ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇಟೋನ ಅಮೂರ್ತಲೋಕ

Last Updated 29 ಜನವರಿ 2020, 19:30 IST
ಅಕ್ಷರ ಗಾತ್ರ

ಒಂದಷ್ಟು ಜನರು ಹುಟ್ಟಿದಾರಭ್ಯ ಒಂದು ಗುಹೆಯಲ್ಲಿ ಸರಪಳಿಗಳಿಂದ ಬಂಧಿಯಾಗಿದ್ದಾರೆಂದುಕೊಳ್ಳೋಣ. ಅವರಿಗೆ ಕತ್ತನ್ನು ತಿರುಗಿಸಿ ನೋಡಲೂ ಸಾಧ್ಯವಾಗದಷ್ಟು ಬಂಧನ. ಅವರೇನಿದ್ದರೂ ತಮ್ಮ ಮುಂದಿರುವ ಗುಹೆಯ ಗೋಡೆಯನ್ನು ನೋಡಬಲ್ಲರು ಅಷ್ಟೇ. ಈಗ ಅವರ ಹಿಂದೆ ಸ್ವಲ್ಪ ದೂರದಲ್ಲಿ ಬೆಂಕಿ ಉರಿಯುತ್ತಿದ್ದು, ಅವರ ಮತ್ತು ಬೆಂಕಿಯ ನಡುವಿನ ಜಾಗದಲ್ಲಿ ಯಾರೋ ಗೊಂಬೆಯಾಡಿಸುತ್ತಿದ್ದಾರೆಂದುಕೊಳ್ಳಿ. ಈಗ ಬಂಧಿತರಿಗೆ ಕಾಣುವುದೇನು? ಗೊಂಬೆಗಳ ನೆರಳಷ್ಟೇ; ಆ ನೆರಳನ್ನೇ ಅವರು ನಿಜ ಎಂದುಕೊಳ್ಳಬಹುದು; ಎಲ್ಲಿಯವರೆಗೆ? ಬಂಧನದಿಂದ ಬಿಡುಗಡೆ ಆಗುವವರೆಗೆ. ಆನಂತರ ಅವರಿಗೆ ತಿಳಿಯುವುದು: ಇಷ್ಟು ದಿನ ಕಂಡದ್ದು ನಿಜದ ನೆರಳಷ್ಟೇ ಎಂಬುದು.

ಇದನ್ನು ನೂರಾರು ರೀತಿ ವ್ಯಾಖ್ಯಾನಿಸಬಹುದು. ಆದರೆ ಒಂದು ಮುಖ್ಯ ಅರ್ಥದಲ್ಲಿ ಕ್ರಿ. ಪೂ. ನಾಲ್ಕನೇ ಶತಮಾನದ ಗ್ರೀಕ್ ತತ್ವಜ್ಞಾನಿ ಪ್ಲೇಟೋ ಈ ರೂಪಕವನ್ನು ನಿರೂಪಿಸಿದ್ದಾನೆ.

ಮೂರ್ತಜಗತ್ತು ನಮ್ಮ ಅರಿವಿಗೆ ಬರುವುದು ಇಂದ್ರಿಯಾನುಭವದ ಮೂಲಕವೇ ಆದರೂ, ಇಂದ್ರಿಯಾನುಭವಕ್ಕೆ ದೊರಕದ, ವಿಚಾರದಿಂದ ಮಾತ್ರ ಗ್ರಹಿಸಬಲ್ಲ ಹಾಗೆಯೇ ಕೇವಲ ಮಾನಸಿಕ ಸತ್ಯವಷ್ಟೇ ಆಗಿರದ ಪಾರಮಾರ್ಥಿಕ, ಅಮೂರ್ತಲೋಕದ ಸತ್ಯವನ್ನು ಸಾಧಿಸಲು ಪ್ಲೇಟೋ ಈ ಉಪಮೆಯನ್ನು ಬಳಸುತ್ತಾನೆ. ಅಸ್ತಿತ್ವ ಎಂದರೇನು? ದೇಶ ಕಾಲಗಳಲ್ಲಿ ವಿಸ್ತರಿಸಿಕೊಂಡಿರುವುದಕ್ಕಷ್ಟೇ ಅಸ್ತಿತ್ವವಿದೆಯೇ, ಅಥವಾ ದೇಶ ಕಾಲಾತೀತ ಅಸ್ತಿತ್ವ ಎಂಬುದೇನಾದರೂ ಇದೆಯೇ ಎಂಬ ಮುಖ್ಯ ಪ್ರಶ್ನೆಗೆ ಇದು ಉತ್ತರವಾಗಬಲ್ಲುದು.

ಉದಾಹರಣೆಗೆ ನಮ್ಮ ಸುತ್ತಲೂ ಅನೇಕ ಬಗೆಯ ವೃಕ್ಷಗಳಿವೆ – ತೆಂಗು, ಮಾವು, ಹಲಸು, ಸೀಬೆ, ಅಡಕೆ ಮುಂತಾದುವು; ಅವುಗಳಲ್ಲಿ ವೈವಿಧ್ಯವಿದ್ದರೂ ಅವೆಲ್ಲವನ್ನೂ ನಾವು ವೃಕ್ಷಗಳೆಂದೇ ಗುರುತಿಸಬೇಕಾದರೆ ಅವುಗಳಲ್ಲಿರುವ ಸಾಮ್ಯತೆಯಾದ'ವೃಕ್ಷತ್ವ'ವನ್ನು ನಾವು ಗ್ರಹಿಸಿರಬೇಕು. ಈ 'ವೃಕ್ಷತ್ವ' ಎನ್ನುವ ಸಾಮಾನ್ಯವು ಕೇವಲ ಅನೇಕ ವೃಕ್ಷಗಳನ್ನು ನೋಡುತ್ತಾ ಹುಟ್ಟಿ ಬೆಳೆಯುವ ಜ್ಞಾನವಲ್ಲ. 'ವೃಕ್ಷತ್ವ' ಎನ್ನುವುದು ಆಮೂರ್ತವಾದೊಂದು ಲೋಕದಲ್ಲಿನ (ನಮ್ಮ ಈ ಲೋಕದ ಮೇಜು, ಖುರ್ಚಿ, ಪುಸ್ತಕ ಇವುಗಳಷ್ಟೇ) ಅಪ್ಪಟ ಸತ್ಯ ಎನ್ನುವುದು ಪ್ಲೇಟೋನ ವಾದ. ಕೇವಲ 'ವೃಕ್ಷತ್ವ'ದಂತಹ ಸಾಮಾನ್ಯಗಳೇ ಅಲ್ಲದೆ, ಸೌಂದರ್ಯ, ನ್ಯಾಯ, ಸದ್ಗುಣ – ಅಷ್ಟೇ ಏಕೆ – ಸಂಖ್ಯೆಗಳು, ವೃತ್ತ ಮುಂತಾದ ಗಣಿತೀಯ ಮೂಲ ಪರಿಕಲ್ಪನೆಗಳೂ – ಎಲ್ಲವೂ ಉರಿಯುವ ಸೂರ್ಯನಷ್ಟೇ, ಹರಿಯುವ ನದಿಯಷ್ಟೇ ನಿಚ್ಚಳ ಸತ್ಯ. ಅವುಗಳು ಆಮೂರ್ತವಾದ ಲೋಕದಲ್ಲಿ 'ಇವೆ'ಯಷ್ಟೇ, ಅಲ್ಲ ಅವುಗಳ ಇರುವಿಕೆಯಿಂದಷ್ಟೇ ಮೂರ್ತಲೋಕದ ಜ್ಞಾನ ಪೂರ್ಣವಾಗಿ ಉಂಟಾಗಲು ಸಾಧ್ಯ ಎಂಬುದು ಪ್ಲೇಟೋನ ಮುಖ್ಯ ತತ್ವ. ಈ ಪರಿಕಲ್ಪನೆಗಳು ಹಾಗಾದರೆ ಮಾನಸಿಕ ಚಿತ್ರಣಗಳೇ ಎಂದರೆ ಅದಕ್ಕೆ ಪ್ಲೇಟೋನ ಉತ್ತರ: ಅಲ್ಲ, ಅವು ಮಾನಸಿಕ ನೆಲೆಯದ್ದಲ್ಲ, ಅವುಗಳು ಮಾನಸಿಕ ಲೋಕವನ್ನು ಮೀರಿದ ಪರಮೋನ್ನತ ಸತ್ಯ; ವೈಚಾರಿಕತೆಯಿಂದಷ್ಟೇ ಅರಿಯಬಲ್ಲ ಸತ್ಯ ಎಂಬುದು ಪ್ಲೇಟೋನ ವಾದ. ನೆರಳು ಪ್ರಾಪಂಚಿಕ ಅನುಭವದ ಮೂರ್ತ ಲೋಕವಾದರೆ, ನಿಜ ಎಂಬುದು ಆ ಅಮೂರ್ತಲೋಕ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT