ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸಂಭವದಲ್ಲಿ ಮಾರಸಂಭವ

Last Updated 4 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ತಾರಕಾಸುರನ ಉಪಟಳವನ್ನು ಇನ್ನಿಲ್ಲವಾಗಿಸಲು ಹೋಗಿ ಹರನ ಹಣೆಗಣ್ಣಿನುರಿಗೆ ಸಿಲುಕಿ ಲೋಕಹಿತಯಜ್ಞದಲ್ಲಿ ಸಮಿತ್ತಿನಂತೆ ಉರಿದವನೇ ಕಾಮ. ಸುಟ್ಟು ಹೋದರೂ ತಾರಕನ ಹುಟ್ಟಡಗಿಸುವವನ ಹುಟ್ಟಿನಿಂದಲೇ ಅವನು ಮತ್ತೆ ಬದುಕಿದ. ‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ’ ಎಂಬ ಗಾದೆಯ ಭಾಷ್ಯದಂತಿದೆ ಈ ಘಟನೆ.

ಕಾಮವು ಧರ್ಮದ ಚೌಕಟ್ಟಿನಲ್ಲಿ ಇದ್ದಾಗ ಮಾತ್ರ ಪುರುಷಾರ್ಥವೆನಿಸುತ್ತದೆ. ಹಾಗಿಲ್ಲದಿದ್ದರೆ ಅದು ಅರಿಷಡ್ವರ್ಗದಲ್ಲಿ ಸೇರುತ್ತದೆ. ಅದನ್ನೇ ಗೀತೆಯಲ್ಲಿ ಶ್ರೀಕೃಷ್ಣನು ‘ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ’, ‘ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ | ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್’ ಎಂದಿದ್ದಾನೆ. ಇಂತಹ ಆರ್ಷದೃಷ್ಟಿಯ ವಿಸ್ತರಣವನ್ನು ಮಹಾಕವಿ ಕಾಳಿದಾಸನು ಕುಮಾರಸಂಭವದಲ್ಲಿ ಕಾವ್ಯಮಾರ್ಗದ ಮೂಲಕ ಸೊಗಸಾಗಿ ಮಾಡಿದ್ದಾನೆ.

ತಾರಕನಿಂದ ಪೀಡಿತರಾದ ದೇವತೆಗಳ ಮಾತುಗಳನ್ನಾಲಿಸಿದ ಬ್ರಹ್ಮನು ‘ಶಂಭುವಿನಿಂದ ಹುಟ್ಟುವ ಮಗನು ದೇವಸೇನಾಪತಿಯಾದರೆ ಈ ತೊಂದರೆಗಳು ನಿವಾರಿತವಾಗುತ್ತವೆ. ಅದಕ್ಕಾಗಿ ಅವನ ಸಂಯಮಸ್ತಿಮಿತವಾದ ಮನಸ್ಸನ್ನು ಉಮೆಯ ಮೂಲಕ ಸೆಳೆಯಬೇಕು’ ಎಂದನು. ಇದನ್ನು ಕೇಳಿದ ಇಂದ್ರನು ಅಂತಹ ಕೆಲಸವನ್ನು ಸಾಧಿಸಲು ಮನ್ಮಥನನ್ನು ನಿಯೋಜಿಸುತ್ತಾನೆ. ದಾಕ್ಷಾಯಣಿಯ ವಿಯೋಗದ ಬಳಿಕ ತಪಸ್ಸಿನಲ್ಲಿ ಮಗ್ನನಾದ ಶಿವನ ಪರಿಚರ್ಯೆಗಾಗಿ ಹಿಮವಂತನು ಪ್ರತಿದಿನವೂ ತನ್ನ ಮಗಳಾದ ಪಾರ್ವತಿಯನ್ನು ಕಳುಹಿಸುತ್ತಿರುತ್ತಾನೆ.

ಮನ್ಮಥನು ಆ ತಪೋವನದ ಸುತ್ತಲೂ ಅಕಾಲವಸಂತವು ಉಂಟಾಗುವಂತೆ ಮಾಡುತ್ತಾನೆ. ಪಾರ್ವತಿಯು ಎಂದಿನಂತೆ ಬಂದು ಶಿವನಿಗೆ ನಮಸ್ಕರಿಸಿ ತಾನು ತಂದ ಅಕ್ಷಮಾಲಿಕೆಯನ್ನು ಅವನಿಗೆ ಕೊಡಲು ಮುಂದಾದಾಗ ಇದೇ ಸರಿಯಾದ ಸಮಯವೆಂದು ಮನ್ಮಥನು ಸಂಮೋಹನಾಸ್ತ್ರಕ್ಕೆ ಬಾಣವನ್ನು ಹೂಡುತ್ತಾನೆ. ಆಗ ಶಿವನ ಮನಸ್ಸು ಕ್ಷುಬ್ಧವಾಗಿ ತನ್ನ ಮೂರೂ ಕಣ್ಣುಗಳನ್ನು ತೆರೆದನು. ಎದುರಿಗೇ ಇದ್ದ ಪಾರ್ವತಿಯ ಮುಖದಲ್ಲಿರುವ ತೊಂಡೆಹಣ್ಣಿನಂತಹ ತುಟಿಗಳನ್ನು ನೋಡಿದನು. ಬಳಿಕ ತನ್ನೀ ಕ್ಷುಬ್ಧತೆಗೆ ಕಾರಣವೇನೆಂದು ಮುಂದೆ ನೋಡಿದಾಗ ಬಾಣವನ್ನು ಹೂಡಲು ಸಿದ್ಧನಾಗಿರುವ ಮನ್ಮಥನು ಕಾಣಿಸುತ್ತಾನೆ. ಒಮ್ಮೆಲೇ ಕ್ರುದ್ಧನಾದ ಅವನ ಹಣೆಗಣ್ಣು ಬೆಂಕಿಯನ್ನುಗುಳಲು ತೊಡಗಿತು. ಆಕಾಶದಲ್ಲಿರುವ ದೇವತೆಗಳೆಲ್ಲರೂ ‘ಪ್ರಭುವೇ! ಕ್ರೋಧವನ್ನು ಬಿಟ್ಟುಬಿಡು, ಬಿಟ್ಟುಬಿಡು’ ಎಂದು ಹೇಳುತ್ತಿರುವಷ್ಟರಲ್ಲಿಯೇ ಆ ಬೆಂಕಿಯು ಮನ್ಮಥನನ್ನು ಭಸ್ಮಾವಶೇಷನನ್ನಾಗಿ ಮಾಡಿತು.

ಈ ಮೇಲಿನ ಘಟನೆಯನ್ನು ಹೇಳುವ ಶ್ಲೋಕದಲ್ಲಿ ಕಾಳಿದಾಸನು ‘ತಾವತ್ ಸ ವಹ್ನಿರ್ಭವನೇತ್ರಜನ್ಮಾ ಭಸ್ಮಾವಶೇಷಂ ಮದನಂ ಚಕಾರ’ ಎಂದಿದ್ದಾನೆ. ಇಲ್ಲಿ ಶಿವನನ್ನು ಹೇಳಲು ‘ಭವ’ ಎಂಬ ಶಬ್ದವನ್ನು ಬಳಸಲಾಗಿದೆ. ‘ಭವಂತಿ ಭೂತಾನಿ ಅಸ್ಮಾದಿತಿ ಭವಃ’ ಎಂಬ ನಿಷ್ಪತ್ತಿಯಂತೆ ಹುಟ್ಟಿಗೆ ಕಾರಣನಾಗುವವನಿಗೆ ಭವ ಎಂದು ಕರೆಯುವುದು ಸರಿ. ಆದರೆ ಇಲ್ಲಿ ಮನ್ಮಥನನ್ನು ಸುಟ್ಟುಹಾಕುವ ಪ್ರಸಂಗದಲ್ಲಿ ಆ ನಾಮವನ್ನು ಬಳಸಿದ್ದು ಅನುಚಿತ ಎಂದು ಪ್ರಸಿದ್ಧ ಆಲಂಕಾರಿಕನಾದ ಕ್ಷೇಮೇಂದ್ರನು ಔಚಿತ್ಯವಿಚಾರಚರ್ಚೆಯಲ್ಲಿ ಆಕ್ಷೇಪಿಸಿದ್ದಾನೆ.

ಹರ ಇತ್ಯಾದಿ ಬೇರೆ ಶಬ್ದವನ್ನು ಬಳಸಿದ್ದರೆ ಸರಿಯಾಗುತ್ತಿತ್ತೆಂದು ಅವನ ಇಂಗಿತ. ಆದರೆ ಈ ಪದ್ಯವು ಕಾಳಿದಾಸನದ್ದೆಂಬುದನ್ನು ನಾವು ಮರೆಯಬಾರದು. ಮುಂದೆ ರತಿಯು ಮನ್ಮಥನನ್ನು ಕಳೆದುಕೊಂಡು ಗೋಳಾಡಿ ಪ್ರಾಣವನ್ನು ತೊರೆಯಲು ಹೊರಟಾಗ ಆಗುವ ಆಕಾಶವಾಣಿಯೊಂದು ‘ಯಾವಾಗ ಹರನು ಪಾರ್ವತಿಯನ್ನು ವರಿಸಿ ಸುಖವನ್ನು ಹೊಂದುತ್ತಾನೋ ಆಗ ಸ್ಮರನು ತನ್ನ ದೇಹವನ್ನು ಮರಳಿ ಪಡೆಯುತ್ತಾನೆ’ ಎಂದು ತಿಳಿಸುತ್ತದೆ. ಮುಂದೆ ಪಾರ್ವತೀಪರಶಿವರ ಸಮಾಗಮದಿಂದ ಉಂಟಾಗುವ ಕುಮಾರಸಂಭವದಲ್ಲಿ ಅಡಗಿದ ಮಾರಸಂಭವವನ್ನು ಧ್ವನಿಸುವುದಕ್ಕಾಗಿಯೇ ಆ ಶ್ಲೋಕದಲ್ಲಿ ಭವಪದವನ್ನು ಬಳಸಿರಬೇಕು.

ಪ್ರೀತಿಯ ಸಂಕೇತ

ಸೌರಮಂಡಲದಲ್ಲಿ ಸೂರ್ಯನೇ ಆದಿಕಲಾವಿದ. ಉದಯಾಸ್ತಮಾನಗಳೇ ಅವನು ಬಣ್ಣಗಳು; ಆಗಸವೇ ಅವನ ಕಲಾಭಿತ್ತಿ. ಅವನ ಕಿರಣಗಳೇ ಕುಂಚಗಳು. ವಸಂತಋತುವಿನಲ್ಲಿ ಗಿಡಮರಗಳ ಚಿಗುರುಗಳ ಮೂಲಕ ಬಣ್ಣಗಳ ಸಂಭ್ರಮವನ್ನು ಅವನು ಲೋಕಕ್ಕೆ ನೀಡುತ್ತಾನೆ. ಬಣ್ಣಗಳು ಪ್ರೀತಿಯ ಸಂಕೇತ; ಜೀವನಸೌಂದರ್ಯದ ಸಂಕೇತ.

ಬಿ. ಕೆ. ಎಸ್‌. ವರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT