ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರ ಪಂಚಮಿ: ಲೌಕಿಕ ಅಲೌಕಿಕಗಳ ಸಂಭ್ರಮ

Last Updated 1 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಆಷಾಢಮಾಸ ಕಳೆದು ಶ್ರಾವಣ ಬಂದಿತು ಎಂದರೆ ಹಬ್ಬಗಳ ಸಾಲು ಆರಂಭವಾಯಿತು ಎಂದು ಅರ್ಥ. ಹೊರಗೆ ಪ್ರಕೃತಿಯೂ ಸಂಭ್ರಮದಲ್ಲಿರುತ್ತದೆ; ನಮ್ಮ ಒಳಗಿನ ಭಾವಪ್ರಕೃತಿಯೂ ಸಂಭ್ರಮಕ್ಕೆ ಸಜ್ಜುಗೊಳ್ಳುತ್ತದೆ.

ನಮ್ಮ ಹಬ್ಬಗಳಿಗೂ ನಮ್ಮ ಕೌಟುಂಬಿಕ ಮೌಲ್ಯಗಳಿಗೂ ನೇರ ನಂಟಿರುವುದು ಸ್ಪಷ್ಟ. ಶ್ರಾವಣಮಾಸದ ಆರಂಭದ ಹಿಂದಿನ ದಿನ, ಎಂದರೆ ಅಮಾವಾಸ್ಯೆಯ ದಿನ ‘ಭೀಮೇಶ್ವರವ್ರತ’ವನ್ನು ಆಚರಿಸಿರುತ್ತೇವೆ. ಈ ವ್ರತದ ಉದ್ದೇಶವೇ ದಾಂಪತ್ಯದ ಆದರ್ಶವನ್ನು ಎತ್ತಿಹಿಡಿಯುವುದು. ಈ ವ್ರತದ ಬಳಿಕ ಬರುವ ಮುಖ್ಯ ಪರ್ವವೇ ನಾಗರ ಪಂಚಮಿ. ಭೀಮನ ಅಮಾವಾಸ್ಯೆ ಗಂಡ–ಹೆಂಡತಿಯರ ಪ್ರೇಮಕ್ಕೆ ಸಂಕೇತವಾದರೆ, ನಾಗರ ಪಂಚಮಿ ಸಹೋದರ–ಸಹೋದರಿಯರ ಕಾಳಜಿಗೆ ಸಂಕೇತವಾಗುತ್ತದೆ.

‘ನಾಗರ ಪಂಚಮಿ ನಾಡಿಗೆ ದೊಡ್ಡದು, ನಾರಿಯಲ್ಲರೂ ನಲಿವರು’ – ಎಂಬ ಮಾತೊಂದು ಪ್ರಸಿದ್ಧವಾಗಿದೆ. ನಾರಿಯರ ನಲಿವಿಗೂ ನಾಗರ ಪಂಚಮಿಗೂ ಏನು ಸಂಬಂಧ – ಎಂಬುದು ವಿಚಾರಾರ್ಹ. ನಾಗರ ಪಂಚಮಿಯಂದು ನಾಗದೇವತೆಯನ್ನು ಪೂಜಿಸುವುದು ವಾಡಿಕೆ. ನಮ್ಮ ಊರುಗಳಲ್ಲಿರುವ ಹುತ್ತಗಳಿಗೆ ಹೆಣ್ಣುಮಕ್ಕಳು ಪೂಜೆ ಮಾಡುವುದು, ಹಾಲನ್ನು ತನಿ ಎರೆಯವುದು ಉಂಟು. ನಾಗಕಲ್ಲುಗಳಿಗೂ ಹೀಗೆ ಪೂಜಿಸಿ, ತನಿ ಎರೆಯಲಾಗುತ್ತದೆ. ತನಿ ಎರೆದ ಹಾಲನ್ನು ಹೆಣ್ಣುಮಕ್ಕಳು ಅವರ ಅಣ್ಣತಮ್ಮಂದಿರ ಬೆನ್ನಿಗೆ ಎರೆಯುತ್ತಾರೆ.

ಇದರ ತಾತ್ಪರ್ಯ: ಒಡಹುಟ್ಟಿದವರು ತಂಪಾಗಿರಲಿ ಎಂಬ ಆಶಯ. ತವರುಮನೆ ಚೆನ್ನಾಗಿದ್ದರೆ ಹೆಣ್ಣುಮಕ್ಕಳಿಗೆ ಅದೇ ಸಂಭ್ರಮ; ಈ ಸಂಭ್ರಮವು ಸಹೋದರರ ಕ್ಷೇಮ–ಕಾಳಜಿಗಳ ಹಾರೈಕೆಯಲ್ಲಿ ಧ್ವನಿತವಾಗಿದೆ. ಕುಟುಂಬಗಳು ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿರಬೇಕಾದರೆ ವೈಯಕ್ತಿಕವಾಗಿ ನಾವೆಲ್ಲರೂ ಪರಸ್ಪರ ಸ್ನೇಹ–ಪ್ರೀತಿ–ಕಾಳಜಿಗಳನ್ನು ಮೈಗೂಡಿಸಿಕೊಳ್ಳಬೇಕು; ಮಾತ್ರವಲ್ಲ, ಅವನ್ನು ನಮ್ಮ ಆತ್ಮೀಯರೊಂದಿಗೂ ಬಂಧುಗಳೊಂದಿಗೂ ಹಂಚಬೇಕು ಎಂಬ ಉದಾತ್ತ ನಿಲುವನ್ನು ನಮ್ಮ ಎಲ್ಲ ಹಬ್ಬಗಳ ಆಚರಣೆಯ ಕೇಂದ್ರವಸ್ತುವಾಗಿರುವುದು ಮನನೀಯ.

ನಾಗರ ಪಂಚಮಿಯನ್ನು ನಮ್ಮ ನಾಡಿನ ಒಂದೊಂದು ಭಾಗದಲ್ಲೂ ಒಂದೊಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವರು ಮನೆಯನ್ನು ಸ್ವಚ್ಛಗೊಳಿಸುವ ಹಬ್ಬವನ್ನಾಗಿ ಆಚರಿಸಿ, ನಮ್ಮ ಜೀವನವ ಕೊಳೆಯೂ ಹೀಗೆ ತೊಲಗಲಿ ಎಂದು ಬಯಸುತ್ತಾರೆ; ಮತ್ತೆ ಕೆಲವರು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಆಪ್ತರೊಂದಿಗೆ ಸವಿದು, ನೋಲು–ನಲಿವುಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದರಿಂದ ಬದುಕು ಹಗುರವಾಗುತ್ತದೆ ಎಂದು ಸಂಭ್ರಮಿಸುತ್ತಾರೆ; ಇನ್ನು ಹಲವರು ಜೋಕಾಲಿಯಲ್ಲಿ ಆಟವಾಡಿ, ಜೀವನವೂ ಹೀಗೆ ತೂಗುಯ್ಯಾಲೆಯಂತಿರುವಾಗ, ಏಳು–ಬೀಳುಗಳಿಗೆ ಅಂಜದಿರೋಣ ಎಂದುಸಂಕಲ್ಪ ತೊಡುತ್ತಾರೆ.

ನಾಗರ ಪಂಚಮಿಯಲ್ಲಿ ಇನ್ನೊಂದು ಆಯಾಮವನ್ನೂ ಕಾಣಬಹುದು. ನಾಗದೇವತೆ ಎಂಬುದು ಸಂತಾನಕ್ಕೂ ಸಂಕೇತ; ಸಾಧನೆಗೂ ಸಂಕೇತ. ಸಂತಾನದ ನಿರಂತರತೆಯನ್ನು ನಾಗಾರಾಧನೆಯಲ್ಲಿ ಕಾಣುತ್ತೇವೆ. ಇದು ಲೌಕಿಕವಾದ ಸಿದ್ಧಿ, ಸಂತೋಷಕ್ಕೆ ಸೂಚಕ. ನಾಗ ಎನ್ನುವುದು ಕಂಡಲಿನೀಸ್ವರೂಪದಲ್ಲಿ ನಮ್ಮ ಆಧ್ಯಾತ್ಮಿಕ ಸಾಧನೆಯನ್ನು ಪ್ರತಿನಿಧಿಸುತ್ತದೆ. ಇದು ಅಲೌಕಿಕವಾದ ಸಿದ್ಧಿ, ಆನಂದಕ್ಕೆ ಸೂಚಕ. ಹೀಗೆ ಒಂದೇ ಪ್ರತೀಕವನ್ನು ನಮ್ಮ ಪರಂಪರೆಯಲ್ಲಿ ಹಲವು ಸ್ತರಗಳಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT