ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Happy Onam 2021: ಸಮೃದ್ಧಿ ಸಂಭ್ರಮದ ಓಣಂ

Last Updated 20 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಬಲಿಚಕ್ರವರ್ತಿ(ಮಾವೇಲಿ)ಯು ವಿಷ್ಣುಭಕ್ತಿಯನ್ನೂ ಮಹಾಬಲವನ್ನೂ ಪಡೆದಿದ್ದ ಜನಾನುರಾಗಿ ರಾಜ. ಅವನ ಆಳ್ವಿಕೆಯ ಕಾಲದಲ್ಲಿ ಪ್ರಜೆಗಳೆಲ್ಲಾ ಸುಖ-ಸಮೃದ್ಧಿ-ನೆಮ್ಮದಿಯಿಂದ ಇದ್ದರು ಎಂದು ಓಣಂಹಬ್ಬದ ಸಾಂಪ್ರದಾಯಿಕ ಹಾಡುಗಳು ನೆನಪಿಸುತ್ತವೆ. ಆದರೆ, ತನ್ನ ದಾನಗುಣದ ಬಗ್ಗೆ ಅಹಂಕಾರವನ್ನು ಇಟ್ಟುಕೊಂಡಿದ್ದನಂತೆ ಬಲಿರಾಜ. ‘ವಾಮನ’ನ ಅವತಾರತಾಳಿ ವಟುವಿನ ರೂಪದಲ್ಲಿ ಮಹಾವಿಷ್ಣುವು ಬಲಿಚಕ್ರವರ್ತಿಯ ಬಳಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಬೇಡುತ್ತಾನೆ. ಭೂಲೋಕ, ಸುರಲೋಕವೆಲ್ಲಾ ಎರಡು ಹೆಜ್ಜೆಗೆ ವಾಮನ ಆವರಿಸುತ್ತಾನೆ.

ನಮ್ರನಾದ ಬಲಿಯ ತಲೆಯ ಮೇಲೆ ಮೂರನೆಯ ಹೆಜ್ಜೆಯಿಡುತ್ತಾನೆ, ವಾಮನಾವತಾರಿ ಮಹಾವಿಷ್ಣು. ‘ಇನ್ನು ಪಾತಾಳಲೋಕವನ್ನಾಳು’ ಎಂದು ಬಲಿರಾಜನನ್ನು ಮಹಾವಿಷ್ಣುವು ನಿಯೋಜಿಸುತ್ತಾನೆ. ಪ್ರತಿವರ್ಷವೂ ತನ್ನ ಪ್ರಿಯಪ್ರಜೆಗಳ ಭೇಟಿಗಾಗಿ ಭೂಲೋಕಕ್ಕೆ ಬರಲು ಅವನಿಗೆ ಅವಕಾಶ ನೀಡಿ, ‘ಜನರ ಹೃದಯಗಳಲ್ಲಿ ಶಾಶ್ವತನಾಗು‘ ಎಂದು ವರವನ್ನು ನೀಡುತ್ತಾನೆ. ಕೇರಳವಾಸಿಗಳಿಗೆ ಹೀಗೆ ತಮ್ಮ ಭೇಟಿಗಾಗಿ ಬರುವ ಚಕ್ರವರ್ತಿ ಬಲಿಯನ್ನು, ಅವನ ದೇವರಾದ ವಾಮನ ವಿಷ್ಣುವನ್ನು ಸ್ವಾಗತಿಸುವ, ನೆನಪಿಸಿಕೊಳ್ಳುವ ಕಾಲವೇ ಓಣಂ.

ಸಿಂಹ (ಚಿಂಗ ಮಾಸ)ರಾಶಿಯಲ್ಲಿ ಸೂರ್ಯನಿದ್ದಾಗ ಹಸ್ತಾದಿಂದ ಶ್ರವಣನಕ್ಷತ್ರದವರೆಗೆ ಹತ್ತು ದಿನಗಳೂ ಹಬ್ಬವೇ. ಈ ನಕ್ಷತ್ರಗಳ ‘ಮಲಯಾಳಂನಾಳ್‌’ಗಳನ್ನೆ ಹತ್ತು ದಿನಗಳ ವೈವಿಧ್ಯಮಯ ಆಚರಣೆಗೆ ಸೂಚಿಸಲಾಗುತ್ತದೆ. ಜಾತಿ-ಮತ-ಅಂತಸ್ತುಗಳನ್ನೆಲ್ಲಾ ಮೀರಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಅವರ ಸಂಪ್ರದಾಯ, ಅಡುಗೆಗಳು, ಕಳಿ(ಆಟ) – ಇವು ವೈವಿಧ್ಯಮಯ. ಉತ್ತರಕೇರಳ (ಕಾಸರಗೋಡು, ಕೋಯಿಕ್ಕೋಡ್), ಮಧ್ಯಕೇರಳ (ತ್ರಿಶೂರ್, ಎರ್ನಾಕುಳಂ, ಕೋಟಯಂ, ಆಲಪ್ಪುಳ) ಮತ್ತು ದಕ್ಷಿಣ ಕೇರಳ (ಕೊಲ್ಲಂ, ಪತ್ತನಂತಿಟ್ಟ, ತಿರುವನಂತಪುರ)ಗಳಲ್ಲಿ ಪ್ರಾದೇಶಿಕ ಭಿನ್ನತೆಯನ್ನು ಕಾಣಬಹುದು.

ಅತ್ತಂ(ಹಸ್ತಾ)ದಿನದಿಂದ ಓಣಂಹಬ್ಬದ ಆರಂಭ. ಬಲಿರಾಜನನ್ನು ಸ್ವಾಗತಿಸಲು ಹೂವಿನ ರಂಗವಲ್ಲಿ ಹಾಸು ಸಿದ್ಧವಾಗತೊಡಗುತ್ತದೆ. ಕೇರಳದ ಸ್ಥಾನಿಕ ಹೂಗಳಿಂದ, ವಿಶೇಷವಾಗಿ ಹೆಣ್ಣುಮಕ್ಕಳಿಂದ ರಚಿಸಲ್ಪಡುವ ‘ಪೂಕ್ಕಳಂ’ - ಹೂಪಕಳೆಗಳ ರಂಗೋಲಿಗಳು ಎಲ್ಲರ ಮನೆಯ ಚೊಕ್ಕವಾದ ಅಂಗಳದಲ್ಲಿ ಅರಳುವ ಆಕರ್ಷಕ ಕಲಾವಿಶೇಷ. ಮೊದಲ ದಿನ ಹಳದಿಹೂವುಗಳನ್ನು ಬಳಸಿ ವರ್ತುಲರಚನೆ. ಮುಂದಿನ ದಿನಗಳಲ್ಲಿ ಪ್ರತಿದಿನ ಒಂದೊಂದು ವೈವಿಧ್ಯಮಯ ಹೂಗಳ ಪರಿಧಿಯನ್ನು ವಿಸ್ತರಿಸಲಾಗುತ್ತದೆ.

ಎರಡನೆಯ ದಿನ ಚಿತ್ತಿರ-(ಚಿತ್ತಾ ನಕ್ಷತ್ರ)ದಂದು ವಿಶೇಷವಾಗಿ ‌ಮನೆಯನ್ನೆಲ್ಲಾ ಶುಚಿಗೊಳಿಸಿ, ಪೂಕಳಂಗೆ ಮತ್ತೊಂದು ಹೂವಿನ ವರ್ತುಲವನ್ನು ಸೇರಿಸಲಾಗುತ್ತದೆ. ಚೋದಿ-(ಸ್ವಾತಿನಕ್ಷತ್ರ)ದಂದು ಮನೆಯ ಸದಸ್ಯರೆಲ್ಲಾಓಣಕ್ಕೋಡಿ(ಹಬ್ಬದ ಉಡುಗೆ-ಉಡುಗೊರೆ-ಆಭರಣ)ಗಳನ್ನು, ಅಡುಗೆಸಾಮಗ್ರಿಗಳನ್ನು ಖರೀದಿಸುವುದು, ಸಂಗ್ರಹಿಸುವುದು ವಿಶೇಷ. ವಿಶಾಗಂ (ವಿಶಾಖಾನಕ್ಷತ್ರ)ದಂದು ಓಣಂಸದ್ಯ (ಹಬ್ಬದ ಭೋಜನ)ಕ್ಕೆ ಅಡುಗೆಗಳು ಸಿದ್ಧವಾಗತೊಡಗುತ್ತವೆ. ವಿವಿಧ ಬಗೆಯ ಆಟಗಳು, ನೃತ್ಯಗಳು, ಸ್ಪರ್ಧೆಗಳು ಈ ದಿನದಿಂದ ಶುಭಾರಂಭ.

ತಳಪ್ಪಂದುಕಳಿ (ಚೆಂಡಿನಾಟ), ಆಂಬೆಯ್ಯಲ್ (ಬಿಲ್ಲಿನಾಟ), ಕುಡುಕುಡುಕುಡು, ಕಯ್ಯಾಂಕಳಿ, ಅತ್ತಕ್ಕಳಂ ಕಾಳಗದ ಆಟಗಳನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ. ಐದನೆಯ ದಿನ ಅನಿಳಂ - ಅನುರಾಧಾ ನಕ್ಷತ್ರದಂದು ವಳ್ಳಂಕಳಿ - ದೋಣಿಯಾಟ ಆರಂಭ. ಅತ್ಯಂತ ಪ್ರಸಿದ್ಧವಾದದ್ದು, ಪ್ರವಾಸಿಗರನ್ನು ಸೆಳೆಯುವ ಸ್ಪರ್ಧೆ ಎಂದರೆ ನೆಹರು ಬೋಟ್ ರೇಸ್ ಟ್ರೋಫಿ, ಆಪ್ಪುಳ ಸಾಲಂಕೃತಗೊಂಡ, ಹಾವಿನಾಕಾರದ ನೀಳದೋಣಿಯ ಸ್ಪರ್ಧೆ. ಒಂದು ದೋಣಿಯಲ್ಲಿ ನೂರಾದರೂ ಪುರುಷರ ಗುಂಪು ಒಗ್ಗೂಡಿ ಹುಟ್ಟು ತಿವಿಯುತ್ತಾ ದೋಣಿನಡೆಸುವ ಓಟ.

ಪತ್ತನಂತಿಟ್ಟದ ಪಂಪಾನದಿಯಲ್ಲಿ ನಡೆಯುವ ಪಂದ್ಯವೂ ಪ್ರಸಿದ್ಧ. ಅಲ್ಲದೆ ಹಗಲು-ರಾತ್ರಿ ಪುಲಿಕಳಿ, ಕಥಕ್ಕಳಿ, ಉಯ್ಯಾಲೆ ಆಟ – ಹೀಗೆ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸುತ್ತವೆ, ಉತ್ಸಾಹನ್ನು ನೀಡುತ್ತವೆ. ತ್ರಿಕೇಟ - ಜ್ಯೇಷ್ಠಾ ನಕ್ಷತ್ರದಂದು ಪೂಕಳಂನ ವರ್ತುಲ ಮತ್ತಷ್ಟು ವಿಸ್ತಾರ, ವರ್ಣಮಯಗೊಳ್ಳುತ್ತದೆ. ಮೂಲಂ - ಮೂಲಾ ನಕ್ಷತ್ರದಂದು ಓಣಂನ ಭೋಜನದ ತಯಾರಿಯು ಮುಗಿಯುತ್ತಾ ಬಂದಿರುತ್ತದೆ. ಎಂಟನೆಯ ಪೂರ್ವಾಡಂ - ಪೂರ್ವಾಷಾಢದಂದು ವಾಮನ-ಮಹಾಬಲಿಯರ ಸ್ಥಾಪನೆ. ಪಿರಮಿಡ್ ಆಕಾರದ ಗೋಮಯದಿಂದ ಮಾಡಲ್ಪಟ್ಟ ಎರಡು ಮೂರ್ತಿಗಳನ್ನು ಪೂಕಳಂ ಮಧ್ಯೆ ಸ್ಥಾಪಿಸಲಾಗುತ್ತದೆ. ಒಂಬತ್ತನೆಯ ದಿನ ಉತ್ರಾಡಂ - ಉತ್ತರಾಷಾಢದಂದು ಮಹಾಬಲಿಯು ಎಲ್ಲರ ಮನೆಗೆ ಭೇಟಿ ಕೊಡುವನೆಂದು ನಂಬಲಾಗುತ್ತದೆ. ಹಾಗಾಗಿ ಪೂಕಳಂ, ವಿಳಕ್ಕು(ದೀಪ)ಗಳ ಅಲಂಕಾರವು ವಿಶೇಷ.

ತಿರು ಓಣಂ - ಶ್ರವಣದಂದು ಹತ್ತನೆಯ ದಿನ ವಿಜೇತರಿಗೆ ಸನ್ಮಾನ, ಆರಾಧನೆ, ಭೋಜನ – ಹೀಗೆ ಮಾವೇಲಿಯ ನೆನಪಲ್ಲಿ ಸಮೃದ್ಧಿಯನ್ನು ಅನುಭವಿಸುತ್ತಾರೆ. ಹಾಲ್ಕೆನೆ ಬಣ್ಣದ ಹತ್ತಿಯ ಸೀರೆ-ರವಿಕೆ, ಬಿಳಿ/ ಹಾಲ್ಕೆನೆ ಬಣ್ಣದ ಹತ್ತಿಯ ಮುಂಡು-ಶರ್ಟ್ ವಿಶೇಷ ಉಡುಗೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT