ಶುಕ್ರವಾರ, ಏಪ್ರಿಲ್ 16, 2021
31 °C

ಸಚ್ಚಿದಾನಂದ ಸತ್ಯಸಂದೇಶ: ಬಾಂಧವ್ಯಕ್ಕೆ ವಿಶ್ವಾಸವೇ ಹಂದರ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಕಾಲ ಕೆಟ್ಟಿದೆ ಅನ್ನೋ ಮಾತಿದೆ. ನಿಜಕ್ಕು ಕೆಟ್ಟಿರುವುದು ಮನುಷ್ಯನೇ ಹೊರತು ಕಾಲವಲ್ಲ. ಕಾಲ ತನ್ನ ಕೆಲಸ ಸರಿಯಾಗೇ ಮಾಡುತ್ತಿದೆ. ಆದರೆ ಈ ಕಾಲದೊಂದಿಗೆ ಹೆಜ್ಜೆ ಹಾಕುತ್ತಿರುವ ಮನುಷ್ಯ ಮಾತ್ರ ಹಾದಿ ತಪ್ಪುತ್ತಿದ್ದಾನೆ. ತಾನು ದಾರಿತಪ್ಪಿದ್ದೆಲ್ಲಿ ಅನ್ನೋ ‘ಸತ್ಯ’ ಅರಿವಾಗುವ ಮುನ್ನವೆ, ಅವನ ಬಯಕೆಯ ದಾರಿ ವಿಸ್ತಾರವಾಗಿ ಕಂಗಾಲಾಗಿದ್ದಾನೆ. ಹೀಗಾಗಿ ಜೀವ ತಣಿಯುವಷ್ಟು ಎಷ್ಟೆಲ್ಲಾ ಸುಖ ಸಿಕ್ಕರೂ ಮನುಷ್ಯನ ಮುಖದಲ್ಲಿ ತೃಪ್ತಿಯ ನಗೆ ಅರಳದೆ, ಅತೃಪ್ತಿಯ ಹಗೆಯೇ ಹೊರಳುತ್ತಿದೆ. ಅಂದರೆ ಕೆಟ್ಟಿರುವುದು ಕಾಲವಲ್ಲ, ಮನುಷ್ಯನ ಬದುಕೂ ಅಲ್ಲ. ಕೆಟ್ಟಿರುವುದು ಸದಾ ಬೇಕು-ಬೇಕು ಅನ್ನುವ ಅವನ ಮನಸ್ಸು ಎಂಬುದು ನಿಚ್ಚಳವಾಗುತ್ತದೆ.

ಮನುಷ್ಯ ತನ್ನ ಸುಖಕ್ಕಾಗಿ ಪ್ರಕೃತಿಯಲ್ಲಿರುವ ಎಲ್ಲಾ ಸಂಪತ್ತನ್ನು ಉಪಯೋಗಿಸುವುದನ್ನು ಕಲಿತ. ಆದರೆ, ತನ್ನೊಳಗಿನ ಸಂಪತ್ತನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಕಲಿಯಲಿಲ್ಲ. ಹೀಗಾಗಿ ಹೊರ ಪ್ರಪಂಚದಲ್ಲಿ ಆತ ಸುಖಿಯಾಗಿದ್ದರೂ, ಆಂತರಿಕ ಪ್ರಪಂಚದಲ್ಲಿ ಅಸುಖಿಯಾದ. ಹಣ ಗಳಿಕೆಗೆ ಕೊಟ್ಟಷ್ಟು ಗಮನವನ್ನ, ಗುಣ ಮೌಲ್ಯಗಳ ಕಡೆಗೆ ಕೊಡಲಿಲ್ಲ. ಅಂತಸ್ತುಗಳ ಮೇಲೆ ಅಂತಸ್ತು ಕಟ್ಟಲು ಕೊಟ್ಟಷ್ಟು ಸಮಯವನ್ನ ಬಾಂಧವ್ಯಗಳ ಕಟ್ಟಲು ಪ್ರಯತ್ನಿಸಲಿಲ್ಲ. ಇದರಿಂದಾಗಿ ಮನುಷ್ಯನ ಸುಮಧುರ ಸಂಬಂಧಗಳು ಹಾಳಾಗಿ ಅಂತರಗಳು ಹೆಚ್ಚಾದವು. ಸಂಬಂಧಗಳು ದೂರವಾದಂತೆ ಅವನು ಬಾಹ್ಯದಲ್ಲಿ ಮಾತ್ರವಲ್ಲದೆ, ಆಂತರಿಕವಾಗಿಯೂ ಒಬ್ಬಂಟಿಯಾದ. ನಾನೇನು ಕಳೆದುಕೊಂಡೆ? ನಾನೆಲ್ಲಿ ಕಳೆದು ಹೋದೆ? ಅನ್ನೋ ‘ಸತ್ಯ’ ಈಗಲೂ ಅವನಿಗೆ ಅರಿವಾಗುತ್ತಿಲ್ಲ.

ಋಗ್ವೇದದ ಪುರುಷ ಸೂಕ್ತಿಯಲ್ಲಿ ವಿಶ್ವ ಸೃಷ್ಟಿ ಬಗ್ಗೆ ಹೇಳುವಾಗ, ವಿಶ್ವದಲ್ಲಿ ಖಭೌತಿಕವಾಗಿ ಎಷ್ಟು ಅಗೋಚರ ಶಕ್ತಿ ಇದೆಯೋ, ಅಷ್ಟೇ ಅಗೋಚರ ಶಕ್ತಿ ಮನುಷ್ಯನ ಭೌತಿಕ ಶರೀರದೊಳಗು ಇದೆ ಎಂದು ಉಲ್ಲೇಖಿಸಿದೆ. ನಮ್ಮ ಹೊರ ಪ್ರಪಂಚ ಎಷ್ಟು ವಿಸ್ಮಯಗಳ ಬೀಡೋ, ನಮ್ಮೊಳಗು ಅಂಥದೆ ವಿಸ್ಮಯಗಳ ಆಗರವಿದೆ. ನಮ್ಮೊಳಗೆ ಸುಪ್ತವಾಗಿರುವ ಇಂದ್ರಿಯಾತೀತ ಶಕ್ತಿಗಳನ್ನು ಬಳಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಅದರರ್ಥ. ಅಂದರೆ ನಮ್ಮ ಬುದ್ದಿ ಶಕ್ತಿಯಿಂದ ಒಂದು ಆಯುಧವನ್ನು ವಿನಾಶಕ್ಕೂ ಬಳಸಬಹುದು, ವಿಕಾಸಕ್ಕೂ ಬಳಸಬಹುದು. ಅದು ನಾವು ಬಳಸುವ ವಿಧಾನದ ಮೇಲೆ ನಿರ್ಧರಿತವಾಗುತ್ತದೆ. ಹಾಗೆಯೇ, ಮನುಷ್ಯ ತನ್ನ ಒಂದು ಜೀವಿತದ ಆಯುಷ್ಯವನ್ನು ಒಳ್ಳೆಯದಕ್ಕು ವಿನಿಯೋಗಿಸಬಹುದು, ಕೆಟ್ಟದ್ದಕ್ಕು ವಿನಿಯೋಗಿಸಬಹುದು. ಅದು ಅವನ ಆಂತರ್ಯದಲ್ಲಿನ ಗುಣಾವಗುಣಗಳನ್ನು ಅವಲಂಬಿಸಿರುತ್ತದೆ.

ಇದಕ್ಕಾಗೇ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಟ ಅಂತ ಪ್ರಾಜ್ಞರು ಋಗ್ವೇದ ಕಾಲದಿಂದಲೂ ಹೇಳುತ್ತಿದ್ದಾರೆ. ಆದರೆ ಮನುಷ್ಯ ಮಾತ್ರ ಹೊರ ಜಗತ್ತಿನ ತೋರಿಕೆಗಷ್ಟೆ ಮಹತ್ವ ಕೊಡುತ್ತಾ ಬಂದಿದ್ದಾನೆ. ಇದರಿಂದ ತಾನೇ ಸೃಷ್ಟಿಸಿಕೊಂಡ ಕೃತ್ರಿಮ ಜಂಭದ ಬದುಕಲ್ಲಿ ಬಂಧಿಯಾಗಿ ಪರಿತಪಿಸುತ್ತಿದ್ದಾನೆ. ಅವನ ಢಾಂಬಿಕ ಬದುಕಲ್ಲಿ ಒಂದಿಷ್ಟು ತಲ್ಲಣವಾದರೂ ಹತಾಶನಾಗುತ್ತಿದ್ದಾನೆ. ತಾನೇ ಕಟ್ಟಿಕೊಂಡ ಅಪನಂಬಿಕೆಯ ಸಂಕೋಲೆಯಿಂದ ಹೊರಬರಲಾಗದೆ ತೊಳಲಾಡುತ್ತಿದ್ದಾನೆ. ಬಾಹ್ಯಜಗತ್ತಿನಲ್ಲಿ ಹಣ ಚಲಾವಣೆ ಮಾಡಿದಂತೆ, ಆಂತರ್ಯದಲ್ಲಿ ಗುಣ ಚಲಾವಣೆ ಮಾಡಬೇಕು. ಏಕೆಂದರೆ, ಉತ್ತಮ ಗುಣ ಇಲ್ಲದವ ಪರಿಪೂರ್ಣ ಮನುಷ್ಯನಾಗಲಾರ.

ವಿಜ್ಞಾನ ಎಷ್ಟೇ ಬೆಳೆದರೂ, ಮನುಷ್ಯನ ಜ್ಞಾನ ಮಾತ್ರ ನಿಂತನೀರಂತೆ ಬಗ್ಗಡವಾಗಿ ಕೊಳೆಯುತ್ತಿದೆ. ಇದರಲ್ಲಿ ಹುಟ್ಟಿದ ದ್ವೇಷ-ಅಸೂಯೆ ಎಂಬ ಕೊಳಕು, ಮಾನಸಿಕ ರೋಗಗಳನ್ನು ಸೃಷ್ಟಿಸುತ್ತಿವೆ. ಇಂಥ ರೋಗಪೀಡಿತ ಮನಸಿನಲ್ಲಿ ಹಣ-ಅಂತಸ್ತಿನ ಗರ್ವ ಹೆಡೆ ಎತ್ತಿ, ಮನುಷ್ಯರ ಸಂಬಂಧಗಳನ್ನು ಹಾಳುಮಾಡುತ್ತಿದೆ. ಮನುಷ್ಯತನಕ್ಕೆ ಜ್ಯೇಷ್ಟತೆ ಬರುವುದು ತಾಮಸತನ ಅಳಿದು, ಮನಸು ಶುದ್ದವಾದಾಗ. ಬಂಧುತ್ವ-ಮಿತ್ರತ್ವಕ್ಕೆ ಮಿಡಿಯದ ಮನಸು ಕಂದರವಾದರೆ, ಉತ್ತಮ ಬಾಂಧವ್ಯಕ್ಕೆ ಪ್ರೀತಿ-ವಿಶ್ವಾಸವೇ ಹಂದರ. ಅದು ಗಟ್ಟಿಯಾದಷ್ಟು ‘ಸಚ್ಚಿದಾನಂದ’ ಬದುಕು ಸಾಕಾರವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.