ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಟೇಸ್ವಾಮಿ–ಕೊಡೇಕಲ್ಲ ಪರಂಪರೆಗಳ ಮುಖಾಮುಖಿ

Published : 21 ಸೆಪ್ಟೆಂಬರ್ 2024, 23:55 IST
Last Updated : 21 ಸೆಪ್ಟೆಂಬರ್ 2024, 23:55 IST
ಫಾಲೋ ಮಾಡಿ
Comments

ಭಾರತದ ಆಧ್ಯಾತ್ಮಿಕ ಲೋಕದಲ್ಲಿ ಗುರು–ಶಿಷ್ಯ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಹಲವು ಗುರುಪಂಥಗಳಲ್ಲಿ ಕನ್ನಡ ನೆಲದ ಕೊಡೇಕಲ್ಲ ಬಸವಣ್ಣ-ಮಂಟೇಸ್ವಾಮಿ ಪರಂಪರೆಯೂ ಒಂದು. ಕಳೆದ ಎಂಟು ಶತಮಾನಗಳಿಂದ ಅಜ್ಞಾತವಾಗಿದ್ದ ಈ ಪಂಥಗಳು ಈಚೆಗೆ ಪರಸ್ಪರ ಬೆಸೆದುಕೊಳ್ಳುತ್ತ ಇತಿಹಾಸದ ಮರು ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಮೈಸೂರು ವೇದಿಕೆಯಾಯಿತು. ಉಭಯ ಗುರು–ಶಿಷ್ಯ ಪರಂಪರೆಗಳು ಕರ್ನಾಟಕದ ಉತ್ತರ ಮತ್ತು ದಕ್ಷಿಣದ ಜನ ಸಮುದಾಯಗಳ ಅಧ್ಯಾತ್ಮಿಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಮಹ್ವತ ಪಡೆದಿವೆ.

ಮಂಟೇಸ್ವಾಮಿ ನೀಲಗಾರ ಪರಂಪರೆ ಮೈಸೂರು ಸೀಮೆಯಲ್ಲಿ ಅಪಾರ ಒಕ್ಕಲುಗಳನ್ನು ಹೊಂದಿರುವ ಶೈವ ಸಿದ್ಧಪಂಥ. ಹಾಗೇ ಕಲಬುರಗಿ-ಯಾದಗಿರಿ ಸೀಮೆಯ ಕೊಡೇಕಲ್ಲು ಬಸವಣ್ಣ ಪರಂಪರೆ ಕೂಡ ದೊಡ್ಡ ಅನುಯಾಯಿಗಳನ್ನು ಹೊಂದಿರುವ ಆರೂಢ ಸಿದ್ಧಪಂಥ. ನೀಲಗಾರರು ಮಂಟೇಸ್ವಾಮಿ ಮತ್ತವರ ಶಿಷ್ಯರ ಕುರಿತು ಜನಪದ ಕಾವ್ಯ ಕಟ್ಟಿ ಹಾಡಿದರೆ, ಕೊಡೇಕಲ್ಲ ಬಸವಣ್ಣ ಮತ್ತವರ ಕುಟುಂಬ, ಪಂಥದವರು ಬರೆದ ವಚನಗಳನ್ನು ಪಠಿಸುವ ಮತ್ತು ಹಾಡುವ ಪದ್ಧತಿ ಕೊಡೇಕಲ್ಲ ಪರಂಪರೆಯಲ್ಲಿದೆ.

ಮಂಟೇಸ್ವಾಮಿ ನೀಲಗಾರ ಪಂಥ ಜಾತ್ಯತೀತವಾದದ್ದು. ಮಂಟೇಸ್ವಾಮಿ ಎಂದರೆ ಭಿನ್ನಬೇಧವಿಲ್ಲದೆ ಕುಲೇಳು ಹದಿನೆಂಟು ಜಾತಿಗಳನು ಒಂದು ಮಾಡಿ ಏಕವಾಗಿ ಬೆಳಗುವ ಪರಂಜ್ಯೋತಿ. ಕೊಡೇಕಲ್ಲ ಪರಂಪರೆ ಕೂಡ ಜಾತಿ, ಮತ, ಧರ್ಮಗಳ ನಡುವೆ ಸೌಹಾರ್ದತೆ, ಏಕತೆಯನ್ನು ಪ್ರತಿಪಾದಿಸುತ್ತ ಇಂದಿಗೂ ಬಾಳುತ್ತಿರುವ ಪಂಥ. ಕೊಡೇಕಲ್ಲ ಬಸವಣ್ಣ ಒಂದು ಕಾಲಿಗೆ ಮುಸ್ಲಿಮರು ಮೆಡುವ ಚೂಪು ಬೂಟು (ಕಂಸಿ), ಇನ್ನೊಂದು ಕಾಲಿಗೆ ಹಿಂದೂ ಪಾದರಕ್ಷೆ (ರಾಕ್ಷಿ) ತೊಟ್ಟು ಮೈಗೆ ಚರ್ಮಾಂಭರ ಉಟ್ಟು, ಕೈಯಲ್ಲಿ ಹಂಡಿ ಹಿಡಿದು ಹಿಂದೂ–ಮುಸ್ಲಿಂ ಭಾವೈಕ್ಯತೆಗಾಗಿ ಸಮಾನತೆಯ ಕಾಲಜ್ಞಾನ ಸಾರಿದವರು. ತಾತ್ವಿಕವಾಗಿ ಒಂದೇ ನೆಲಗಟ್ಟನ್ನು ಹೊಂದಿರುವ ಮಂಟೇಸ್ವಾಮಿ ಮತ್ತು ಕೊಡೇಕಲ್ಲು ಬಸವಣ್ಣ ಪರಂಪರೆಗಳು ಚಾರಿತ್ರಿಕವಾಗಿ ಕೂಡ ಒಂದೇ ಮೂಲದವು. ಅಷ್ಟೇ ಅಲ್ಲದೆ ಕೊಡೇಕಲ್ಲು ಬಸವಣ್ಣ- ಮಂಟೇಸ್ವಾಮಿ ಗುರು–ಶಿಷ್ಯ ಪಂಥಗಳು ಎಂಬುದು ಗಮನಾರ್ಹ. ಈ ಇಬ್ಬರೂ 15ನೇ ಶತಮಾನದ ಚಾರಿತ್ರಿಕ ಸಿದ್ಧಪುರುಷರು.

ಕೊಡೇಕಲ್ಲ ಬಸವಣ್ಣನ ಮರಿಮೊಮ್ಮಗ ವೀರಸಂಗಪ್ಪಯ್ಯ ಕ್ರಿ.ಶ. 1589ರಲ್ಲಿ ರಚಿಸಿದ ‘ನಂದಿಯ ಆಗಮಲೀಲೆ’ ಕೃತಿ ಈ ಗುರು–ಶಿಷ್ಯ ಪರಂಪರೆಗಳ ಚಾರಿತ್ರಿಕ ಸಂಗತಿಗಳ ಕುರಿತು ಬೆಳಕು ಚೆಲ್ಲುತ್ತದೆ. ಕೊಡೇಕಲ್ಲು ಬಸವಣ್ಣ ಕಲ್ಯಾಣದ ಬಸವಣ್ಣನ ಪ್ರತಿನಿಧಿ ಎಂದು ಪ್ರತಿಪಾದಿಸುತ್ತದೆ. ಹಾಗೇ ಮಂಟೇಸ್ವಾಮಿ, ಅಲ್ಲಮಪ್ರಭು ದೇವರ ಅವತಾರ ಎಂದು ಮಂಟೇಸ್ವಾಮಿ ಕಾವ್ಯ ಪ್ರತಿಪಾದಿಸುತ್ತದೆ. ಕನ್ನಡನಾಡಿನ ಉತ್ತರದಲ್ಲಿ ಕೊಡೇಕಲ್ಲ ಬಸವಣ್ಣ, ದಕ್ಷಿಣದಲ್ಲಿ ಮಂಟೇಸ್ವಾಮಿ 12ನೇ ಶತಮಾನದ ಬಸವ ಅಲ್ಲಮರ ಚಳವಳಿಯನ್ನು ಮುಂದುವರಿಸಿರುವುದು ಮಾತ್ರವಲ್ಲ, ವಿಸ್ತರಿಸಿದ್ದಾರೆ. ಇನ್ನೂ ಮುಂದುವರೆದು ನಾಥ, ಸೂಫಿ, ಸಿದ್ಧ, ಆರೂಢ, ಅವಧೂತ ಪಂಥಗಳ ಆವಾಹಿಸಿಕೊಂಡು ಕಲ್ಯಾಣದ ಕ್ರಾಂತಿಯ ಆಶಯಗಳನ್ನು ಸಾಧಿಸಿದ್ದಾರೆ. ಕೊಡೇಕಲ್ಲ ಬಸವಣ್ಣ ವಚನಗಳ ನಾಲ್ಕು ಕೃತಿಗಳನ್ನು, ಹಿರಿಯ ಮಗ ರಾಚಪ್ಪಯ್ಯ 10 ಕೃತಿ, 46 ತತ್ವಪದಗಳನ್ನು, ಮಡದಿ ನೀಲಮ್ಮ, ಮಕ್ಕಳಾದ ಗುಹೇಶ್ವರ, ಸಂಗಪ್ಪಯ್ಯ ವಚನಗಳನ್ನು, ಮಂಟೇಸ್ವಾಮಿ 13 ವಚನಗಳನ್ನು ಬರೆದಿರುವುದು ಕೊಡೇಕಲ್ಲ ಮಠದಲ್ಲಿ ದೊರೆತಿವೆ.

ಇಷ್ಟಿದ್ದರೂ ಒಂದೇ ಮೂಲದ ಗುರು–ಶಿಷ್ಯ ಪರಂಪರೆಗಳಾದ ಮಂಟೇಸ್ವಾಮಿ-ಕೊಡೇಕಲ್ಲ ಪರಂಪರೆಗಳ ಪರಸ್ಪರ ಸಂಪರ್ಕವಿಲ್ಲದೆ ಅಜ್ಞಾತವಾಗೇ ಉಳಿದಿವೆ. ಇದಕ್ಕೆ ಕಾರಣ ಕೊಡೇಕಲ್ಲ ಪರಂಪರೆ ತನಗೆ ತಾನೇ ಹಾಕಿಕೊಂಡಿರುವ ನಿರ್ಬಂಧ. ‘ನಂದಿಯ ಆಗಮಲೀಲೆ’ ಈ ಬಗೆಗೆ ಬೆಳಕು ಚೆಲ್ಲುತ್ತದೆ. ಮಂಟೇಸ್ವಾಮಿ ದ್ರಾವಿಡ ದೇಶ ಎಂಬ ಮೈಸೂರು ಸೀಮೆಯಿಂದ ಕೊಡೇಕಲ್ಲ ಬಸವಣ್ಣ ಬಳಿ ಬಂದು ಕಾಯಸಿದ್ಧ ಪಡೆದರು. ಈ ನಡುವೆ ಕೊಡೇಕಲ್ಲ ಬಸವಣ್ಣರ ಹಿರಿಯ ಮಗ ರಾಚಪ್ಪಯ್ಯನ ಮಗ ಅಕಾಲಿಕ ಮರಣ ಹೊಂದಿದ. ಕೊಡೇಕಲ್ಲ ಶರಣರಿಗೆ ಬಹುಮನಿ ಸುಲ್ತಾನರಿಂದ ಬಂಧನದ ಭೀತಿಯಿತ್ತು. ರಾಚಪ್ಪಯ್ಯನಿಗೆ ತಂದೆಯ ಜೊತೆ ಮನಸ್ತಾಪವೂ ಆಯಿತು. ಇದರಿಂದ ವೈರಾಗ್ಯ ತಳೆದ ರಾಚಪ್ಪಯ್ಯ ಕೊಡೇಕಲ್ಲ ತೊರೆದು ಮಂಟೇಸ್ವಾಮಿ ಮತ್ತೆ ಹಲವು ಶಿಷ್ಯರ ಜೊತೆ ಮೈಸೂರು ಸೀಮೆಗೆ ಬಂದು ನೆಲೆಸಿದರು. ರಾಚಪ್ಪಯ್ಯನ ಈ ನಿರ್ಗಮನ ಕೊಡೇಕಲ್ಲವರ ಪಾಲಿಗೆ ದಕ್ಷಿಣದ ಮಂಟೇಸ್ವಾಮಿ ಪರಂಪರೆ ಜತೆಗಿನ ಮುನಿಸಾಗಿ ಉಳಿಯಿತು. ಎರಡು ಗುರು–ಶಿಷ್ಯ ಪರಂಪರೆಗಳ ಭಕ್ತರಿಗೆ ಗುರುಪೀಠದ ಸಂಪರ್ಕವೂ, ಪರಿಜ್ಞಾನವೂ ಇಲ್ಲದಂತಾಯಿತು.

ಮೌನ ಮುರಿಯಿತು ಮುನಿಸು ಕರಗಿತು

ಶತಮಾನಗಳು ಕಳೆದು ಕಾಲಚಕ್ರ ಉರುಳಿದಂತೆ ಗುರು–ಶಿಷ್ಯ ಪೀಠಗಳಲ್ಲಿ ಮುನಿಸು ಕರಗತೊಡಗಿತು. ಎರಡು ದಶಕಗಳ ಹಿಂದೆ ಬೊಪ್ಪೇಗೌಡನಪುರ ಮಂಟೇಸ್ವಾಮಿ ಮಠದ ಪ್ರಭುದೇವರಾಜೇ ಅರಸ್, ಕೊಡೇಕಲ್ಲ ಬಸವಣ್ಣ ಮಠಕ್ಕೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿದರು. ಅಂದಿನ ಕೊಡೇಕಲ್ಲ ಪೀಠಾಧಿಪತಿ ವೀರಯ್ಯ ಅಪ್ಪನವರು ಮೊದಲ ಬಾರಿಗೆ ಮಂಟೇಸ್ವಾಮಿ ರಾಚಪ್ಪಾಜಿ ಕ್ಷೇತ್ರ ದರ್ಶನ ಮಾಡಿದರು. ಕಳೆದ ವರ್ಷ ಈ ಗುರು–ಶಿಷ್ಯ ಪರಂಪರೆಗಳು ಮುಖಾಮುಖಿಯನ್ನು ಪರಸ್ಪರ ಒಡನಾಟವನ್ನು ಮತ್ತೆ ಮುಂದುವರಿಸಲಾಗಿದೆ. ಮಳವಳ್ಳಿ ಮಂಟೇಸ್ವಾಮಿ ಪೀಠಾಧಿಪತಿ ವರ್ಚಸ್ವಿ ಬುದ್ಧಿಯವರು ಕೊಡೇಕಲ್ಲ ಪೀಠಕ್ಕೆ ಭೇಟಿ ನೀಡಿದ್ದರು. ಮಂಟೇಸ್ವಾಮಿ ಕಾವ್ಯ ಮತ್ತು ಮೈಸೂರು ಅರಸರ ಚರಿತ್ರೆಯಲ್ಲಿ ಒಂದು ಪ್ರಸಂಗವಿದೆ. ದಳವಾಯಿ ನಂಜರಾಜಯ್ಯ-ವೀರರಾಜಯ್ಯ ಮೈಸೂರು ರಾಜ್ಯಾಧಿಕಾರ ಕಬಳಿಸುವ ಸಂಚು ರೂಪಿಸುತ್ತಾರೆ. ಈ ವೇಳೆಗೆ ಉತ್ತರದಿಂದ ಬರುವ ರಾಚಪ್ಪಯ್ಯ, ಮಂಟೇಸ್ವಾಮಿ ಅರಸರ ಬೆಂಬಲಕ್ಕೆ ನಿಂತು ಕಾರುಗಳ್ಳಿ ವೀರರಾಜಯ್ಯ ಸೋದರರ ಸಂಚು ವಿಫಲಗೊಳಿಸಿ ರಾಜ್ಯ ರಕ್ಷಿಸುತ್ತಾರೆ.

ಆಗಸ್ಟ್ 24, 2024 ರಂದು ಮೈಸೂರು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಮಂಟೇಸ್ವಾಮಿ ಮರುದರ್ಶನ ಹಾಗೂ ಧರೆಯ ತಂದವರು’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಕೊಡೇಕಲ್ಲ ಬಸವ ಮತ್ತು ರಾಚಪ್ಪಯ್ಯನನ್ನು ಪ್ರತಿನಿಧಿಸುವ ಕೊಡೇಕಲ್ಲ ಪೀಠಾಧಿಪತಿ ವೃಷಬೇಂದ್ರ ಅಪ್ಪನವರು ಮಂಟೇಸ್ವಾಮಿ ಪ್ರತಿನಿಧಿಸುವ ಮಳವಳ್ಳಿ ಮಠದ ಪೀಠಾಧಿಪತಿ ವರ್ಚಸ್ವಿ ಬುದ್ಧಿಯವರು ಮುಖಾಮುಖಿಯಾಗಿ ಒಂದೇ ವೇದಿಕೆಯಲ್ಲಿ ಹಾಸೀನರಾಗಿದ್ದರು. ಇದು ಗುರು–ಶಿಷ್ಯ ಪರಂಪರೆಗಳ ಮುಖಾಮುಖಿ ಮತ್ತು ಚಾರಿತ್ರಿಕ ಘಟನೆಯ ಪುನರಾವರ್ತನೆಯಂತಿತ್ತು.

ಅನಂತರ ಕೊಡೇಕಲ್ಲ ಪೀಠಾಧಿಪತಿ ವೃಷಬೇಂದ್ರ ಅಪ್ಪನವರು ಮೈಸೂರು ಜಿಲ್ಲೆ ಕಪ್ಪಡಿಯಲ್ಲಿ ಐಕ್ಯರಾಗಿರುವ ರಾಚಪ್ಪಯ್ಯನ ಗದ್ದಿಗೆ ದರ್ಶನಕ್ಕೆ ತೆರಳಿದರು. ಗದ್ದಿಗೆ ಮುಂದೆ ಕೈ ಜೋಡಿಸಿ ಮಂಡಿಯೂರಿ ತಲೆಬಾಗಿ ಶರಣು ಹೋದರು. ಕೊಡೇಕಲ್ಲ ಬಸವಣ್ಣ ಸ್ವತಃ ಪುತ್ರನ ಮೇಲಿನ ಮುನಿಸು ಮರೆತು ಮರುಗಿ ಮಣಿದಂತೆ ಅನಿಸಿತು. ರಾಚಪ್ಪಯ್ಯ ಮೌನವಾಗಿ ಮುಖದಲ್ಲಿ ಮನ್ನಿಸೆಂಬ ಭಾವ ಸೂಸಿದಂತಿತು. ಮರುದಿನ ಚನ್ನಾಜಮ್ಮ ಮುಟ್ಟನಹಳ್ಳಿ ತೋಪಿನ ದೊಡ್ಡಮ್ಮ ಗದ್ದಿಗೆಗಳ ದರ್ಶನ ಮಾಡಿ ಬೊಪ್ಪೇಗೌಡನಪುರಕ್ಕೆ ತೆರಳಿದರು. ಕೊಡೇಕಲ್ಲಲ್ಲಿ ಕಾಯಸಿದ್ಧ ಪಡೆದು ಬಂದು ಅಲ್ಲಮಪ್ರಭು ಪ್ರತಿರೂಪ ಎನಿಸಿದ ಮಂಟೇಸ್ವಾಮಿ ಗದ್ದಿಗೆ ಮುಂದೆ ಕೊಡೇಕಲ್ಲ ವೃಷಬೇಂದ್ರ ಅಪ್ಪನವರು ಭಾವ ಪರವಶರಾಗಿ ಕೈ ಮುಗಿದು ತಲೆಬಾಗಿದರು. ಕಲ್ಯಾಣ ಮತ್ತು ಕೊಡೇಕಲ್ಲ ಬಸವಣ್ಣರ ಪ್ರತಿನಿಧಿಯಂತಿದ್ದ ಬೊಪ್ಪೇಗೌಡನಪುರ ಮಠದ ಬಸವ ತನ್ನ ಪಾಡಿಗೆ ತಾನು ಧ್ಯಾನಸ್ಥವಾಗಿ ನಿಂತಿತ್ತು. ಕೊಡೇಕಲ್ಲ ಅಪ್ಪನವರು ಬಸವನ ತಲೆ ಸವರಿ ಮೈದಡವಿ ಕೈ ಮುಗಿದರು. ಬಸವ ಕರುಣೆ ತುಂಬಿದ ಕಣ್ಣುಗಳಿಂದ ದಿಟ್ಟಿಸಿತು. ಅಪ್ಪನವರ ಮೊಗ ಮಂದಹಾಸದಿ ಅರಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT