ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಅವನು ನನಗೆ ಪ್ರಿಯ

Last Updated 22 ಜುಲೈ 2020, 19:31 IST
ಅಕ್ಷರ ಗಾತ್ರ

ಶ್ರೀಮದ್ಭಗವದ್ಗೀತೆಯ ಹನ್ನೆರಡನೇ ಅಧ್ಯಾಯವಾದ ‘ಭಕ್ತಿಯೋಗ’ದಲ್ಲಿ ಭಗವಾನ್ ಶ್ರೀಕೃಷ್ಣನು ‘ತನ್ನ ಎಂತಹ ಭಕ್ತನು ತನಗೆ ಪ್ರಿಯನು,’ ಎಂಬ ವಿಷಯವನ್ನು ಹದಿನಾಲ್ಕರಿಂದ ಇಪ್ಪತ್ತರವರೆಗಿನ ಏಳು ಶ್ಲೋಕಗಳಲ್ಲಿ ವಿವರಿಸಿದ್ದಾನೆ.

ಯಾವ ಪುರುಷನು ಎಲ್ಲ ಪ್ರಾಣಿಗಳಲ್ಲಿಯೂ ದ್ವೇಷರಹಿತನಾಗಿ, ಸ್ವಾರ್ಥರಹಿತನಾಗಿ ಎಲ್ಲರ ಪ್ರೇಮಿಯಾಗಿದ್ದಾನೋ ಮತ್ತು ಯಾವ ಕಾರಣವೂ ಇಲ್ಲದೇ ಎಲ್ಲರ ಮೇಲೂ ದಯಾಳುವಾಗಿದ್ದಾನೆಯೋ ಹಾಗೂ ಮಮಕಾರವಿಲ್ಲದೇ ಅಹಂಕಾರರಹಿತನೂ ಕ್ಷಮಾಶೀಲನಾಗಿಯೂ ಸುಖ-ದುಃಖಗಳನ್ನು ಏಕಪ್ರಕಾರವಾಗಿ ಸ್ವೀಕರಿಸುವವನೂ ಆಗಿರುವನೋ, ಯಾವ ಯೋಗಿಯು ಯಾವಾಗಲೂ ಮನಸ್ಸು ಮತ್ತು ಇಂದ್ರಿಯಗಳ ಸಮೇತ ಸಂಪೂರ್ಣ ಶರೀರದ ಮೇಲೆ ನಿಗ್ರಹ ಹೊಂದಿರುವನೋ ಮತ್ತು ನನ್ನಲ್ಲಿ ಬುದ್ಧಿ ಮನಸ್ಸುಗಳನ್ನಿಟ್ಟು, ದೃಢವಾದ ನಿಶ್ಚಯವುಳ್ಳವನಾಗಿದ್ದಾನೆಯೋ ಅವನು ನನಗೆ ಪ್ರಿಯನು – ಎನ್ನುತ್ತಾನೆ ಶ್ರೀಕೃಷ್ಣ.

ಹಾಗೆಯೇ ಮುಂದುವರೆಸುತ್ತಾ ಯಾವನು ಹರ್ಷ, ಅಸೂಯೆ, ಭಯ, ಉದ್ವೇಗರಹಿತನಾಗಿದ್ದಾನೆಯೋ ಹಾಗೆಯೇ ತಾನೂ ಪರರಿಗೂ ಯಾವುದೇ ರೀತಿಯ ಉದ್ವೇಗವನ್ನುಂಟು ಮಾಡುವುದಿಲ್ಲವೋ ಅಂತಹವನು ನನಗೆ ಪ್ರಿಯನು ಎನ್ನುತ್ತಾನೆ. ಯಾವ ಪುರುಷನು ಆಕಾಂಕ್ಷಾರಹಿತನೋ, ಯಾವನ ಮನಸ್ಸು ಮತ್ತು ದೇಹ ಎರಡೂ ಶುದ್ಧವೋ ದಕ್ಷನೂ ಪಕ್ಷಪಾತ ಮಾಡದೇ ಇರುವವನೂ ಮತ್ತು ತಾನು ಮಾಡುವ ಯಾವುದೇ ಕರ್ಮಗಳಲ್ಲಿ ದುರಭಿಮಾನ ಹೊಂದದೇ, ಎಲ್ಲ ಕ್ರಿಯೆಗಳ ಕರ್ತೃತ್ವವನ್ನೂ ನನಗೇ ಅರ್ಪಿಸಿಬಿಡುವವನೇ ನನಗೆ ಅತ್ಯಂತ ಪ್ರಿಯನಾದವನು ಎನ್ನುತ್ತಾನೆ.

ಮುಂದಿನ ಶ್ಲೋಕದಲ್ಲಿ ಯಾರು ಎಂದಿಗೂ ಹರ್ಷಿತನಾಗುವುದಿಲ್ಲವೋ, ದ್ವೇಷಿಸುವುದಿಲ್ಲವೋ, ದುಃಖಿಸುವುದೂ ಇಲ್ಲವೋ, ಏನನ್ನೂ ಅಪೇಕ್ಷಿಸುವುದೂ ಇಲ್ಲವೋ ಅಂತಹ ಭಕ್ತನು ತನಗೆ ಪ್ರಿಯನು ಎನ್ನುತ್ತಾನೆ.

ಯಾರು ಶತ್ರು ಮತ್ತು ಮಿತ್ರರಲ್ಲಿ, ಮಾನಾಪಮಾನಗಳಲ್ಲಿ, ಸುಖ, ದುಃಖಾದಿ ದ್ವಂದ್ವಗಳಲ್ಲಿ ಸಮನಾಗಿದ್ದಾನೆಯೋ ಆತ ನನಗೆ ಪ್ರಿಯನು ಎನ್ನುತ್ತಾನೆ.

ಯಾವ ಮನುಷ್ಯನು ಹೊಗಳಿಕೆ ಮತ್ತು ತೆಗಳಿಕೆಗಳನ್ನು ಏಕಮಾತ್ರವಾಗಿ ಸ್ವೀಕರಿಸುವನೋ ಹಾಗೆಯೇ ಅಲ್ಪತೃಪ್ತನಾಗಿದ್ದಾನೆಯೋ, ಯಾವನು ಅನವಶ್ಯಕ ಮಾತನಾಡದೇ (ಮನಸ್ಸಿನಿಂದಲೂ ಸಹ) ಮನನಶೀಲನಾಗಿರುತ್ತಾನೆಯೋ, ಸ್ಥಿರಬುದ್ಧಿಯುಳ್ಳವನೂ ಆದ ಭಕ್ತನು ತನಗೆ ಪ್ರಿಯನು ಎನ್ನುತ್ತಾನೆ.

ಇಲ್ಲಿಯವರೆಗೆ ಸಿದ್ಧಭಕ್ತರ ಲಕ್ಷಣಗಳನ್ನು ವಿವರಿಸುವ ಭಗವಂತ, ಆ ಎಲ್ಲ ಲಕ್ಷಣಗಳನ್ನು ಆದರ್ಶಗಳೆಂದು ತಿಳಿದು, ಅತ್ಯಂತ ಶ್ರದ್ಧೆಯಿಂದ, ಪ್ರಯತ್ನಪೂರ್ವಕವಾಗಿ ಆಚರಿಸುವ ತನ್ನ ಶರಣಾಗತ ಭಕ್ತರನ್ನು ಹೊಗಳುತ್ತಾ ಅಂತಹ ನನ್ನೆಲ್ಲಾ ಭಕ್ತರು ನನಗೆ ಅತ್ಯಂತ ಪ್ರಿಯರಾಗಿದ್ದಾರೆ ಎಂದು ಭಕ್ತಿಯೋಗದ ಕೊನೆಯ ಶ್ಲೋಕದಲ್ಲಿ ತಿಳಿಸುತ್ತಾ ಈ ಅಧ್ಯಾಯದ ಉಪಸಂಹಾರ ಮಾಡುತ್ತಾನೆ.

ಸಾಮಾನ್ಯರಾದ ನಮಗೆ ಇವುಗಳು ಅತ್ಯಂತ ಕಠಿಣವಾದ ನಿಯಮಗಳು ಎನಿಸಬಹುದು. ಆದರೆ ಯಾವ ಸಿದ್ಧಭಕ್ತರಿಗೆ ಭಗವಂತನ ಪ್ರಾಪ್ತಿಯಾಗಿದೆಯೋ ಅವರಲ್ಲಿ ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಸ್ವಾಭಾವಿಕವಾಗಿಯೇ ಇರುತ್ತವೆ. ಆದರೆ ಭಗವಂತನ ಪ್ರತ್ಯಕ್ಷ ದರ್ಶನವಾಗದ ಭಕ್ತರೂ ಕೂಡ ಪರಮಾತ್ಮನಲ್ಲಿ ವಿಶ್ವಾಸವಿಟ್ಟು ನಿಷ್ಕಾಮಭಾವದಿಂದ ಆತನ ಚಿಂತನೆ ಮಾಡುತ್ತಾ, ಮೇಲೆ ಹೇಳಿದ ಲಕ್ಷಣಗಳಿಗನುಸಾರವಾಗಿಯೇ ತಮ್ಮ ಜೀವನವನ್ನು ಕಳೆಯಲು ಪ್ರಯತ್ನಿಸಬೇಕು. ಅಂತಹವರು ಭಗವಂತನ ವಿಶೇಷ ಪ್ರೀತಿಗೆ ಪಾತ್ರರಾಗಿರುತ್ತಾರೆ ಮತ್ತು ಅಂತಹವರಿಗೆ ತನ್ನ ನಿತ್ಯಸಂಗವನ್ನು ಕೊಡುವ ತನಕ ಪರಮಾತ್ಮನು ಅವರ ಋಣಿಯೇ ಆಗಿರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT