ಮಂಗಳವಾರ, ಏಪ್ರಿಲ್ 7, 2020
19 °C

ಸಮನ್ವಯತೆಯ ಸಂದೇಶ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

‘ಹೊಸತು’ ಎಂಬುದರ ಕುರಿತು ನಮಗಿರುವ ಆಕರ್ಷಣೆ ಎಂತಹುದು? ಹಳತು ಬೇಸರವಾದಾಗ ಮಾತ್ರ ನಾವು ಹೊಸತಿಗಾಗಿ ಹಂಬಲಿಸುತ್ತೇವೆಯೇ ಅಥವಾ ‘ಹೊಸತು’ ಎಂಬುದರ ಆವಶ್ಯಕತೆ ಆ ಬೇಸರವನ್ನು ಮೀರಿದಂತಹುದೇ? ಹಳತೆಲ್ಲದರ ಹಿಡಿತದಿಂದ ಬಿಡಿಸಿಕೊಂಡು ಹೊಚ್ಚಹೊಸದು ಎಂಬಂತಹ ‘ಶುದ್ಧ ನವೀನತೆ’ಯನ್ನು ಸಾಧಿಸುವುದಕ್ಕಾಗುತ್ತದೆಯೇ? ಹೊಸತರ ಕುರಿತು ಆಕರ್ಷಣೆ ಎಷ್ಟು ತೀವ್ರವೋ, ಅಷ್ಟೇ ತೀವ್ರ ಹೊಸತರ ಕುರಿತಾದ ಆತಂಕ, ಭಯ.

ಹಳತನ್ನು ಬಿಡದೇ ಬೇರೆ ದಾರಿಯಿಲ್ಲ; ಹೊಸತು ಎಂಬುದನ್ನು ಇನ್ನೂ ಕಂಡುಕೊಂಡಿಲ್ಲ – ಎಂಬಂತಹ ಸ್ಥಿತಿಯೇ ನಮ್ಮೆಲ್ಲ ಸೃಜನಶೀಲತೆ ಮತ್ತು ಅರಿವು ಹುಟ್ಟುವ ಫಲವತ್ತಾದ ನೆಲೆ. ಹಳತು ಮತ್ತು ಹೊಸತರ ನಡುವಿರುವ ಈ ಸಣ್ಣ ಅವಕಾಶವನ್ನೇ liminal space (ಲಿಮಿನಲ್ ಸ್ಪೇಸ್) ಎನ್ನುತ್ತಾರೆ. ಎಲ್ಲ ಮಹತ್ತರ ಬದಲಾವಣೆಗಳು, ಶೋಧನೆಗಳು ಈ ‘ಲಿಮಿನಲ್ ಸ್ಪೇಸ್’ನಲ್ಲಿಯೇ ಜರುಗುತ್ತವೆ. ಈ ಪ್ರಪಂಚದಲ್ಲಿ ‘ಗೊತ್ತಿರುವ’ ಮತ್ತು ‘ಗೊತ್ತಿಲ್ಲದಿರುವುದರ’ ನಡುವೆ ಅನೇಕ ಬಾಗಿಲುಗಳಿವೆ ಎಂಬ ವಿಲಿಯಂ ಬ್ಲೇಕ್‌ನ ಮಾತುಗಳು ಈ ಲಿಮಿನಲ್ ಸ್ಪೇಸ್ ಕುರಿತಾಗಿಯೇ ಇದೆ.

ನಮಗೆ ಬದುಕು ನಿತ್ಯನೂತನವಾಗಿರಬೇಕು; ಉತ್ಸಾಹ ಅಚ್ಚರಿಗಳಿಂದ ಕೂಡಿದ ಹೊಸ ಅನುಭವಗಳು ಹೇರಳವಾಗಿರಬೇಕು; ಸಂಬಂಧಗಳು ಈಗಷ್ಟೇ ಅರಳಿದ ಹೂವಿನಂತೆ ತಾಜಾತನದಿಂದ ಕೂಡಿರಬೇಕು. ಆದರೆ ಬದಲಾವಣೆ ಎಂಬ ಮುಳ್ಳಿನ ಹಾದಿ ಸವೆಸದೆ ಇವೆಲ್ಲ ಹೇಗೆ ಸಾಧ್ಯ? ಹಳತು ನಮಗೆ ಬೇಡವೇ ಬೇಡ ಎಂದಲ್ಲ, ನವೀನ–ಪ್ರಾಚೀನಗಳ ಕುರಿತಾದ ನಮ್ಮ ಮೋಹ ಹೇಳತೀರದು. ಆದರೂ ಹಳೆಯದರಲ್ಲಿ ಹೊಸತನದ ಮಿಂಚಿಲ್ಲದಿದ್ದರೆ ಅದು ಅಸಹನೀಯವೇ ಸರಿ. ಹಾಗೆ ಹಳೆಯದರ ಗುಂಗಿನಲ್ಲಿ ಹೊಸತನಕ್ಕೆ ಕುರುಡರಾಗಿ, ಹೊಸದರ ಆಕರ್ಷಣೆಯಲ್ಲಿ ಹಳೆಯದನ್ನು ಪೂರ್ತಿ ಮರೆತು ನಂತರ ಪರಿತಪಿಸುವುದು ಸಾಮಾನ್ಯವೇ ಹೌದು.

ಹಳತು/ಹೊಸತು ಎಂಬುದು ಕಾಲವನ್ನು ನಾವು ಅನುಭವಿಸುವ ರೀತಿ ಇರಬಹುದೇ? ಕಾಲ ಎಂಬ ನಿರಂತರ ಪ್ರವಾಹದಲ್ಲಿ ಯಾವುದೂ ಹೊಸದಾಗಿ ಉಳಿಯುವುದು ಸಾಧ್ಯವಿಲ್ಲ, ಮತ್ತು ಯಾವುದೂ ಪೂರ್ತಿ ಕಳೆದುಹೋಗುವುದೂ ಸಾಧ್ಯವಿಲ್ಲ. ನೆನಪು ಭೂತಕಾಲಕ್ಕೆ ಸೇರಿದೆ ಎಂದು ನಾವು ತಿಳಿದುಕೊಂಡಿದ್ದರೂ, ನೆನಪಿಸಿಕೊಳ್ಳುವುದು ‘ಈ ಕ್ಷಣ’ ದ ಅನುಭವವನ್ನೇ ಅಲ್ಲವೇ? ‘ಈ ಕ್ಷಣದಲ್ಲಿ ಬದುಕು’ ಎಂಬುದು ಈಗಿನ ಕಾಲದ ಮಂತ್ರವೇ ಆಗಿದ್ದರೂ ‘ಈ ಕ್ಷಣ’ ಎಂಬುದನ್ನು ಹಿಡಿಯುವುದು ಸುಲಭವಿಲ್ಲ. ಭೂತ, ಭವಿಷ್ಯ ಎಂಬುದು ನಮ್ಮ ಅನುಭವಕ್ಕೆ ನಿಲುಕುವುದಕ್ಕೂ ಮೊದಲು ಕಾಲ ಸರಿದುಹೋಗುತ್ತಿರುವ ಪ್ರಜ್ಞೆ ನಮ್ಮಲ್ಲಿ ಉದಯಿಸುತ್ತದೆ.

ಹಳೆಯದನ್ನು ಮರುವ್ಯಾಖ್ಯಾನಿಸುವುದು, ನೆನಪಿಸಿಕೊಳ್ಳುವುದು ಎಂದರೆ ಅದನ್ನು ಹೊಸದಾಗಿಸುವುದೇ ಅಲ್ಲವೇ? ಹಳತು-ಹೊಸತು ಎಂಬುದನ್ನು ಅಷ್ಟು ಸುಲಭವಾಗಿ ಬೇರ್ಪಡಿಸಲಾಗದು. ಹಳತು-ಹೊಸತು, ಹುಟ್ಟು-ಸಾವು, ನಿನ್ನೆ-ನಾಳೆ ಎಂಬುದೆಲ್ಲ ಒಂದರೊಳಗೊಂದು ಬೆಸೆದುಕೊಂಡು ನಿರ್ಮಿತವಾದ ವಿನ್ಯಾಸವೇ ಬದುಕು. ‘ಆಗಿ ಹೋದದ್ದು’ ಮತ್ತು ‘ಮುಂದಾಗುವಂತಹದ್ದು’ ಎಂದು ಕಾಲವನ್ನು ನಾವು ವಿಭಾಗಿಸಲು ಸಾಧ್ಯವೇ? ‘ಇನ್ನಿಲ್ಲ’ ಮತ್ತು ‘ಇನ್ನೂ ಉಂಟಾಗಿಲ್ಲ’ ಎನ್ನುವುದರ ನಡುವೆ ಕಾಣುವ ಬದುಕು ಎಂತಹದ್ದು? ಇಂಥ ಪ್ರಶ್ನೆಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡೇ ಯುಗಾದಿ ಪ್ರತಿವರ್ಷ ನಮಗೆ ಎದುರಾಗುತ್ತದೆ. ಹಳೆಯದರಲ್ಲೂ ಹೊಸತನದ ಉಲ್ಲಾಸ ಮತ್ತು ಹೊಸತನದಲ್ಲೂ ಅಡಗಿದ ಹಳೆಯದರ ಬೆಚ್ಚಗಿನ ಆಸರೆ – ಇವನ್ನು ಕಂಡುಕೊಳ್ಳುವ, ಸಂಭ್ರಮಿಸುವ ಹಬ್ಬವೇ ಯುಗಾದಿ. ಹಳತು–ಹೊಸದರ ಹೆಣಿಗೆಯಲ್ಲಿ ಉದ್ಭವಿಸುವ ಸುಖ–ದುಃಖಗಳನ್ನು ಸಮಾನವಾಗಿ ಕಾಣುವ ಸಮನ್ವಯತೆಯ ಸಂದೇಶವನ್ನು ಪ್ರಕೃತಿಯೇ ಸಾರುವ ಕ್ಷಣವೇ ಯುಗಾದಿ.

ಇದನ್ನೂ ಓದಿ: ಶಾಂತಿ: ಮನಸ್ಸಿನ ಕಿಟಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು