ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ | ದಾರಿ ತಪ್ಪಿದ ಮಕ್ಕಳು

ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರದ 25 ವರ್ಷ ಭಾರತದ ಸುವರ್ಣಯುಗ ಅನ್ನಬಹುದು. ಆಗಿನ ಕಾಲದ ಜನ ನಮ್ಮ ದೇಶ-ನಮ್ಮ ಜನ ಉದ್ಧಾರ ಆಗಲೇ ಬೇಕೆಂದು ಪಣ ತೊಟ್ಟು ದುಡಿಯುತ್ತಿದ್ದರು. ಇವರ ನಿಃಸ್ವಾರ್ಥ ಸೇವೆಯಿಂದ ದೇಶದಲ್ಲಿ ದಾರಿದ್ರ್ಯ ನೀಗಿ, ಪ್ರಗತಿಯ ಶಕೆ ಕಾಣಿಸಿತು. ವಿಜ್ಞಾನ-ತಂತ್ರಜ್ಞಾನದಲ್ಲೂ ಮುಂದುವರೆದು, ಅಮೆರಿಕಾದಂಥ ಬುದ್ಧಿವಂತರ-ಶ್ರೀಮಂತರ ದೇಶಕ್ಕೂ ಭಾರತೀಯರು ಬೇಕೆನ್ನುವಂತಾಯಿತು. ಆಗ ಭ್ರಷ್ಟಾಚಾರ ಈಗಿನಷ್ಟು ದೊಡ್ಡ ಪ್ರಮಾಣದಲ್ಲಿರಲಿಲ್ಲ. ಪ್ರಾಮಾಣಿಕವಾಗಿ ದುಡಿಯ ಬಯ ಸುವ ಮತ್ತು ದೇಶದ ಒಳಿತಿಗಾಗಿ ಎಂಥ ತ್ಯಾಗಕ್ಕೂ ಸಿದ್ಧವಾಗುವ ಜನರ ಸಂಖ್ಯೆ ಹೆಚ್ಚಿತ್ತು. ಆದರೆ ನಂತರ ಬಂದ ನವ ಪೀಳಿಗೆ ದೇಶ-ಸಮಾಜದ ಹಿತಚಿಂತನೆಯನ್ನು ಬಿಟ್ಟು, ತಾನು-ತನ್ನ ಮನೆ ಎಂಬ ಸ್ವಾರ್ಥಿಗಳಾದರು. ಇವರ ಮಕ್ಕಳೂ ನೈತಿಕವಾಗಿ ದಿವಾಳಿಯಾಗುತ್ತಾಹೋದರು; ಸ್ವಾರ್ಥ ಸಂತತಿಯೇ ಸಮಾಜದಲ್ಲಿ ಮೇಳೈಸತೊಡಗಿತು. ಧರ್ಮದ ತಿರುಳನ್ನು ತಿಳಿಯದೆ, ಅಧರ್ಮದ ತಿಮಿರವನ್ನು ಅನುಸರಿಸುತ್ತಾಹೋದ ಮಕ್ಕಳು ದಾರಿ ತಪ್ಪಿದರು.

ಮಕ್ಕಳನ್ನು ಹಾದಿ ತಪ್ಪಿಸಿದವರು ನಾವು. ಅದರ ದುಷ್ಪರಿಣಾಮವನ್ನು ನಾವಲ್ಲದೆ ಬೇರಾರೂ ಅನುಭವಿಸಲಾರರು. ಇದು ವಿಧಿ ಲಿಖಿತದಷ್ಟೆ ಸತ್ಯ. ನಮ್ಮಂತೆ ನಮ್ಮ ಮಕ್ಕಳೆಂಬುದನ್ನು ನಾವು ಮರೆಯಬಾರದು. ನಾವು ನೈತಿಕ ವಾಗಿ ಬದುಕಿದರೆ, ನಮ್ಮ ಮಕ್ಕಳು ನೈತಿಕವಾಗಿ ಬಾಳುವುದನ್ನ ರೂಢಿಸಿಕೊಳ್ಳುತ್ತಾರೆ. ನಾವು ಕೆಟ್ಟ ರೀತಿಯಲ್ಲಿ ಬದುಕಿದರೆ, ನಮ್ಮ ಮಕ್ಕಳು ಅದನ್ನೇ ಅನುಸರಿಸಿ, ಮತ್ತಷ್ಟು ಕೆಟ್ಟದಾಗಿ ಬದುಕುತ್ತಾರೆ.ನಮ್ಮ ಮಕ್ಕಳಿಗೆ ಪ್ರಾಮಾಣಿಕ ವಾಗಿ ದುಡಿದು ತಿನ್ನುವುದನ್ನ ಕಲಿಸಬೇಕು. ಹಾಗೆ ನಮ್ಮ ಮಕ್ಕಳು ಪ್ರಾಮಾಣಿಕ ವಾಗಿ ಬದುಕಬೇಕಾದರೆ, ನಾವು ಪ್ರಾಮಾಣಿಕವಾಗಿ ದುಡಿದು ತಂದ ಹಣದಲ್ಲಿ ಮಕ್ಕಳನ್ನು ಸಾಕಬೇಕು. ಭ್ರಷ್ಟ ಹಣದಲ್ಲಿ ಮಕ್ಕಳನ್ನು ಬೆಳೆಸಿದರೆ, ಆ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ಬದುಕುವುದನ್ನ ರೂಢಿಸಿಕೊಳ್ಳಲಾರರು.

ಆದ್ದರಿಂದ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ದುಡಿದ ಹಣದಲ್ಲೇ ಮಕ್ಕ ಳನ್ನ ಸಾಕಿದರೆ, ಶ್ರೇಯಸ್ಸು-ಆಯಸ್ಸು ಹೆಚ್ಚು. ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಮಕ್ಕಳನ್ನು ಬೆಳೆಸಿದರೆ, ದುರ್ಮಾಗಕ್ಕೆಡೆಯಾಗುತ್ತದೆ. ನಾವು ಪ್ರತಿ ದಿನ ಒಂದು ತುತ್ತು ತಿನ್ನುವ ಮುನ್ನ, ಪ್ರಾಮಾಣಿಕ ದುಡಿಮೆಯಿಂದ ತಿನ್ನುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಟ್ಟ ಮಾರ್ಗದಲ್ಲಿ ಸಂಪಾದಿಸಿದ ಹಣ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಾಮಾಣಿಕವಾಗಿ ದುಡಿದು ತಿನ್ನುವಾಗಿನ ನೆಮ್ಮದಿ, ಅಪ್ರಾಮಾಣಿಕತೆಯಲ್ಲಿ ಇರುವುದಿಲ್ಲ.

ಧರ್ಮ ಅಂದರೆ ನಮ್ಮ ಗುಣ. ಕರ್ಮ ಎಂದರೆ ನಾವು ಮಾಡುವ ಕೆಲಸ. ಇತ್ತೀಚಿನ ನವ ಪೀಳಿಗೆಯಲ್ಲಿ ಕಾಣುತ್ತಿರುವ ಕೆಡುಕಿಗೆ ಧರ್ಮ-ಕರ್ಮಗಳಲ್ಲಿನ ಲೋಪವೇ ಕಾರಣ. ಇದು ಅವರಿಗೆ ನೀಡುತ್ತಿರುವ ಶಿಕ್ಷಣ ಮತ್ತು ಅದರಿಂದ ಹೊರ ಬರುತ್ತಿರುವ ಕರ್ಮ ಫಲಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ನಮ್ಮ ಮಕ್ಕಳಲ್ಲಿ ನೈತಿಕ ಶಕ್ತಿ ಕುಸಿದಿದೆ. ಅವರು ಬೌದ್ಧಿಕವಾಗಿ ದಿವಾಳಿಯಾಗಿ ಅಧಃಪತನದ ಹಾದಿ ತುಳಿಯುತ್ತಿದ್ದಾರೆ. ಅವರನ್ನು ಸರಿ ದಾರಿಗೆ ತಂದು, ರಾಷ್ಟ್ರೀಯ ಪಥದತ್ತ ಕೊಂಡೊಯ್ಯುವ ಶಕ್ತಿ ಇರುವುದು ಧರ್ಮಗಳಿಗೆ ಮಾತ್ರ.

ನಾವು ಧರ್ಮ-ಸಂಸ್ಕೃತಿಗಳ ಪೋಷಣೆ ಮಾಡಿದರೆ, ಅದು ನಮ್ಮ ಸಮಾಜದ ನೈತಿಕತೆಯ ರಕ್ಷಣೆ ಮಾಡುತ್ತದೆ. ಅದಕ್ಕಾಗಿ ಭಾರತದ ನವಪೀಳಿಗೆ ಧರ್ಮ ಮತ್ತು ಕರ್ಮಗಳನ್ನು ಸರಿಯಾಗಿ ಅನುಸರಿಸಬೇಕು. ಒಳ್ಳೆಯ ಮನಸ್ಸು ಒಳ್ಳೆಯ ಬದುಕುನ್ನು ಕಟ್ಟಿಕೊಡುತ್ತದೆ. ಒಳ್ಳೆಯ ಬದುಕು ನೆಮ್ಮದಿಯನ್ನು ತುಂಬಿಕೊಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಒಳ್ಳೆಯ ಮನಸುಳ್ಳವ ರಾಗಬೇಕು. ಅರ್ಥಾತ್ ‘ಸಚ್ಚಿದಾನಂದ‘ರಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT