ಮಂಗಳವಾರ, ಮಾರ್ಚ್ 31, 2020
19 °C
ಗಂಗಾಧರೇಶ್ವರನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ರಾತ್ರಿ ಭಜನೆ

ಎಲ್ಲೆಡೆ ಅನುರಣಿಸಿದ ಶಿವನಾಮ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶಿವರಾತ್ರಿಯ ದಿನವಾದ ಶುಕ್ರವಾರ ನಗರದ ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗಿನಿಂದಲೇ ದೇವಸ್ಥಾನಕ್ಕೆ ಭೇಟಿನೀಡಿದ ಭಕ್ತರು ಗಂಗಾಧರೇಶ್ವರನ ಸ್ಮರಣೆ ಮಾಡಿದರು.

ಕೃಷ್ಣಮಠದ ರಥಬೀದಿಯಲ್ಲಿರುವ ಅನಂತೇಶ್ವರ ಹಾಗೂ ಚಂದ್ರ ಮೌಳೇಶ್ವರನ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇವಸ್ಥಾನವನ್ನು ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರ ಹಬ್ಬದ ಮೆರಗನ್ನು ಹೆಚ್ಚಿಸಿತ್ತು. ದೇವರಿಗೆ ರುದ್ರಾಕ್ಷಿ, ಹೂಮಾಲೆಗಳಿಂದ ಅಲಂಕರಿಸಲಾಗಿತ್ತು.

ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ದೇವರಿಗೆ ಭಕ್ತಿ ಪೂರ್ವಕವಾಗಿ ಎಣ್ಣೆ ಸಮರ್ಪಿಸಿದರು. ಎಲ್ಲೆಡೆ ಶಿವನಾಮ ಸ್ಮರಣೆ ಕೇಳುತ್ತಿತ್ತು.

ಸಾಂಸ್ಕೃತಿಕ ಕಾರ್ಯಕ್ರಮ:  ಶಿವರಾತ್ರಿ ಅಂಗವಾಗಿ ಸಂಜೆ ಸ್ಯಾಕ್ಸೋಫೋನ್ ವಾದನ ನಡೆಯಿತು. ಬಳಿಕ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ ನಡೆಯಿತು. ಶನಿವಾರ ಸಂಜೆ ಸಂಗೀತ, ನೃತ್ಯ ವೈವಿದ್ಯ ಕಾರ್ಯಕ್ರಮಗಳು ನಡೆಯಲಿವೆ. 23ರಂದು ಸೀತಾ ಸ್ವಯಂವರ ಹರಿಕಥೆ, ನರಸಿಂಹಾವತಾರ ಯಕ್ಷಗಾನ ತಾಳಮದ್ದಳೆ, 24ರಂದು ವೀಣಾವಾದನ, ಭರತನಾಟ್ಯ, 25ರಂದು ವೀಣಾವಾದನ, ಸಂಗೀತ, ಭಕ್ತಿ ಸಂಗೀತ, ‘ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.  

ಇತಿಹಾಸ ಪ್ರಸಿದ್ಧ ಬನ್ನಂಜೆ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿತು. ಬಳಿಕ ಭಜನೆ, ಶತರುದ್ರ ಪಾರಾಯಣ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ, ಮಹಾಪೂಜೆ, ರಥ ಸಂಪ್ರೋಕ್ಷಣೆ, ಶಿವರಾತ್ರಿ ಅರ್ಘ್ಯ ಪ್ರಧಾನಾಧಿಗಳು ನಡೆದವು.

ಸಂಜೆ 5ಕ್ಕೆ ನಂದಿಕೋಣ, ರಕ್ತೇಶ್ವರಿ ಬೊಬ್ಬರ್ಯ ದೇವರಿಗೆ ವಾರ್ಷಿಕ ಪೂಜೆ ನಡೆಯಿತು. ಬಳಿಕ ಉತ್ಸವ ಬಲಿ, ರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ನೆರೆದು ಶಿವನಾಮ ಸ್ಮರಣೆ ಮಾಡಿದರು. ನಂತರ ಮಹಾ ರಂಗಪೂಜೆ, ಭೂತ ಬಲಿ ನೆರವೇರಿತು.

ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಉಮಾಮಹೇಶ್ವರ ಸನ್ನಿದಾನದಲ್ಲಿ ಶಿವರಾತ್ರಿ ಸಂಭ್ರಮ ತುಂಬಿತ್ತು. ಬೆಳಿಗ್ಗೆ ಶತರುದ್ರಾಭಿಷೇಕ ಸಹಿತ ಮಹಾಪೂಜೆ ನಡೆದರೆ, ಸಂಜೆ ಭಜನೆ, ರಂಗಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಸರಳೆಬೆಟ್ಟು ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆದವು. ಇಲ್ಲಿಯೂ ಭಜನೆ, ರಾತ್ರಿ ಹನುಮಗಿರಿ ಮೇಳದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

500 ವರ್ಷಗಳಷ್ಟು ಹಳೆಯದಾದ ಮಲ್ಪೆಯ ಬಾಪುತೋಟ ಪಡುಗಡ್ಡೆ ಸರ್ವೇಶ್ವರ ದೇವಸ್ಥಾನ ಶಿವರಾತ್ರಿಯ ಜತೆಗೆ ವರ್ಧಂತಿ ಉತ್ಸವ ನಡೆಯುತ್ತಿದೆ. 

ಪರ್ಕಳ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ 21, 22ರಂದು ಭಜನ ಮಂಗಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಶುಕ್ರವಾರ ಸಾಮೂಹಿಕ ಶತ ರುದ್ರಾಭಿಷೇಕ, 1008 ಕಾಯಿ ಮೂಡು ಗಣಪತಿ ಪೂಜೆ, ರಾತ್ರಿ ಭಜನೆ ರಂಗಪೂಜೆ ನಡೆಯಿತು. 22ರಂದು ದೀಪ ವಿಸರ್ಜನೆ ಮಂಗಲ, ಓಕುಳಿ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)