ಅಧ್ಯಾತ್ಮ ಎಂದರೆ ಜೀವನದಿಂದ ಓಡಿಹೋಗುವುದು, ಬದುಕಿನ ನಿತ್ಯದ ಆಗುಹೋಗುಗಳಲ್ಲಿ ಅನಾಸಕ್ತಿಯಿಂದಿರುವುದು ಎಂಬ ಭಾವನೆಯಿದೆ. ಆದರೆ ಭಾರತೀಯ ಋಷಿಮುನಿಗಳು ಇಂಥ ಅಭಿಪ್ರಾಯವನ್ನು ಸಮರ್ಥಿಸಲಿಲ್ಲ; ಜೀವನವನ್ನು ಪೂರ್ಣವಾಗಿ, ಅದರ ಎಲ್ಲ ಸ್ವಾರಸ್ಯಗಳೊಂದಿಗೆ, ಸಂತೋಷದಿಂದ ಅನುಭವಿಸಬೇಕು ಎನ್ನುವುದೇ ನಮ್ಮ ಪ್ರಾಚೀನರ ಜೀವನದರ್ಶನವಾಗಿತ್ತು. ಆದರೆ ಈ ಸಂತೋಷಕ್ಕೆ ಒಂದು ಚೌಕಟ್ಟಿರಬೇಕು ಎಂದೂ ಹೇಳಿದರು. ಜೀವನದ ಎಲ್ಲ ವಿವರಗಳೂ ಆನಂದದ ಮೂಲವೇ ಎಂದು ಪ್ರತಿಪಾದಿಸಿದ್ದು ಭಾರತೀಯ ತತ್ತ್ವಶಾಸ್ತ್ರ. ಈ ನಿಲುವನ್ನು ಡಿವಿಜಿಯವರ ಈ ಮಾತುಗಳು ಸುಂದರವಾಗಿ ಎತ್ತಿಹಿಡಿದಿವೆ:

’ಬದುಕೆಂದರೆ ನಾವು ಹೆದರಬೇಕಾದುದಿಲ್ಲ; ಸಂತೋಷವೆಂದರೆ ನಾಚಿಕೊಳ್ಳಬೇಕಾದುದಿಲ್ಲ. ಮನುಷ್ಯನ ಮೇಲ್ಮೆಯೇನಿದ್ದರೂ ಅದು ಅವನ ಬದುಕಿನ ರೀತಿಯಲ್ಲಿಯೇ ರೂಪಗೊಳ್ಳಬೇಕಿದೆ. ನಮ್ಮ ಜೀವನವು ಅಪಾರವಾದ ವಿಶ್ವವೈಭವದ ಒಂದಂಶ. ಈ ಸಣ್ಣ ಅಂಶವನ್ನು ಸುಂದರಗೊಳಿಸುವುದು ಎಷ್ಟು ನಮಗೆ ಸಾಧ್ಯವೋ ಅಷ್ಟು ಹಾಗೆ ಮಾಡುವುದು ನಮ್ಮ ಧರ್ಮ. ಈ ಧರ್ಮವನ್ನು ಒಂದು ಕಡೆ ಕವಿಕಲಾನಿಪುಣರೂ ಇನ್ನೊಂದು ಕಡೆ ವಿಜ್ಞಾನಿ ರಾಜ್ಯಪ್ರವರ್ತಕರೂ ಪರಿಪಾಲಿಸುತ್ತಿರುತ್ತಾರೆ. ಈ ಲೋಕವನ್ನು ನಮ್ಮ ಕಣ್ಣಿಗೆ ಸ್ವಲ್ಪ ಸುಂದರವಾಗಿ ಮಾಡುವವರು, ಈ ಜೀವನವನ್ನು ಸ್ವಲ್ಪ ಸಹ್ಯವನ್ನಾಗಿ ಮಾಡುವವರು, – ನಮಗೆ ಆಹಾರವನ್ನೊದಗಿಸುವವರು, ಆರೋಗ್ಯವನ್ನು ತರುವವರು, ಮನೆ ಕಟ್ಟಿಕೊಡುವವರು, ಮದುವೆ ಮಾಡಿಸುವವರು, ವಿದ್ಯೆ ಕಲಿಸುವವರು, ಉದ್ಯೋಗ ಕೊಡುವವರು, ಕೋರ್ಟ್ ಕಛೇರಿಗಳನ್ನು ಆಳುವವರು, ಕಾರ್ಖಾನೆಗಳನ್ನು ನಡಸುವವರು, ರೈತರು, ವರ್ತಕರು, ಯಂತ್ರಗಾರರು, ಚಿತ್ರಗಾರರು, ಹಾಡುವವರು, ಆಡುವವರು – ಎಲ್ಲರೂ ಜಗನ್ಮೂಲ ಚೈತನ್ಯದ ಪ್ರವಾಹನಾಳಿಗಳೆಂದು ಉಪನಿಷದ್ವಾಕ್ಯದಿಂದ ತಿಳಿದು ಬರುತ್ತದೆ.

‘ಹೀಗೆ ನಮ್ಮ ಲೌಕಿಕವ್ಯಾಪಾರಗಳು ಹೇಯವಾದುದುಲ್ಲ; ಗೌರವಾರ್ಹವಾದುವು. ಮನಷ್ಯವ್ಯಕ್ತಿಯ ಆತ್ಮವು, ತನಗೆ ಬಂಧುವಾದ ದೊಡ್ಡ ಆತ್ಮವೊಂದು ಹೊರಜಗತ್ತಿನಲ್ಲಡಗಿರುವುದೆಂದುಕೊಂಡೋ ಏನೋ, ಆಕಡೆ ಈಕಡೆ ತನ್ನ ಕರಣಗಳೆಲ್ಲವನ್ನೂ ಪ್ರಸರಿಸುತ್ತದೆ. ಹೀಗೆ ಹೊರಜಗತ್ತಿನಲ್ಲಿ ಅದಕ್ಕಿರುವ ಆಕರ್ಷಣೆಯೇ ಸೌಂದರ್ಯ. ಆ ಸೌಂದರ್ಯದ ಅನುಭವವೇ ಆನಂದ, ‘ಯೋ ವೈ ಭೂಮಾ ತತ್ಸುಖಂ’. ಈ ಜಗದಾತ್ಮ ಸಮಾಗಮಕ್ಕಾಗಿ – ಈ ಭೌಮಾನಂದಕ್ಕಾಗಿ – ನಮ್ಮ ಅಂತರಾತ್ಮವು ಯವಾಗಲೂ ನಾಲಗೆಯೊಡ್ಡಿಕೊಂಡಿರುತ್ತದೆ, ದಿಕ್ಕು ದಿಕ್ಕಿಗೂ ಕೈಚಾಚಿರುತ್ತದೆ. ಹಾರಿ ಕುಣಿಯುತ್ತಿರುತ್ತದೆ. ಅದೇ ನಮ್ಮ ಜೀವನ. ಅದನ್ನು ನಾವು ‘ಹೊಟ್ಟೆಹೊರೆದುಕೊಳ್ಳುವುದು’, ‘ಕರ್ಮ ಸವೆಸಿಕೊಳ್ಳುವುದು’ ಎಂದು ಹೀಯಾಳಿಸಿ, ಕೆಡಿಸಲೂಬಹುದು.; ಅಥವಾ ಆತ್ಮವಿಕಸನ, ವಿಶ್ವವೈಭವದಲ್ಲಿ ಪಾಲುಗಾರಿಕೆ, ಬ್ರಹ್ಮವಿಲಾಸದಲ್ಲಿ ಸಹಕಾರ, ಎಂದು ಗೌರವಿಸಿ ಮೇಲಾಗಿಸಲೂಬಹುದು.

ಉಪನಿಷದಾಚಾರ್ಯರು ಜೀವನವು ತುಚ್ಛವೆನ್ನಲಿಲ್ಲ; ಜ್ಞಾನಿಯ ಪಾಲಿಗೆ ಅದೆಲ್ಲ ಒಂದು ಯಜ್ಞವೇ ಎಂದರು.’

(ಗ್ರಂಥಕೃಪೆ: ಡಿವಿಜಿ ಅವರ ‘ಜೀವನಸೌಂದರ್ಯ ಮತ್ತು ಸಾಹಿತ್ಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.