ಶನಿವಾರ, ಮಾರ್ಚ್ 28, 2020
19 °C
ಜೀವನ–ಸೌಂದರ್ಯ

ಜೀವನ ಹಲವು ಬಣ್ಣಗಳ ತೋರಣ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

ಬಣ್ಣಗಳೊಂದಿಗಿನ ಆಟ, ಒಡನಾಟ ಯಾರಿಗೆ ಇಷ್ಟವಿಲ್ಲ? ಬಣ್ಣಗಳಿಲ್ಲದ ಬಾಲ್ಯವನ್ನು ಊಹಿಸಿಕೊಳ್ಳಲೂ ಆಗದು, ಬಣ್ಣಗಳು ತೆರೆದಿಡುವ ಲೋಕವನ್ನು ಪದಗಳು ಬಣ್ಣಿಸಲಾರವು. ಜೀವನದ ಸಮೃದ್ಧಿ, ಸೌಂದರ್ಯ, ಬದುಕಿನ ಅನುಭವಗಳ ಹಲವು ಆಯಾಮಗಳು, ಬಾಳಿನ ಏರುಪೇರುಗಳು ಎಲ್ಲವನ್ನೂ ಅನಾವರಣಗೊಳಿಸಬಲ್ಲ ಶಕ್ತಿ ಬಣ್ಣಗಳಿಗಿವೆ.

ಬಣ್ಣಗಳು ಎಂತಹ ಭಾವಪ್ರಚೋದಕಗಳು ಎಂಬುದನ್ನೇನೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೆಳಗಿನ ಬಂಗಾರದ ಕಿರಣಗಳು ಅಂಗಳದ ತಿಳಿಹಸಿರನ್ನು ಹಾಯ್ದು ಹಚ್ಚ ಹಳದಿ ಗುಲಾಬಿಯ ಕೆನ್ನೆ ಸವರಿ ಕಣ್ಣಿನಲ್ಲೇನೋ ಹೊಳಪು ಮೂಡಿಸಿ ಎದೆಯಲ್ಲಿ ಚೈತನ್ಯದ ಹೊಳೆಯನ್ನು ಹರಿಸುವ ಬಗೆ ಯಾವ ಅಲೌಕಿಕ ಅನುಭವಕ್ಕೂ ಕಡಿಮೆಯೇನಿಲ್ಲ. ಹೂವುಗಳು, ಎಲೆಗಳು ಅವುಗಳ ನೂರಾರು ಬಣ್ಣ ಆಕಾರಗಳು ನೀಡುವ ಮೋಹಕ, ದಿವ್ಯ ನೋಟವನ್ನು ಸವಿಯುವ ಕಣ್ಣು, ಮನಸ್ಸಿದ್ದರೆ ಅದಕ್ಕಿಂತ ಬೇರೆ ಸೌಭಾಗ್ಯ ಬೇಕೇ?

ಭಾರತೀಯ ಹೆಣ್ಣಿಗಂತೂ ಸೀರೆಯಂಗಡಿಯ ಹೊಕ್ಕು ನೋಡುವ ಸಂಭ್ರಮ ಹೋಳಿಹಬ್ಬದ ಸಂಭ್ರಮಕ್ಕೆ ಸರಿಸಾಟಿಯಾದುದೇ ಹೌದು. ಎಷ್ಟೆಲ್ಲ ಛಾಯೆಗಳಿದ್ದರೂ ಅವೆಲ್ಲವನ್ನೂ ಒಂದೇ ಬಣ್ಣದ ಹೆಸರಿನಿಂದ ಹಸಿರು, ನೀಲಿ, ಕೆಂಪು ಎಂದೆಲ್ಲ ಗುರುತಿಸುವುದು ಅನ್ಯಾಯವಲ್ಲವೇ? ಅದೇಕೋ ಪದೇ ಪದೇ ಕಿತ್ತಳೆಬಣ್ಣವೋ, ತಿಳಿ ಗುಲಾಬಿಗೆ ಜೊತೆಯಾಗುವ ಗಾಢಕೆಂಪೋ, ನೇರಳೆ-ಬಿಳಿಯ ಸೆಳೆತವೋ – ಒಟ್ಟಿನಲ್ಲಿ ಒಂದೇ ಬಣ್ಣದ ಸೀರೆ ಪ್ರತಿಬಾರಿಯೂ ಗಂಟು ಬೀಳುತ್ತಿದೆಯಲ್ಲಾ, ಏಕಿರಬಹುದು ಎಂಬ ಗಹನ ಚಿಂತನೆ–ಚಿಂತೆಯೂ ಕಾಡುವುದಿದೆ. ನಮ್ಮಾಸೆಯ ಬಣ್ಣಗಳು ನಮ್ಮ ಭಾವದ ಬಣ್ಣಗಳು ಎಂಬುದನ್ನು ನಂಬಬೇಕೆ? ನಮ್ಮ ಬಣ್ಣಗಳ ಆಯ್ಕೆಯ ಹಿಂದೆ ನಮ್ಮ ಬದುಕಿನ ಯಾವುದೋ ರಹಸ್ಯದಂತಿದ್ದು ಏನೂ ಇರಲಾರದು ಎನಿಸಿದರೂ ಅದ್ಯಾಕೆ ನಮ್ಮ ಆಯ್ಕೆಗಳನ್ನು ಬದಲಾಯಿಸಿಕೊಳ್ಳುವುದು ಅಷ್ಟು ಕಷ್ಟ? ಒಂದು ಬಣ್ಣ ಇನ್ನೊಂದಕ್ಕೆ ಜೊತೆಯಾಗಿ ಮತ್ತೊಂದು ಬಣ್ಣವಾಗೋದು; ಬಿಳಿ, ಕಪ್ಪುಬಣ್ಣಗಳನ್ನು ಸೇರಿಸಿಕೊಂಡು ತಿಳಿಯಾಗೋದು, ಗಾಢವಾಗೋದು; ಕಪ್ಪು ಒಂದು ಚುಕ್ಕೆಯೇ ಆಗಿದ್ರೂ ಸಾಕು ಎದ್ದು ಕಾಣೋದು; ಕಪ್ಪು ಗೆರೆಗಳಿಂದಲೇ ಚಿತ್ತಾರವು ಕಣ್ಣಿಗೆ ಆಕರ್ಷಕವಾಗಿ ಕಾಣೋದು, ಬಾಂಧವ್ಯವಿಲ್ಲದ ಬಣ್ಣಗಳು ಸೇರಿ ಕೆಸರಿನ ನೀರಿನಂತಾಗೋದು - ಇವೆಲ್ಲಾ ಕೇವಲ ಬಣ್ಣಗಳ ಲೋಕದ ವಿದ್ಯಮಾನಗಳಷ್ಟೇ ಎಂದು ಎಷ್ಟು ಹೇಳಿದರೂ ಯಾರೂ ಒಪ್ಪುವುದೇ ಇಲ್ಲ.

ಪರಿಣತರು ಉಪ್ಪಿಟ್ಟಿನದೋ ದೋಸೆಯದೋ ಸಾರಿನದೋ ಬಣ್ಣ ನೋಡಿಯೇ ಅದರ ರುಚಿಯನ್ನು ಅಳೆದುಬಿಡುವಂತೆ ನಮ್ಮ ರುಚಿ, ಅಭಿರುಚಿಯನ್ನು ನಮ್ಮ ಬದುಕಿನ ಬಣ್ಣಗಳೇ ಹೇಳಿಬಿಡುತ್ತವಾ? ನಾವ್ಯಾಕೆ ನಮ್ಮ ಹಣೆಬರಹ ಒಂದೇ ಬಣ್ಣದಲ್ಲಿ ಬರೆದುಬಿಟ್ಟಿದೆ ಎಂಬಂತೆ ಒಂದೇ ರೀತಿಯ ಬದುಕಿಗೆ ಜೋತುಬೀಳಬೇಕು? ಆಗಾಗ ನಮಗೊಪ್ಪುವುದಿಲ್ಲ ಎನಿಸುವ ಬಣ್ಣಗಳನ್ನೇಕೆ ಧರಿಸಿ ನೋಡಬಾರದು? ಸ್ವಲ್ಪ ಇರುಸು ಮುರುಸಾದರೆ ಆಗಲಿ, ಆ ಸಣ್ಣ ಕಸಿವಿಸಿ, ಚಡಪಡಿಕೆಗೂ ಅದರದೇ ಒಂದು ಬಣ್ಣವಿದೆ, ಕಾಣಿಸುತ್ತಿಲ್ಲವೇ? ಬದುಕಿಗೆಲ್ಲಾ ಒಂದೇ ಗಾಢನೀಲಿ ಅಂಟಿಬಿಟ್ಟಿದೆಯೇನೋ, ಒಂದೇ ಬೇಸರ ಜಡ್ಡುಗಟ್ಟಿಸಿಬಿಟ್ಟಿದೆಯೇನೋ ಎಂಬ ನಂಬಿಕೆ ಅಷ್ಟು ನಿಜವಿಲ್ಲದಿರಲೂಬಹುದು. ಎಲ್ಲ ಸುಖ, ದುಃಖಗಳೂ ಒಂದೇ ಬಣ್ಣದ ಸಂತೋಷ, ಸಂಕಟದ ಬೇಸರ ತರಿಸುವುದಿಲ್ಲ, ಅದರಲ್ಲೂ ನೂರಾರು ಬಣ್ಣಗಳಿವೆ. ಬೇಕಾಗಿದ್ದರೂ ಬೇಡವೆನಿಸುವ, ನೋವಿದ್ದರೂ ಸುಖವೆನಿಸುವ, ಹತ್ತಿರವಿದ್ದರೂ ಕಣ್ಣಿಗೆ ಕಾಣದ, ಕಳೆದುಹೋಗಿದ್ದರೂ ಭದ್ರವಾಗಿರುವ, ಜಗಳವಿದ್ದರೂ ನಂಬಿಕೆಯಿರುವ, ಮಾತಿಲ್ಲದಿದ್ದರೂ ಮನತುಂಬಿರುವ, ಹೆಸರೇ ಗೊತ್ತಿಲ್ಲದಿದ್ದರೂ ಹೃದಯದಲ್ಲಿ ತುಳುಕುತ್ತಿರುವ ಎಷ್ಟೆಲ್ಲ ಬಣ್ಣಗಳನ್ನು ಆಗಾಗ ಹೊರತೆಗೆದು 'ನಾನೆಂದರೆ ಇಷ್ಟೇ ಅಲ್ಲ, ಇನ್ನೂ ಎಷ್ಟೆಷ್ಟೋ' ಅನಿಸುವ ಹಾಗೆ ಯಾವ ಬಂಧನಗಳೂ ಇರದೆ ಬಣ್ಣಗಳ ಲೋಕದಲ್ಲಿ ಆಡುತ್ತಾ, ವಿಸ್ತಾರವಾಗುತ್ತಾ ಹೊಸ ಹೊಸ ಬಣ್ಣಗಳನ್ನು ಒಬ್ಬರಿಗೊಬ್ಬರು ಪರಿಚಯಿಸುತ್ತಾ ಸಾಗೋಣ.

ಎಚ್ಚರಿಕೆಯ ಸಂಭ್ರಮ...

ಹೋಳಿ. ಈ ಹಬ್ಬವನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಹೋಳಿಕ, ಹೋಳೀ, ಹೋಳಕಾ, ವಸಂತೋತ್ಸವ, ಕಾಮನ ಹಬ್ಬ – ಹೀಗೆ. 

ಈ ಹಬ್ಬದ ಹಿನ್ನೆಲೆಯಲ್ಲಿರುವುದು ಪ್ರಧಾನವಾಗಿ ಎರಡು ಕಥೆಗಳು. ಬಹಳ ಹಿಂದೆ, ‘ಢುಂಢಾ’ ಎಂಬ ರಾಕ್ಷಸಿಯೊಬ್ಬಳು ಮಕ್ಕಳನ್ನು ಕೊಲ್ಲುತ್ತಿದ್ದಳಂತೆ. ಮಕ್ಕಳನ್ನು ಹೊರತು ಪಡಿಸಿ ಬೇರೆ ಯಾರಿಂದಲೂ ತನಗೆ ಸಾವು ಬರಬಾರದೆಂದು ವರವನ್ನು ಪಡೆದಿದ್ದಳಂತೆ. ಅವಳ ಅಟ್ಟಹಾಸ ಅತಿಯಾಗಲು ಕೊನೆಗೆ ಮಕ್ಕಳೆಲ್ಲ ಸೇರಿ, ಸೌದೆ ಕಸ ಕಡ್ಡಿ ಮುಂತಾದವನ್ನು ಸಂಗ್ರಹಿಸಿ ದೊಡ್ಡದಾದ ಉರಿಯನ್ನು ಸಿದ್ಧಪಡಿಸಿದರಂತೆ. ಅದರಿಂದ ಭಯಗೊಂಡ ಆ ರಾಕ್ಷಸಿ ಓಡಿಹೋದಳಂತೆ. ಈ ಸಂತೋಷದ ಆಚರಣೆಯೇ ಹೋಳಿಹಬ್ಬದ ಸಂಭ್ರಕ್ಕೆ ಮೂಲ.

ಇನ್ನೊಂದು ಕಥೆ. ತಪಸ್ಸಿನಲ್ಲಿದ್ದ ಶಿವನ ಸಮಾಧಿಯ ಭಂಗವನ್ನು ಮಾಡಿದ ಕಾಮದೇವನನ್ನು ಅವನು ದಹಿಸಿಬಿಡುತ್ತಾನೆ. ಅದರ ನೆನಪಿನಲ್ಲಿಯೇ ಹೋಳಿಹಬ್ಬದಲ್ಲಿ ಕಾಮದಹನ ನಡೆಯುತ್ತದೆ. ಬಳಿಕ ಶಿವನು ರತಿಯ ಸಂತಾಪದಿಂದ ಕರುಣೆಗೊಂಡು, ಕಾಮನಿಗೆ ಜೀವವನ್ನೂ ಕೊಡುತ್ತಾನೆ.

ಹೋಳಿಹಬ್ಬವನ್ನು ‘ಕಾಮದಹನ’ ಎಂದೂ ಕರೆಯಲಾಗುತ್ತದೆ – ‘ಮನ್ಮಥನನ್ನು ಸುಡುವುದು’ ಎಂದು ಇದರ ಅರ್ಥ. ಈ ಸಂದರ್ಭದ ಸ್ವಾರಸ್ವವನ್ನು ಕಾಳಿದಾಸನ ‘ಕುಮಾರಸಂಭವ’ದಲ್ಲಿ ನೋಡಬಹುದು.

ಎರಡೂ ಕಥೆಗಳಲ್ಲಿರುವ ಪ್ರಧಾನ ತಾತ್ಪರ್ಯ ಜೀವನೋತ್ಸಾಹ. ಮಕ್ಕಳನ್ನು ಭಯಪಡಿಸುವ ರಾಕ್ಷಸತ್ವ ಮರೆಯಾಗಬೇಕು; ಅವರ ವಿಕಾಸಕ್ಕೆ ಪೂರಕವಾಗಿರುವ ವಾತಾವರಣ ನೆಲೆಯಾಗಬೇಕು. ಇದು ಮೊದಲ ಕಥೆಯ ಧ್ವನಿ. ಜೀವನದಲ್ಲಿ ಎಲ್ಲ ಪುರುಷಾರ್ಥಗಳಿಗೂ ಅವಕಾಶವಿದೆ. ಹೀಗೆಯೇ ಕಾಮಕ್ಕೂ ಇದೆ. ಆದರೆ ಅದು ಅಕಾಲಕಾಮವಾದರೆ ಅದನ್ನು ಸುಡಬೇಕು; ಸಕಾಮ ಎನ್ನುವುದು ಜೀವಪೋಷಕವಾದುದು. ಇದು ಎರಡನೆಯ ಕಥೆಯ ಧ್ವನಿ. ಜೀವನದಲ್ಲಿ ಸಂತೋಷ ಪಡುವುದು ತಪ್ಪಲ್ಲ; ಆದರೆ ಅದು ಎಚ್ಚರಿಕೆಯಿಂದ ಕೂಡಿದ, ಹೊಣೆಗಾರಿಕೆಯಿಂದ ಹೆಜ್ಜೆ ಹಾಕುವ ಸಂಭ್ರಮ ಎನ್ನುವುದೇ ಹೋಳಿಯ ಸಂದೇಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)