ಸೋಮವಾರ, ಮೇ 17, 2021
28 °C

ಸಚ್ಚಿದಾನಂದ ಸತ್ಯ ಸಂದೇಶ: ಮಾನವತೆಯೇ ನಿಜ ಧರ್ಮ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ವಿಶ್ವದಲ್ಲಿ ಧರ್ಮಗಳ ಹುಟ್ಟಿನಿಂದಲೇ ಮಾನವ ಸಂಘರ್ಷ ಅತಿರೇಕಕ್ಕೆ ಹೋಗಿದೆ ಅನ್ನೋ ಆರೋಪವಿದೆ. ಇದು ಅರ್ಧ ಸತ್ಯ. ಪೂರ್ಣ ಸತ್ಯ ಎಂದರೆ, ವಿಶ್ವದಲ್ಲಿ ಧರ್ಮ ಹುಟ್ಟಿರದಿದ್ದರೆ ಮನುಷ್ಯ ಸಂಘರ್ಷ ಮತ್ತಷ್ಟು ತಾರಕಕ್ಕೇರಿ ಇಷ್ಟೊತ್ತಿಗೆ ಮಂಗಳಗ್ರಹದ ಜೀವಿಗಳಂತೆ ನಾಶವಾಗಿರುತ್ತಿದ್ದ. ಕಾಡಿನಲ್ಲಿ ಪ್ರಾಣಿಯಂತೆ ವರ್ತಿಸುತ್ತಿದ್ದ ಮಾನವನಿಗೆ ನಾಗರಿಕತೆ ಕಲಿಸಿ, ಅವನಲ್ಲಿ ರಾಕ್ಷಸಿತನ ಅಳಿಸಿ, ಇಲ್ಲಿವರೆಗೆ ಮನುಷ್ಯತನ ಬೆಳೆಸಿದ್ದೆ ಧರ್ಮ. ಧರ್ಮದ ಮೂಲ ಮತ್ತು ಅದರ ಆಶಯ ಅರ್ಥ ತಿಳಿಯದ ಮನುಷ್ಯನ ಬುದ್ಧಿ ವಿಕಲ್ಪದಿಂದ ಧರ್ಮ ತನ್ನ ನೈಜತೆ ಕಳೆದುಕೊಂಡಿದೆಯಷ್ಟೆ.

ಜ್ಞಾನಸಾಗರ ಮಂಥಿಸುವಾಗ ಜ್ಞಾನಾಮೃತದ ಜೊತೆ ಅಜ್ಞಾನದ ವಿಷವೂ ಉಕ್ಕುತ್ತೆ. ಹೀಗೆ ಉಕ್ಕುವ ಅಜ್ಞಾನದ ವಿಷವನ್ನು ಕುಡಿದು, ಸುಜ್ಞಾನ ಸವಿಯುವ ಶಿವ-ಶಿವೆಯರು ಬೇಕು. ಆಗಷ್ಟೆ ಧರ್ಮದ ಹುಟ್ಟು ಸಾರ್ಥಕ್ಯ ಪಡೆಯುವುದು. ಧರ್ಮಜ್ಞಾನ ಸವಿಯುವಾಗ, ಅಧರ್ಮದ ತಿಮಿರ ನುಸುಳದಂತೆ ಎಚ್ಚರವಹಿಸಬೇಕು. ಅಂಥ ಜಾಗೃತ ಪ್ರಜ್ಞೆ ನಮ್ಮಲ್ಲಿ ಮೂಡಬೇಕಾದರೆ ಸಾತ್ವಿಕ ಮನಸಿರಬೇಕು. ಪರರನ್ನು ಹಿಂಸಿಸದೆ, ಎಲ್ಲರನ್ನೂ ತನ್ನವರೆಂದು ಒಪ್ಪಿಕೊಳ್ಳುವ ಒಳ್ಳೆ ಬುದ್ಧಿಬೇಕು. ಇಂಥ ಒಳ್ಳೆ ಮನಸಿಲ್ಲದೆ, ಢಂಬಾಚಾರಕ್ಕೆ ದೇವರನ್ನು ಪೂಜಿಸುವ-ಆರಾಧಿಸುವ ಪ್ರದರ್ಶನ ಮಾಡಿದರೆ, ನಿಜಧರ್ಮದ ಅರಿವಾಗುವುದಿಲ್ಲ.

ನಾವು ತಿನ್ನುವ ಅನ್ನ ಒಳ್ಳೆಯದೋ-ಕೆಟ್ಟಿದೆಯೋ ಅಂತ ತಿಳಿಯಲು ನಾಲಿಗೆಗೆ ಗ್ರಹಣ-ಶಕ್ತಿ ಇದೆ. ಆದರೆ ಸುಜ್ಞಾನ ಯಾವುದು? ಅಜ್ಞಾನ ಯಾವುದು ಎಂದು ತಿಳಿಯುವಶಕ್ತಿ ನಮ್ಮ ಬುದ್ಧಿಗಿಲ್ಲ. ಅಂಥ ಗ್ರಹಣದ ಶಕ್ತಿಯನ್ನು ಬುದ್ಧಿಗೆ ಕಲ್ಪಿಸುವುದು ಧರ್ಮ. ಆ ಧರ್ಮ ನಮ್ಮ ಬುದ್ಧಿಯೊಳಗೆ ಸರಿಯಾದ ರೀತಿಯಲ್ಲಿ ಸ್ಥಾಪಿತವಾದರೆ, ಅಜ್ಞಾನ-ಸುಜ್ಞಾನದ ವ್ಯತ್ಯಾಸ ಗ್ರಹಿಸುವ ಬುದ್ಧಿಶಕ್ತಿ ಬರುತ್ತದೆ. ನಮ್ಮ ಬುದ್ಧಿಯೊಳಗೆ ಧರ್ಮ ಸರಿಯಾಗಿ ಸ್ಥಾಪಿತವಾಗದಿದ್ದರೆ ಮೂಢನಾಗಿ ಧರ್ಮಾಂಧನಾಗುತ್ತಾನೆ. ಇಂಥ ಪರರನ್ನು ದ್ವೇಷಿಸುವ ಕುಬುದ್ಧಿಗೆ ಧರ್ಮದ ನಿಜರೂಪ ಎಂದಿಗೂ ತಿಳಿಯಲಾರದು. ಧರ್ಮವನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದವರ ತಪ್ಪಿನಿಂದ ಇಂದು ಜಗತ್ತು ಧರ್ಮಾಂಧತೆಯಲ್ಲಿ ಬೇಯುತ್ತಿದೆ. ಧರ್ಮವನ್ನು ಸಂಕುಚಿತ ಬುದ್ಧಿಯಲ್ಲಿ ಬಂಧಿಸಿಡುವ ಅಲ್ಪಜ್ಞರಿಂದ ಜಗತ್ತು ನೋವು ಅನುಭವಿಸುತ್ತಿದೆ.

ಅಂತರ್ ಧರ್ಮಗಳ ಕಲಹದಿಂದ ದೇಶಕ್ಕೆ ದೇಶವೇ ಉರಿಯುತ್ತಿರುವುದನ್ನು ಕಂಡು ಕೆಲವರು, ಇಂಥ ಮಾನವ ದುರಂತಕ್ಕೆ ಧರ್ಮಗಳು ಹುಟ್ಟಬೇಕಿತ್ತಾ ಅಂತ ಅಸಮಾಧಾನದಿಂದ ನುಡಿಯುವುದಿದೆ. ರಸ್ತೆ ಅಪಘಾತವಾಗುತ್ತೆ ಅಂತ ವಾಹನ ಬಳಕೆಯೇ ತಪ್ಪು ಎನ್ನಲಾಗುತ್ತದೆಯೇ? ಮನುಷ್ಯ ಕಾರಣದಿಂದಾಗುವ ತಪ್ಪನ್ನ ಧರ್ಮದ ಮೇಲೆ ಹೊರಿಸುವುದು ಸರಿಯಲ್ಲ. ಧರ್ಮಗಳು ಹುಟ್ಟಿದಾಗಿನಿಂದ ಮಾನವರಲ್ಲಿ ಹುಟ್ಟಿದ ಸಂಕುಚಿತ ಬುದ್ಧಿ ನಿವಾರಣೆಗೆ ಪ್ರಯತ್ನಿಸಲಾಗಿದೆ. ಧರ್ಮಗಳ ನಡುವೆ ಸಮನ್ವಯತೆ ಬೆಳೆಸಲು ಶ್ರಮಿಸಲಾಗಿದೆ. ಅದರ ತತ್ಫಲವಾಗಿಯೇ ಜಗತ್ತಿನಲ್ಲಿ ಬಹಳಷ್ಟು ಧರ್ಮ ಸಂಘರ್ಷಗಳು ಕೊನೆಯಾಗಿವೆ. ಅದು ಇನ್ನೂ ಹಲವೆಡೆ ಮುಂದುವರೆದಿದೆ ಎಂದರೆ; ಅಲ್ಲಿ ವಿಶಾಲ ಮನೋಭಾವ ಅಳಿದು, ಸಂಕುಚಿತ ಮೂರ್ಖಭಾವ ಉಳಿದಿದೆ ಎಂದರ್ಥ. ಅಂಥ ಸ್ಥಳದಲ್ಲಿ ಉಳಿದಿರುವುದು ಧರ್ಮವಲ್ಲ, ಧರ್ಮದ ಹೆಸರಿನ ಮೌಢ್ಯ.

ಮನುಷ್ಯನನ್ನ ಮನುಷ್ಯನ ರೀತಿ ನೋಡುವ ದೃಷ್ಟಿಯೇ ಧರ್ಮ. ಅಂಥ ಮಾನವೀಯ ದೃಷ್ಟಿಯೇ ಕುರುಡಾದರೆ ಧರ್ಮ ಮಸುಕಾಗಿ, ಅಧರ್ಮ ಕೋರೈಸುತ್ತದೆ. ಇಂಥ ಅಧರ್ಮ ತಾಂಡವವಾಡುವಾಗ ಶ್ರೀಕೃಷ್ಣರಂಥ ಅವತಾರ ಪುರುಷರು ಜನ್ಮತಾಳಿ ಮಾನವತೆಯ ನಿಜಧರ್ಮ ತೋರಿಸಿದ್ದಾರೆ. ಬಹುಶಃ ಭಾರತದಲ್ಲಿ ನಡೆದಷ್ಟು ಧಾರ್ಮಿಕ ಆವಿಷ್ಕಾರ, ಪರಿಷ್ಕಾರ ಜಗತ್ತಿನ ಬೇರಾವ ಭೂಭಾಗದಲ್ಲೂ ನಡೆದಿರಲಾರದು. ಇದರಿಂದಾಗಿಯೇ, ಭಾರತ ಸರ್ವಧರ್ಮಗಳ ಸಮನ್ವಯ ಸತ್ವಭೂಮಿಯಾಗಿ ಬೆಳೆಯಲು ಸಾಧ್ಯವಾಗಿದೆ. ಧರ್ಮದೊಳಗೆ ಸೇರಿರುವ ಅಜ್ಞಾನ ಅಳಿದು, ಧರ್ಮಜ್ಞಾನ ‘ಸಚ್ಚಿದಾನಂದ’ ಭಾವದಲ್ಲಿ ಅರಳಿದರೆ, ಮಾನವತೆ ಹಣತೆ ಜಗತ್ತಿನೆಲ್ಲೆಡೆ ಶಾಶ್ವತವಾಗಿ ಬೆಳಗುತ್ತದೆ.⇒.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು