ಮಂಗಳವಾರ, ಏಪ್ರಿಲ್ 7, 2020
19 °C
ದೇಗುಲಗಳಿಗೆ ಭೇಟಿ ನೀಡಿದ ಭಕ್ತರು, ರಾತ್ರಿಯೆಲ್ಲ ಜಾಗರಣೆ, ವಿಶೇಷ ಪೂಜೆ

ಗಿರಿ ಜಿಲ್ಲೆಯಲ್ಲಿ ಶಿವ ನಾಮಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಿವರಾತ್ರಿ ಅಂಗವಾಗಿ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಶುಕ್ರವಾರ ನಡೆಯಿತು.

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ಭಕ್ತರು ದೇವರ ದರ್ಶನ ಪಡೆದರು. ನೂತನ ದಂಪತಿ ಜೋಡಿಯಾಗಿ ಬಂದು ದೇವರ ದರ್ಶನ ಪಡೆದರು.

ಬೆಳಿಗ್ಗೆ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಪವಾಸ ವ್ರತ ಆಚರಿಸುವ ಭಕ್ತರಿಗೆ ದೇಗುಲಗಳಲ್ಲಿ ಹಣ್ಣು, ಹಂಪಲು ನೀಡ‌ಲಾಯಿತು.

ಸುಣ್ಣ, ಬಣ್ಣದಿಂದ, ವಿದ್ಯುತ್ ದೀಪಗಳಿಂದ ದೇಗುಲ ಕಂಗೊಳಿಸುತ್ತಿತ್ತು. ಶಿವಲಿಂಗಕ್ಕೆ ಆಕರ್ಷಣೆಯ ರೂಪ ನೀಡಲಾಗಿತ್ತು. 

ನಗರದ ಅಮೃತೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಆತ್ಮಲಿಂಗ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿವಿಧ ಪೂಜೆ ನೆರವೇರಿಸಲಾಯಿತು.

ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಜಾಗರಣೆ ವಿಶೇಷ ಪೂಜೆಗಳು ನಡೆದವು. ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದರು. ಬೆಳಿಗ್ಗೆ ಮತ್ತು ಸಂಜೆ ವೇಳೆ ದೇವಸ್ಥಾನಗಳಲ್ಲಿ ಹೆಚ್ಚಿನ ಜನಸಂದಣಿ
ಕಂಡು ಬಂದಿತು.

ದಾಸಬಾಳಮಠ: ನಗರದ ಸದ್ಗುರು ದಾಸಬಾಳ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ, ಅನೇಕ ಭಕ್ತರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಲಕ್ಷ ಜಪಯಜ್ಞ ಮತ್ತು ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮದಲ್ಲಿ ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.

ನಂತರ ಮಾತನಾಡಿದ ಸ್ವಾಮೀಜಿ, ‘ಯಾವುದೇ ಆಕಾರವಿಲ್ಲದ ಆ ಶಿವ ಒಂದು ಲಿಂಗರೂಪಿಯಾಗಿ ಜಗತ್ತಿನಾದ್ಯಾಂತ ಮಹಾಶಿವರಾತ್ರಿಯ ದಿನದಂದು ಸರ್ವಧರ್ಮಿಯರಿಗೂ, ಪ್ರಿಯನಾಗಿ ಪೂಜೆಗೊಳಪಡುತ್ತಿದ್ದಾನೆ. ಮಹಾ ಶಿವರಾತ್ರಿ ಹಬ್ಬ ಸರ್ವಧರ್ಮಿಯರಿಗೂ ಶ್ರೇಷ್ಠವಾಗಿದೆ. ಪ್ರತಿಯೊಬ್ಬರೂ ಶಿವನಾಮಸ್ಮರಣೆ ಮಾಡಿರಿ, ಇರುವ ಕಷ್ಟಗಳೆಲ್ಲವೂ ದೂರವಾಗುತ್ತವೆ’ ಎಂದು ನುಡಿದರು.
‘ಶಿವನ ಪೂಜೆಯಲ್ಲಿ ಶೃದ್ಧೆ ಇರಲಿ. ಮನಸ್ಸಿನಲ್ಲಿ ದೃಢ ಭಕ್ತಿಯಿರಲಿ ಆಗಲೇ ನೀವು ಮಾಡಿದ ಉಪವಾಸ, ಪೂಜೆ ದೇವರಿಗೆ ಅರ್ಪಿತವಾಗುತ್ತದೆ’ ಎಂದರು.

ಪಂಚಮುಖಿ ಹನುಮಾನ್ ದೇವರಿಗೆ ಮಹಾಪೂಜೆ ನೆರವೇರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)