ಸೋಮವಾರ, ಜೂನ್ 14, 2021
22 °C

ಸಚ್ಚಿದಾನಂದ ಸತ್ಯಸಂದೇಶ | ಧರ್ಮ ಮತ್ತು ವಿತಂಡವಾದ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ನಮ್ಮನ್ನೆಲ್ಲ ಸೃಷ್ಟಿಸಿದ ದೇವರೆಂಬುವನು ಇದ್ದಾನೆಯೇ? ಇದ್ದರೆ, ಆತ ಯಾವ ಸ್ವರೂಪದಲ್ಲಿದ್ದಾನೆ? ಅವನನ್ನು ಸೇರುವ ಬಗೆ ಹೇಗೆ? ಇತ್ಯಾದಿ ಜಿಜ್ಞಾಸೆಗಳನ್ನು ಹೊತ್ತ ಮನುಷ್ಯ ದೇವರು-ಧರ್ಮದ ಬಗ್ಗೆ ತನಗನಿಸಿದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾನೆ. ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿ ಊಹಿಸಿ, ಧರ್ಮ-ನೀತಿಗಳ ತಿರುಳನ್ನು ಸಮಾಜಕ್ಕೆ ತಿಳಿಸಿದ್ದಾನೆ. ಉತ್ತಮ ನಡವಳಿಕೆಯಿಂದ ಪುಣ್ಯ ಸಿಗುತ್ತೆ – ಅಂತ ಎಲ್ಲಾ ಧರ್ಮಗಳ ಪ್ರವರ್ತಕರು ಹೇಳಿದ್ದಾರೆ. ಆದರೆ ಮನುಷ್ಯ ಧರ್ಮದ ಹಾದಿ ತಪ್ಪಿ ನಡೆಯುತ್ತಲೇ ಇದ್ದಾನೆ.

ಮನುಕುಲದ ಒಳಿತಿಗಾಗಿ ಧಾರ್ಮಿಕ ಸಂತರು ಪಾರಮಾರ್ಥಿಕ ಚಿಂತನೆಗಳ ದೊಡ್ಡ ಝರಿಯನ್ನೇ ಹರಿಸಿದ್ದಾರೆ. ಆದರೆ ದೇವರು-ಧರ್ಮದ ಬಗ್ಗೆ ನಿರ್ದಿಷ್ಟವಾಗಿ ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ. ದೇವರು-ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದರು ವವಿತಂಡವಾದ ಮಾಡುತ್ತಾ ಕಿತ್ತಾಡುವುದು, ಆ ಮೂಲಕ ಸಮಾಜದಲ್ಲಿ ಕೋಮುದ್ವೇಷದ ಕ್ಷೋಭೆ ಉಂಟು ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.

ತನ್ನ ತಾನು ಅರಿಯಲಾಗದ ಮನುಷ್ಯ ದಿಕ್ಕೆಡುತ್ತಿದ್ದಾನೆ. ತಾನು ದಿಕ್ಕೆಡುವುದಲ್ಲದೆ, ತನ್ನ ಸುತ್ತಲಿನ ಜನರನ್ನು ಹಾದಿ ತಪ್ಪಿಸುತ್ತಿದ್ದಾನೆ. ತಾನು ನಿಂತ ಪಾದದಳತೆಯ ನೆಲವನ್ನೇ ನಿಖರವಾಗಿ ತಿಳಿಯಲಾರದ ಮನುಷ್ಯ, ಅನಂತ-ದಿಗಂತದ ಬಗ್ಗೆ ಯೋಚಿಸಿದ್ದು ಚೋದ್ಯವೆನಿಸಿದರೂ, ಆತನ ಬುದ್ಧಿವಂತಿಕೆಯ ಲಂಗರು ಇಡೀ ವಿಶ್ವಕ್ಕೆ ಎಸೆದು ನೋಡಿದ ಪರಿ ಮೆಚ್ಚುಗೆಯಾಗುತ್ತದೆ. ಸೃಷ್ಟಿಯ ರಹಸ್ಯ ಭೇದಿಸಲು ನಡೆಸಿದ ಅವನ ಪ್ರಯತ್ನ ಅಗಾಧ. ಆದರೆ ಅದಕ್ಕೊಂದು ‘ಧರ್ಮ’ ಎಂಬ ಪ್ರತ್ಯೇಕತೆ ಸಂಕುಚಿತ ಚೌಕಟ್ಟು ಹಾಕಿದ್ದು, ಫಲಿತಾಂಶ ಶೂನ್ಯಾವಸ್ಥೆ ತಲುಪುವಂತಾಯಿತು.

ದೇವರು, ಧರ್ಮದ ಕುರಿತು ಭಾರತದಲ್ಲಿ ನಡೆದಷ್ಟು ಚಿಂತನ-ಮಂಥನಗಳು ಬೇರಾವ ಭೂಭಾಗದಲ್ಲೂ ನಡೆದಿರಲಾರದು. ಇಲ್ಲಿ ಹುಟ್ಟಿರುವಷ್ಟು ಧರ್ಮಗಳು, ದೇವರುಗಳು, ಧಾರ್ಮಿಕ ಗುರುಗಳು ಬೇರೆಲ್ಲೂ ಕಾಣಲು ಸಾಧ್ಯವೂ ಇಲ್ಲ; ದೇವರ ರೂಪದ ಬಗೆಗಿನ ಬಗೆಗಿನ ಚರ್ಚೆ, ದೇವರ ಅಸ್ತಿತ್ವ ಪ್ರಶ್ನಿಸುವ ವಾದ, ದೇವರನ್ನು ಗಿಡ-ಮರ, ಪ್ರಾಣಿಗಳಲ್ಲಿ ಹುಡುಕುವ ಪರಿಸರ ಆರಾಧನೆ, ಇವ್ಯಾವುದೂ ಅಲ್ಲ ಅಂತ ಹಲವರು, ವಸ್ತು-ಸ್ಥಿತಿ-ಲಯದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಅಧ್ಯಾತ್ಮಕ್ಕಿಳಿದ ಪರಿ ಅದ್ಭುತ.

ವಿಶ್ವದಾಚೆ ಏನಿದೆ ಅಂತ ಯೋಚಿಸಿದಷ್ಟು ಮನಸ್ಸು ಶೂನ್ಯಾವಸ್ಥೆ ತಲುಪಿದಾಗ ಯೋಗಿಗಳು ಯೋಗ-ಧ್ಯಾನದ ಮೊರೆಹೋದರು; ತಮಗೆ ತಿಳಿದ ಜ್ಞಾನಸಾರವನ್ನು ಅಕ್ಷರಗಳಲ್ಲಿ, ಜನರ ಮಸ್ತಿಷ್ಕದಲ್ಲಿ ತುಂಬುತ್ತಾ ಹೋದರು. ಹೀಗಾಗಿ ಭಾರತದಲ್ಲಿ ದೇವರುಗಳ ಸಂಖ್ಯೆಯೂ ಹೆಚ್ಚಾಯಿತು; ಧರ್ಮ-ಧರ್ಮಗ್ರಂಥಗಳ ಸಂಖ್ಯೆ, ಅದರ ಪ್ರವರ್ತಕರ ಸಂಖ್ಯೆಯೂ ಹೆಚ್ಚಾಯಿತು. ಹೀಗೆ ಭಾರತದಲ್ಲ್ಲಿ ಹುಟ್ಟಿದ ಧರ್ಮದ ವಿಚಾರ ತಿರುಳುಗಳೇ ವಿಶ್ವದೆಲ್ಲೆಡೆ ಸಾಗಿ ಧರ್ಮಗಳ ರೂಪಾಂತರ ಪಡೆಯಿತು. 

ಬದಲಾವಣೆ ಸೃಷ್ಟಿನಿಯಮ. ಕ್ಷಣಕ್ಷಣಕ್ಕೂ ಬದಲಾಗುವ ಚಲನಶೀಲತೆಯೇ ಸೃಷ್ಟಿಯ ಚೈತನ್ಯ. ಆ ಬದಲಾವಣೆ ಗುಣ ಕಳೆದುಕೊಂಡಾಗ ಸೃಷ್ಟಿ ನಿಸ್ತೇಜನಾಗುತ್ತೆ. ಇದಕ್ಕೆ ಮನುಷ್ಯ ಸಹ ಅತೀತನಲ್ಲ, ನಿಮಿತ್ತನಷ್ಟೆ. ಹೀಗಾಗಿ ಅವನ ಚಿಂತನೆಗಳು ಬದಲಾಗುತ್ತಲೇ ಇರುತ್ತೆ. ಆತನ ವಿಚಾರಗಳು, ನಾಮರೂಪದ ಭೇದಗಳೂ, ದೇಶಕಾಲಾದಿ ಪರಿಮಿತಿಯನ್ನು ದಾಟುತ್ತೆ. ಭಾರತೀಯ ತತ್ವಪರಂಪರೆ ಪ್ರಕಾರ; ನಮ್ಮ ಸುತ್ತಲ ಪರಿಸರಕ್ಕೆ ಪೂರಕವಾದುದೇ ತತ್ವ. ಅದರ ಕಾರ್ಯರೂಪವೇ ನಿಯಮ. ಆ ತತ್ವ-ನಿಯಮ ಪಾಲನೆಯಲ್ಲಿ ಪರರಿಗೆ ಹಿಂಸೆಯಾಗಬಾರದು. ಇಂಥ ಅಹಿಂಸಾಮನಸ್ಸೇ ಸದ್ಗುಣಬ್ರಹ್ಮ. ಇದೇ ‘ಸಚ್ಚಿದಾನಂದ’ಸ್ವರೂಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು