ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಕಠಿಣ ತಪಸ್ಸು

Last Updated 14 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪಾರ್ವತಿ ನಾರುಬಟ್ಟೆಗಳನ್ನುಟ್ಟಳು. ಒಡ್ಯಾಣಕ್ಕೆ ಬದಲಾಗಿ ಮೌಂಜೀ ಎಂಬ ಹುಲ್ಲಿನ ದಾರವನ್ನು ಕಟ್ಟಿ ಬಿಗಿದಳು. ಹಾಗೆಯೇ, ಅನರ್ಘವಾದ ಹಾರವನ್ನು ಬಿಟ್ಟು, ಪವಿತ್ರವಾದ ಮೃಗಚರ್ಮವನ್ನು ಧರಿಸಿದಳು. ಗಂಗಾವತರಣವೆಂಬ ತಪ್ಪಲಿಗೆ ತಪಸ್ಸಿಗಾಗಿ ಹೊರಟಳು.

ಹಿಮವತ್ಪರ್ವತದ ತಪ್ಪಲಲ್ಲಿರುವ ಗಂಗಾವತರಣದಲ್ಲೇ, ಈ ಹಿಂದೆ ಶಂಕರ ತಪಸ್ಸು ಮಾಡುತ್ತಿದ್ದ. ಅಲ್ಲಿಗೆ ನಿತ್ಯ ಪಾರ್ವತಿ ಬಂದು ಶಿವನ ಸೇವೆ ಮಾಡುತ್ತಿದ್ದಳು. ತನ್ನ ಸೌಂದರ್ಯದಿಂದ ಶಿವನನ್ನು ಒಲಿಸಿಕೊಳ್ಳುವೆ ಎಂಬ ಬಲವಾದ ನಂಬಿಕೆಯಲ್ಲಿದ್ದಳು. ಆದರೆ, ಮಹಾಹಠಯೋಗಿಯಾದ ಶಿವ, ಮನ್ಮಥನ ಹೂಬಾಣದಿಂದ ಕ್ಷಣ ಕಾಲ ವಿಚಲಿತನಾದರೂ, ಮತ್ತೆ ಎಚ್ಚೆತ್ತು ತಪೋಭಂಗ ಮಾಡಿದ ಮನ್ಮಥನನ್ನು ಭಸ್ಮಮಾಡಿದ್ದ. ಈ ಘಟನೆ ನಂತರ ಹರ ಅಲ್ಲಿ ನಿಲ್ಲದೆ ಬೇರೆಡೆ ಹೊರಟು ಹೋಗಿದ್ದ. ತಾನು ಕಳೆದುಕೊಂಡ ಭಾಗ್ಯವನ್ನು, ಅಲ್ಲೇ ಪಡೆಯಬೇಕೆಂದು ನಿರ್ಧರಿಸಿದ ಜಗನ್ಮಾತೆಯಾದ ಉಮೆ, ಘೋರ ತಪಸ್ಸು ಮಾಡಲು ಗಂಗಾವತರಣಕ್ಕೆ ಬಂದಳು. ಶಿವನನ್ನು ನೋಡಿದ ಪಾರ್ವತಿ ತನ್ನ ತಪ್ಪನ್ನು ನೆನೆದು ಕ್ಷಮಿಸುವಂತೆ ಶಿವನನ್ನು ವಿಲಾಪಿಸಿದಳು. ಸಖಿಯರು ಸಮಾಧಾನಿಸಿದ ಮೇಲೆ ಧೈರ್ಯ ತಂದುಕೊಂಡಳು. ಅನತಿ ದೂರದಲ್ಲಿರುವ ಶೃಂಗೀತೀರ್ಥವೆಂಬ ಪವಿತ್ರ ತೀರ್ಥಕ್ಷೇತ್ರದಲ್ಲಿ ತಪವನ್ನಾಚರಿಸಲು ಕುಳಿತಳು. ಅಲ್ಲಿ ಗೌರಿ ತಪವನ್ನ ಆಚರಿಸಿದ್ದರಿಂದ ಆ ಶಿಖರಕ್ಕೆ ಮುಂದೆ ‘ಗೌರೀಶಿಖರ’ ಎಂಬ ಹೆಸರು ಬಂತು.

ಗಿರಿಜೆಯು ಅಲ್ಲಿ ಸುಂದರವಾದ ಮರಗಳನ್ನು ಬೆಳೆಸಿದಳು. ಅವು ಪಾರ್ವತಿಯ ತಪಃಪ್ರಭಾವದಿಂದ ಮಹಾಪವಿತ್ರ ವೃಕ್ಷಗಳಾದವು. ತಪಸ್ಸಿಗೆ ಕುಳಿತುಕೊಳ್ಳುವ ಮೊದಲು, ಭೂಶುದ್ಧಿಯನ್ನು ಮಾಡಿ, ಅಲ್ಲಿ ವೇದಿಕೆಯೊಂದನ್ನು ನಿರ್ಮಿಸಿದಳು. ಅದರಲ್ಲಿ ಕುಳಿತು ತಪವನ್ನ ಆರಂಭಿಸಿದಳು. ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಗ್ರಹಿಸಿ, ಘನಘೋರ ತಪವನ್ನ ಆಚರಿಸತೊಡಗಿದಳು. ಬೇಸಿಗೆ ಕಾಲದ ಉರಿಯುವ ಬೇಗೆಯನ್ನೂ ಲೆಕ್ಕಿಸದೆ, ತನ್ನ ಸುತ್ತಲ ವಾತಾವರಣವನ್ನು ಮತ್ತಷ್ಟು ಬಿಸಿಯಾಗುವಂತೆ ಮಾಡಿಕೊಳ್ಳುತ್ತಿದ್ದಳು. ಇದಕ್ಕಾಗಿ ತನ್ನ ಸುತ್ತಲೂ ಉರಿಯುವ ಅಗ್ನಿಯನ್ನು ಹಾಕಿಕೊಂಡಳು. ಅಗ್ನಿಜ್ವಾಜಲಿಸುವ ವರ್ತುಲದ ಮಧ್ಯದಲ್ಲಿ ಕುಳಿತು ಶಿವಪಂಚಾಕ್ಷರಮಂತ್ರವನ್ನು ಜಪಿಸಿದಳು.

ಮಳೆಗಾಲದಲ್ಲಿ ಕಲ್ಲಿನ ಮೇಲೆ ಸ್ಥಂಡಿಲವನ್ನು ಹಾಕಿಕೊಂಡು ಕುಳಿತು ತಪವನ್ನ ಆಚರಿಸಿದಳು. ಆಗ ಅವಳ ಮೇಲೆ ಜಲಧಾರೆ ಎಷ್ಟೇ ಸುರಿದರೂ, ಒಂದಿಷ್ಟು ಅಳುಕದೆ ಶಿವಪಂಚಾಕ್ಷರಮಂತ್ರವನ್ನು ಬಿಡದೆ ಉಚ್ಚರಿಸುತ್ತಿದ್ದಳು. ಹೇಮಂತ ಋತುವಿನಲ್ಲಂತೂ ಪಾರ್ವತಿ ಹಿಮವತ್ಪರ್ವತ ಮಂಜಿನಿಂದ ಆವೃತವಾಗುತ್ತಿತ್ತು. ಅಂಥ ಮೈಕೊರೆಯುವ ಚಳಿಯಲ್ಲೂ, ಮಂಜುಗಡ್ಡೆಯಂತಿರುವ ನೀರಿನಲ್ಲಿ ನಿಂತು ಭಕ್ತಿಯಿಂದ ಶಿವಪಂಚಾಕ್ಷರಮಂತ್ರವನ್ನು ಜಪಿಸುತ್ತಾ, ಶಿವನನ್ನು ಕುರಿತು ತಪವನ್ನಾಚರಿಸಿದಳು. ಶಿಶಿರಋತುವಿನ ರಾತ್ರಿಯಲ್ಲಿ ಆಹಾರವನ್ನ ಸೇವಿಸದೆ ತಪವನ್ನ ಆಚರಿಸಿದಳು. ಅಸಾಧ್ಯವಾದ ಶೀತಗಾಳಿ, ಬಿರುಗಾಳಿ ಬೀಸಿದರೂ, ಎಡೆಬಿಡದೆ ಮಳೆ ಸುರಿದರೂ, ಮೈಮೂಳೆಗಳನ್ನು ಕೊರೆಯುವಂಥ ಶೀತಮಾರುತ ಅಪ್ಪಳಿಸಿದರೂ, ಧೃತಿಗೆಡದೆ ಸ್ಥಿರಮನಸ್ಸಿನಿಂದ ಕಠೋರ ತಪವನ್ನ ಆಚರಿಸಿದಳು.

ಹೀಗೆ ಕಠಿಣವಾದ ತಪವನ್ನಾಚರಿಸುತ್ತಾ, ಪಂಚಾಕ್ಷರಮಂತ್ರವನ್ನು ಜಪಿಸುತ್ತಾ, ಗಿರಿಜೆಯು ಸಕಲೇಷ್ಟಾರ್ಥಗಳನ್ನು ಕೊಡುವಂತಹ ಶಿವನನ್ನು ಧ್ಯಾನಿಸುತ್ತಿದ್ದಳು. ಹೀಗಿದ್ದರೂ, ತಪಸ್ಸಿನ ಮಧ್ಯೆ ಬಿಡುವಿನ ಕಾಲದಲ್ಲಿ ಪ್ರತಿದಿನವೂ ಆಕೆ, ತಾನು ಬೆಳೆಸಿದ ಮರಗಳಿಗೆ ಸಖಿಯರೊಡನೆ ನೀರೆರೆಯುತ್ತಿದ್ದಳು. ಶೃಂಗೀತೀರ್ಥಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಫಲಾಹಾರಗಳನ್ನು ನೀಡಿ ಅತಿಥಿಸೇವೆ ಮಾಡುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT