನು ಪ್ರಿಯವಾದ ಮಾತುಗಳನ್ನಾಡುತ್ತಾ ವಿಹರಿಸುತ್ತಲಿದ್ದ. ಸಂಜೆಕಾಲದಲ್ಲಿ ಮೇಘವು ಮನೋಹರವಾದ ಮಿಂಚಿನಿಂದ ಪ್ರಕಾಶಿಸುವಂತೆ ಆ ರತಿಯಿಂದ ಪ್ರಕಾಶಿಸಿದ. ಯೋಗಿಯು ಯೋಗವಿದ್ಯೆಯನ್ನು ಹೃದಯದಲ್ಲಿ ಧರಿಸುವಂತೆ ರತೀದೇವಿಯನ್ನು ತನ್ನ ಹೃದಯದಲ್ಲಿ ಧರಿಸಿದ. ಅಂದರೆ ಆ ರತಿಯಲ್ಲಿ ಮನ್ಮಥ ತುಂಬಾ ಅನುರಾಗವುಳ್ಳವನಾದ. ರತೀದೇವಿಯೂ ಮನ್ಮಥನನ್ನು ಪತಿಯಾಗಿ ಪಡೆದು, ಶ್ರೀಹರಿಯನ್ನು ಪಡೆದ ಚಂದ್ರಮುಖಿಯಾದ ಲಕ್ಷ್ಮೀದೇವಿಯಂತೆ ಪ್ರಕಾಶಿಸಿದಳು – ಎಂಬಲ್ಲಿಗೆ ಸತೀಖಂಡದ ನಾಲ್ಕನೆಯ ಅಧ್ಯಾಯ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು