ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಶ್ರೀ ಅರವಿಂದರ ‘ಸಾವಿತ್ರಿ’

ಓದಿನ ಸುಖ
Last Updated 8 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""

ಮಾನವಜೀವನದ ಪರಮಗುರಿ ಯಾವುದು? ಅನಾದಿ ಕಾಲದಿಂದಲೂ ಈ ಪ್ರಶ್ನೆ ಆದರೂ ಉತ್ತರಗಳು ಮಾತ್ರ ಹಲವಾರು, ಒಂದೊಂದು ಅದರದರ ಭಿನ್ನಭಿನ್ನ ನೆಲೆಯಲ್ಲಿ. ಇವುಗಳಲ್ಲಿ ‘ಮೋಕ್ಷ’ ಅಥವಾ ‘ಅಮೃತತ್ತ್ವ’ವನ್ನು ನಮ್ಮ ಇಹಜೀವನದಲ್ಲಿ ಸಾಕ್ಷಾತ್ಕಾರಗೊಳಿಸಿಕೊಳ್ಳುವುದೂ ಸಹ ಒಂದು ಗುರಿಯಾಗಿ ಪರಿಗಣಿಸಲ್ಪಟ್ಟಿದೆ. ಇದಕ್ಕೂ ಹಲವು ಮಾರ್ಗಗಳಿವೆ. ಅಂತಹ ಒಂದು ಮಾರ್ಗದ ಸಾಧಕರಿಗೆ ಮಾರ್ಗಸೂಚಿಯಾಗಿ ನಿಲ್ಲುವಂತಹ ಕಾವ್ಯ ಶ್ರೀ ಅರವಿಂದರ ‘ಸಾವಿತ್ರಿ’.

ಮಹಾಭಾರತದ ವನಪರ್ವದಲ್ಲಿ ಬರುವ ‘ಸತ್ಯವಾನ ಸಾವಿತ್ರಿ’ಯರ ಕಥೆ ನಮಗೆಲ್ಲ ಗೊತ್ತಿರುವಂಥದ್ದೇ. ಇದೇ ಕಥೆಯ ಹಂದರವನ್ನು ಬಳಸಿ, ಪ್ರತೀಕಾತ್ಮಕವಾಗಿರುವ ಈ ಕಥೆಯ ಮುಖ್ಯ ಪಾತ್ರಗಳಾದ ಸತ್ಯವಾನ, ಸಾವಿತ್ರಿ, ಅಶ್ವಪತಿ, ದ್ಯುಮತ್ಸೇನ, ಯಮ, ಮತ್ತು ನಾರದ ಇವರ ಹೆಸರಿನ ಸಂಕೇತಾರ್ಥಗಳನ್ನು ಔಚಿತ್ಯಪೂರ್ಣವಾಗಿ ವಿಸ್ತರಿಸಿ, ಮಾನವ ಜೀವನದಲ್ಲಿ ಹೇಗೆ ‘ಅಮೃತತ್ತ್ವ’ವನ್ನು ಸಾಕಾರಗೊಳಿಸಿಕೊಳ್ಳುವುದು ಸಾಧ್ಯವೆಂದು ಶ್ರೀ ಅರವಿಂದರು ಸುಮಾರು ಇಪ್ಪತ್ತನಾಲ್ಕು ಸಾವಿರ ಸಾಲುಗಳುಳ್ಳ ಈ ಮಹಾಕಾವ್ಯವನ್ನು ರಚಿಸಿ ತೋರಿಸಿದ್ದಾರೆ. ಇದು ಅವರು ಸುಮಾರು ಐವತ್ತು ವರ್ಷಗಳ ಅವಧಿಯಲ್ಲಿ ತಿದ್ದಿ, ತೀಡಿ ರಚಿಸಿದ ಕಾವ್ಯ.

ಮೊದಲ ನೋಟಕ್ಕೆ ಈ ಕಾವ್ಯವು ಓದಲು ‘ಕಬ್ಬಿಣದ ಕಡಲೆ’ ಎನಿಸುವುದು ದಿಟವೇ. ಅದಕ್ಕೆ ಕಾರಣ ಅರವಿಂದರು ಬಳಸಿರುವ ‘ಇಂಗ್ಲಿಷ್’ ಭಾಷೆಯ ಬಿಗುವಿನ ಶೈಲಿ ಮತ್ತು ವಿಶಿಷ್ಟ ಪದಗಳು. ನಮಗೆ ಗೊತ್ತಿರುವ ಸಾಮಾನ್ಯ ಅರ್ಥದಲ್ಲಿ ಗ್ರಹಿಸುವುದು ಕಷ್ಟ. ಆದರೂ ಹೆದರಬೇಕಿಲ್ಲ. ಅರ್ಥವಾಗಲಿ ಅಥವಾ ಬಿಡಲಿ ಸುಮ್ಮನೆ ಮೊದಲ ಹತ್ತು ಪುಟಗಳನ್ನೋದುತ್ತಾ ಅದರ ಕೊನೆಯ ಸಾಲನ್ನು ಓದುತ್ತಿದ್ದಂತೆ ನಿಮ್ಮ ಓದಿನ ವಿಮಾನ ‘ರನ್-ವೇ’ಯನ್ನು ಬಿಟ್ಟು ಅರ್ಥದ ಹೊಳಹಿನ ಆಕಾಶದಲ್ಲಿ ‘ಟೇಕ್-ಆಫ್’ ಆಗಿರುತ್ತದೆ. ಆಗಲೂ ನಿಮ್ಮ ದಾರಿಯಲ್ಲಿ ಮೋಡ ಕವಿದಂತೆ ಅನ್ನಿಸಿದರೆ ವಿಚಲಿತರಾಗಬೇಕಿಲ್ಲ. ನಿಮಗೆ ವೇದ, ಉಪನಿಷತ್ತುಗಳ ಹಿನ್ನೆಲೆ ಇದ್ದರೆ ಈ ಕಾವ್ಯವನ್ನು ಆನಂದಿಸಲು ಯಾವ ಮೋಡವೂ ಅಡ್ಡಿ ಮಾಡುವುದಿಲ್ಲ. ಅದೂ ಕಷ್ಟವೆನಿಸಿದರೆ ನೀವು ಋಗ್ವೇದಲ್ಲಿರುವ ‘ಪುರುಷ-ಸೂಕ್ತ’ದ ಮೊದಲೆರಡು ಋಕ್ಕುಗಳನ್ನು ತಿಳಿದರೂ ಸಾಕು ಈ ಕಾವ್ಯದ ಅರ್ಥ ಸ್ಫುಟವಾಗಿ ಗೋಚರಿಸುತ್ತಹೋಗುತ್ತದೆ.

ಕೋ. ಚೆನ್ನಬಸಪ್ಪ, ರಂ. ಶ್ರೀ. ಮುಗಳಿ, ಡಾ. ಸಿ.ಬಿ. ಪಾಟೀಲ್ ಮುಂತಾದವರು ‘ಸಾವಿತ್ರಿ’ಯ ಕನ್ನಡಾನುವಾದವನ್ನು ಮಾಡಿದ್ದಾರೆ. ಬೇಂದ್ರೆಯವರೂ ಸಹ ಈ ಕಾವ್ಯದ ಕೆಲವು ಭಾಗಗಳನ್ನು ಕನ್ನಡಿಸಿದ್ದಾರೆ. ಸಕ್ರಿಯವಾಗಿ ಈಗಲೂ ಸಾವಿತ್ರಿಯ ಕನ್ನಡ ಅನುವಾದವನ್ನು ‘ಪುಟ್ಟು ಪರುಶುರಾಮ ಕುಲಕರ್ಣಿ’ಯವರು ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲಿಯೂ ಇದರ ಓದಿಗೆ ಅನುಕೂಲವಾಗುವಂಥ ಆಕರಗಳಿಗೆ ಲೆಕ್ಕವಿಲ್ಲ. ಅಮೆರಿಕೆಯ ‘ರಾಂಡ್ ಹಿಕ್ಸ್’ ಅವರು ಬರೆದಿರುವ ಈ ಕಾವ್ಯದಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥಕೋಶ ತುಂಬಾ ಅನುಕೂಲಕರವಾಗಿದೆ. ಅದೇ ರೀತಿ ಜಮ್ಮು-ಕಾಶ್ಮೀರದ ‘ಸಯ್ಯದ್ ಮೆಹದಿ ಇಮಾಮ’ ಅವರು ಇಂಗ್ಲೀಷಿನಲ್ಲಿ ಬರೆದಿರುವ ‘ಸಾವಿತ್ರಿ ಅನ್ವೆಯಿಲ್ಡ್’ ಪುಸ್ತಕ ಭಾಷ್ಯ-ರೂಪಕವಾದ ವಿವರಣೆಯನ್ನೊಳಗೊಂಡು ಸಾವಿತ್ರೀಕಾವ್ಯವನ್ನು ಸುಲಭವಾಗಿ ತಿಳಿಯಲು ಸಹಾಯಕರವಾಗಿದೆ. ಇವರೆಲ್ಲರ ಪ್ರಯತ್ನ ಬೇಂದ್ರೆಯವರ ಮಾತುಗಳಲ್ಲಿ ಹೇಳುವುದಾದರೆ:

‘ಕುರುಡರ ಕೈ ಕಂದೀಲೂ ಕಣ್ಣಿದ್ದವರಿಗೆ ಉಪಯೋಗ... ’

ಸರಿ, ಇನ್ನು ನಮ್ಮ ನಿಮ್ಮೆಲ್ಲರಿಗೂ ಈ ಕಾವ್ಯದ ಓದಿನಿಂದಾಗುವ ಸಮಾನ ಪ್ರಯೋಜನವೇನು? ‘ನಿರ್ಮಲವಾದ ಆನಂದ’ ಎಂದಷ್ಟೇ ಹೇಳಬಹುದು! ಆ ಆನಂದದ ಮೂಲಕವೇ ಆತ್ಮ ಸಾಕ್ಷಾತ್ಕಾರದ ಅರಿವುಂಟಾದರೆ ಅದೇ ಒಂದು ಭಾಗ್ಯ!
ಹಾಗಾದರೆ ಈ ಅಮೃತತ್ತ್ವದ ಅಭೀಪ್ಸೆಯನ್ನು ಶ್ರೀ ಅರವಿಂದರ 'ಸಾವಿತ್ರಿ'ಯ ಓದಿನ ಮೂಲಕ ಪ್ರಾರಂಭಿಸೋಣವೇ?

‘All can be done if god-touch is there...’

ಹಾಗೆ ಈ ಪಥದಲ್ಲಿ ನಾವು ಯಾರೂ ಮರೆಯಬಾರದ ಒಂದು ಸಂಗತಿ. ಅದು ಈ ಕಾವ್ಯದ ಕೊನೆಯಲ್ಲಿ ಯಮನನ್ನು ಸೋಲಿಸಿ ಸತ್ಯವಾನನೊಡನೆ ಭೂಮಿಗೆ ಮರಳಿದ ಸಾವಿತ್ರಿಯಾಡುವ ಮಾತು. ಎಲ್ಲ ಸಾಧಕರಿಗೂ ಅಂಗೈಗನ್ನಡಿಯಂತಿದೆ!

‘All now is changed, yet all is still the same...’

***

ಕನ್ನಡದಲ್ಲಿ ‘ಸಾವಿತ್ರಿ’

ಬೇಂದ್ರೆ ಅವರ ಅನುವಾದದ ಕೆಲವು ಸಾಲುಗಳು

ಕಾಂಬನೊಬ್ಬ ಒಳಗಿಹನು ಬಲ್ಲನೋರಣದ ಹಂಚು-ಸಂಚು
ಅದು ಕಾಣದಣ್ಣ ಕಾಲಲ್ಲೆ ಇಹುದು ಅಡಿಗಡಿಗು ಅದರ ಅಂಚು.
ಊದಿ ಉಸಿರನುಬ್ಬಿಸುವನೆಮ್ಮ ಶಿಖರಗಳಿಗೆ
ಹುಟ್ಟು-ಬಾಳು ಶಿಖರಗಳಿಗೆ
ಹುಟ್ಟು- ಬಾಳುಗಳ ದರಿಗೆ ನೂಗಿದೊಲು ಹಿಂದೆ ಒಮ್ಮೆ ನಮಗೆ
ಕಾಲಪಥಿಕನಾ ಕಿವಿಗೆ ಮುಟ್ಟಿತಾ ಕರೆಯು, ಕೇಳಿ ಸೊಲ್ಲ
ಒಂಟಿಯಾಗಿ ಏಕಾಂತಿಯಾಗಿ ಅದರಾಳವನೆ ಬಲ್ಲ
ಹೊರಟ ಯಾತ್ರಿ ದಿಕ್ತಟದ ಶಕ್ತಿಯಲಿ ಮೂಕಮುಗ್ದನಾಗಿ...

ಕೋ. ಚೆನ್ನಬಸಪ್ಪ ಅವರ ಅನುವಾದದ ಸಾಲುಗಳು

ಒಂದೆ ನೋಟ, ಒಂದೆ ತಿರುವು ನಮ್ಮ ಅತಂತ್ರ ಅದೃಷ್ಟವನು ನಿರ್ಧರಿಸುವುದು.
ಇಂತು ಅವಳ ಸರ್ವಸ್ವಕ್ಕೂ ಸಂಬಂಧಿಸಿದ ಆ ಘಳಿಗೆಯಲ್ಲಿ
ಮಂದಮತಿ ಬಾಹ್ಯ ಮನದಿಂದ ಮುನ್ನೆಚ್ಚರಿಕೆಯಿಲ್ಲದೆ ಅಲೆದಾಡುತ್ತ
ಹೀಗೆ ಯಾದೃಚ್ಚಾ ಆಜ್ಞಾಪಥವಿಡಿದು ಅವಳು ಹಾದುಹೋಗಬಹುದಿತ್ತು
‘ಸ್ವರ್ಗದ’ ಕರೆಯ ಅವಕಾಶ ಕಳೆದುಕೊಂಡು, ಜೀವನೋದ್ದೇಶವನು ಕೈಬಿಟ್ಟು
ಆದರೆ ದೈವ ಸಕಾಲದಲಿ ಅವಳ ಎಚೆತ್ತ ಆತ್ಮವನು ತಟ್ಟಿದುದು,
ಅವಳ ದೃಷ್ಟಿ ನೆಟ್ಟಿತು, ತುಡುಕಿ ಹಿಡಿಯಿತು ಮತ್ತೆ ಎಲ್ಲವೂ ಬದಲಾಯ್ತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT