ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಲೆ ತಡೆಯಲು ಅವತರಿಸಿದ ದೇವತೆಗಳು!

Last Updated 17 ಜನವರಿ 2021, 4:16 IST
ಅಕ್ಷರ ಗಾತ್ರ

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿಯೇ ಭಾರತದ ಗ್ರಾಮಾಂತರ ಭಾಗಗಳಲ್ಲಿ ಹಲವು ದೇವತೆಗಳು ಅವತಾರ ಎತ್ತಿವೆಯಂತೆ. ಕಾಯಿಲೆಗಳಿಂದ ರಕ್ಷಣೆ ಪಡೆಯಲು ಜನ ಇಂತಹ ದೇವತೆಗಳ ಮೊರೆಹೋಗಿರುವ ದಾಖಲೆಗಳು ಇತಿಹಾಸದಲ್ಲಿ ಹೇರಳವಾಗಿ ಸಿಗುತ್ತವೆ.

ಜ್ವರ ನಿವಾರಿಸುವ ಅನೇಕ ದೇವಾಲಯಗಳು ಸಹ ನಮ್ಮಲ್ಲಿವೆ. ಉದಾ: ಪರ್ನಾಶಬರಿ ಮತ್ತು ಶೀತಾಲ. ಪರ್ನಾಶಬರಿ ಬೌದ್ಧತಾಂತ್ರಿಕ ವಜ್ರಯಾನ ದೇವತೆ. ಶೀತಾಲ (ಶೀತದಿಂದ ಬರುವ ಕಾಯಿಲೆ ನಿವಾರಿಸುವ ದೇವತೆ), ಒಡಿಶಾ ಮತ್ತು ಬಂಗಾಳ ಕಡೆ ಪೂಜಿಸುವ ದೈವ. ಜ್ವರ, ಸಿಡುಬು ಇತ್ಯಾದಿ ರೋಗಗಳು ಈ ದೇವತೆಗಳಿಂದ ಗುಣವಾಗುತ್ತವೆ ಎಂದು ನಂಬಲಾಗಿದೆ.

ಶೀತಾಲ ದೇವತೆ ಇಂದಿಗೂ ರೋಗಗಳನ್ನು ವಾಸಿಮಾಡುವ ಖ್ಯಾತಿಯನ್ನು ಹೊಂದಿದ್ದು, ಆಕೆಯ ಕತೆಯನ್ನು ಶಿಲ್ಪದ ಮೂಲಕವೇ ನೋಡಬಹುದು. ಕತ್ತೆಯ ಮೇಲೆ ಕುಳಿತು ಬರುವ ಶೀತಾಲ ದೇವಿ ಪೊರಕೆಯಿಂದ ಕಾಯಿಲೆಗಳನ್ನು ಗುಡಿಸುತ್ತಾ ಸಾಗುತ್ತಾಳಂತೆ. ಕೈಗಳಲ್ಲಿ ಬೇವಿನ ಎಲೆಗಳನ್ನು ಇಟ್ಟುಕೊಂಡಿರುತ್ತಾಳಂತೆ. ಕಾಲರಾ ದೇವತೆ ಹಿಂದೂಗಳಿಗೆ ಒಲೈಚಂಡಿ, ಮುಸ್ಲಿಮರಿಗೆ ಒಲೈ ಬೀಬಿ. ರಕ್ತಸೋಂಕಿನ ದೇವತೆಯ ಹೆಸರು ರಕ್ತಬತಿ.

ಪ್ರಯಾಗರಾಜ್-ಲಖನೌ ಮಧ್ಯದ ಕಾರಾ ಎಂಬ ಹಳ್ಳಿಯಲ್ಲಿ ಶೀತಾಲದೇವಿಯ ದೊಡ್ಡ ದೇವಸ್ಥಾನವಿದೆ. ಜನ ಆಕೆಯನ್ನು ‘ಶೀತಾಲಿಮಯಿ’ ಎಂದು ಕರೆಯುತ್ತಾರೆ. ಚಳಿಗಾಲ ಮತ್ತು ವಸಂತಕಾಲದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಕಾರಣ, ಈ ಕಾಲದಲ್ಲಿ ಹೆಚ್ಚು ಸಿಡುಬು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಬ್ರಿಟಿಷರು ‘ಇಂಡಿಯನ್ ಸಿಡುಬು’ ಎಂದು ಕರೆದರು. ಉತ್ತರ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಂಗಾಳದಲ್ಲೂ ಶೀತಾಲ ದೇವಾಲಯಗಳು ಇವೆ. ಶೀತಾಲ ಎಂದರೆ ತಣ್ಣಗಾಗಿಸುವ ದೇವತೆ. ಗುಡಿಯ ಪಕ್ಕದಲ್ಲಿ ಬೇವನ ಮರಗಳನ್ನು ಬೆಳೆಸಲಾಗುತ್ತದೆ. ದೇವಾಲಯಗಳ ಬಳಿ ರೋಗಿಗಳನ್ನು ಬೇವಿನ ಎಲೆಗಳ ಮೇಲೆ ಮಲಗಿಸಿ ರೋಗ ನಿವಾರಣೆಗೆ ಯತ್ನಿಸುವುದನ್ನು ದಕ್ಷಿಣ ಭಾರತದಲ್ಲೂ ನೋಡಬಹುದು.

ಬ್ರಿಟಿಷರೂ ಈ ದೇವತೆಯ ಭಕ್ತರಾಗಿರುವ ದಾಖಲೆಗಳಿವೆ. ಕ್ರಿ.ಶ. 1720ರಲ್ಲಿ ಬ್ರಿಟಿಷ್ ವ್ಯಾಪಾರಿ ಡಂಕನ್ 4000 ರೂಪಾಯಿ ಕೊಟ್ಟು ಕೊಲ್ಕತ್ತ ಬಳಿ ಅರಣ್ಯದಲ್ಲಿ ಓಲಾಬೀಬಿ ದೇವಾಲಯವನ್ನು ಕಟ್ಟಿಸಿದ. ಈತ ಮತ್ತೆ 6000 ರೂಪಾಯಿ ಕೊಟ್ಟು ಕೊಲ್ಕತ್ತದಲ್ಲಿ ಇನ್ನೊಂದು ದೇವಾಲಯ ನಿರ್ಮಿಸಿದ. 18ನೇ ಶತಮಾನದಲ್ಲಿ ಇಂಗ್ಲೆಂಡ್‍ನಲ್ಲಿಯೂ ಇಂತಹ ದೇವಾಲಯಗಳನ್ನು ನಿರ್ಮಿಸಲಾಯಿತು. ಪೋಲೆಂಡ್‍ನಲ್ಲಿ ಸೋಂಕು ರೋಗಗಳಿಂದ ಪರಿಹಾರ ಪಡೆಯಲು ರಸ್ತೆಬದಿಯ ಗುಡಿಗಳಿಗೆ ಭಕ್ತರು ಹೋಗುತ್ತಿದ್ದರು.

ಮಧ್ಯಪ್ರದೇಶದ ‘ಮೈಹಾರ್ ದೇವಿ’ ದೇವಸ್ಥಾನದ ಅರ್ಚಕ ಜನರನ್ನು ಕೋವಿಡ್-19ರಿಂದ ರಕ್ಷಿಸಲು ‘ಹನುಮಾನ್ ಬೀಸ್’ ಮಂತ್ರವನ್ನು ರಚಿಸಿದ್ದಾನಂತೆ. ವೈಷ್ಣೋದೇವಿ ದಾರಿಯಲ್ಲಿ ‘ಕರೋನ ಕಿ ಜಾಡ್’ ಎಂಬ ಪೂಜಾಸ್ಥಳದಲ್ಲಿ 10 ರೂಪಾಯಿಗೆ ಚಿಕಿತ್ಸೆ ನೀಡಲಾಗಿದ್ದು ಸುದ್ದಿಯಾಯಿತು. ‘ಕರೋನಾ ಮಾಕಿ ಮುರ್ದಾಬಾದ್. ಕರೋನಾ ಬಾಪ್‍ಕಿ ಮುರ್ದಾಬಾದ್’ ಹಾಡುಗಳು ಹುಟ್ಟಿಕೊಂಡವು.

ಥಾಯ್ಲೆಂಡ್‌ನಲ್ಲಿ ನಡೆಯುವ ಮಾರಿಯಮ್ಮನ್‌ ಜಾತ್ರೆಯ ನೋಟ
ಥಾಯ್ಲೆಂಡ್‌ನಲ್ಲಿ ನಡೆಯುವ ಮಾರಿಯಮ್ಮನ್‌ ಜಾತ್ರೆಯ ನೋಟ

***

ಧರ್ಮಗಳು ಮುಖ್ಯವಾಗಿ ಭಯದ ಮೇಲೆ ರೂಪುಗೊಂಡಿವೆ ಎನ್ನುವ ಮಾತಿದೆ. ದೇವರಿಗೆ ಹರಕೆ ಹೊತ್ತುಕೊಂಡು ಕಡಿಮೆಯಾದಾಗ ನಮ್ಮ ಸಹಾಯಕ್ಕೆ ದೇವತೆಯೊಬ್ಬಳು ಇದ್ದಾಳೆ ಎನ್ನುವು ನಂಬಿಕೆ ಹುಟ್ಟಿಕೊಳ್ಳುತ್ತದೆ. ಧಾರ್ಮಿಕ ಭಯದ ಅಭಿವ್ಯಕ್ತಿಗಳಲ್ಲಿ ಹಾವೂ ಕೂಡ ಒಂದು ದೇವತೆ. ಜೂಡೋ-ಕ್ರಿಶ್ಚಿಯನ್, ಹಿಂದೂ, ಈಜಿಪ್ಟ್, ಗ್ರೀಕ್ ಮತ್ತು ಅಮೆರಿಕನ್ ಧರ್ಮಗಳಲ್ಲಿ ಹಾವುಗಳಿಗೆ ಮುಖ್ಯ ಸ್ಥಾನ ಕಲ್ಪಿಸಲಾಗಿದೆ. ಈ ಎಲ್ಲಾ ಧರ್ಮಗಳಲ್ಲೂ ಮನುಷ್ಯನು ಹಾವುಗಳಿಂದ ಭಯಪಡುವ ಕಾರಣ ಹಾವುಗಳು ಧರ್ಮದ ಭಾಗವಾಗಿವೆ ಎನ್ನಲಾಗಿದೆ. ಭಾರತದ ಬಹಳಷ್ಟು ಭಾಗಗಳಲ್ಲಿ ಹಾವುಗಳನ್ನು ಪೂಜಿಸಲಾಗುತ್ತಿದೆ ಮತ್ತು ಹಿಂದೂ ಪುರಾಣಗಳಲ್ಲಿ ಅವುಗಳ ಪ್ರಸ್ತಾಪ ಹೇರಳವಾಗಿ ಬರುತ್ತದೆ.

ಯುದ್ಧದೇವತೆಗಳ ಉದಾಹರಣೆಗಳೂ ಇವೆ. ಇಂದ್ರ ಮತ್ತು ಕಾರ್ತಿಕೇಯ ಹಿಂದೂ ಧರ್ಮದಲ್ಲಿ ಯುದ್ಧಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಾಚೀನ ರೋಮ್ ಧರ್ಮದಲ್ಲಿ ಮಂಗಳ ಯುದ್ಧದ ದೇವರು. ಓಗುನ್ ಹಲವಾರು ಆಫ್ರಿಕನ್ ಧರ್ಮಗಳ ಯುದ್ಧ ದೇವತೆ.

ದಕ್ಷಿಣ ಭಾರತದಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ ದೇವತೆ ಮಾರಿಯಮ್ಮ. ‘ಮಾರಿ’ ಎಂದರೆ ಸಿಡುಬು ಮತ್ತು ಅದರ ರೂಪಾಂತರ ಎನ್ನುವ ಅರ್ಥವಿದೆ. ಪ್ರತಿಮಾಶಾಸ್ತ್ರದಲ್ಲಿ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ದೇವತೆಗಳು ಹೊಂದಿವೆ ಎಂದು ಒತ್ತಿ ಹೇಳಲಾಗಿದೆ. ಮಾರಿಯಮ್ಮ ತನ್ನ ಕೈಯಲ್ಲಿ ಕುಡುಗತ್ತಿ ಹಿಡಿದುಕೊಂಡು ಕಾಯಿಲೆಗಳನ್ನು ಹೊಡೆದು ಓಡಿಸುತ್ತಾಳಂತೆ. ಈ ದೇವತೆಗಳು ಸೌಮ್ಯರಷ್ಟೇ ಅಲ್ಲ, ಆರೈಕೆದಾರರು ಕೂಡ ಅದೇವೇಳೆ ಕೋಪದಿಂದ ಕೆಂಡಾಮಂಡಲವಾಗಿ ಉರಿಯುತ್ತಾರೆ ಕೂಡ ಎಂದು ಹೇಳಲಾಗುತ್ತದೆ.

ಅರಣ್ಯ ದೇವತೆಗಳನ್ನು ಹೆಚ್ಚಾಗಿ ಸ್ಥಳೀಯ ಸಾಂಪ್ರದಾಯಿಕ ದಲಿತ-ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೂಜಿಸಲಾಗುತ್ತದೆ. ಕೆಲವು ದೇವತೆಗಳು ತಾಂತ್ರಿಕ ವಿದ್ಯೆಯನ್ನು ಹೊಂದಿರುತ್ತವೆ. ಸ್ಥಳೀಯ ದೇವತೆಗಳನ್ನು ಕಾಲಾನಂತರದಲ್ಲಿ ಶಕ್ತಿದೇವತೆಗಳೊಂದಿಗೆ ಸಮೀಕರಣಗೊಳಿಸಲಾಗಿದೆ. ಇದು ಸೃಷ್ಟಿಯ ಹಿಂದಿನ ಸ್ತ್ರೀಲಿಂಗದ ಶಕ್ತಿಯಾಗಿದೆ.

ಮಾರಿಯಮ್ಮನ್ ದಕ್ಷಿಣ ಭಾರತದ ದೇವತೆಯಾಗಿದ್ದು, ಪ್ಲೇಗ್, ಸಿಡುಬು, ದಡಾರ ಮತ್ತು ಯಾವುದೇ ಸೋಂಕು ರೋಗಗಳ ವಿರುದ್ಧ ಹೋರಾಡುತ್ತಾಳಂತೆ. ಆಗ್ನೇಯ ಏಷ್ಯಾ ದೇಶಗಳಲ್ಲೂ ಆಕೆ ನೆಲೆಗೊಂಡಿದ್ದಾಳೆ. ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಮಾರಿಯಮ್ಮನ್ ದೇವಾಲಯಗಳನ್ನು ಹೆಚ್ಚಾಗಿ ನೋಡಬಹುದು. ಮಾರಿಯಮ್ಮನ್ ವೈದಿಕಪೂರ್ವ ದೇವತೆಯಾಗಿದ್ದು, ಮಾರಿ ಮಳೆಯ ದೇವತೆ ಮತ್ತು ಬೇಸಿಗೆ ಕಾಲದ ಪಿಡುಗುಗಳನ್ನು (ಉಷ್ಣ) ತಂಪಾಗಿಸಲು ಪೂಜಿಸುವ ಸ್ತ್ರೀದೇವತೆ. ಕೆಲವು ಕಡೆ ಮುತ್ತುಮಾರಿಯಮ್ಮನ್ ಎಂದು ಕರೆಯಲಾಗುತ್ತದೆ. ಇದು ಜ್ವರದಿಂದ ದೇಹದ ಮೇಲೆ ಮುತ್ತುಗಳಂತೆ ಕಾಣಿಸಿಕೊಳ್ಳುವ ಸಿಡುಬು, ಹುಣ್ಣುಗಳನ್ನು ಸೂಚಿಸುತ್ತದೆ.

ಮಾರ್ಚ್-ಜೂನ್ ಮಧ್ಯೆ ತಮಿಳುನಾಡಿನ ಭಕ್ತರು ಮಡಿಕೆಗಳಲ್ಲಿ ನೀರಿನಲ್ಲಿ ಅರಿಶಿನ ಮಿಶ್ರಣಮಾಡಿ, ಬೇವಿನ ಎಲೆಗಳು ಮತ್ತು ನಿಂಬೆಕಾಯಿಗಳನ್ನು ಒಯ್ಯುತ್ತಾರೆ. ಅರಿಶಿನ ನೀರನ್ನು ಮಾರಿಯಮ್ಮನಿಗೆ ಅರ್ಪಿಸಿ, ಬೇವಿನ ಎಲೆಗಳು ಮತ್ತು ನಿಂಬೆಹಣ್ಣುಗಳನ್ನು ಮಾಲೆಕಟ್ಟಿ ರೋಗಿಗಳಿಗೆ ಹಾಕುತ್ತಾರೆ. ಪೊಂಗಲ್ ಮಾಡಿ ದೇವತೆಯ ಪ್ರಸಾದವೆಂದು ಭಕ್ತರಿಗೆ ವಿತರಿಸುತ್ತಾರೆ. ಏಕೆಂದರೆ ಇವೆಲ್ಲ ರೋಗನಿರೋಧಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುತ್ತವೆ. ತಿರುಚಿರಾಪಳ್ಳಿಯಲ್ಲಿರುವ 17ನೇ ಶತಮಾನದ ಸಮಯಪುರಮ್ ಮಾರಿಯಮ್ಮನ ಪ್ರಖ್ಯಾತ ದೇವಾಲಯ ಎನಿಸಿದೆ.

ಪರ್ನಾಶಬರಿ ದೇವತೆ
ಪರ್ನಾಶಬರಿ ದೇವತೆ

***

ಭಾರತವು ಇತಿಹಾಸದ ಉದ್ದಕ್ಕೂ ಹಲವಾರು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ಕೆಲವು ರೋಗಗಳನ್ನು ಲಸಿಕೆ/ಔಷಧಿಗಳಿಂದ ನಿರ್ಮೂಲನೆ ಮಾಡಿದರೂ ಹಲವು ರೋಗಗಳು ಜನಸಮುದಾಯಗಳ ಮಧ್ಯೆ ಹಾಗೇ ಉಳಿದುಕೊಂಡಿವೆ. ಜೊತೆಗೆ ಹೊಸಹೊಸ ಸೋಂಕು ಹುಟ್ಟಿಕೊಳ್ಳುತ್ತಲೇ ಇದೆ. ಕೆಲವು ಕಾಯಿಲೆಗಳು ಹರಡಲು ಅಪೌಷ್ಟಿಕತೆ, ಬಡತನ, ನೈರ್ಮಲ್ಯದ ಕೊರತೆಯೇ ಕಾರಣವಾಗಿದೆ.

1817ರಲ್ಲಿ ಬ್ರಿಟಿಷ್ ಭಾರತದಲ್ಲಿ ಸಂಭವಿಸಿದ ಕಾಲರಾ ಮೊದಲ ದೊಡ್ಡ ಸಾಂಕ್ರಾಮಿಕ ರೋಗ. ಇದರ ಮೊದಲ ಪ್ರಕರಣವನ್ನು 1817ರ ಆಗಸ್ಟ್ 23ರಂದು ರಾಜಸ್ಥಾನದ ಜೆಸೋರ್‌ನ ಸಿವಿಲ್ ಸರ್ಜನ್ ವರದಿ ಮಾಡಿದರು. 1860ರ ನಂತರ ದತ್ತಾಂಶದ ಸಂಗ್ರಹವನ್ನು ಪ್ರಾರಂಭ ಮಾಡಲಾಯಿತು. 1817ನೇ ವರ್ಷದಲ್ಲಿ ಸುರಿದ ಭಾರಿ ಮಳೆಯಿಂದ ಸೋಂಕು ತೀವ್ರವಾಗಿ ಹರಡಿಕೊಂಡಿತು. ಭಾರತದಲ್ಲಿದ್ದ ಯುರೋಪಿಯನ್ನರು ಮತ್ತು ಶ್ರೀಮಂತರು ಅಷ್ಟಾಗಿ ತೊಂದರೆಗೆ ಸಿಲುಕಿಕೊಳ್ಳಲಿಲ್ಲ. ಆದರೆ, ಬಡಜನ ಹೆಚ್ಚಾಗಿ ಪ್ರಾಣ ಕಳೆದುಕೊಂಡರು.

1929ರಲ್ಲಿ ಎರಡನೇ ಸಲ ಕಾಣಿಸಿಕೊಂಡ ಕಾಲರಾ ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾಗಿ ನಂತರ ನದಿಗಳ ಮೂಲಕ ಉತ್ತರ ಭಾರತದಲ್ಲೆಲ್ಲ ಹರಡಿಕೊಂಡಿತು. ಉತ್ತರ ಪ್ರದೇಶ, ಪಂಜಾಬ್ ಮತ್ತು ದೆಹಲಿ ಹೆಚ್ಚು ಅಪಾಯಕ್ಕೆ ಒಳಗಾದವು. ಈ ಸಾಂಕ್ರಾಮಿಕ ರೋಗ ಭಾರತದಿಂದ ರೇಷ್ಮೆ ರಸ್ತೆಯ ಮೂಲಕ ಚೀನಾ ದೇಶಕ್ಕೆ ಹರಡಿಕೊಂಡಿತು. ಚೀನಾ ದೇಶದ ಹಳ್ಳಿ, ಪಟ್ಟಣಗಳಿಗೆ ಹರಡಿಕೊಂಡು ಪ್ರತಿದಿನ ನೂರಾರು ಜನ ಸಾವಿಗೆ ತುತ್ತಾದರು. ನಂತರ ಇದು ಪರ್ಷಿಯಾ, ಅರೇಬಿಯಾ, ರಷ್ಯಾದಲ್ಲಿಯೂ ಕಾಣಿಸಿಕೊಂಡಿತು. ಕೊನೇ ಹಂತದಲ್ಲಿ ಬಂಗಾಳದಲ್ಲಿ ಹೆಚ್ಚು ಸಾವು ನೋವು ಸಂಭವಿಸಿದವು. ಭಾರತದಿಂದ ಮೆಕ್ಕಾಗೆ ತೆರಳಿದ ಯಾತ್ರಿಕರಿಂದ ಬೇರೆ ದೇಶಗಳಿಗೂ ಸೋಂಕು ತಗುಲಿತು ಎಂದು ಹೇಳಲಾಗುತ್ತದೆ. ಹರಿದ್ವಾರದಲ್ಲಿ ನಡೆದ ಕುಂಭಮೇಳವನ್ನೂ ಕಾಲರಾ ಕಾಡದೇ ಬಿಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT