ಭಾನುವಾರ, ನವೆಂಬರ್ 29, 2020
25 °C

ಸಚ್ಚಿದಾನಂದ ಸತ್ಯಸಂದೇಶ: ಮಾತೃ ಭಾಷೆಯೇ ಶ್ರೇಷ್ಠ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಭಾಷೆ ಅನ್ನೋದು ಜ್ಞಾನಭಂಡಾರದ ಕೀಲಿ ಇದ್ದಂತೆ. ಭಂಡಾರವನ್ನು ತೆರೆಯುವ ಕೀಲಿಯೇ ಸರಿ ಇಲ್ಲದಿದ್ದರೆ, ಅಲ್ಲಿರುವ ಜ್ಞಾನ ಪಡೆಯಲು ಕಷ್ಟವಾಗುತ್ತದೆ. ಈಗ ನಮ್ಮ ಭಾರತೀಯ ಶಿಕ್ಷಣವ್ಯವಸ್ಥೆಯು ಇದೇ ಪರಿಸ್ಥಿತಿಯಲ್ಲಿದೆ. ಶಿಕ್ಷಣಕಲಿಕೆಗೆ ಅಗತ್ಯವಾದ ಸರಿಯಾದ ಭಾಷಾಕೀಲಿಯೇ ಇಲ್ಲದೆ ಮಕ್ಕಳು ಪರಿತಪಿಸುತ್ತಿದ್ದಾರೆ. ನಮ್ಮ ದೇಶ ಬಹುಭಾಷಾ ಒಕ್ಕೂಟವಾಗಿರುವುದರಿಂದ ಶಿಕ್ಷಣಕ್ಕೆ ಯಾವ ಭಾಷೆ ಮಾಧ್ಯಮವಾಗಬೇಕೆಂಬ ಗೊಂದಲದಲ್ಲಿದ್ದೇವೆ. ಆದರೆ ಸರ್ವದೃಷ್ಟಿಯಿಂದ ನೋಡಿದರೂ ಮಾತೃಭಾಷೆಯೇ ಸರ್ವಶ್ರೇಷ್ಠವಾಗಿ ಕಾಣುತ್ತೆ. ವಿಶ್ವಸಂಸ್ಥೆಯ ಯುನೆಸ್ಕೊ ಸಹ ಮಾತೃಭಾಷೆಯಲ್ಲಿ ಶಿಕ್ಷಣಮಾಧ್ಯಮವಿರಬೇಕೆಂದು ಪ್ರತಿಪಾದಿಸುತ್ತದೆ. ಪ್ರತಿವರ್ಷ ಫೆಬ್ರವರಿ 21ನ್ನು ಮಾತೃಭಾಷಾ ದಿನವನ್ನಾಗಿ ಆಚರಿಸುತ್ತಿದೆ.

ಒಂದು ಭಾಷೆ ತನ್ನ ಗುಣಧರ್ಮವನ್ನು ಕಲಿಸುತ್ತದೆ. ನಮ್ಮ ಭಾರತೀಯ ಭಾಷೆಗಳಲ್ಲಿ ಧರ್ಮ–ಕರ್ಮಗಳು ಮಿಳಿತವಾಗಿರುವುದರಿಂದ ನೈತಿಕತೆ ಗಟ್ಟಿಯಾಗಿದೆ. ಇದರ ಮೂಲಕ ಶಿಕ್ಷಣ ಕಲಿಯುವ ಮಕ್ಕಳ ಗುಣಧರ್ಮ ಚೆನ್ನಾಗಿರುತ್ತದೆ. ಆದರೆ ನಾವು ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಿರುವುದರಿಂದ ಅದರ ಸಂಸ್ಕೃತಿ ಬರುತ್ತಿದೆ. ಇತ್ತೀಚಿನ ನವಪೀಳಿಗೆಯಲ್ಲಿ ಕಾಣುತ್ತಿರುವ ಕೆಟ್ಟ ಗುಣಧರ್ಮಕ್ಕೆ ಇಂಗ್ಲಿಷ್ ಭಾಷಾ ಪ್ರಭಾವ ಬಹಳಷ್ಟಿದೆ. ನಮ್ಮ ಮಕ್ಕಳು ಕಲಿಯುತ್ತಿರುವ ಶಿಕ್ಷಣ ಮತ್ತು ಅದರಿಂದ ಹೊರ ಬರುತ್ತಿರುವ ಕರ್ಮಫಲಗಳನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನೈತಿಕ ಮೌಲ್ಯ ಕಡಿಮೆ ಇದೆ. ಇದರಿಂದ ನಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ.

ಭಾರತೀಯ ಶಿಕ್ಷಣವ್ಯವಸ್ಥೆಯಲ್ಲಿದ್ದ ಲೋಪವನ್ನು ಕಂಡೇ ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣ ಮಠ ಸ್ಥಾಪಿಸಿ, ಗುರುಕುಲ ಮಾದರಿಯ ಶಾಲೆಗಳನ್ನು ತೆರೆದರು. ಇವರನ್ನನುಸರಿಸಿ ಬಹಳಷ್ಟು ಮಠಮಾನ್ಯಗಳು ಆಧುನಿಕ ವಿದ್ಯಾದಾನದ ಜೊತೆಗೆ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ಕೆಲಸ ಆರಂಭಿಸಿದರು. ಆದರೆ ನಮ್ಮ ಜನರಲ್ಲಿ ಮಾತ್ರ ಇಂಗ್ಲಿಷ್ ವ್ಯಾಮೋಹ ಬಿಟ್ಟು ಹೋಗಲಿಲ್ಲ. ಮಾತೃಭಾಷಾ ಶಿಕ್ಷಣ ಮಾಧ್ಯಮ ಅನುಸರಿಸುವುದಕ್ಕೆ ಪೋಷಕರೆ ಹಿಂದಡಿ ಇಟ್ಟಿದ್ದರಿಂದ ಇಂಗ್ಲಿಷ್ ಮಾಧ್ಯಮ ಎಲ್ಲೆಡೆ ವ್ಯಾಪಿಸುತ್ತಾ ಹೋಯಿತು. ಇದೊಂದು ದುರಂತದ ಸಂಗತಿ. ನಾವಾಡುವ ಮಾತೃಭಾಷಾ ಸಿರಿ ಕಳೆದುಕೊಂಡರೆ, ಅದರಂಥ ನಷ್ಟ ಮತ್ತೊಂದಿಲ್ಲ. ನೈತಿಕ ಮೌಲ್ಯಗಳು ಉಳಿದಿರುವುದೇ ನಮ್ಮ ಭಾರತೀಯ ಭಾಷೆಗಳಲ್ಲಿ. ಅದನ್ನು ಕಳೆದುಕೊಂಡರೆ, ನಮ್ಮ ಶ್ರೀಮಂತ ಭಾರತೀಯ ಸಂಸ್ಕೃತಿ-ಪರಂಪರೆಗಳನ್ನು ಕಳೆದುಕೊಂಡಂತೆ.

ಬೌದ್ಧಿಕವಾಗಿ ಅಲ್ಲದೆ ನೈತಿಕವಾಗಿಯೂ ಅಧಃಪತನದ ಹಾದಿ ತುಳಿದಿರುವ ಇಂದಿನ ಮಕ್ಕಳನ್ನು ಸರಿ ದಾರಿಗೆ ತಂದು, ನೈತಿಕ ಪಥದತ್ತ ಕೊಂಡೊಯ್ಯುವ ಶಕ್ತಿ ಇರುವುದು ಮಾತೃಭಾಷೆಗಳಿಗೆ ಮಾತ್ರ. ನಾವು ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುವ ಮಾತೃಭಾಷಾ ಶಿಕ್ಷಣ ನೀಡಿದರೆ, ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳನ್ನು ತಡೆಯಬಹುದು. ಕನ್ನಡದಂಥ ಉತ್ಕೃಷ್ಟ ಭಾಷೆಗಳನ್ನು ಉಳಿಸಬಹುದು.

ವಿಶ್ವಸಂಸ್ಥೆ ಯುನೆಸ್ಕೊ ಪ್ರಕಟಿಸಿರುವ ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿರುವುದು ನೋವಿನ ಸಂಗತಿ. ಸಾವಿರಾರು ವರ್ಷಗಳಿಂದ ಜ್ಞಾನಸುಧೆಯನ್ನು ಹರಿಸಿ, ನಮ್ಮ ಬದುಕನ್ನು ಪಾವನ ಮಾಡುತ್ತಾ ಬಂದಿರುವ ನಮ್ಮ ಕನ್ನಡ ಭಾಷೆ ಇನ್ನು 50 ವರ್ಷಗಳಲ್ಲಿ ನಶಿಸಿಹೋಗುತ್ತದೆ ಎಂದರೆ ಹೃದಯ ವಿದ್ರಾವಕವಾಗುತ್ತದೆ. ಕನ್ನಡಭಾಷೆಯ ಇಂಥ ದುಸ್ಥಿತಿಗೆ ಕನ್ನಡಿಗರೇ ಕಾರಣ. ಭಾಷೆಯನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಇನ್ನಾದರೂ ಮನದಟ್ಟುಮಾಡಿಕೊಂಡು ಕನ್ನಡಭಾಷೆಯನ್ನು ಉಳಿಸಿ, ನಮ್ಮ ಮಕ್ಕಳನ್ನು ‘ಸಚ್ಚಿದಾನಂದ’ಭಾವದಲ್ಲಿ ಬೆಳೆಸೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು