ಶನಿವಾರ, ಜನವರಿ 29, 2022
17 °C

ಸಚ್ಚಿದಾನಂದ ಸತ್ಯ ಸಂದೇಶ | ನೆರೆಮನೆ ನೋಟಕ್ಕಿಂತ ನಮ್ಮನೇ ನಂಟೇ ಚೆನ್ನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಸಾಮಾನ್ಯವಾಗಿ ಜನ ತಮ್ಮ ಬದುಕನ್ನ ಬೇರೆಯವರ ಬದುಕಿನೊಂದಿಗೆ ಹೋಲಿಸಿ ಕೊರಗುವುದೇ ಹೆಚ್ಚು. ದೂರದ ಬೆಟ್ಟ ನುಣ್ಣಗೆ ಕಾಣು ವಂತೆ ನೆರೆಮನೆ ನೋಡುವುದಕ್ಕೆ ಚೆನ್ನಾಗೇ ಕಾಣುತ್ತೆ. ಅದರೊಳಗಿನ ಕುಂದು ಕಾಣದೆ, ತಮ್ಮನೆಯ ಕೊರತೆಯ ಬೆಟ್ಟವನ್ನೇ ತಲೆ ಮೇಲೆ ಹೊತ್ತು ಕೊರಗುತ್ತಾರೆ. ತಮ್ಮಲ್ಲಿರುವ ಉತ್ತಮವಾದುದನ್ನು ನೆನೆಯದೆ, ನೆರೆಮನೆಯಲ್ಲಿ ರುವುದರ ಬಗ್ಗೆಯೇ ಯೋಚಿಸುತ್ತಾರೆ.

ನೆರೆಮನೆಯ ನೆನೆಯುತ್ತಾ ತಮ್ಮನೆಯ ನೆಮ್ಮದಿ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೇ ಯಾರ ಮನೆಯಲ್ಲೂ ಸೌಹಾರ್ದ ಸಂಬಂಧಗಳು ಬೆಳೆಯುತ್ತಿಲ್ಲ. ನೆರೆಮನೆ ನೋಡುತ್ತಾ, ತಮ್ಮನೆ ನಂಟು ಕಳೆದುಕೊಳ್ಳುವುದು ಮೂರ್ಖತನ. ಒಂದು ಮನೆ ಎಂದಮೇಲೆ ಅಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತೆ. ಒಳ್ಳೆಯದನ್ನು ಗುರುತಿಸಿ, ಕೆಟ್ಟದ್ದನ್ನು ಹೊರದೂಡುವ ವಿವೇಕ ನಮಗಿರಬೇಕಷ್ಟೆ.

ಸಂಸಾರ ಅನ್ನೋದು ಸಮಸ್ಯೆಗಳ ಆಗರವೂ ಹೌದು, ಸಾಮರಸ್ಯಗಳ ಸಾಗರವೂ ಹೌದು. ಸಮಸ್ಯೆ ಉದ್ಭವಿಸಿದಾಗೆಲ್ಲಾ ಮೊದಲಿಗೆ ಸಾಮರಸ್ಯದ ಸಿಂಚನ ಸಿಂಪಡಿಸುತ್ತಿರಬೇಕು. ಏಕೆಂದರೆ, ಮನೆಯಲ್ಲಿನ ನೆಮ್ಮದಿಗೆ ಸಂಬಂಧಗಳ ಗಟ್ಟಿ ಅಡಿಪಾಯವಿರಬೇಕು. ಸಂಬಂಧಗಳಲ್ಲಿ ಮೂಡುವ ಅಪನಂಬಿಕೆಗಳು ಬದುಕಿನ ಬುನಾದಿಯನ್ನೇ ಹಾಳುಗೆಡುವುತ್ತವೆ.

ನೆರೆಮನೆಯ ಚೆಂದ ನೋಡಿ, ತಮ್ಮನೆಯ ನೆಮ್ಮದಿ ಕಳೆದುಕೊಳ್ಳುವುದು ಮೂರ್ಖತನ. ತೃಪ್ತ ಬದುಕು ತಪ್ತ ಮನಸ್ಸಿಗೆ ಮುದ ನೀಡುತ್ತೆ. ಅತೃಪ್ತತೆ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಷ್ಟು ಬದುಕಲ್ಲಿ ಬಿರುಕು ಮೂಡಿ, ನೆಮ್ಮದಿ ಕೆಡಿಸುತ್ತದೆ. ಇಂಥ ಸತ್ಯ ಅರಿಯದೆ ಬಹಳಷ್ಟು ಜನ ತಮ್ಮ ಜೀವಿತಾವಧಿಯನ್ನು ಅತೃಪ್ತತೆಯ ಸಂಕಟದಲ್ಲೇ ಕಳೆದುಬಿಡುತ್ತಾರೆ. ಅದೆಷ್ಟೋ ಜನಕ್ಕೆ ಕೊನೆಗಾಲದಲ್ಲಿ ತಾವು ಬದುಕಲ್ಲಿ ಗಳಿಸಿದ್ದೇನು? ಕಳೆದುಕೊಂಡಿದ್ದೇನೆಂಬುದೇ ಅರ್ಥವಾಗಿರುವುದಿಲ್ಲ.

ಅಪನಂಬಿಕೆಯ ಬೇಗೆಯಲ್ಲಿ ಅತೃಪ್ತತೆಯ ಸೋಗು ಚಟಪಟ ಉರಿದಷ್ಟು ಮನೆಯಲ್ಲಿ ಅಶಾಂತಿಯ ಹೊಗೆ ಉಸಿರು ಕಟ್ಟಿಸುತ್ತದೆ. ಮನಸ್ಸಿನ ಗೋಡೆಗಳಲ್ಲಿ ಅಂಟುವ ಹೊಗೆಯ ಕಿಟ್ಟಗಳು, ಮನೆಯ ಆರೋಗ್ಯ ಕೆಡಿಸುತ್ತದೆ. ಅದಕ್ಕಾಗಿ ಮನೆಯ ಸಂಬಂಧಗಳ ಬೇರುಗಳು ನಂಬಿಕೆಯ ಜಲದಲ್ಲಿ ಭದ್ರವಾಗಿರಬೇಕು. ಅದು ಗಂಡ-ಹೆಂಡತಿ ಸಂಬಂಧವೇ ಇರಬಹುದು, ಅಪ್ಪ-ಮಕ್ಕಳ ಸಂಬಂಧವೇ ಇರಬಹುದು, ಅಲ್ಲಿ ನಂಬಿಕೆಯ ಬೇರು ಕೊಳೆತು ಹೋದರೆ ಯಾವುದೇ ಸಂಬಂಧಗಳು ಬಾಡಿಹೋಗುತ್ತವೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎಂಬ ವಿಷಕ್ಕೆ ಬಲಿಯಾಗುತ್ತಿರುವ ದಾಂಪತ್ಯ ಸಂಬಂಧಗಳಲ್ಲಿ ನಂಬಿಕೆಯ ಬೇರು ಹಾಳಾಗಿರುವುದು ಢಾಳಾವಾಗಿ ಗೋಚರಿಸುತ್ತಿದೆ. ಗಟ್ಟಿ ನಂಬಿಕೆ ಇಲ್ಲದೆ ಯಾವ ಸಂಬಂಧವೂ ಉಳಿಯುವುದಿಲ್ಲ ಎಂಬ ಕಟುಸತ್ಯ ಅರಿಯದೆ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಿರುವ ಯುವದಂಪತಿಗಳಿಗೆ ಬದುಕುವ ಮಾರ್ಗ ತೋರಿಸಬೇಕಿದೆ. ಇದಕ್ಕಾಗಿ ಹಿರಿಯರು ತಮ್ಮ ಅನುಭವಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳಬೇಕು. ನೆರೆ ಸಂಬಂಧಗಳ ನೋಡಿ, ನೆರೆತ ಸಂಬಂಧಗಳನ್ನು ಚಿಗುರಿಸುವ ದಾಂಪತ್ಯ ಕೌಶಲವನ್ನು ಕಲಿಸಬೇಕು.

ಸಂಸಾರ ಅನ್ನೋದು ಸಪ್ತಸ್ವರಗಳ ದಿವ್ಯಗಾನ. ಮಾಧುರ್ಯ ತುಂಬಿದ ಬದುಕಲ್ಲಿ ಅಪಸ್ವರದ ಸದ್ದು ಕೇಳದಂತೆ ಎಲ್ಲರೂ ಎಚ್ಚರವಹಿಸಬೇಕು. ಶ್ರುತಿ ತಪ್ಪಿದರೆ ಸಂಗೀತ ಹೇಗೆ ಕೆಡುತ್ತದೋ ಹಾಗೇ ಬದುಕಿನ ಹೆಜ್ಜೆ ತಪ್ಪಿದರೆ ಸಂಸಾರ ಕೆಡುತ್ತದೆ. ಕುಟುಂಬಸ್ಥರೆಲ್ಲಾ ಜೀವನದ ಶ್ರುತಿಗೆ ಲಯಬದ್ಧವಾಗಿ ನಡೆಯಬೇಕು. ತಾನು ಹೆಚ್ಚು, ಅವರು ಕಡಿಮೆ ಎಂಬ ತಾರತಮ್ಯದ ತಂತಿಯನ್ನು ಯಾರೂ ಮೀಟಬಾರದು.

ಕುಟುಂಬದ ಅಂತಃಸತ್ವವೇ ಸಮಾನತೆ. ಸಮತತ್ವದ ಆಧಾರದ ಮೇಲೆ ಬದುಕನ್ನು ಮುನ್ನಡೆಸಿಕೊಂಡು ಹೋಗುವ ಛಾತಿ ಮನೆ ಯಜಮಾನನಿಗೆ ಸಿದ್ಧಿಸಿದರೆ ಸಂಸಾರನೌಕೆ ನೆಮ್ಮದಿ ತಟದಲ್ಲಿ ನೆಲೆಸುತ್ತದೆ. ಪರರ ಬದುಕಿನೊಂದಿಗೆ, ತಮ್ಮ ಬದುಕನ್ನು ತೂರಿಸಿ ನೋಡುವ ಚಾಳಿ ಮತ್ತು ಇರುವ ಸುಖವ ಮರೆತ ಪರರ ಸುಖದತ್ತ ಆಸೆಕಂಗಳು ಹರಿಸುವ ದುರ್ಬುದ್ಧಿ ಬಿಟ್ಟಾಗ ‘ಸಚ್ಚಿದಾನಂದ’ದ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು