ಮಂಗಳವಾರ, ಮಾರ್ಚ್ 31, 2020
19 °C
ಜಿಲ್ಲೆಯ ಹಲವೆಡೆ ಸಂಭ್ರಮದ ಶಿವರಾತ್ರಿ ಆಚರಣೆ, ಹಲವು ಕಡೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ರಥೋತ್ಸವ

ಶಿವಭಕ್ತಿಯಲ್ಲಿ ಮಿಂದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಜನರು ಮಹಾಶಿವರಾತ್ರಿ ಆಚರಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು.

ಪ್ರಮುಖ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಶಿವದೇಗುಲಗಳಲ್ಲಿ ಜನರು ತುಂಬಿ ತುಳುಕಿದ್ದರು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಶಿವನ ದೇವಾಲಯ, ಟಿಜಿಎಂಸಿ ಬ್ಯಾಂಕ್ ಆವರಣದ ಮಹಾಲಕ್ಷ್ಮಿ ದೇವಾಲಯ, ಕುಣಿಗಲ್ ರಸ್ತೆಯ ಮಾರುತಿ ದೇವಾಲಯ, ಬಸವಣ್ಣ ಮತ್ತು ಬನಶಂಕರಿ ದೇವಾಲಯ, ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ವಿಶೇಷ ಪೂಜೆ ನಡೆಯಿತು.

ಎಸ್‍ಐಟಿಯ ಶಿವಗಣಪತಿ ದೇವಾಲಯದಲ್ಲಿ ಹೋಮ, ಪ್ರಧಾನ ಪೂರ್ಣಾಹುತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅಶೋಕನಗರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ನಡೆಯಿತು.

ಬಟವಾಡಿಯ ಪಶುಪತಿನಾಥ ದೇವಾಲಯ, ಬಿ.ಎಚ್ ರಸ್ತೆಯ ಸೋಮೇಶ್ವರ ಸ್ವಾಮಿ ದೇವಸ್ಥಾನ, ಹೊರಪೇಟೆಯನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯೇ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು.

ಕ್ಯಾತ್ಸಂದ್ರದ ಹರಿಹರ ಕ್ಷೇತ್ರ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 9ಕ್ಕೆ ಮತ್ತು ಮಧ್ಯಾಹ್ನ 12ಕ್ಕೆ ಕೇದಾರೇಶ್ವರಸ್ವಾಮಿಗೆ ರುದ್ರಾಭಿಷೇಕ ನಡೆಯಿತು. ರಾಮೇಶ್ವರಸ್ವಾಮಿ ಮತ್ತು ಚಂದ್ರಮೌಳೀಶ್ವರ ಸ್ವಾಮಿಗೆ ಸಂಜೆ 4.30ಕ್ಕೆ 1ನೇ ಯಾಮದ ಪೂಜೆ, ಸಂಜೆ 6ರಿಂದ 7.30ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 12 ಗಂಟೆಗೆ 2ನೇ ಯಾಮದ ಪೂಜೆ ಮತ್ತು ರಾತ್ರಿ 2 ಗಂಟೆಗೆ 3ನೇ ಯಾಮದ ಪೂಜೆ ಹಾಗೂ ಬೆಳಗಿನ ಜಾವ 4 ಗಂಟೆಗೆ 4ನೇ ಯಾಮದ ಪೂಜೆ ಜರುಗಿದವು.

ಡಿ.ಎಂ.ಪಾಳ್ಯದ ರೇವಣಸಿದ್ಧೇಶ್ವರ ಗುರು ಮಠ, ಅರೆಯೂರು ವೈದ್ಯನಾಥೇಶ್ವರ ಕ್ಷೇತ್ರದಲ್ಲಿ ಮಹಾರಥೋತ್ಸವ ನಡೆಯಿತು. ದೇವರಾಯನದುರ್ಗ ದುರ್ಗದಹಳ್ಳಿಯ ವಿದ್ಯಾಶಂಕರ ದೇವಾಲಯದಲ್ಲೂ ಶಿವರಾತ್ರಿ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆದವು.

ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ, ಸಂಗೀತ, ಹರಿಕಥೆ, ಭಜನೆ, ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಲವೆಡೆ ಬೃಹದಾಕಾರದ ಶಿವನಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಿವರಾತ್ರಿ ನಿಮಿತ್ತ ವಿವಿಧ ಸಂಘಟನೆಗಳು ದೇವರ ದರ್ಶನ ಮಾಡಿ ಬರುವ ಭಕ್ತರಿಗೆ ಪ್ರಸಾದ, ಪಾನಕ, ಭಕ್ತರಿಗೆ ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)