ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಕೃತು ಸಂವತ್ಸರ: ಶುಭವೇ ಹೆಚ್ಚಾಗಲಿರುವ ವರ್ಷ

Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಹೊಸ ವರ್ಷದ ಫಲಾಫಲಗಳು

ಸಂವತ್ಸರ ಪುರುಷನ ಮಂತ್ರಿಮಂಡಲ: ಈ ವರ್ಷ ಯುಗಾದಿಯು ಶನಿವಾರ ಬಂದಿರುವುದರಿಂದ ಈ ಸಂವತ್ಸರದ ರಾಜ ಶನಿ ಮಹಾರಾಜನೇ ಆಗಿರುವನು. ಶನಿಯು ಶ್ರಮಿಕ ವರ್ಗ ಸೂಚಕ. ಸೇವಕನೇ ರಾಜನಾಗಿರುವನು ಈ ವರ್ಷ. ಶ್ರಮಿಕ ಹಿನ್ನೆಲೆಯಲ್ಲಿರುವವರು ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬರುವರು. ನಾಯಕ ಹಾಗೂ ಸರ್ಕಾರವನ್ನು ಪ್ರತಿನಿಧಿಸುವ ರವಿಗೂ ಶನಿಗೂ ವಿರೋಧವಿರುವುದರಿಂದ ಆಳ್ವಿಕೆಯಲ್ಲಿ ಅನೇಕ ವಿಪ್ಲವಗಳನ್ನು ಸೂಚಿಸುತ್ತಿದೆ.

ಗುರು ಮಂತ್ರಿಯಾಗಿರುವುದರಿಂದ ದೇಶದಲ್ಲಿ ಸುವೃಷ್ಟಿ, ಸಮೃದ್ಧಿಗಳು ಉಂಟಾಗುವುವು. ಗುರುವಿನ ಸ್ಥಾನ ಗಮನಿಸಿದಾಗ ಆರ್ಥಿಕವಾಗಿ ಮುಗ್ಗಟ್ಟಿನ ಸ್ಥಿತಿ ಎದುರಿಸಬೇಕಾಗುವುದು. ಬುಧ ಸೇನಾಧಿಪತಿಯಾಗಿ, ಅರ್ಘ್ಯಾಧಿಪತಿ, ಮೇಘಾಧಿಪತಿಯೂ ಆಗಿರುವುದರಿಂದ ಪ್ರಕೃತಿಯಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ಶ್ರಮಕ್ಕೆ ತಕ್ಕ ಫಲ ಸಿಗುವ ಯೋಗ. ಆದರೆ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ನಮಗೂ ತಟ್ಟುವುದು. ರವಿ ಸಸ್ಯಾಧಿಪನಾಗಿರುವುದರಿಂದ ಕೆಲವು ಸಸ್ಯಗಳಿಂದ ರೈತರಿಗೆ ನಷ್ಟವುಂಟಾದರೂ, ಕಡಲೆ ಹಾಗೂ ಅವರೆಬೆಳೆಗೆ ಬೆಲೆ ಬರುವುದು. ಶುಕ್ರ ಧಾನ್ಯಾಧಿಪತಿಯಾಗಿ ಅತಿವೃಷ್ಟಿ, ಅನಾವೃಷ್ಟಿಗೆ ಕಾರಣನಾಗುವನು. ಹೂವಿನ ವ್ಯಾಪಾರಿಗಳಿಗೆ ಶುಭ. ಕಲಾವಿದರಿಗೂ ಶುಭ. ಕುಜ ರಸಾಧಿಪತಿನಾಗಿರುವುದರಿಂದ ಅಗ್ನಿ ಅವಘಡಗಳು ಅಧಿಕ. ನೀರಸಾಧಿಪತಿ ಶನಿಯಾಗಿದ್ದು ಚಿನ್ನ, ಬೆಳ್ಳಿ, ಪೆಟ್ರೋಲ್, ತೈಲ ಬೆಲೆಗಳೆಲ್ಲಾ ಏರುವುವು. ಬಲರಾಮ ಪಶುನಾಯಕನಾಗಿ, ಶನಿ ರಾಜನಾದಾಗ ಸುವೃಷ್ಟಿ, ಸಸ್ಯಸಮೃದ್ಧಿಯಾಗಿ ಪಶುಗಳ ಆರೋಗ್ಯವೂ ಚೆನ್ನಾಗಿರುವುದು. ಶನಿ ಹಾಗೂ ಕುಜ ಮಕರದಲ್ಲಿರುವುದು ದೇಶ–ದೇಶಗಳ ನಡುವೆ ದ್ವೇಷವನ್ನು ಸೂಚಿಸುವನು. ಅಗ್ನಿತತ್ವ ರಾಶಿಯಲ್ಲಿ ರಾಹು ಹಾಗೂ ವಾಯುತತ್ವ ರಾಶಿಯಲ್ಲಿ ಕೇತು ಇರುವುದರಿಂದ ಅಗ್ನಿ ಅವಘಡಗಳು, ದುರಂತಗಳ ಸಂಭವ.

ಗುರುವು ಸ್ವಸ್ಥಾನದಲ್ಲಿ, ಶನಿಯು ಮುದಿತಾವಸ್ಥೆಯಲ್ಲಿ ವರ್ಷಪೂರ್ತಿ ಇರುವುದರಿಂದ ಈ ವರ್ಷ ಶುಭಫಲಗಳುಂಟಾಗುವುವು. ಈ ಗ್ರಹಗಳ ಜೊತೆಗೆ ರವಿ, ಕುಜ, ಶುಕ್ರ ಗ್ರಹಗಳ ಗೋಚಾರಫಲವನ್ನೂ ನಾವು ವಿಶ್ಲೇಷಣೆ ಮಾಡಿದಾಗ ನಿಖರ ಫಲ ತಿಳಿಯುವುದು. ಈ ವರ್ಷ ರಾಷ್ಟ್ರದಲ್ಲಿ ಅನ್ನಕ್ಕೆ ಕೊರತೆಯಿಲ್ಲ. ರೈತರಿಗೂ ಒಳ್ಳೆಯದಾಗುವುದು. ಒಳ್ಳೆಯ ಮಳೆ-ಬೆಳೆ ಯೋಗವಿದೆ. ಹೈನುಗಾರಿಕೆ, ಫಸಲು ಹಾಗೂ ಸಣ್ಣಪುಟ್ಟ ಧಾನ್ಯಗಳು ಚೆನ್ನಾಗಿ ಫಲಿಸುವುದು. ಹೂವಿನ ವ್ಯಾಪಾರಿಗಳಿಗೂ ಶುಭ. ಶನಿಯೇ ರಾಜಾಧಿಪತಿಯಾಗಿರುವುದರಿಂದ ಅಧರ್ಮ ಮಾಡಿದವರು, ಎಂದರೆ ಭ್ರಷ್ಟಾಚಾರದ ಹಿನ್ನೆಲೆಯಿರುವವರು, ಕಷ್ಟವನ್ನು ಅನುಭವಿಸಬೇಕಾಗುವುದು.

ಗ್ರಹಣವಿಚಾರ

ಈ ವರ್ಷ ಭಾರತ ದೇಶದಲ್ಲಿ ಎರಡು ಗ್ರಹಣಗಳು ಗೋಚರಿಸುವುವು.
ಅಕ್ಟೋಬರ್‌ 25ರಂದು ಕೇತುಗ್ರಸ್ತ ಸೂರ್ಯಗ್ರಹಣ; ಚಿತ್ತಾ, ಸ್ವಾತಿ ನಕ್ಷತ್ರದವರು ಮತ್ತು ಕನ್ಯಾ, ತುಲಾ ರಾಶಿಯವರು ಶಾಂತಿಯನ್ನು ಮಾಡಿಸಿಕೊಳ್ಳಬೇಕಾಗುವುದು.
ನವೆಂಬರ್‌ 8ರಂದು ರಾಹುಗ್ರಸ್ತ ಚಂದ್ರಗ್ರಹಣ - ಭರಣಿ ನಕ್ಷತ್ರ, ಮೇಷ ರಾಶಿಯವರು ಶಾಂತಿಯನ್ನು ಮಾಡಿಕೊಳ್ಳ
ಬೇಕಾಗುತ್ತದೆ.

ಮಳೆ ನಕ್ಷತ್ರಗಳು

ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಆಶ್ಲೇಷಾ, ಪುಷ್ಯಾ, ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ನಕ್ಷತ್ರಗಳು ಮಳೆ ನಕ್ಷತ್ರಗಳು.

ಭೂಮಿಯಲ್ಲಿ ಬೀಜ ಬಿತ್ತಲು: ಪಂಚಮೀ, ಸಪ್ತಮೀ, ತ್ರಯೋದಶೀ ಈ ತಿಥಿಗಳೂ, ಸೋಮ, ಬುಧ, ಗುರು, ಶುಕ್ರವಾರಗಳೂ, ರೋಹಿಣಿ, ಪುಷ್ಯಾ, ಆಶ್ಲೇಷಾ, ಮಖಾ, ಉತ್ತರಾ, ಹಸ್ತಾ, ಸ್ವಾತಿ, ಅನೂರಾಧಾ, ಮೂಲಾ, ಉತ್ತರಾಷಾಢಾ, ಶ್ರವಣ, ಶತಭಿಷಾ, ಉತ್ತರಾಭಾದ್ರಾ, ರೇವತಿ - ಈ ನಕ್ಷತ್ರಗಳು ಪ್ರಶಸ್ತ. ಅಶ್ವಿನಿ, ಮೃಗಶಿರ, ಜ್ಯೇಷ್ಠಾ ನಕ್ಷತ್ರಗಳು ಮಧ್ಯಮ.

ಭಾನುವಾರ ಸಿಂಹಲಗ್ನದಲ್ಲಿ ಸಕಲ ಬೀಜಗಳನ್ನೂ ಬಿತ್ತಬಹುದು. ಸೋಮವಾರ ಮಿಥುನ ಲಗ್ನದಲ್ಲಿ ನಾಟಿ ಮಾಡಬಹದು. ಮಂಗಳವಾರ ಮೇಷ, ವೃಶ್ಚಿಕಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತಬೇಕು. ಬುಧವಾರ ಮಿಥುನ ಲಗ್ನದಲ್ಲಿ ಅಡಿಕೆ ಸಸಿಯನ್ನೂ, ಗುರುವಾರ ಧನುರ್ಮೀನ ಲಗ್ನಗಳಲ್ಲಿ ಹೂವಿನ ಗಿಡಗಳನ್ನೂ, ಶನಿವಾರ ಮಕರ, ಕುಂಭ ಲಗ್ನಗಳಲ್ಲಿ ಎಳ್ಳು, ರಾಗಿ ಮುಂತಾದ ಕರಿಯ ಧಾನ್ಯಗಳನ್ನೂ ಬಿತ್ತಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT