ಸೋಮವಾರ, ಜೂನ್ 1, 2020
27 °C

ಶ್ರೀರಾಮ: ಆದಿಕಾವ್ಯದ ನಾಯಕ

ಎಸ್. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

ಶ್ರೀರಾಮ ರಾಮಾಯಣದ ನಾಯಕ. ರಾಮಾಯಣ ಆದಿಕಾವ್ಯ. ನಮ್ಮ ಜೀವನಕ್ಕೆ ಬೇಕಾದ ಸೊಗಸನ್ನೂ ಧೈರ್ಯವನ್ನೂ ಮೌಲ್ಯವನ್ನೂ ಸರಳವಾಗಿಯೂ ಸುಂದರವಾಗಿಯೂ ಒದಗಿಸಬಲ್ಲದ್ದೇ ದಿಟವಾದ ಕಾವ್ಯ ಎಂದು ಎನಿಸಿಕೊಳ್ಳತ್ತದೆ. ರಾಮಾಯಣ ಹೀಗೆ ನಮ್ಮ ಜೀವನದ ಏಳಿಗೆಗೆ ಬೇಕಾದ ಎಲ್ಲ ವಿಧದ ಭಾವಸಂಪತ್ತನ್ನೂ ನೀಡುತ್ತದೆ, ತನ್ನ ನಾಯಕನಾದ ಶ್ರೀರಾಮನ ಮೂಲಕ.

ಶ್ರೀರಾಮನದ್ದು ಪರಿಪೂರ್ಣ ವ್ಯಕ್ತಿತ್ವ. ನಮ್ಮ ಬದುಕು ಆವರಿಸಿಕೊಂಡಿರುವ ಎಲ್ಲ ಬಗೆಯ ವಿವರಗಳಿಗೂ ಅವನು ನಮಗೆ ಮಾದರಿಯಾಗಬಲ್ಲ. ನಮ್ಮದು ರಸಮಯವಾದ ಜೀವನ ಆಗಲಿ ಎಂಬುದು ತಾನೆ ನಮ್ಮೆಲ್ಲರ ಬಯಕೆ? ರಸಮಯ ಎಂದರೆ ಆನಂದಮಯ; ಇದು ಸತ್ಯ ಶಿವ ಸುಂದರಗಳ ಕಾಣ್ಕೆ. ಹೀಗೆ ನಮ್ಮ ಬದುಕು ಪ್ರತಿನಿಧಿಸುವ ಎಲ್ಲ ವಿಧದ ರಸಮಯಕ್ಷಣಗಳನ್ನು ನಮ್ಮ ಶಾಸ್ತ್ರಕಾರರು ಲೆಕ್ಕ ಮಾಡಿದ್ದಾರೆ. ಇವೇ ನವರಸಗಳು, ಎಂದರೆ ಒಂಬತ್ತು ರಸಗಳು. ಶ್ರೀರಾಮನು ಈ ಒಂಬತ್ತೂ ರಸಗಳಿಗೂ ಆದರ್ಶಪ್ರಾಯನಾದವನು ಎಂಬುದನ್ನು ರಾಮಾಯಣ ಪ್ರತಿಪಾದಿಸುತ್ತದೆ. ಇದನ್ನೇ ಕವಿಯೊಬ್ಬ ಸುಂದರವಾಗಿ ಹೇಳಿದ್ದಾನೆ:

ಶೃಂಗಾರಂ ಕ್ಷಿತಿನಂದೀನೀವಿಹರಣೇ ವೀರಂ ಧನುರ್ಭಂಜನೇ |

ಕಾರುಣ್ಯಂ ಬಲಿಭೋಜನೇsದ್ಭುತರಸಂ ಸಿಂಧೌ ಗಿರಿಸ್ಥಾಪನೇ ||

ಹಾಸ್ಯಂ ಶೂರ್ಪಣಖಾಮುಖೇ ಭಯಮಘೇ ಬೀಭತ್ಸಮನ್ಯಾಮುಖೇ |

ರೌದ್ರಂ ರಾವಣಭಂಜನೇ ಮನಿಜನೇ ಶಾಂತಂ ವಪುಃ ಪಾತು ನಃ ||

(ಜಾನಕಿಯೊಡನೆ ವಿಹರಿಸುವಾಗ ಶೃಂಗಾರ, ಶಿವಧನುಸ್ಸನ್ನು ಮುರಿಯುವಾಗ ವೀರ, ಕಾಕಾಸುರನ ವಿಷಯದಲ್ಲಿ ಕಾರುಣ್ಯ, ಸಮುದ್ರದಲ್ಲಿ ಸೇತುವೆಯನ್ನು ಕಟ್ಟುವಾಗ ಅದ್ಭುತ, ಶೂರ್ಪಣಖೆಯ ಪ್ರಸಂಗದಲ್ಲಿ ಹಾಸ್ಯ, ಪಾಪಕಾರ್ಯದ ಬಗ್ಗೆ ಭಯ, ಪರಸ್ತ್ರೀವಿಷಯದಲ್ಲಿ ಬೀಭತ್ಸ, ರಾವಣನನ್ನು ಸಂಹರಿಸುವಾಗ ರೌದ್ರ, ಮುನಿಗಳೊಂದಿಗೆ ಶಾಂತ – ಹೀಗೆ ಒಂಬತ್ತು ರಸಗಳ ಮೂರ್ತರೂಪನಾದ ಶ್ರೀರಾಮನು ನಮ್ಮನ್ನು ಕಾಪಾಡಲಿ.)

ಶೃಂಗಾರ, ವೀರ, ಕರುಣೆ, ಅದ್ಭುತ, ಹಾಸ್ಯ, ಭಯ, ಬೀಭತ್ಸ, ರೌದ್ರ, ಶಾಂತ – ಇವೇ ನವರಸಗಳು; ನಮ್ಮ ಬದುಕಿನ ಎಲ್ಲ ಭಾವಭಂಗಿಗಳೂ ಈ ಒಂಬತ್ತು ರಸಗಳಲ್ಲಿಯೇ ಸೇರಿಕೊಳ್ಳುತ್ತವೆ.

ಬದುಕನ್ನು ಪೂರ್ಣವಾಗಿ ಸವಿಯಬೇಕು; ಆದರೆ ಅದು ಧರ್ಮಬದ್ಧವಾಗಿರಬೇಕು ಎಂಬುದು ರಾಮನ ಜೀವನದಲ್ಲಿ ನಾವು ನೋಡುವ ವಿಶಿಷ್ಟ ಗುಣ.

ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ರಾಮನಷ್ಟು ನಮಗೆ ದೊಡ್ಡ ಆದರ್ಶ ಮತ್ತೊಬ್ಬರು ಸಿಗಲಾರರು.

ರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ನಡೆದಿವೆ; ಇನ್ನೇನು ಅವನು ಸಿಂಹಾಸನವನ್ನು ಏರಬೇಕು – ಅಷ್ಟರಲ್ಲಿ ಅದು ನಿಂತುಹೋಗುತ್ತದೆ; ರಾಜ್ಯಭಾರವನ್ನು ವಹಿಸಿಕೊಂಡು ರಾಜನಾಗಬೇಕಾದವನು ಕಾಡಿಗೆ ತೆರಳಬೇಕಾಗುತ್ತದೆ, ತಾಪಸಿಯಂತೆ ಬದುಕಬೇಕಾಗುತ್ತದೆ; ಅದೂ ಹದಿನಾಲ್ಕು ವರ್ಷಗಳು! ಅಂಥ ವಿಷಮ ಸಂದರ್ಭದಲ್ಲಿಯೂ ಅವನು ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ; ‘ನಿನಗೆ ಪಟ್ಟಾಭಿಷೇಕ’ ಎಂದು ತಿಳಿಸಿದಾಗ ಅವನು ಭಾವನೆ ಹೇಗಿದ್ದಿತೋ ‘ನೀನು ಕಾಡಿಗೆ ಹೋಗಬೇಕು’ ಎಂದು ಹೇಳಿದಾಗಲೂ ಅದು ಹಾಗೇ ಇದ್ದಿತು.

ನಮ್ಮ ಜೀವನದಲ್ಲೂ ಎಷ್ಟೋ ಕಷ್ಟಗಳು ಬರುತ್ತವೆ. ಆ ಸಂದರ್ಭಗಳಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ? ಸಣ್ಣ ಸಣ್ಣ ಆಘಾತಗಳಿಗೂ ಕುಗ್ಗಿಹೋಗುತ್ತೇವೆ; ವಿಚಲಿತರಾಗುತ್ತೇವೆ. ಆದರೆ ರಾಮ ರಾಜ್ಯವನ್ನು ಕಳೆದುಕೊಂಡಾಗಲೂ ವಿಚಲಿತನಾಗಲಿಲ್ಲ; ಕಾಡಿನಲ್ಲಿ ವಾಸಿಸಬೇಕಾದ ಕಷ್ಟದ ದಿನಗಳಲ್ಲೂ ಅವನ ಕರ್ತವ್ಯವನ್ನು ಮರೆಯಲಿಲ್ಲ, ಬಿಡಲಿಲ್ಲ; ಶಾಂತಸ್ಥಿತಿಯನ್ನೂ ಕಳೆದುಕೊಳ್ಳಲಿಲ್ಲ, ಹಾಸ್ಯಪ್ರಜ್ಞೆಯನ್ನೂ ಮರೆಯಲಿಲ್ಲ. ರಾಮನ ವ್ಯಕ್ತಿತ್ವ ನಮಗೆ ಬೆಳಕಾಗಿ  ಒದಗುವುದು ಈ ಕಾರಣದಿಂದಲೇ. ಕಷ್ಟಗಳು ಬಂದಾಗ ಅದರ ಸ್ಮರಣೆಯಲ್ಲಿಯೇ ಕೊರಗದೆ, ಸಂಕಟ ಪಡದೆ ಅವುಗಳಿಂದ ಪಾರಾಗುವ ದಾರಿಯನ್ನು ಹುಡುಕಬೇಕು; ಭಯದಲ್ಲಿ ಜೀವನದ ಸೊಗಸನ್ನೂ ಕಳೆದುಕೊಳ್ಳಬೇಕಿಲ್ಲ, ನೆಮ್ಮದಿಯನ್ನೂ ಕಳೆದುಕೊಳ್ಳಬೇಕಿಲ್ಲ, ಕರ್ತವ್ಯವನ್ನೂ ಮರೆಯಬೇಕಿಲ್ಲ. ನಮಗೆ ರಾಮನ ವ್ಯಕ್ತಿತ್ವ ಕಟ್ಟಿಕೊಡುವ ಜೀವನಶ್ರದ್ಧೆ.

ರಾಮ ನಮ್ಮ ಜೀವನಕ್ಕೆ ಹೀಗೆ ಒದಗುವ ಕಾರಣದಿಂದಲೇ ಅವನು ಸಾವಿರಾರು ವರ್ಷಗಳಿಂದ ನಮಗೆ ಆದರ್ಶವಾಗಿದ್ದಾನೆ; ಪೂಜ್ಯನೂ ಆಗಿದ್ದಾನೆ; ದೈವತ್ವಕ್ಕೂ ಏರಿದ್ದಾನೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು